ಭಗತ್ ಸಿಂಗ್ ಬಾಲ್ಯ

ಸ್ವಾತಂತ್ರ್ಯ ಪೂರ್ವದ ಘಟನೆ. ಪಂಜಾಬಿನ ಒಂದು ಹಳ್ಳಿ. ೩ ವರ್ಷದ ಬಾಲಕನೊಬ್ಬ ತನ್ನ ತಂದೆಯೊಂದಿಗೆ ಸುತ್ತಾಡಿ ಬರಲು ಮನೆಯಿಂದ ಹೊರಟ. ಅವರೊಂದಿಗೆ ಅವನ ತಂದೆಯ ಮಿತ್ರರೊಬ್ಬರು ಇದ್ದರು. ಮೂವರೂ ಮಾತಾಡುತ್ತ ಮುಂದೆ ಮುಂದೆ ಹೋಗಿ ಅವರ ಊರಿನ ಗಡಿಯಾಚೆ ನಡೆದರು. ಊರಿನಾಚೆ ಹೊಲ ಗದ್ದೆಗಳ ಮಧ್ಯದಲ್ಲಿ ನಡೆದುಕೊಂಡು ಹೋಗುತ್ತಿದ್ದ ಹಿರಿಯರು ಬಾಲಕನ ನೆನಪಾಗಿ ತಿರುಗಿ ನೋಡಿದರು. ಅವನು ಗದ್ದೆಯೊಂದರಲ್ಲಿ ಕುಳಿತು ಏನೋ ಮಾಡುತ್ತಿದ್ದದ್ದನ್ನು ಕಂಡು ಅವನೆಡೆಗೆ ನಡೆದರು.

ಬಾಲಕನ ತಂದೆ ಕುತೂಹಲದಿಂದ 'ಏನು ಮಾಡುತ್ತಿದ್ದೀಯಾ?' ಎಂದು ಕೇಳಿದರು. ಆಗ ಬಾಲಕನು 'ಈ ಹೊಲದ ತುಂಬಾ ನಾನು ಬಂದೂಕುಗಳನ್ನು ನೆಡುತ್ತೇನೆ' ಎಂದು ಮುಗ್ಧವಾಗಿ ಉತ್ತರಿಸಿದನು. ಈ ಮಾತು ಹೇಳುವಾಗ ಅವನ ಕಣ್ಣಿನಲ್ಲಿ 'ನೆಟ್ಟಿರುವ ಬಂದೂಕುಗಳು ಹೊಲದ ತುಂಬಾ ಬೆಳೆಯಲಿವೆ' ಎಂಬ ಬಲವಾದ ನಂಬಿಕೆ ಕಾಣುತ್ತಿತ್ತು! ಏಕೆ ಎಂದು ಪ್ರಶ್ನಿಸಿದಕ್ಕೆ 'ಈ ಬಂದೂಕುಗಳಿಂದ ನಾವು ಆಂಗ್ಲರನ್ನು ನಮ್ಮ ದೇಶದಿಂದ ಹೊರಗೆ ಓಡಿಸಬಹುದು' ಎಂಬ ಉತ್ತರವನ್ನು ನೀಡಿದ! ಇದನ್ನು ಕೇಳುತ್ತಿದ್ದ ಹಿರಿಯರು ಈ ಬಾಲಕನ ದೇಶಭಕ್ತಿಯ ಬಗ್ಗೆ ಆಶ್ಚರ್ಯಚಕಿತರಾದರು.

ಆ ಬಾಲಕ ಯಾರು? ಹುತಾತ್ಮ ಭಗತ್ ಸಿಂಗ್!

ಭಗತ್ ಸಿಂಗ್ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ನೋಡೋಣ.

