ಬಾಲಕ್ರಾಂತಿಕಾರಿ ಸುಶೀಲ ಸೇನ ಮತ್ತು ಕಾಶೀನಾಥ ಪಾಗಧರೆ!

ನಮ್ಮ ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಇಬ್ಬರು ಬಾಲ ಕ್ರಾಂತಿಕಾರಿಗಳ ಬಗ್ಗೆ ತಿಳಿದುಕೊಳ್ಳೋಣ. ಬಾಲಮಿತ್ರರೇ, ನಿಮಗೆ ಗೊತ್ತಿರಬಹುದು ನಮ್ಮ ಭಾರತ ದೇಶ ೧೯೪೭ರ ಮೊದಲು ಪರತಂತ್ರವಾಗಿತ್ತು, ನಮ್ಮ ದೇಶದ ಮೇಲೆ ಆಂಗ್ಲರ ಆಡಳಿತವಿತ್ತು. ಆಂಗ್ಲರು ನಮ್ಮೊಂದಿಗೆ ಗುಲಾಮರಂತೆ ವ್ಯವಹರಿಸುತ್ತಿದ್ದರು ಮತ್ತು ಭಾರತೀಯರ ಮೇಲೆ ಬಹಳ ಅತ್ಯಾಚಾರವನ್ನು ಮಾಡುತ್ತಿದ್ದರು. ಭಾರತಮಾತೆಯನ್ನು ಸ್ವತಂತ್ರಗೊಳಿಸಲು ಪ್ರಯತ್ನಿಸಿದ ಜನರನ್ನು ಕ್ರಾಂತಿಕಾರಿಗಳೆಂದು ಕರೆಯಲಾಗುತ್ತದೆ. ಭಾರತಮಾತೆಯನ್ನು ಸ್ವತಂತ್ರಗೊಳಿಸಲು ಅನೇಕ ಕ್ರಾಂತಿಕಾರರು ತಮ್ಮ ಬಲಿದಾನ ನೀಡಿದ್ದಾರೆ. ಕ್ರಾಂತಿಕಾರಿಗಳ ಬಲಿದಾನದಿಂದಲೇ ನಮ್ಮ ದೇಶ ಸ್ವತಂತ್ರವಾಗಿದೆ ಹಾಗೂ ಇಂದು ಕ್ರಾಂತಿಕಾರಿಗಳ ಈ ಬಲಿದಾನ ಮತ್ತು ತ್ಯಾಗದ ಕಾರಣ ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ.

ಒಂದು ವೇಳೆ ಈ ಕ್ರಾಂತಿಕಾರಿಗಳು ಹೀಗೆ ಮಾಡದೇ ಇದ್ದರೆ, ಇಂದಿಗೂ ನಾವು ಸ್ವತಂತ್ರವಾಗಿ ಏನನ್ನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಗುಲಾಮರಾಗಿಯೇ ಇರುತ್ತಿದ್ದೆವು. ನಾವು ಈ ಕ್ರಾಂತಿಕಾರರ ಬಗ್ಗೆ ಸದಾ ಕೃತಜ್ಞರಾಗಿರಬೇಕು. ಅವರಂತಹ ರಾಷ್ಟ್ರಪ್ರೇಮವನ್ನು ನಮ್ಮಲ್ಲಿಯೂ ಬೆಳೆಸಲು ಅವರಂತೆಯೇ ಪ್ರಯತ್ನಿಸಬೇಕು. ಸುಶೀಲ ಸೇನ ಮತ್ತು ಕಾಶೀನಾಥ ಪಾಗಧರೆ ಎಂಬ ಬಾಲ ಕ್ರಾಂತಿಕಾರಿಗಳಿದ್ದರು. ಈಗ ನಾವು ಈ ಇಬ್ಬರು ಕ್ರಾಂತಿಕಾರಿಗಳು ಮಾಡಿರುವ ತ್ಯಾಗದ ಬಗ್ಗೆ ತಿಳಿದುಕೊಳ್ಳೋಣ…

೧. ಸುಶೀಲ ಸೇನ!

