ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಜಾಗೃತಗೊಳಿಸುವ ಅವಶ್ಯಕತೆ

ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವ ಮುಂಚೆ ನಂಬಿಗಸ್ಥರನ್ನು ಅಥವಾ ವರಿಷ್ಠರನ್ನು ಕೇಳಿ ತಿಳಿದುಕೊಳ್ಳುವುದು ಮನುಷ್ಯರ ಪ್ರಕೃತಿದತ್ತ ಸ್ವಭಾವವಾಗಿದೆ

''ಪ್ರತಿದಿನ ಕಂಡು ಬರುತ್ತಿರುವ ಎಳೆವಯಸ್ಸಿನ ಮಕ್ಕಳ ಆತ್ಮಹತ್ಯೆಯ ಪ್ರಕರಣಗಳು ರಾಷ್ಟ್ರ ಮಟ್ಟದಲ್ಲಿ ಗಂಭೀರವಾದ ಚಿಂತೆಯ ಸ್ವರೂಪವನ್ನು ತಾಳಿವೆ. ದಿನೇ ದಿನೇ ಇಂತಹ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬರುತ್ತಿದೆ. ಆತ್ಮಹತ್ಯೆಗಳು ಹೊಸದೇನಲ್ಲ, ಆದರೂ ಈ ರೀತಿಯ ಸರಣಿ ಆತ್ಮಹತ್ಯೆಗಳ ಪ್ರಕರಣಗಳು ಇದೇ ಮೊದಲನೇ ಬಾರಿ ಎಲ್ಲರ ಗಮನವನ್ನು ಸೆಳೆಯುತ್ತಿವೆ. ಆಡುವ ವಯಸ್ಸಿನಲ್ಲಿ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಿರುವುದು ಆಶ್ಚರ್ಯಕರವಾದರೂ, ಅವರನ್ನು ಈ ನಿರ್ಣಯದತ್ತ ತಳ್ಳುವ ಪರಿಸ್ಥಿತಿಗಳನ್ನು, ಆ ಪರಿಸ್ಥಿತಿಗಳನ್ನು ನಿರ್ಮಿಸುವ ಘಟಕಗಳನ್ನು ಗುರುತಿಸಿ, ಆ ಘಟಕಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು ಅಷ್ಟೇ ಅವಶ್ಯಕವಾಗಿದೆ.

ಜೀವನವೆಂದರೇನು? ಜೀವನದಲ್ಲಿ ಉದ್ಭವಿಸುವ ಅನೇಕ ಸನ್ನಿವೇಶಗಳನ್ನು ಎದುರಿಸುವುದು ಹೇಗೆ, ಇಂತಹ ಸನ್ನಿವೇಶಗಳಲ್ಲಿ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುವುದು, ಅವುಗಳಿಂದ ಹೇಗೆ ಕಲಿಯುವುದು ಮತ್ತು ಬೆಳೆಯುವುದು, ಕೌಟುಂಬಿಕ ಮತ್ತು ಔದ್ಯೋಗಿಕ ಜೀವನವನ್ನು ಒಟ್ಟಾಗಿ ನಿಭಾಯಿಸಿ ಹೇಗೆ ಮುನ್ನಡೆಯುವುದು ಮುಂತಾದ ಅನೇಕ ವಿಷಯಗಳನ್ನು ಮನುಷ್ಯನು ತನ್ನ ವಿದ್ಯಾರ್ಥಿ ದೆಸೆಯಲ್ಲಿ ಕಲಿಯುತ್ತಾನೆ. ಈ ಸಂದರ್ಭದಲ್ಲಿ ಬಂದಂತಹ ಅನುಭವಗಳನ್ನು ಸಂಗ್ರಹಿಸಿ ಜೀವನದಲ್ಲಿ ಮುನ್ನಡೆಯುತ್ತಾನೆ. ಜೀವನದ ಈ ನಿರ್ಣಾಯಕ ಘಟ್ಟದಲ್ಲಿ ಎಲ್ಲರಿಗೂ ಯೋಗ್ಯ ಸಮರ್ಪಕ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ, ತನ್ನ ಭಾವನೆಗಳನ್ನು ಅರ್ಥೈಸಿಕೊಳ್ಳುವ ಸಹವರ್ತಿಗಳ ಅವಶ್ಯಕತೆ ಇರುತ್ತದೆ, ಸಹಾಯ ಎಲ್ಲಿಂದ ಬರುತ್ತದೆ ಎಂಬುವುದು ಇಲ್ಲಿ ಮುಖ್ಯವಲ್ಲ. ತಂದೆ ತಾಯಿ, ಮಿತ್ರರು, ಶಿಕ್ಷರಾದರೂ ಇರಲಿ ಸಹಾಯದ ಅವಶ್ಯಕತೆ ಇರುತ್ತದೆ. ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವ ಮುಂಚೆ ನಂಬಿಗಸ್ಥರನ್ನು ಅಥವಾ ವರಿಷ್ಠರನ್ನು ಕೇಳಿ ನಂತರ ನಿರ್ಧಾರ ತಿಳಿದುಕೊಳ್ಳುವುದು ಮನುಷ್ಯರ ಪ್ರಕೃತಿದತ್ತ ಸ್ವಭಾವವಾಗಿದೆ. ಈ ನಿರ್ಣಯ ಒಂದು ವಸ್ತುವನ್ನು ಖರೀದಿಸುವುದರ ಬಗ್ಗೆ ಇರಬಹುದು, ಅಥವಾ ಜೀವನದ ಮಹತ್ವದ ನಿರ್ಣಯವಾಗಿರಬಹುದು. ಈ ಸಮಯದಲ್ಲಿ ಯೋಗ್ಯ ಮಾರ್ಗದರ್ಶನ ಸಿಗದಿದ್ದರೆ, ಮನುಷ್ಯನು ಅಯೋಗ್ಯ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂಬುದರಲ್ಲಿ ಸಂದೇಹವಿಲ್ಲ.

