ಪಂಜಾಬಿನ ಹುಲಿ ಹುತಾತ್ಮ ಉಧಮಸಿಂಗ

ಎಷ್ಟೇ ಕಷ್ಟಸಾಧ್ಯವಾದ ಧ್ಯೇಯವಾಗಿದ್ದರೂ, ಯಾರ ಸರ್ವಸ್ವವೂ ಆ ಧ್ಯೇಯಕ್ಕಾಗಿಯೇ ಅರ್ಪಿತವಾಗಿರುತ್ತದೆಯೋ ಹಾಗೂ ಯಾರ ಆದರ್ಶವು ಉನ್ನತವಾಗಿರುತ್ತದೆಯೋ ಅವರು ತಮ್ಮ ಧ್ಯೇಯವನ್ನು ಕೊನೆಗಾದರೂ ಸಾಧ್ಯ ಮಾಡುತ್ತಾರೆ. ಹೀಗೊಬ್ಬ ಮಹಾನ್ ಧ್ಯೇಯವಾದಿ ಎಂದರೆ ಪಂಜಾಬಿನ ಹುಲಿ ಹುತಾತ್ಮಾ ಉಧಮಸಿಂಗ.

ದಿನಾಂಕ ೨೮ ಡಿಸೆಂಬರ ೧೮೯೯ ರಂದು ಪಟಿಯಾಲಾದ ‘ಸುನಾಮ’ ಗ್ರಾಮದಲ್ಲಿ ಉಧಮಸಿಂಗರ ಜನನ ಆಯಿತು. ಅವರ ಮೂಲ ಹೆಸರು ‘ಉಧಮಸಿಂಹ’ ಎಂದಿತ್ತು. ಮುಂದೆ ‘ಉಧಮಸಿಂಗ’ ಎಂದಾಯಿತು. ಕೇವಲ ಮೂರು ವರ್ಷದವರಿರುವಾಗ ಅವರಿಂದ ತಾಯಿಯ ಮಮತೆಯ ಮಡಿಲು ಕಸಿಯಲ್ಪಟ್ಟಿತು. ಮತ್ತೆ ಕೆಲವೇ ವರ್ಷಗಳಲ್ಲಿ ತಂದೆಯ ನೆರಳು ಸಹ ದೂರವಾಯಿತು. ಅವರು ಹಾಗೂ ಅವರ ಸಹೋದರ ಸಾಧುಸಿಂಗ ಇಬ್ಬರೂ ಅನಾಥರಾದರು. ಅವರಿಬ್ಬರನ್ನು ಚಂಚಲಸಿಂಗ ಎನ್ನುವವರು ತಮ್ಮ ಅಮೃತಸರದ ರಾಮಬಾಗದ ಅನಾಥಾಶ್ರಮಕ್ಕೆ ಕರೆದುಕೊಂಡು ಬಂದರು. ಬಹುಬೇಗನೆ ಅವರ ಸಹೋದರನು ಕೂಡ ಸಾವನ್ನಪ್ಪಿದರು ಹಾಗೂ ಉಧಮಸಿಂಗ ಜಗತ್ತಿನಲ್ಲಿ ಒಬ್ಬಂಟಿಯದರು. ಹೊಟ್ಟೆಪಾಡಿಗಾಗಿ ಅವರು ಇದ್ದಿಲಿನಿಂದ ಚಿತ್ರಗಳನ್ನು ಬಿಡಿಸುವುದು, ಬಡಿಗ, ಕಮ್ಮಾರಿಕೆ ಕೆಲಸಗಳನ್ನು ಮಾಡುತ್ತ ಅದೇ ತಾನೆ ತಮ್ಮ ಕೆಲಸದಲ್ಲಿ ಸ್ಥಿರತೆಯನ್ನು ಹೊಂದುತ್ತಿದ್ದರು. ಅಷ್ಟರಲ್ಲಿ ಆ ಕರಾಳದಿನ ಎದುರಾಯಿತು! ಜನರಲ್ ಡಾಯರ ಮತ್ತು ಮೈಕಲ್ಓ’ಡವಾಯರ ಇವರು ಜಲಿಯನವಾಲಾ ಬಾಗನಲ್ಲಿ ಸೇರಿದ್ದ ನಿ:ಶಸ್ತ್ರ ಹಾಗೂ ನಿರಪರಾಧಿಗಳಾದ ಸಾಮಾನ್ಯ ಜನರ ಮೇಲೆ ನಿರಂತರವಾಗಿ ಗುಂಡಿನ ಮಳೆ ಸುರಿಸಿ, ೩೩೧ ದೊಡ್ಡವರು ಹಾಗೂ ೪೧ ಮಕ್ಕಳು ಮತ್ತು ಒಂದು ಏಳು ತಿಂಗಳ ಹೆಣ್ಣು ಮಗು ಹೀಗೆ ೩೭೩ ಜನರನ್ನು ಅಮಾನುಷವಾಗಿ ಹತ್ಯೆಗೈದರು, ೧೫೦೦ ಗಾಯಾಳುಗಳಾದರು.(ದಿನಾಂಕ ೧೩ ಎಪ್ರಿಲ್ ೧೯೧೯) ಈ ಗಾಯಾಳುಗಳಲ್ಲಿ ಉಧಮಸಿಂಗ ಒಬ್ಬರಾಗಿದ್ದರು. ಅವರ ಕೈಗೆ ಗುಂಡು ತಗುಲಿದ್ದರಿಂದ ಅವರು ಕೆಳಗುರುಳಿದರು. ಅವರ ಮೇಲೆ ಒಂದು ಮೃತದೇಹ ಬಿದ್ದಿದ್ದರಿಂದ ಅವರು ಬದುಕುಳಿದರು. ಅದರಿಂದಾಗಿ ಅವರಿಗೆ ಮತ್ತೆ ಗುಂಡುಗಳು ತಗುಲಲಿಲ್ಲ. ಕ್ರಾಂತಿಕಾರರಿಂದ ಆಕರ್ಷಿತರಾಗಿದ್ದ ಉಧಮಸಿಂಗರು ಈ ಘಟನೆಯಿಂದ ಆಕ್ರೋಷಗೊಂಡರು ಮತ್ತು ಅವರು ಈ ಮಾರಣಹೋಮಗೈದವರನ್ನು ಕೊಲ್ಲುವ ಪಣತೊಟ್ಟರು.

ಹಿಂದೂ ಮುಸ್ಲಿಂ ಐಕ್ಯತೆಯ ಭಾವನೆಯನ್ನು ಹೊಂದಿದ್ದ ಉಧಮಸಿಂಗರು ‘ರಾಮ ಮಹಮ್ಮದ ಸಿಂಗ ಆಜಾದ’ ಎಂದು ಹಿಂದು-ಮುಸಲ್ಮಾನ-ಸಿಖ್ ಈ ಎಲ್ಲ ಧರ್ಮಗಳನ್ನು ಪ್ರತಿನಿಧಿಸುವ ಹೆಸರನ್ನು ಹೊಂದಿದ್ದರು. ಗ್ರಂಥಗಳ ಅಧ್ಯಯನ, ವಾಕ್ಪಟುತ್ವದಿಂದ ಅವರು ಬಹಳ ಬೇಗನೆ ಕೆಲವು ಕ್ರಾಂತಿಕಾರಿ ತರುಣರ ಗುಂಪಿನಲ್ಲಿ ಗುರುತಿಸಿಕೊಂಡರು. ಅವರಲ್ಲಿ ಭಗತಸಿಂಗ ಕೂಡ ಒಬ್ಬರು. ಇದರಿಂದಾಗಿ ಉಧಮಸಿಂಗರಿಗೆ ನಿರ್ದಿಷ್ಟ ಗುರಿ ಸಿಕ್ಕಿದಂತಾಯಿತು. ಜಲಿಯನವಾಲಾಬಾಗ ಘಟನೆಯ ನಂತರ ಅವರು ಅನೇಕ ಪುಸ್ತಕಗಳನ್ನು, ವರ್ತಮಾನ ಪತ್ರಿಕೆಗಳನ್ನು ಓದಿದರು ಮತ್ತು ಅದರಿಂದ ಅವರಿಗೆ ಜನರಲ್ ಡಾಯರ ಮತ್ತು ಓಡವಾಯರ ಇದಕ್ಕಿಂತ ಮೊದಲು ಕೂಡ ಅನೇಕ ನೀಚ ಕೃತ್ಯಗಳನ್ನು ಮಾಡಿದ್ದಾರೆಂದು ತಿಳಿಯಿತು. ಅವುಗಳಲ್ಲಿ ಸರದಾರ ಅಜಿತಸಿಂಗ ಇವರನ್ನು ದೇಶದಿಂದ ಗಡಿಪಾರು ಮಾಡುವುದು, ೧೯೧೪ ರಲ್ಲಿ ಗದರನ ವಿಷ್ಣು ಗಣೇಶ ಪಿಂಗಳೆ, ಸರದಾರ ಸೋಹನಸಿಂಗ ಭಕನಾ, ಪೃಥ್ವಿಸಿಂಹ ಆಜಾದ ಮುಂತಾದವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ, ಏಕಮುಖವಾಗಿ ತನಿಖೆಯನ್ನು ನಡೆಸಿ ಅವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲು ಸೂಚಿಸಿದ್ದು. ಈ ನೀಚರನ್ನು ನರಕಕ್ಕೆ ಕಳುಹಿಸುವ ಅವರ ನಿರ್ಧಾರವು ಮತ್ತಷ್ಟು ದೃಢವಾಯಿತು. ಇತ್ತಕಡೆ ಕ್ರಾಂತಿಕಾರರ ಗುಂಪಿನ ಮೇಲೆ ಪೊಲೀಸರು ಕಣ್ಗಾವಲನ್ನಿಟ್ಟು ಅವರನ್ನು ಹಿಂಬಾಲಿಸಿದರು. ಅವರ ದಾರಿಯನ್ನು ತಪ್ಪಿಸುವ ಸಲುವಾಗಿ ಒಬ್ಬ ಕಟ್ಟಿಗೆ ವ್ಯಾಪಾರಸ್ಥನಿಂದ ಸುಳ್ಳು ಪರಿಚಯ ಪತ್ರವನ್ನು ಪಡೆದು ಅವರು ಪೂರ್ವ ಆಫ್ರಿಕೆಗೆ ಹೋದರು. ಅಲ್ಲಿಂದ ಅಮೇರಿಕೆ, ಜರ್ಮನಿ ಇತ್ಯಾದಿ ದೇಶಗಳಲ್ಲಿ ತಿರುಗಾಡಿದರು. ಅವರಿಗೆ ಭಗತಸಿಂಗರಿಂದ ಮದ್ದುಗುಂಡು ಹಾಗೂ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಮರಳಿ ಬರಲು ಸಂದೇಶ ದೊರೆಯಿತು. ಆಗ ಅವರು ಒಬ್ಬ ಜರ್ಮನ ಯುವತಿಯೊಂದಿಗೆ ಹಿಂದೂಸ್ಥಾನದಲ್ಲಿ ಕಾಲಿಟ್ಟರು. ೧೯೨೭ ರ ಮಧ್ಯದಲ್ಲಿ ಒಬ್ಬ ಸುದ್ದಿಗಾರನ ಕುತಂತ್ರದಿಂದ ಅವರು ಅಮೃತಸರದಲ್ಲಿ ನಡೆದ ಪೊಲೀಸರ ದಾಳಿಯ ಸಮಯದಲ್ಲಿ ಸಿಕ್ಕಿಬಿದ್ದರು. ಉಧಮಸಿಂಗ ಶಸ್ತ್ರದೊಂದಿಗೆ ಇರುವ ಮಾಹಿತಿ ಹೊಂದಿದ್ದರಿಂದ ಪೊಲೀಸರು ಬಹಳ ಎಚ್ಚರಿಕೆಯಿಂದಿದ್ದರು. ಆಗ ಉಧಮಸಿಂಗ ಅವರ ಮೈಮೇಲೆ ಒಂದು ಕೋಲ್ಟ ರಿವಾಲ್ವರ ಮತ್ತು ೧೩೯ ಕಾಡತೂಸುಗಳು ದೊರಕಿದವು. ಉಧಮಸಿಂಗರಿಗೆ ೫ ವರ್ಷಗಳ ಜೈಲು ಶಿಕ್ಷೆಯಾಯಿತು. ಹಾಗೂ ಬಿಡುಗಡೆಯಾದ ನಂತರ ಅವರು ಸದ್ದಿಲ್ಲದೇ ದೇಶದಿಂದ ಹೊರಗೆ ಹೋದರು. ರಶಿಯಾ, ಈಜಿಪ್ಟ್, ಎಬಿಸೀನಿಯಾ, ಫ್ರಾನ್ಸ, ಜರ್ಮನಿ ಹೀಗೆ ಎಲ್ಲೆಡೆಗೆ ಅಲೆದಾಡಿದರು. ಕೊನೆಗೆ ಇಂಗ್ಲೆಂಡಿಗೆ ಬಂದರು. ೧೯೩೩ಅಲ್ಲಿ ಅವರು ‘ರಾಮ ಮಹಮ್ಮದಸಿಂಗ ಆಜಾದ’ ಈ ಹೆಸರಿನಿಂದ ಸುಳ್ಳು ದಾಖಲೆಯ ಆಧಾರದ ಮೇಲೆ ಪ್ರವೇಶವನ್ನು ಪಡೆದಿದ್ದರು. ಲಂಡನ್ನಿನ ಆರಂಭದ ದಿನಗಳು ಬಹಳ ಕಠಿಣವಾಗಿದ್ದವು. ಅವರು ಅನೇಕ ಸಲ ಹಿಂದಿ ತರುಣರ ಗುಂಪಿನಲ್ಲಿ ಅಸಭ್ಯ ಭಾಷೆಯನ್ನು ಉಪಯೋಗಿಸುತ್ತಿದ್ದರು. ತಾವು ