ಭಗವಾನ್ ಶ್ರೀ ವಿಷ್ಣುವಿನ ವಾಮನ ಅವತಾರ

ಭಾದ್ರಪದ ಮಾಸದ ಶುಕ್ಲ ಪಕ್ಷದ ದ್ವಾದಶಿ ಅಂದರೆ ವಾಮನ ಜಯಂತಿ.

ಭಗವಾನ್ ಶ್ರೀವಿಷ್ಣುವಿನ ಐದನೇ ಅವತಾರವೇ ವಾಮನ ಅವತಾರ. ಭಗವಂತನ ಲೀಲೆಗಳು ಅನಂತವಾಗಿವೆ ಹಾಗೂ ವಾಮನ ಅವತಾರವು ಆ ಲೀಲೆಗಳಲ್ಲಿ ಒಂದು. ಈ ವಿಷಯದ ಬಗ್ಗೆ ಶ್ರೀಮದ್ಭಾಗವತಪುರಾಣದಲ್ಲಿ ಒಂದು ಕಥೆಯಿದೆ.

ಪ್ರಾಚೀನ ಕಾಲದಿಂದ ದೇವರು ಹಾಗೂ ದಾನವರ ಅಂದರೆ ದೇವತೆಗಳಯ ಹಾಗೂ ರಾಕ್ಷಸರ ನಡುವೆ ಯುದ್ಧ ನಡೆಯುತ್ತಾ ಬಂದಿದೆ. ದೇವರ ಹಾಗೂ ದೈತ್ಯರ ಈ ಯುದ್ಧದಲ್ಲಿ ಆಧರ್ಮದ ಹಾದಿ ಹಿಡಿಯುವ ದೈತ್ಯರು ಸೋಲುತ್ತಾರೆ. ಒಂದು ಸಲ ಇದೇ ರೀತಿ ದೇವರ ಹಾಗೂ ದಾನವರ ನಡುವೆ ಯುದ್ಧ ನಡೆಯಿತು. ದಾನವರು ಎಂದಿನಂತೆ ಸೋತುಹೋದರು. ಆ ಯುದ್ಧದಲ್ಲಿ ಜೀವಂತವಾಗಿ ಉಳಿದ ಕೆಲವು ಪರಾಜಿತ (ಸೋತ) ದೈತ್ಯರು ತಮ್ಮ ಮೃತ ಹಾಗೂ ಗಾಯಗೊಂಡ ಸಂಗಡಿಗರನ್ನು ಕರೆದುಕೊಂಡು ಅಸ್ತಾಚಲಕ್ಕೆ ಹೋದರು. ಮತ್ತೊಂದೆಡೆ ಏನಾಯಿತೆಂದರೆ ದೈತ್ಯರಾಜ ಬಲಿಯು ದೇವರಾಜ ಇಂದ್ರನ ವಜ್ರಾಯುಧದಿಂದ ಮೃತಪಟ್ಟನು.

ಆಗ ದೈತ್ಯರ ಗುರು ಶುಕ್ರಾಚಾರ್ಯರು ತಮ್ಮ ಬಳಿಯಿರುವ ಮೃತ ಸಂಜೀವಿನಿ ವಿದ್ಯೆಯಿಂದ ಬಲಿರಾಜನನ್ನು ಹಾಗೂ ಇತರ ದೈತ್ಯರನ್ನು ಪುನಃ ಜೀವಂತಗೊಳಿಸಿ ಸದೃಢರಾಗಿಸಿದರು. ಮೃತ ಸಂಜೀವಿನಿ ವಿದ್ಯೆ ಅಂದರೆ ಸತ್ತವರನ್ನು ಮತ್ತೆ ಜೀವಂತವಾಗಿಸುವ ವಿದ್ಯೆ. ಬಲಿ ರಾಜನನ್ನು ಅಜೇಯನನ್ನಾಗಿ ಮಾಡಲು ಶುಕ್ರಾಚಾರ್ಯರು ಒಂದು ಯಜ್ಞವನ್ನು ಆಯೋಜಿಸಿದರು ಹಾಗೂ ಅಗ್ನಿ ದೇವರನ್ನು ಪ್ರಸನ್ನಗೊಳಿಸಿ ದಿವ್ಯ ರಥ, ಬಾಣ, ಅಭೇದ್ಯ ಕವಚವನ್ನು ಪಡೆದುಕೊಂಡರು. ಇದರಿಂದ ಅಸುರರ ಶಕ್ತಿ ಇನ್ನೂ ಹೆಚ್ಚಾಯಿತು ಹಾಗೂ ಪುನಃ ದೇವತೆಗಳ ಮೇಲೆ ಯುದ್ಧವನ್ನು ಸಾರಿದರು. ಅಸುರೀ ಸೇನೆಯು ಅಮರಾವತಿಯ ಮೇಲೆ ಮೇಲಿಂದ ಮೇಲೆ ಆಕ್ರಮಣ ನಡೆಸಿತು. ಅಮರಾವತಿ ಅಂದರೆ ಇಂದ್ರನ ನಗರ.

ಗುರು ಶುಕ್ರಾಚಾರ್ಯರು ಬಲಿ ರಾಜನಿಗೆ ನೂರು ಯಜ್ಞಗಳನ್ನು ಮಾಡಲು ಹೇಳಿದರು. ಶುಕ್ರಾಚಾರ್ಯರು ಬಲಿ ರಾಜನಿಗೆ ಈ ಯಜ್ಞಗಳ ಹಿಂದಿನ ಕಾರಣವನ್ನು ಸಹ ಹೇಳಿದರು. ‘ಒಂದು ವೇಳೆ ನೀನೇನಾದರೂ ನೂರು ಯಜ್ಞಗಳನ್ನು ಪೂರ್ಣಗೊಳಿಸಿದರೆ, ಸ್ವರ್ಗವನ್ನು ಪಡೆಯುವಾಗ ಯಾರಿಂದಲೂ ನಿನ್ನನ್ನು ತಡೆಯಲು ಸಾಧ್ಯವಿಲ್ಲ. ನೀನು ಅಜೇಯನಾಗುವೆ’ ಎಂದು. ಈ ವಿಷಯವು ದೇವರಾಜ ಇಂದ್ರನಿಗೆ ತಿಳಿದು ಬಂತು. ಆಗ ದೇವತೆಗಳ ರಾಜ ಇಂದ್ರದೇವನು ಭಗವಾನ ಶ್ರೀವಿಷ್ಣುವಿಗೆ ಶರಣಾದನು. ಭಗವಾನ ವಿಷ್ಣು ದೇವತೆಗಳಿಗೆ ಸಹಾಯ ಮಾಡುವುದಾಗಿ ಆಶ್ವಾಸನೆ ನೀಡಿದನು. ಭಗವಾನ ವಿಷ್ಣುವು ಅದಿತಿ ಮಾತೆಯ ಗರ್ಭದಿಂದ ಜನಿಸುವುದಾಗಿಯೂ, ಬಲಿರಾಜನ ನೂರು ಯಜ್ಞಗಳು ಪೂರ್ಣವಾಗದ ಹಾಗೆ ತಡೆಯುವುದಾಗಿಯೂ, ದೈತ್ಯರ ಪರಾಜಯಗೊಳಿಸುವುದಾಗಿಯೂ ಹೇಳಿದನು. ಅಷ್ಟರಲ್ಲಿ ದೈತ್ಯರಾಜ ಬಲಿಯು ದೇವತೆಗಳನ್ನು ಪರಾಜಯಗೊಳಿಸಿದನು.

ಕಶ್ಯಪ ಋಷಿಯು ಹೇಳಿದಂತೆ ಅದಿತಿ ಮಾತೆಯು ಪುತ್ರಪ್ರಾಪ್ತಿಗಾಗಿ ಪಯೋವ್ರತದ ಅನುಷ್ಠಾನವನ್ನು ಮಾಡುತ್ತಾಳೆ. ಆಗ ಭಾದ್ರಪದ ಮಾಸದ ಶುಕ್ಲ ಪಕ್ಷದ ದ್ವಾದಶಿಯ ದಿನದಂದು ಅದಿತಿ ಮಾತೆಯ ಗರ್ಭದಲ್ಲಿ ಭಗವಂತನು ಪ್ರಕಟನಾಗಿ ಅವತಾರ ಸ್ವರೂಪವನ್ನು ಧರಿಸುತ್ತಾನೆ. ಈ ಅವತಾರದಲ್ಲಿ ಭಗವಾನ ಶ್ರೀವಿಷ್ಣುವು ಓರ್ವ ಬ್ರಹ್ಮಚಾರೀ ಬ್ರಾಹ್ಮಣನ ಸ್ವರೂಪವನ್ನು ಧರಿಸುತ್ತಾನೆ. ಈ ಅವತಾರದಲ್ಲಿ ಅವರ ಹೆಸರು ವಾಮನ ಎಂದಾಗಿರುತ್ತದೆ.

