ಭವಸಾಗರವನ್ನು ದಾಟಿಸುವ ನಾವಿಕ!

ಭವಸಾಗರವನ್ನು ದಾಟಿಸುವ ನಾವಿಕ ಭಗವಾನ ಶ್ರೀರಾಮ!

ಕೈಕೇಯಿಗೆ ನೀಡಿದ ವಚನವನ್ನು ಪಾಲಿಸಲು ಪ್ರಭು ಶ್ರೀರಾಮಚಂದ್ರನು ತನ್ನ ಸಹೋದರ ಲಕ್ಷ್ಮಣ ಮತ್ತು ಪತ್ನಿ ಸೀತೆಯೊಂದಿಗೆ ವನವಾಸಕ್ಕೆ ಹೊರಟನು. ವನವಾಸದ ಮಾರ್ಗದಲ್ಲಿ ಗಂಗಾ ನದಿಯ ಬಳಿಗೆ ಬಂದರು. ಸಾಕ್ಷಾತ್ ಪ್ರಭು ಶ್ರೀರಾಮ ಬಂದಿದ್ದಾನೆ ಎಂದು ತಿಳಿಯುತ್ತಲೇ ಗುಹಕ ಹೆಸರಿನ ನಾವಿಕನಿಗೆ ಬಹಳ ಆನಂದವಾಯಿತು. ಅವನು ಓಡುತ್ತ ಅವರ ಬಳಿಗೆ ಬಂದನು ಹಾಗೂ ಅವರಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿ ‘ಪ್ರಭು, ತಮ್ಮ ದರ್ಶನದಿಂದ ನಾನು ಧನ್ಯನಾದೆ. ನಾನು ನಿಮಗೆ ಹೇಗೆ ಸೇವೆಯನ್ನು ಮಾಡಲಿ?’ ಎಂದು ಕೇಳಿದನು.

ಪ್ರಭು ಶ್ರೀರಾಮನು ‘ಗುಹಕ, ನಮಗೆ ನಿನ್ನಿಂದ ಇನ್ಯಾವುದೇ ತೆರನಾದ ಸೇವೆಯ ಅಪೇಕ್ಷೆಯಿಲ್ಲ. ನಿನ್ನ ದೋಣಿಯಿಂದ ನಮ್ಮನ್ನು ಕೇವಲ ಗಂಗೆಯ ಆಚೆಯ ದಡಕ್ಕೆ ತಲುಪಿಸು’ ಎಂದು ಹೇಳಿದರು. ಆಗ ಗುಹಕನು ಮೂವರನ್ನೂ ಗಂಗಾ ನದಿಯ ಆಚೆಯ ದಡಕ್ಕೆ ತಲುಪಿಸಿದನು. ಅಲ್ಲಿ ತಲುಪಿದ ಬಳಿಕ ಅವರಲ್ಲಿ ಮುಂದಿನಂತೆ ಸಂಭಾಷಣೆ ಜರುಗಿತು.

ರಾಮ : ಗುಹಕ, ದೋಣಿಯಿಂದ ನಮ್ಮನ್ನು ಗಂಗಾನದಿಯ ಆಚೆಯ ದಡಕ್ಕೆ ತಲುಪಿಸಿರುವುದಕ್ಕೆ ಪ್ರತಿಫಲವಾಗಿ ನಾನು ನಿನಗೆ ಏನು ಕೊಡಲಿ?

ಗುಹಕ : ಪ್ರಭು, ಒಬ್ಬ ಕ್ಷೌರಿಕ ಮತ್ತೊಬ್ಬ ಕ್ಷೌರಿಕನ ಕೂದಲನ್ನು ಕತ್ತರಿಸಿದಾಗ ಅವನಿಂದ ಏನಾದರೂ ತೆಗೆದುಕೊಳ್ಳುತ್ತಾನೆಯೇ?

ಶ್ರೀರಾಮ : ಇಲ್ಲ

ಗುಹಕ: ಪ್ರಭು, ಒಬ್ಬ ವೈದ್ಯ ಮತ್ತೊಬ್ಬ ವೈದ್ಯನಿಗೆ ಔಷಧಿಯನ್ನು ನೀಡುತ್ತಾನೆ. ಆಗ ಅವನು ಔಷಧಿಯ ಪ್ರತಿಫಲವಾಗಿ ಏನಾದರೂ ತೆಗೆದುಕೊಳ್ಳುತ್ತಾನೆಯೇ?

