ಶಿಕ್ಷಣವು ಹೇಗಿರಬೇಕು ?

ಕ್ಷಾತ್ರ ಹಾಗೂ ಬ್ರಾಹ್ಮ ತೇಜವನ್ನು ನಿರ್ಮಿಸುವ ಶಿಕ್ಷಣವೇ ನಿಜವಾದ ಶಿಕ್ಷಣ

ತರುಣರಿಗೆ ಕಡ್ಡಾಯವಾಗಿ ಸೈನ್ಯದ ತರಬೇತಿಯೊಂದಿಗೆ ಸಂತರ, ದೇಶಭಕ್ತರ ಹಾಗೂ ಕ್ರಾಂತಿಕಾರರ ಜೀವನ ಚರಿತ್ರೆಗಳನ್ನು ಅಧ್ಯಯನಕ್ಕಾಗಿ ನೀಡಿದಲ್ಲಿ ಅವರಿಗೆ ದೇಶಕ್ಕಾಗಿ ಜೀವಿಸಲು ಹಾಗೂ ಪ್ರಾಣಾರ್ಪಣೆ ಮಾಡಲು ಸ್ಪೂರ್ತಿ ದೊರೆಯುತ್ತದೆ.ಶಿಕ್ಷಣವು ಹೇಗಿರಬೇಕು ಎಂಬುದರ ವಿಚಾರ ಹಾಗೂ ಪೂರಕ ಕೃತಿ ಅವಶ್ಯಕವಾಗಿದೆ. ಭಾರತದಲ್ಲಿ ಆಗಿಹೋದ ಕ್ರಾಂತಿಕಾರರು, ಸಂತರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಾಗೂ ಹುತಾತ್ಮರಾದ ದೇಶಭಕ್ತರು, ಶಾಸ್ತ್ರಜ್ಞರು, ಸಮಾಜೋದ್ಧಾರಕರು, ಸಮಾಜದ ಉತ್ಥಾನಕ್ಕಾಗಿ ಸಂಘಟನೆಯನ್ನು ನಿರ್ಮಿಸಲು ತಮ್ಮ ಜೀವನವನ್ನು ಸವೆಸಿದವರು, ಇವರೆಲ್ಲರ ಜೀವನ ಚರಿತ್ರೆಯು ಯುವಪೀಳಿಗೆಯ ಹಾಗೂ ಮಕ್ಕಳ ಪಠ್ಯಕ್ರಮದ ಭಾಗವಾಗಲೇಬೇಕು. ಮಕ್ಕಳಿಗೆ ಕಡ್ಡಾಯವಾಗಿ ೨ ವರ್ಷಗಳ ಸೈನ್ಯದ ತರಬೇತಿ ಇರಬೇಕು. ಸಂತರು ರಚಿಸಿದ ಗ್ರಂಥಗಳನ್ನು ಮಕ್ಕಳ ಅಧ್ಯಯನದಲ್ಲಿ ಸೇರಿಸಬೇಕು. ತರುಣರಿಗೆ ಭಗತಸಿಂಗ, ರಾಜಗುರು, ಸುಖದೇವ, ವಾಸುದೇವ ಬಲವಂತ ಫಡಕೆ ಹಾಗೂ ಸ್ವಾ. ಸಾವರಕರರ ಎಲ್ಲ ಕಥೆಗಳು ತಿಳಿದಿರಬೇಕು.

ಜೀವನವು ಶುದ್ಧ ಆಚರಣೆಯ, ಪ್ರಾಮಾಣಿಕ, ಪಾರದರ್ಶಕ, ಶ್ರಮಿಕ ಹಾಗೂ ದೇಶಭಕ್ತಿಯದ್ದಾಗಿರಬೇಕು. ದೇಶಕ್ಕಾಗಿ ಜೀವಿಸುವ ಹಾಗೂ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುವ ಪ್ರೇರಣೆಯನ್ನು ನೀಡುವ ಶಿಕ್ಷಣದಿಂದಲೇ ದೇಶವು ವೈಭವಶಾಲಿಯಾಗುವುದು.

– ಶ್ರೀ. ಅನಿಲ ಕಾಂಬಳೆ (ಮಾಸಿಕ ಲೋಕಜಾಗರ, ಅಮರನಾಥ ಯಾತ್ರಾ ವಿಶೇಷಾಂಕ ೨೦೦೮)