ಮಹರ್ಷಿ ಕಶ್ಯಪರು ಇತರ ಋಷಿಗಳೊಡನೆ ಸೇರಿ ಬಾಲಕ ವಾಮನನ ಉಪನಯನ ಸಂಸ್ಕಾರವನ್ನು ಮಾಡುತ್ತಾರೆ, ವಟು ವಾಮನನಿಗೆ ಮಹರ್ಷಿ ಪುಲಹರು ಯಜ್ಞೋಪವೀತವನ್ನು, ಅಗಸ್ತ್ಯರು ಮೃಗಾಜಿನ (ಮೃಗಚರ್ಮವನ್ನು), ಮರೀಚಿ ಋಷಿಯು ಪಲಾಶ ದಂಡ, ಆಂಗೀರಸ ಋಷಿಗಳು ವಸ್ತ್ರ, ಸೂರ್ಯನು ಛತ್ರ, ಭೃಗುವು ಪಾದುಕೆ, ಗುರುದೇವ ಜನಿವಾರ ಹಾಗೂ ಕಮಂಡಲವನ್ನು, ಅದಿತಿಯು ಕೌಪೀನವನ್ನು, ಸರಸ್ವತಿಯು ರುದ್ರಾಕ್ಷಿ ಮಾಲೆಯನ್ನು ಹಾಗೂ ಕುಬೇರನು ಭಿಕ್ಷಾಪಾತ್ರೆಯನ್ನು ನೀಡಿದರು. ಅನಂತರ ಭಗವಾನ ವಾಮನ ತಮ್ಮ ತಂದೆಯ ಆಜ್ಞೆ ಪಡೆದು ಬಲಿರಾಜನ ಬಳಿಗೆ ಹೋದನು. ಆಗ ಬಲಿ ರಾಜನು ಶುಕ್ರಾಚಾರ್ಯರ ಮಾರ್ಗದರ್ಶನದಲ್ಲಿ ನರ್ಮದಾ ನದಿಯ ಉತ್ತರ ತೀರದಲ್ಲಿ ನೂರು ಯಜ್ಞಗಳಲ್ಲಿ ಅಂತಿಮ ಯಜ್ಞವನ್ನು ಮಾಡುತ್ತಿರುತ್ತಾನೆ.

ಬಲಿ ರಾಜನು ಕೊಡುಗೈ ದಾನಿ ಹಾಗೂ ಬ್ರಾಹ್ಮಣರನ್ನು ಗೌರವಿಸುವಂತಹ ವೃತ್ತಿಯವನಾಗಿದ್ದನು. ಈ ವಿಷಯವು ಭಗವಾನ ವಿಷ್ಣುವಿಗೆ ತಿಳಿದಿತ್ತು. ಆದ್ದರಿಂದ ಬ್ರಾಹ್ಮಣ ವಟುವಿನ ಸ್ವರೂಪವನ್ನು ಧರಿಸಿ ಅಂದರೆ ವಾಮನನ ಅವತಾರದಲ್ಲಿ ಬಲಿ ರಾಜನ ಬಳಿ ಭಿಕ್ಷೆ ಯಾಚಿಸಲು ತಲುಪಿದನು. ಆಗ ಬಲಿ ರಾಜನು ವಟುವನ್ನು ಸತ್ಕರಿಸುತ್ತಾನೆ.  ಬಲಿಯು ವಾಮನ ರೂಪದಲ್ಲಿರುವ ಶ್ರೀವಿಷ್ಣುವಿನ ಬಳಿ ಭಿಕ್ಷೆಯಲ್ಲಿ ನಿಮಗೇನು ಬೇಕು? ಎಂದು ಕೇಳುತ್ತಾನೆ. ಆಗ ವಾಮನ ಅವತಾರದಲ್ಲಿರುವ ಶ್ರೀವಿಷ್ಣುವು ಬಲಿ ರಾಜನ ಬಳಿ ಮೂರು ಹೆಜ್ಜೆ ಭೂಮಿಯನ್ನು ಕೇಳುತ್ತಾನೆ. ಇದನ್ನು ಕೇಳಿದ ದೈತ್ಯಗುರು ಶುಕ್ರಾಚಾರ್ಯರು ವಾಮನ ಅವತಾರದಲ್ಲಿರುವ ಶ್ರೀವಿಷ್ಣುವನ್ನು ಗುರುತಿಸುತ್ತಾರೆ ಹಾಗೂ ಬಲಿ ರಾಜನಿಗೆ ಭೂಮಿ ನೀಡದಿರಲು ಹೇಳುತ್ತಾರೆ. ಬಲಿ ರಾಜನು ಬ್ರಾಹ್ಮಣನಿಗೆ ವಚನ ನೀಡಿರುತ್ತಾನೆ. ಆದ್ದರಿಂದ ತಮ್ಮ ಮಾತಿಗೆ ಬದ್ಧರಾಗಿರುತ್ತಾನೆ, ಶ್ರೀವಿಷ್ಣುವಿಗೆ ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ನೀಡುತ್ತಾನೆ.

