ಸಮುದ್ರ ಮಂಥನ ಮತ್ತು ರಾಹು

ಜನಮೇಜಯನು ಸಮುದ್ರ ಮಂಥನದ ಬಗ್ಗೆ ಕೇಳುವುದು

ಬಾಲ ಮಿತ್ರರೇ, ನಿಮಗೆ ಅಭಿಮನ್ಯು ಯಾರೆಂದು ಗೊತ್ತೇ ಇದೆ. ಅಭಿಮನ್ಯು ಮಹಾಭಾರತದ ಯುದ್ಧದಲ್ಲಿ ಪರಾಕ್ರಮದಿಂದ ಹೋರಾಡಿ ಕೌರವರ ಸೇನೆಯ ಮಹಾರಥಿಗಳನ್ನು ತನ್ನ ಪರಾಕ್ರಮದಿಂದ ಬೆರಗುಗೊಳಿಸಿದ ವೀರ. ರಾಜಾ ಪರೀಕ್ಷಿತನು ಅಭಿಮನ್ಯುವಿನ ಪುತ್ರನಾಗಿದ್ದನು ಮತ್ತು ರಾಜಾ ಪರೀಕ್ಷಿತನ ಪುತ್ರನ ಹೆಸರು ಜನಮೇಜಯ ಎಂದಿತ್ತು. ಜನಮೇಜಯ ರಾಜನು ಋಷಿ ವೈಶಂಪಾಯನರಿಗೆ ‘ಸಮುದ್ರ ಮಂಥನ’ದ ಕಥೆಯನ್ನು ಹೇಳಲು ವಿನಂತಿಸಿದನು. ಅವರು ಕಥೆಯನ್ನು ಹೇಳ ತೊಡಗಿದರು…