ಮಕ್ಕಳಿಗೆ ಮಾನಸಿಕ ಆಧಾರ, ಅವರ ಭಾವನೆಗಳನ್ನು ಅರ್ಥೈಸಿಕೊಳ್ಳುವ ಅವಶ್ಯಕತೆಯಿರುವುದರಿಂದ ಈ ಕೋರಿಕೆಯನ್ನು ನೀಗಿಸಲು ಪಾಲರಿಗೆ ಸಾಧ್ಯವಿದೆ.

ಪಾಲಕರು ತಮ್ಮ ಮೇಲೆ ಹೇರುವ ತೀವೃ ಒತ್ತಡ, ತನ್ನಲ್ಲಿ ಇಟ್ಟಿರುವ ತೀವ್ರ ಅಪೇಕ್ಷೆ ಇವುಗಳು ಮಕ್ಕಳ ಆತ್ಮಹತ್ಯಾ ಯತ್ನದ ಹಿಂದಿನ ಮುಖ್ಯ ಕಾರಣಗಳು ಎಂದು ತಿಳಿಯಲಾಗುತ್ತದೆ. ಹೆಚ್ಚಿನಾಂಶ ಸತ್ಯವೂ ಆಗಿರುತ್ತದೆ. ಇಂದಿನ ತೀವ್ರ ಪೈಪೋಟಿಯ ಯುಗದಲ್ಲಿ ತಂದೆ ತಾಯಂದಿರು ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು, ಅವರ ಪ್ರತಿಯೊಂದು ಆಸೆ ಆಕಾಂಕ್ಷೆಗಳನ್ನು ಪೂರೈಸಲು ತಮ್ಮ ಉದ್ಯೋಗದಲ್ಲಿ ಮಗ್ನರಾಗಿರುವುದು ಕಂಡುಬರುತ್ತಿದೆ. ಎಳೆಯ ವಯಸ್ಸಿನಲ್ಲಿ ಮಕ್ಕಳಲ್ಲಿ ಸುಸಂಸ್ಕಾರಗಳನ್ನು ಬೆಳೆಸಬೇಕಾಗುತ್ತದೆ, ಆದರೆ ಇದೇ ಸಮಯದಲ್ಲಿ ತಂದೆ ತಾಯಂದಿರು ಉದ್ಯೋಗಸ್ಥರಾಗಿದ್ದು ಮನೆಯಿಂದ ಹೆಚ್ಚಿನ ಸಮಯ ದೂರವಿರುವುದರಿಂದ ಮಕ್ಕಳಿಗೆ ಯೋಗ್ಯ ಮಾರ್ಗದರ್ಶನ ದೊರೆಯುವುದಿಲ್ಲ.