ವಾಮನನ ಸ್ವರೂಪದ ಭಗವಂತನು ನೊಡುತ್ತಿದ್ದಂತೆ ಬ್ರಹದಾಕಾರವಾಗಿ ಬೆಳೆದು ಒಂದು ಹೆಜ್ಜೆಯಲ್ಲಿ ಸಂಪೂರ್ಣ ಸ್ವರ್ಗ ಇತ್ಯಾದಿ ಲೋಕಗಳನ್ನು ಹಾಗೂ ಎರಡನೇ ಹೆಜ್ಜೆಯಲ್ಲಿ ಸಂಪೂರ್ಣ ಪೃಥ್ವಿಯನ್ನೇ ಆವರಿಸುತ್ತಾನೆ. ಈಗ ಮೂರನೇ ಹೆಜ್ಜೆಯಿಡಲು ಯಾವುದೇ ಸ್ಥಳವು ಬಾಕಿ ಉಳಿಯುವುದಿಲ್ಲ. ವಾಮನನು ಬಲಿ ರಾಜನ ಬಳಿ, ‘ಹೇ ರಾಜಾ, ನಾನು ನನ್ನ ಎರಡು ಹೆಜ್ಜೆಗಳಲ್ಲಿ ಸಂಪೂರ್ಣ ಬ್ರಹ್ಮಾಂಡವನ್ನೇ ಆವರಿಸಿದ್ದೇನೆ. ಈಗ ಮೂರನೇ ಹೆಜ್ಜೆಯನ್ನು ಎಲ್ಲಿಡಲಿ’ ಎಂದು ಕೇಳುತ್ತಾನೆ. ಬಲಿ ರಾಜನ ಮುಂದೆ ಸಂಕಟ ಉತ್ಪನ್ನವಾಗುತ್ತದೆ. ಬಲಿ ರಾಜನಿಗೆ ಅನಿಸುತ್ತದೆ ಒಂದು ವೇಳೆ ನಾನು ನನ್ನ ಮಾತನ್ನು ಪೂರ್ಣಗೊಳಿಸದಿದ್ದಲ್ಲಿ ಅದು ಅಧರ್ಮವಾಗುತ್ತದೆ. ನನಗೆ ಘೋರ ಪಾಪ ತಟ್ಟುವುದು. ಆದ್ದರಿಂದ ತನ್ನ ತಲೆಯನ್ನು ಭಗವಂತನ ಮುಂದಿಡುತ್ತಾನೆ ಹಾಗೂ ಮೂರನೆಯ ಹೆಜ್ಜೆಯನ್ನು ತನ್ನ ತಲೆಯ ಮೇಲಿಡುವಂತೆ ವಾಮನನಿಗೆ ಹೇಳುತ್ತಾನೆ. ಭಗವಾನ ವಾಮನನು ತನ್ನ ಮೂರನೇ ಹೆಜ್ಜೆಯನ್ನು ಬಲಿ ರಾಜನ ತಲೆಯ ಮೇಲಿಟ್ಟು ಬಲಿರಾಜನನ್ನು ಪಾತಾಳ ಲೋಕಕ್ಕೆ ತಲುಪಿಸುತ್ತಾರೆ. ನಂತರ ಭಗವಾನ ವಾಮನ ‘ನೀನು ಪಾತಾಳ ಲೋಕದಲ್ಲಿ ರಾಜ್ಯ ನಡೆಸು’ ಎಂದು ಆದೇಶ ನೀಡುತ್ತಾರೆ. ಬಲಿ ರಾಜನು ಭಗವಂತನ ಆದೇಶವನ್ನು ಶಿರಸಾ ಪಾಲಿಸುತ್ತಾನೆ.

ಬಲಿಯು ತನ್ನ ಮಾತನ್ನು ಪಾಲಿಸಿದನೆಂದು ಅವನ ಮೇಲೆ ಭಗವಂತನು ಪ್ರಸನ್ನಗೊಂಡು ದೈತ್ಯರಾಜ ಬಲಿಗೆ ವರ ಕೇಳುವಂತೆ ಹೇಳುತ್ತಾನೆ. ಬಲಿಯು ಭಗವಾನ ವಾಮನನಿಗೆ ‘ನೀವು ಹಗಲು-ರಾತ್ರಿ ನನ್ನ ಎದುರಿನಲ್ಲಿಯೇ ಇರಬೇಕೆಂಬ’ ವರವನ್ನು ಬೇಡುತ್ತಾನೆ. ಶ್ರೀವಿಷ್ಣುವು ತಾನು ನೀಡಿದ ವಚನವನ್ನು ಪಾಲಿಸಲು ವಾಮನ ಅವತಾರದಲ್ಲಿಯೇ ಪಾತಾಳಲೋಕದಲ್ಲಿ ಬಲಿರಾಜನ ದ್ವಾರಪಾಲಕನಾಗಿ ಇರಲು ಸ್ವೀಕರಿಸುತ್ತಾನೆ.

Leave a Comment