ಸಮುದ್ರ ಮಂಥನಕ್ಕೆ ಶ್ರೀ ವಿಷ್ಣುವಿನ ಕೂರ್ಮ ಅವತಾರದ ಆಧಾರ ಸಿಗುವುದು

ಸಮುದ್ರ ಮಂಥನದ ಕಥೆಯನ್ನು ಆರಂಭಿಸುತ್ತಾ – ಹೇ ರಾಜನ್! ಪ್ರಾಚೀನ ಕಾಲದ ದೇವತೆಗಳು ಮತ್ತು ದೈತ್ಯರು ಸಮುದ್ರ ಮಂಥನ ನಡೆಸಿ ಅಮೃತ ಮತ್ತು ಅನ್ಯ ರತ್ನಗಳನ್ನು ತೆಗೆಯಲು ನಿಶ್ಚಯಿಸಿದರು. ದೇವತೆಗಳು ಮತ್ತು ದೈತ್ಯರು ಸಮುದ್ರ ಮಂಥನವನ್ನು ಹೇಗೆ ಮಾಡುವುದು ಎಂದು ವಿಚಾರ ವಿಮರ್ಶೆಯನ್ನೂ ಮಾಡಿದರು. ಸಮುದ್ರ ಮಂಥನ ಮಾಡುವ ಸಲುವಾಗಿ ಒಂದು ವಿಶಾಲ ಕಡಗೋಲು ಮತ್ತು ಹಗ್ಗದ ಆವಶ್ಯಕತೆ ಬೀಳುತ್ತದೆ ಎಂದು ಎಲ್ಲರೂ ಸೇರಿ ನಿಶ್ಚಯ ಮಾಡಿದರು. ಕೊನೆಯಲ್ಲಿ ಮಂದರಾಚಲ ಎಂಬ ಹೆಸರಿನ ಪರ್ವತವನ್ನು ಕಡಗೋಲಾಗಿ ಮಾಡುವುದು ಮತ್ತು ವಾಸುಕಿ ಎಂಬ ಹೆಸರಿನ ಸರ್ಪವನ್ನು ಹಗ್ಗವಾಗಿ ಉಪಯೋಗಿಸಲು ನಿಶ್ಚಯಿಸಿದರು. ದೇವತೆಗಳ ವಿನಂತಿಯಂತೆ ಭಗವಾನ ಶ್ರೀ ವಿಷುವ್ಣು ಗರುಡನಿಗೆ ಮಂದರಾಚಲ ಪರ್ವತವನ್ನು ಸಮುದ್ರದಲ್ಲಿ ತಂದಿಡಬೇಕು ಎಂದು ಆಜ್ಞೆ ಕೊಟ್ಟನು. ಗರುಡನು ಮಂದರಾಚಲ ಪರ್ವತವನ್ನು ತಂದು ಸ್ಥಾಪಿಸಿದನು ಮತ್ತು ವಾಸುಕಿಯು ಪರ್ವತಕ್ಕೆ ಹೋಗಿ ಸುತ್ತಿಕೊಂಡನು. ಈ ಪ್ರಕಾರವಾಗಿ ಸಮುದ್ರಮಂಥನದ ಪ್ರಕ್ರಿಯೆಯನ್ನು ಪ್ರಾರಂಭ ಮಾಡಿದರು. ದೇವಗಣವು ಸರ್ಪದ ಬಾಲದ ಭಾಗವನ್ನು ಮತ್ತು ರಾಕ್ಷಸ ಗಣವು ಸರ್ಪದ ಬಾಯಿಯ ಭಾಗವನ್ನು ಹಿಡಿದು ಎಳೆಯತೊಡಗಿದರು. ಮಂಥನವನ್ನು ಮಾಡುತ್ತಾ ಮಾಡುತ್ತಾ ಮಂದರಾಚಲ ಪರ್ವತವು ನೀರಿನಲ್ಲಿ ಮುಳುಗತೊಡಗಿತು. ಅದನ್ನು ನೋಡಿ ಎಲ್ಲ ದೇವತೆಗಳು ಮತ್ತು ದೈತ್ಯರು ವಿಚಲಿತರಾದರು. ದೇವತೆಗಳು ಭಗವಾನ್ ಶ್ರೀ ವಿಷ್ಣುವಿನ ಸ್ತುತಿ ಮಾಡತೊಡಗಿದರು. ಆಗ ವಿಷ್ಣುವು ಕೂರ್ಮ ಅವತಾರವನ್ನು ತಾಳಿದನು ಅಂದರೆ ಆಮೆಯ ರೂಪ ಧರಿಸಿ ತನ್ನ ಬೆನ್ನಿನ ಮೇಲೆ ಮಂದರಾಚಲ ಪರ್ವತವನ್ನು ಸ್ಥಿರಗೊಳಿಸಿದನು.