ಉಚ್ಚಶಿಕ್ಷಣಕ್ಕಿಂತಲೂ ಸುಸಂಸ್ಕಾರಯುತ ಶಿಕ್ಷಣವು ಮಹತ್ವದ್ದಾಗಿದೆ

ಇತ್ತೀಚಿನ ಮಕ್ಕಳು ಹಾಗೂ ತರುಣರಿಗೆ ಪಂಚತಂತ್ರ, ರಾಮಾಯಣ, ಮಹಾಭಾರತ ಹಾಗೂ ಕ್ರಾಂತಿವೀರರ ಕಥೆಗಳು ತಿಳಿದಿಲ್ಲ; ಏಕೆಂದರೆ ಅವರಿಗೆ ಈ ಬಗ್ಗೆ ಅವರ ಪಾಲಕರು ಹೇಳಿರುವುದಿಲ್ಲ. ಹ್ಯಾರಿ ಪಾಟರ ಓದಿ ಸಂಸ್ಕಾರಯುತ ಪೀಳಿಗೆ ನಿರ್ಮಾಣವಾಗುವುದಿಲ್ಲ. ಸ್ವಾತಂತ್ರ್ಯಾನಂತರದ ೬೦ ವರ್ಷಗಳಲ್ಲಿ ಸಂಸ್ಕಾರಯುತ ಪೀಳಿಗೆಯನ್ನು ನಿರ್ಮಿಸುವಲ್ಲಿ ವಿಫಲರಾಗಿರುವುದು ಒಂದು ಲಜ್ಜಾಸ್ಪದ ಸಂಗತಿಯಾಗಿದೆ. ಉಚ್ಛಶಿಕ್ಷಿತರಿರುವುದು ಹಾಗೂ ಸಂಸ್ಕಾರಯುತರಾಗಿರುವುದರ ನಡುವೆ ವ್ಯತ್ಯಾಸವಿದೆ !

–ಡಾ. ಸಚ್ಚಿದಾನಂದ ಶೇವಡೆ (ಶ್ರೀಗಜಾನನ ಆಶೀಷ, ಮಾರ್ಚ ೨೦೧೧)

ಮೌಲ್ಯಶಿಕ್ಷಣ

ಇಂದಿನ ತರುಣ ವಿದ್ಯಾರ್ಥಿಗಳು ವಿನಾಶಕಾರಿ(destructive)ಯಾಗಿದ್ದಾರೆ. ಅವರನ್ನು ದುಷ್ಟಪ್ರವೃತ್ತಗಳಿಂದ ಪರಾವೃತ್ತಗೊಳಿಸಲು ಜಗತ್ತಿನಾದ್ಯಂತ ಶಿಕ್ಷಣತಜ್ಞರು ಅಭ್ಯಾಸಕ್ರಮದಲ್ಲಿ ಮೌಲ್ಯಶಿಕ್ಷಣ (value education)ದ ಅವಶ್ಯಕತೆಯನ್ನು ಹೇಳಿದ್ದಾರೆ. 'ಮೌಲ್ಯಶಿಕ್ಷಣದಿಂದ ಅವರಲ್ಲಿನ ಅಸುರೀ ಪ್ರವೃತ್ತಿಯ ನಾಶವಾಗಿ ಅವರು ಆದರ್ಶ ನಾಗರೀಕರಾಗುವರು' ಎಂಬುದು ಶಿಕ್ಷಣತಜ್ಞರ ಅಭಿಪ್ರಾಯವಾಗಿದೆ.

ಚಾರಿತ್ರ್ಯವನ್ನು ನಿರ್ಮಿಸುವ ಶಿಕ್ಷಣ

ಜೀವನನಿರ್ಮಿತಿ, ಮಾನವನಿರ್ಮಿತಿ, ಶೀಲ ಹಾಗೂ ಚಾರಿತ್ರ್ಯದ ನಿರ್ಮಿತಿ ಹಾಗೂ ವಿಚಾರಗಳ ಏಕರೂಪತೆ ಈ ಐದು ವಿಷಯಗಳ ಬಗ್ಗೆ ಶಿಕ್ಷಣ ದೊರೆತು ಅದರ ಪಾಲನೆಯಾದರೆ ಆ ವ್ಯಕ್ತಿಯು ಆದರ್ಶ ವ್ಯಕ್ತಿಯಾಗುತ್ತಾನೆ. ಸದ್ಯದ ಶಿಕ್ಷಣವೆಂದರೆ ಮಾಹಿತಿಯನ್ನು ತಲೆಯಲ್ಲಿ ತುಂಬಿಸುವುದಾಗಿದೆ. ತಲೆಯಲ್ಲಿ ಉಳಿದ ಈ ಮಾಹಿತಿಯು ಪಚನವಾಗದಿರುವುದರಿಂದ ಜೀವನದುದ್ದಕ್ಕೂ ಗೊಂದಲ ನಿರ್ಮಾಣವಾಗುತ್ತಿರುತ್ತದೆ. ನಮಗೆ ಜೀವನ, ಮಾನವ, ಶೀಲ ಹಾಗೂ ಚಾರಿತ್ರ್ಯವನ್ನು ನಿರ್ಮಿಸುವ ಹಾಗೂ ವಿಚಾರಗಳನ್ನು ಸಮ್ಮಿಲಿತಗೊಳಿಸುವ ಶಿಕ್ಷಣ ಬೇಕು. ನೀವು ಕೇವಲ ಈ ಐದು ವಿಷಯಗಳನ್ನು ಜೀರ್ಣಿಸಿ ಅದನ್ನು ಪಾಲಿಸಿದರೆ ನೀವು ಸಂಪೂರ್ಣ ಗ್ರಂಥಾಲಯವನ್ನು ಅರಗಿಸಿಕೊಂಡಿರುವ ವ್ಯಕ್ತಿಯಂತೆ ಹೆಚ್ಚು ಶಿಕ್ಷಿತರಾಗುವಿರಿ. ಈ ಶಿಕ್ಷಣವು ರಾಷ್ಟ್ರದ ಆದರ್ಶಗಳನ್ನು ಎತ್ತಿ ಹಿಡಿಯುವುದು ಹಾಗೂ ಬಹುತಾಂಶ ಅದು ಪ್ರಾಯೋಗಿಕವಾಗಿರುತ್ತದೆ.