ಕ್ರಾಂತಿಕಾರಿ ಸುಶೀಲ ಸೇನರ ವಯಸ್ಸು ಆಗ ಸುಮಾರು ೧೫ ವರ್ಷವಾಗಿತ್ತು. ಅವನು ಬಂಗಾಲದ ಕೋಲಕತ್ತಾ ನಗರದಲ್ಲಿ ವಾಸಿಸುತ್ತಿದ್ದನು. ಸುಶೀಲ ಸೇನನಿಗೆ ಮಾತೃಭೂಮಿ ಅಂದರೆ ಭಾರತಮಾತೆಯೇ ಸರ್ವಸ್ವವಾಗಿತ್ತು. ಅವನು ಮಾತೃಭೂಮಿಗಾಗಿ ಪ್ರಾಣವನ್ನು ತ್ಯಜಿಸಲೂ ಸಿದ್ಧನಾಗಿದ್ದನು.

ಆ ದಿನಗಳಲ್ಲಿ ಬಂಗಾಲದ ಕೋಲಕತ್ತಾದ ನ್ಯಾಯಾಲಯದಲ್ಲಿ ಅರವಿಂದ ಘೋಷ ಹೆಸರಿನ ಕ್ರಾಂತಿಕಾರಿಯ ಮೇಲೆ ಮೊಕದ್ದಮೆ ನಡೆದಿತ್ತು. ನ್ಯಾಯಾಲಯದ ಹೊರಗೆ ಜನಸಾಗರವೇ ಕೂಡಿತ್ತು. ಅಲ್ಲಿ ನಿಂತಿದ್ದ ಎಲ್ಲ ಜನರು  ‘ವಂದೇ ಮಾತರಮ್’ ಘೋಷಣೆಯನ್ನು ಕೂಗುತ್ತ ತಮ್ಮ ರಾಷ್ಟ್ರಪ್ರೇಮವನ್ನು ಹಾಗೂ ಕ್ರಾಂತಿಕಾರಿ ಅರವಿಂದಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದರು. ‘ವಂದೇ ಮಾತರಮ್’ ಘೋಷಣೆಯಿಂದ ಅಲ್ಲಿಯ ವಾತಾವರಣದಲ್ಲಿ ಮಾತೃಭೂಮಿಗಾಗಿ ಪ್ರೇಮ ತುಂಬಿ ತುಳುಕುತ್ತಿತ್ತು. ಅಲ್ಲಿ ಉಪಸ್ಥಿತರಿದ್ದ ಆಂಗ್ಲ ಪೊಲೀಸರು ಆ ಜನರ ಮೇಲೆ ಲಾಠಿ ಬೀಸುತ್ತಿದ್ದರು. ಲಾಠಿಯಿಂದ ಒಂದು ಕ್ಷಣವೂ ನಿಲ್ಲಿಸದೇ ಹೊಡೆಯುತ್ತಿದ್ದರು. ಆದರೂ ಜನರು ಹಿಂದಕ್ಕೆ ಸರಿಯುತ್ತಿರಲಿಲ್ಲ.