ಸಮುದ್ರ ಮಂಥನದಿಂದ ಹೊರಬಂದ ೧೪ ರತ್ನಗಳು

ಈಗ ಪುನಃ ಮಂಥನ ಪ್ರಾರಂಭವಾಯಿತು. ಮೊದಲಿಗೆ ಸಮುದ್ರದಿಂದ ಕಾಲಕೂಟ ಎಂಬ ಹೆಸರಿನ ಮಹಾಭಯಂಕರ ವಿಷವು ಹೊರಗೆ ಬಂತು. ಆ ವಿಷದಿಂದ ಸಮಸ್ತ ಪೃಥ್ವಿಯು ಉರಿಯತೊಡಗಿತು. ಎಲ್ಲ ದೇವತೆಗಳು, ದೈತ್ಯರು, ಮಾನವರು, ಜೀವಜಂತುಗಳು ಅದರ ಪ್ರಭಾವದಿಂದ ಭಯಭೀತರಾದರು. ಭಗವಾನ ವಿಷ್ಣು, ಬ್ರಹ್ಮದೇವರು ಮತ್ತು ಎಲ್ಲಾ ದೇವತೆಗಳು ಶಿವಶಂಕರ ಭೋಲೆನಾಥ್ ನಲ್ಲಿ ‘ಈ ಸಂಕಟದಿಂದ ಪಾರು ಮಾಡಿರಿ’ ಎಂದು ಮೊರೆಯಿಟ್ಟರು. ಆಗ ಭಗವಾನ ಶಿವನು ಅಲ್ಲಿ ಪ್ರತ್ಯಕ್ಷನಾಗಿ ಈ ಮಹಾಭಯಂಕರ ಕಾಲಕೂಟ ಎಂಬ ಹೆಸರಿನ ವಿಷವನ್ನು ತನ್ನ ಕೊರಳಲ್ಲಿ ಧರಿಸಿದರನು (ಅಂದರೆ ಕುಡಿದನು) ಮತ್ತು ಪೃಥ್ವಿಯ ರಕ್ಷಣೆ ಮಾಡಿದನು. ವಿಷವನ್ನು ಕುಡಿದುದರಿಂದ ಶಿವನ ಕಂಠವು ಅಂದರೆ ಕೊರಳು ನೀಲಿ ಬಣ್ಣಕ್ಕೆ ತಿರುಗಿತ್ತು. ಇದರಿಂದ ಭಗವಾನ ಶಿವನಿಗೆ ನೀಲಕಂಠ ಎಂದು ಕರೆಯುತ್ತಾರೆ. ಸಮುದ್ರ ಮಂಥನದಿಂದ ದೇವಿ ಲಕ್ಷ್ಮಿ, ಕೌಸ್ತುಭಮಣಿ, ಪಾರಿಜಾತ ಮರ, ಸುರಾ (ಮದಿರೆ), ಚಂದ್ರ, ಧನ್ವಂತರಿ, ರಂಭೆ, ಐರಾವತ ಎಂಬ ಹೆಸರಿನ ಬಿಳಿ ಆನೆ, ಅಮೃತ, ವಿಷ, ಉಚ್ಚೈಶ್ರವಸ್ಸು ಎಂಬ ಕುದುರೆ, ಗೋಮಾತೆ ಕಾಮಧೆನು, ಶಂಖ ಮತ್ತು ಹರಿಧನು ಎಂಬ ಹದಿನಾಲ್ಕು ರತ್ನಗಳು ಮೇಲೆ ಬಂದವು !

ದೈತ್ಯಗುರು ಶುಕ್ರಾಚಾರ್ಯರ ಸಂಶಯ

ಅತ್ತ ದೇವತೆಗಳು ದೈತ್ಯರಿಗೆ ಏನಾದರೂ ಮೋಸ ಮಾಡಿ ಸಮುದ್ರಮಂಥನದಲ್ಲಿ ಸಿಕ್ಕಿರುವ ಎಲ್ಲ ರತ್ನಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು ಎಂದು ದೈತ್ಯ ಗುರು ಶುಕ್ರಾಚಾರ್ಯರಿಗೆ ಅನಿಸುತ್ತಿತ್ತು. ಅದಕ್ಕೆ ಅವರು ಒಬ್ಬ ದೈತ್ಯನನ್ನು ಕರೆದು ಸಮುದ್ರ ಮಂಥನ ಮಾಡುವಲ್ಲಿ ಒಂದು ಕಣ್ಣಿಡಲು ಹೇಳಿದ್ದರು. ವಿಶೇಷವಾಗಿ ಅವರ ದೃಷ್ಟಿ ಅಮೃತದ ಮೇಲೆ ಇತ್ತು. ದೈತ್ಯ ಗುರುಗಳು ಎಲ್ಲ ದೈತ್ಯರಿಗೂ ಅಮೃತಪಾನವನ್ನು ಮಾಡಿಸಿ ಅವರನ್ನು ಅಮರರನ್ನಾಗಿ ಮಾಡಲು ಇಚ್ಛಿಸುತ್ತಿದ್ದರು. ಹೀಗೆ ಮಾಡಿ ದೇವತೆಗಳನ್ನು ಸೋಲಿಸಿ ಮೂರೂ ಲೋಕದಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಬಹುದು ಎಂಬ ವಿಚಾರ ಅವರಲ್ಲಿತ್ತು.