ಶ್ರೀರಾಮ : ಇಲ್ಲ

ಗುಹಕ : ಅದೇ ರೀತಿ ನಾನು ಹಾಗೂ ನೀವು ಇಬ್ಬರೂ ನಾವಿಕರಾಗಿದ್ದೇವೆ; ನಾನು ನಿಮ್ಮಿಂದ ಏನನ್ನು ಮತ್ತು ಹೇಗೆ ಪ್ರತಿಫಲವನ್ನು ಸ್ವೀಕರಿಸಲಿ?

(ಗುಹಕನ ಮಾತು ಕೇಳಿ ಶ್ರೀರಾಮನಿಗೆ ಆಶ್ಚರ್ಯವಾಯಿತು)

ಶ್ರೀರಾಮ : ಗುಹಕ, ನೀನು ನಾವಿಕನಾಗಿದ್ದೀಯಾ ಇದು ಸರಿ; ಆದರೆ ನನ್ನನ್ನು ಕೂಡ ನಾವಿಕನನ್ನಾಗಿ ಏಕೆ ಸಂಬೊಧಿಸುತ್ತಿರುವೆ?

ಗುಹಕ: ಪ್ರಭು, ನಾನು ಜನರನ್ನು ನದಿಯ ಆಚೆಯ ದಡಕ್ಕೆ ತಲುಪಿಸುತ್ತೇನೆ; ಆದರೆ ನೀವು ಆಸಕ್ತ ಯಾತ್ರಿಗಳನ್ನು ಭವಸಾಗರ ಅರ್ಥಾತ್ ಸಂಸಾರರೂಪಿ ಸಾಗರವನ್ನು ದಾಟಿಸುತ್ತೀರಿ ಹೀಗಿರುವಾಗ ನೀವು ನನಗಿಂತ ಶ್ರೇಷ್ಠ ನಾವಿಕರಲ್ಲವೇ?

ಗುಹಕನ ಈ ತರ್ಕವನ್ನು ಕೇಳಿ ಹಾಗೂ ಅವನ ನಿರಪೇಕ್ಷ ಪ್ರೇಮವನ್ನು ನೋಡಿ ಪ್ರಭು ಶ್ರೀರಾಮನು ಅವನನ್ನು ಗಟ್ಟಿಯಾಗಿ ಅಪ್ಪಿಕೊಂಡರು. ಪ್ರಭು ಶ್ರೀರಾಮನ ಆಲಿಂಗನದ ಸುಖ ಅರ್ಥಾತ್ ಸಾಕ್ಷಾತ್ ಜೀವಕ್ಕೆ – ಶಿವನ ಭೇಟಿ! ಗುಹಕನಿಗೆ ಅವನ ಜೀವನ ಸಾರ್ಥಕವಾದಂತೆ ಎನಿಸಿತು. ಶ್ರೀರಾಮನು ಅವತಾರ ಪುರುಷನಾಗಿದ್ದಾನೆ ಎನ್ನುವುದು ಗುಹಕನಿಗೆ ಅರಿವಾಗಿತ್ತು. ಈ ಮಾತಿನಿಂದ ನಮಗೆ ಅವನ ಆಧ್ಯಾತ್ಮಿಕ ಮಟ್ಟ ಎಷ್ಷು ಉಚ್ಚಸ್ತರದಲ್ಲಿತ್ತು ಎಂದು ಅರಿವಾಗುತ್ತದೆ.

ಒಂದು ವೇಳೆ ನಾವೂ ಸಹ ಈ ದುರ್ಗುಣರೂಪಿ ಭವಸಾಗರವನ್ನು ದಾಟಬೇಕಾಗಿದ್ದರೆ, ನಮ್ಮನ್ನು ಯಾರು ದಾಟಿಸಬಲ್ಲರು? ಕೇವಲ ಶ್ರೀರಾಮನೇ ಇದನ್ನು ಮಾಡಬಲ್ಲನು ಎಂದು ನಮಗೆ ತಿಳಿಯುತ್ತದೆ.

Leave a Comment