– ಶ್ರೀ. ರಾಜಾಭಾವು ಜೋಶಿ (ಮಾಸಿಕ ಲೋಕಜಾಗರ, ದೀಪಾವಳಿ ವಿಶೇಷಾಂಕ ೨೦೦೮)

ಚಾರಿತ್ರ್ಯವಂತ ತರುಣ ಪೀಳಿಗೆಯ ನಿರ್ಮಿತಿಗಾಗಿ ತರುಣರಿಗೆ ಸತ್ಯ, ಪ್ರಾಮಾಣಿಕತೆಯಿರುವ ಹಾಗೂ ಪಾರದರ್ಶಕ ವ್ಯವಹಾರವಿರುವ ಶಿಕ್ಷಣ ದೊರೆತಾಗಲೇ ಆ ಪೀಳಿಗೆಯು ಸುಧಾರಿಸುತ್ತದೆ ಹಾಗೂ ದೇಶವು ವೈಭವಶಾಲಿಯಾಗುತ್ತದೆ. ಇಂದು ದೇಶದಲ್ಲಿ ಭಯೋತ್ಪಾದನೆ, ಭ್ರಷ್ಟಾಚಾರ, ಬೆಲೆ ಏರಿಕೆ, ಜನಸಂಖ್ಯಾಸ್ಫೋಟ, ನಿರುದ್ಯೋಗ ಹಾಗೂ ನೀರಿನ ಕೊರತೆಯಂತಹ ಸಮಸ್ಯೆಗಳು ಅರಾಜಕತೆಯನ್ನು ನಿರ್ಮಿಸಬಲ್ಲವು. ಈ ಸಮಸ್ಯೆಗಳಿಗೆ ಚಾರಿತ್ರ್ಯ ನಿರ್ಮಿಸುವ ಶಿಕ್ಷಣವೇ ಉತ್ತರವಾಗಿದೆ.

– ಶ್ರೀ. ಮನೋಹರ ಜೋಶಿ (ಲೋಕಜಾಗರ, ಕ್ರಿಶ ೨೦೧೧)

ಧರ್ಮಶಿಕ್ಷಣ

ನೈತಿಕ ಮೌಲ್ಯದ ಸಂವರ್ಧನೆಯಾಗಲು ಮೇಲು ಮೇಲಿನ ಉಪಾಯಯೋಜನೆಗಳು ಸಾಲದು. ಇದಕ್ಕಾಗಿ ಎಲ್ಲರಿಗೂ ಧರ್ಮಶಿಕ್ಷಣವನ್ನು ನೀಡುವುದು ಅವಶ್ಯಕವಾಗಿದೆ. ಧರ್ಮಪಾಲನೆಯಿಂದ ಸಮಾಜದ ಸತ್ತ್ವಗುಣವು ವೃದ್ಧಿಸುತ್ತದೆ. ಇದರಿಂದ ನೈತಿಕ ಮೌಲ್ಯಗಳನ್ನು ಜೋಪಾನ ಮಾಡಲು ಆತ್ಮಬಲ ದೊರೆಯುತ್ತದೆ. ಈ ಆತ್ಮಬಲವನ್ನು ಇಂದಿನ ಶಿಕ್ಷಣ ಪದ್ಧತಿಯ ನೀಡಲಾರದು. ಸಮಾಜದ ಸತ್ತ್ವಗುಣ ವೃದ್ಧಿಯಾಗುವುದರಿಂದಲೇ ಎಲ್ಲ ಕ್ಷೇತ್ರಗಳಲ್ಲಿ ಅಧಃಪತನವನ್ನು ನಿಲ್ಲಿಸಲು ಸಾಧ್ಯವಾಗುತ್ತದೆ.

–ಶ್ರೀ. ಧೈವತ ವಾಘಮಾರೆ