ಮೋಹಿನಿ ಅವತಾರ ತಾಳಿದ ವಿಷ್ಣು

ಅದರ ನಂತರ ಹದಿನಾಲ್ಕು ರತ್ನಗಳ ಹಂಚುವಿಕೆಯಾಯಿತು. ದೈತ್ಯರು ಸುರಾ ಅಂದರೆ ಮದಿರೆಯನ್ನು ಸ್ವೀಕಾರ ಮಾಡಿದರು. ಅದರ ನಂತರ ಮಂಥನದಿಂದ ಅಮೃತವು ಉತ್ಪನ್ನವಾಯಿತು ಅದನ್ನು ಪಡೆದುಕೊಳ್ಳಲು ದೈತ್ಯರು ಮತ್ತು ದೇವರಲ್ಲಿ ಯುದ್ಧ ಆರಂಭವಾಯಿತು. ಕೊನೆಗೆ ಭಗವಾನ ವಿಷ್ಣು ಒಂದು ಅತಿ ಸುಂದರ ಸ್ತ್ರೀಯ ರೂಪ ಧರಿಸಿ ಬಂದರು. ದೈತ್ಯರು ಭಗವಾನ ವಿಷ್ಣುವನ್ನು ಆ ಮೋಹಿನೀ ರೂಪದಲ್ಲಿ ಗುರುತಿಸಲಿಲ್ಲ. ಅಲ್ಲದೆ ಅವರು ಆ ಸುಂದರ ಸ್ತ್ರೀಯ ಕಡೆಗೆ ಆಕರ್ಷಿತರಾದರು. ಮೋಹಿನಿಯಾಗಿ ಬಂದ ಶ್ರೀವಿಷ್ಣು ದೈತ್ಯರ ಮತ್ತು ದೇವತೆಗಳ ಮಧ್ಯದಲ್ಲಿ ಒಪ್ಪಂದ ಮಾಡಿ ಎಲ್ಲರಿಗೂ ‘ನೀವೆಲ್ಲರೂ ನಿಶ್ಚಿಂತರಾಗಿರಿ, ನಾನು ನಿಮ್ಮೆಲ್ಲರಿಗೂ ಒಬ್ಬೊಬ್ಬರಂತೆ ಅಮೃತಪಾನವನ್ನು ಮಾಡಿಸುತ್ತೇನೆ’ ಎಂದು ಹೇಳಿದರು. ದೇವತೆ ಮತ್ತು ದೈತ್ಯರನ್ನು ಬೇರೆ ಬೇರೆ ಪಂಕ್ತಿಯಲ್ಲಿ ಕುಳಿತುಕೊಳ್ಳಲು ತಿಳಿಸಿ  ಮೋಹಿನಿಯು ದೈತ್ಯರಿಗೆ ಸುರಾಪಾನ ಮತ್ತು ದೇವತೆಗಳಿಗೆ ಅಮೃತ ಪಾನವನ್ನು ಮಾಡಿಸಿದಳು. ಯಾವುದೋ ಪ್ರಕಾರದಲ್ಲಿ ದೈತ್ಯರನ್ನು ಮೋಸಗೊಳಿಸಲಾಗುತ್ತಿದೆ, ಎಂದು ರಾಹು ಎಂಬ ಹೆಸರಿನ ಒಬ್ಬ ದೈತ್ಯನಿಗೆ ಸಂಶಯ ಬಂತು.

ರಾಹು ಅಮೃತ ಕುಡಿಯುವುದು

ಗುರು ಶುಕ್ರಾಚಾರ್ಯರು ದೇವತೆಗಳ ಮೇಲೆ ಒಂದು ಕಣ್ಣಿಡಬೇಕು ಎಂದು ತಿಳಿಸಿದ್ದ ದೈತ್ಯನೇ ರಾಹು. ಇದರ ಮಧ್ಯೆ ರಾಹುವು ತನ್ನ ಸಿದ್ಧಿಯ ಬಲದಿಂದ ದೇವತೆಗಳ ಹಾಗೆಯೇ ಮಾರುವೇಷವನ್ನು ಧರಿಸಿ ದೇವತೆಗಳ ಪಂಕ್ತಿಯಲ್ಲಿ ಕುಳಿತು ಅಮೃತ ಕುಡಿದನು. ಯಾವಾಗ ರಾಹುವು ಅಮೃತವನ್ನು ಕುಡಿಯಲು ದೇವತೆಗಳೆಲ್ಲ ಪಂಕ್ತಿಯ ಮಧ್ಯೆ ಬಂದನೋ ಆ ಸಮಯದಲ್ಲಿ ಚಂದ್ರ ದೇವರು ಮತ್ತು ಸೂರ್ಯ ದೇವರು ಅವನು ಕಪಟ ಗುರುತಿಸಿ ಮೋಹಿನಿ ರೂಪದಲ್ಲಿದ್ದ ಭಗವಾನ ವಿಷ್ಣುವಿಗೆ ಸನ್ನೆಯಿಂದ ಸೂಚನೆ ಕೊಟ್ಟರು. ಮೋಹಿನಿಯು ಸುದರ್ಶನ ಚಕ್ರದಿಂದ ಅವನ ಶಿರಚ್ಛೇದವನ್ನು ಮಾಡಿದಳು.

ರಾಹುವಿನ ತಲೆಯು ಆಕಾಶದೆತ್ತರಕ್ಕೆ ಹಾರಿತು ಮತ್ತು ಶರೀರವು ಪಶ್ಚಿಮ ಸಮುದ್ರದ ಕಡೆಗೆ ಓಡತೊಡಗಿತು. ಇದನ್ನು ನೋಡಿ ದೇವತೆಗಳು ಮತ್ತು ದೈತ್ಯರು ಆ ಶರೀರವನ್ನು ನಷ್ಟ ಮಾಡಲು ಪ್ರಯತ್ನ ಮಾಡತೊಡಗಿದರು. ಶಿವನು ಕೂಡ ತನ್ನ ತ್ರಿಶೂಲದಿಂದ ಅವನ ಹೊಟ್ಟೆಯ ಮೇಲೆ ಆಕ್ರಮಣ ಮಾಡಿ ಅದನ್ನು ನಾಶ ಮಾಡುವ ಪ್ರಯತ್ನವನ್ನೂ ಮಾಡಿದನು ಆದರೆ ರಾಹುವಿನ ಹೊಟ್ಟೆಯಲ್ಲಿ ಅಮೃತವಿದ್ದ ಕಾರಣ ಅವನ ಶರೀರವು ನಷ್ಟವಾಗುತ್ತಿರಲಿಲ್ಲ. ಮೋಹಿನಿಯು ರಾಹುವಿನ ಶರೀರವನ್ನು ಪ್ರವರ ಎಂಬ ನದಿಯ ಹತ್ತಿರ ಹಿಡಿದು, ಅದನ್ನು ಹಿಂಡಿ ಆ ಅಮೃತವನ್ನು ಹೊರ ತೆಗೆದಳು. ಈ ಅಮೃತ ಹೊರಗೆ ಬಂದು ಸಮುದ್ರದಲ್ಲಿ ವಿಲೀನವಾಯಿತು. ಈ ಪ್ರವರ ನದಿ ಮುಂದೆ ಗೋದಾವರಿ ನದಿಯನ್ನು ಸೇರಿ ಮುಂದೆ ಸಾಗರದಲ್ಲಿ ವಿಲೀನವಾಗುತ್ತದೆ. ಪ್ರವರ ಮತ್ತು ಗೋದಾವರಿಯ ಸಂಗಮದಲ್ಲಿ ರಾಹುವಿನ ಶರೀರದ ಮೇಲೆ ಮೋಹಿನಿಯು ಕುಳಿತುಕೊಂಡಳು. ಇವಳನ್ನು ಮಹಾಲಸಾ ಎಂದು ಕರೆಯುತ್ತಾರೆ.