ಆ ಗುಂಪಿನಲ್ಲಿ ಸುಶೀಲ ಸೇನ ಹೆಸರಿನ ಒಬ್ಬ ಬಾಲಕನೂ ನಿಂತಿದ್ದನು. ಸುಶೀಲ ಸೇನ ಕೂಡ ದೇಶಪ್ರೇಮಿಯಾಗಿದ್ದನು. ನಡೆಯುತ್ತಿರುವುದನ್ನು ನೋಡಿ ಸುಶೀಲ ಸೇನನ ದೇಶಪ್ರೇಮ ಜಾಗೃತವಾಯಿತು. ಪೊಲೀಸರು ಎಲ್ಲ ಭಾರತೀಯರಿಗೆ ನಿರ್ದಯವಾಗಿ ಲಾಠಿಯಿಂದ ಹೊಡೆಯುತ್ತಿರುವುದನ್ನು ನೋಡಿ ಸುಶೀಲ ಸೇನನಿಗೆ ಸಹಿಸಲು ಸಾಧ್ಯವಾಗಲಿಲ್ಲ. ಆಗ ಅವನು ತನ್ನ ಮನಸ್ಸಿನಲ್ಲಿ ಆಂಗ್ಲರನ್ನು ವಿರೋಧಿಸಲು ನಿಶ್ಚಯಿಸಿಕೊಂಡನು. ಮಿತ್ರರೇ ಸುಶೀಲ ಸೇನನು ಏನು ಮಾಡಿದನು ಗೊತ್ತೇ? ಅವನು ಅಲ್ಲಿ ನಿಂತುಕೊ<ಡಿದ್ದ ದಷ್ಟ-ಪುಷ್ಟ ಸಿಪಾಯಿಗಳ ಕೆನ್ನೆಗೆ ಗಟ್ಟಿಯಾಗಿ ಏಟು ಕೊಟ್ಟನು. ಇದನ್ನು ನೋಡಿ ಇತರೆ ಸಿಪಾಯಿಗಳು ಈ ಸುಶೀಲನನ್ನು ಸುತ್ತುವರಿದು ಹೊಡೆಯಲು ಪ್ರಾರಂಭಿಸಿದರು. ಪೊಲೀಸರು ಸುಶೀಲನು ರಕ್ತಸಿಕ್ತನಾಗುವವರೆಗೆ ಹೊಡೆಯುತ್ತಲೇ ಇದ್ದರು. ಬಳಿಕ ಪೊಲೀಸರು ಸುಶೀಲನನ್ನು ಬಂಧಿಸಿದರು ಹಾಗೂ ಮರುದಿನ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯದಲ್ಲಿ ಸುಶೀಲನಿಗೆ ೧೫ ಛಡಿ ಏಟಿನ ಶಿಕ್ಷೆ ವಿಧಿಸಲಾಯಿತು. ಸುಶೀಲನು ೧೫ ಛಡಿಏಟುಗಳನ್ನು ನಗುತ್ತಲೇ ಸಹಿಸಿಕೊಂಡನು. ಸುಶೀಲನ ಈ ಆಚರಣೆಯನ್ನು ನೋಡಿ ಇಂದಿಗೂ ಮನಸ್ಸಿನಲ್ಲಿ ಇದನ್ನು ಹೇಳಬೇಕೆನಿಸುತ್ತದೆ

ಗೂಂಗೆ ಮನಕಿ ಸೀಮಾರೇಖಾ ಹೈ, ಕೇವಲ ಶಾಬ್ದಿಕ ಬುಲಬುಲೋಂಕಿ ಉಡಾನ|
ತೋಪೋಂಕೆ ಢೋಲ- ತಾಶೆ ನಗಾಡೆ, ಸುನಾಯೆಂಗೆ ಆಪಕಿ ವೀರತಾಕಾ ಗಾನ||

ಮಿತ್ರರೇ, ಚಿಕ್ಕ ವಯಸ್ಸಿನಲ್ಲಿಯೇ ಸುಶೀಲ ಸೇನನಲ್ಲಿ ಎಷ್ಟೊಂದು ಸಾಹಸ, ಧೈರ್ಯ ಮತ್ತು ರಾಷ್ಟ್ರಪ್ರೇಮವಿತ್ತು. ಹಾಗಿದ್ದರೆ, ನಾವೂ ಕೂಡ ನಮ್ಮಲ್ಲಿಯೂ ಇಂತಹ ರಾಷ್ಟ್ರಪ್ರೇಮವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸೋಣ. ಅಲ್ಲವೇ?

೨. ಕಾಶೀನಾಥ ಪಾಗಧರೆ!

ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಪಾಲಘರ ತಾಲೂಕಿನಲ್ಲಿ ಸಾತಪಾಟಿ ಹೆಸರಿನ ಒಂದು ಗ್ರಾಮವಿದೆ. ಈ ಗ್ರಾಮದಲ್ಲಿ ೧೪ ವರ್ಷದ ಕಾಶೀನಾಥ ಪಾಗಧರೆ ಹೆಸರಿನ ಬಾಲಕನಿದ್ದನು. ಕಾಶೀನಾಥ ಪಾಗಧರೆ ಚಿಕ್ಕ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮದ ಆಂದೋಲನದ ಸಂಪರ್ಕದಲ್ಲಿದ್ದನು. ೧೯೪೦ರಲ್ಲಿ ಅವನು ಸ್ವಾತಂತ್ರ್ಯದ ಒಂದು ಆಂದೋಲನದಲ್ಲಿ ಭಾಗವಹಿಸಿದ್ದನು. ಈ ಕಾರಣ ಅವನಿಗೆ ಆರು ತಿಂಗಳ ಕಾಲಾವಧಿಗೆ ಸಶ್ರಮ ಕಾರಾಗೃಹವಾಸದ ಶಿಕ್ಷೆಯಾಗಿತ್ತು. ೧೯೪೨ರಲ್ಲಿ ‘ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ’ ಆಂದೋಲನ ಪ್ರಾರಂಭವಾಯಿತು. ಈ ಆಂದೋಲನದಲ್ಲಿ ‘ಭಾರತ ದೇಶ ನಮ್ಮದು, ದೇಶವನ್ನು ಬಿಟ್ಟು ಹೋಗಿರಿ’ ಎಂದು ಆಂಗ್ಲರಿಗೆ ಜನರು ಎಲ್ಲೆಡೆ ಕೂಗಿ ಕೂಗಿ ಹೇಳಲಾರಂಭಿಸಿದರು. ಈ ಆಂದೋಲನದಲ್ಲಿ ೧೪ ಅಗಸ್ಟ ೧೯೪೨ರಂದು ಕಾಶೀನಾಥನು ಪಾಲಘರದಲ್ಲಿ ನಾಲ್ಕು ಸಾವಿರ ಜನರನ್ನು ಒಗ್ಗೂಡಿಸಿದನು ಮತ್ತು ಅಲ್ಲಿಯ ತಹಶೀಲ್ದಾರ ಕಾರ್ಯಾಲಯದ ಎದುರಿಗೆ ಈ ನಾಲ್ಕು ಸಾವಿರ ಜನರೊಂದಿಗೆ ಪ್ರದರ್ಶನವನ್ನು ಮಾಡಿದನು. ಈ ಆಂದೋಲನವನ್ನು ತಡೆಯಲು ಆಂಗ್ಲರು ಜನರ ಮೇಲೆ ಹಿಂದೆ ಮುಂದೆ ವಿಚಾರವನ್ನು ಮಾಡದೇ ಗೋಲಿಬಾರ ಮಾಡಲು ಪ್ರಾರಂಭಿಸಿದರು. ಈ ಗೋಲಿಬಾರಿನಲ್ಲಿ ಕಾಶೀನಾಥ ವೀರಗತಿಯನ್ನು ಹೊಂದಿದನು. ಈ ಚಿಕ್ಕ ವಯಸ್ಸಿನ ಕ್ರಾಂತಿಕಾರಿಯು ದೇಶದ ಸೇವೆಯನ್ನು ಮಾಡುತ್ತ ಭಾರತಂಬೆಯ ಚರಣಗಳಲ್ಲಿ ವಿಲೀನನಾದನು.

ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟು ಜನರನ್ನು ಒಗ್ಗೂಡಿಸುವುದು ಹಾಗೂ ಅವರನ್ನು ದೇಶಕಾರ್ಯಕ್ಕಾಗಿ ಪ್ರೆರೇಪಿಸುವುದು ಸಾಮಾನ್ಯ ವಿಷಯವಾಗಿರಲಿಲ್ಲ. ಅಲ್ಲದೇ ದೇಶಕ್ಕಾಗಿ ಆಂಗ್ಲರ ಗೋಲಿಬಾರಿಗೆ ಹೆದರದೇ ತನ್ನ ಪ್ರಾಣವನ್ನು ಮಾತೃಭೂಮಿಯ ರಕ್ಷಣೆಗಾಗಿ ಅರ್ಪಿಸಿದನು. ಹಾಗಿದ್ದರೆ ಮಿತ್ರರೇ, ನಾವೂ ಕೂಡ ನಮ್ಮ ಸರ್ವಸ್ವದ ತ್ಯಾಗವನ್ನು ಮಾಡಲು ಸಿದ್ಧರಾಗಬೇಕು. ಇದರಿಂದಲೇ ನಾವು ದೇಶವನ್ನು ರಕ್ಷಿಸಬಹುದಾಗಿದೆ.

Leave a Comment