ಭಗತ್ ಸಿಂಗ್ ಶಾಲೆಯಲ್ಲಿ ಕಲಿಯುತ್ತಿರಲು ತನ್ನ ಸಹಪಾಠಿಗಳಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವ ಪ್ರಯತ್ನ ಮಾಡುತ್ತಿದ್ದರು. ಒಮ್ಮೆ ಅವರು ತರಗತಿಯಲ್ಲಿ ಎಲ್ಲರನ್ನು ಸಂಬೋಧಿಸಿ 'ದೊಡ್ಡವರಾದ ಮೇಲೆ ಏನು ಆಗಲು ಇಚ್ಚಿಸುವಿರಿ?' ಎಂದು ಕೇಳಿದರು. ಕೆಲವರು ವೈದ್ಯರು ಆಗುವ ಇಚ್ಛೆ ತೋರಿಸಿದರೆ, ಕೆಲವರು ಸರಕಾರೀ ಉದ್ಯೋಗಿ ಮತ್ತು ಕೆಲವರು ಸ್ವಂತ ಉದ್ಯೋಗವನ್ನು ಮಾಡುವ ಇಚ್ಚೆಯನ್ನು ವ್ಯಕ್ತಪಡಿಸಿದರು. ಒಬ್ಬ ಮಾತ್ರ 'ಮದುವೆ ಆಗಬೇಕು' ಎಂದು ಹೇಳಿದನು! ಇದನ್ನು ಕೇಳಿದ ಬಾಲಕ ಭಗತ್, 'ಮದುವೆ ಮಾಡಿಕೊಳ್ಳುವುದು ಒಂದು ಸಾಧನೆಯೇ? ನಾನು ಆಂಗ್ಲರನ್ನು ನಮ್ಮ ದೇಶದಿಂದ ಒದ್ದು ಓಡಿಸುತ್ತೇನೆ' ಎಂದು ಉದ್ಗರಿಸಿದನು!

ಮತ್ತೊಂದು ಪ್ರಸಂಗ : ಆಗ ಭಾರತದಾದ್ಯಂತ ಸ್ವದೇಶೀ ಚಳುವಳಿಯು ಕಾಡ್ಗಿಚ್ಚಿನಂತೆ ಹಬ್ಬಿತ್ತು. ಭಗತ್ ಸಿಂಗ್ ತಮ್ಮಲ್ಲಿ ಇದ್ದ ಮಾತ್ರವಲ್ಲದೆ ತಮ್ಮ ವಠಾರದಲ್ಲಿ ಎಲ್ಲರ ಮನೆಯಿಂದ ವಿದೇಶಿ ಬಟ್ಟೆ ಮತ್ತು ವಸ್ತುಗಳನ್ನು ತಂದು ಬೆಂಕಿಗೆ ಆಹುತಿ ನೀಡುತ್ತಿದ್ದರು! ಅಲ್ಲದೆ ಆ ಸಮಯದಲ್ಲಿ ಕೇವಲ ಸ್ವದೇಶೀ ಖಾದಿಯನ್ನು ಕೂಡ ಉಪಯೋಗಿಸುತ್ತಿದ್ದರು!

ಮಿತ್ರರೇ, ಈ ಘಟನೆಗಳಿಂದ ನಮಗೇನು ತಿಳಿಯುತ್ತದೆ? ಬಾಲ್ಯದಿಂದಲೇ ಭಗತ್ ಸಿಂಗ್ ನಾರಾ ನಾಡಿಯಲ್ಲಿ ರಾಷ್ಟ್ರಪ್ರೇಮ ಉಕ್ಕಿ ಹರಿಯುತಿತ್ತು.
ಸ್ವಾರ್ಥದಿಂದ ತನ್ನ ಬಗ್ಗೆ ಮಾತ್ರ ನೋಡುವುದನ್ನು ಬಿಟ್ಟು, ಬಾಲ್ಯದಿಂದಲೇ ಸಂಪೂರ್ಣ ರಾಷ್ಟ್ರದ ಒಳಿತಿನ ಬಗ್ಗೆ ವಿಚಾರಿಸುತ್ತಿದ್ದ ಭಗತ್ ಸಿಂಗ್ ಇಂದಿನ ಪೀಳಿಗೆಗೆ ಆದರ್ಶರಲ್ಲವೇ?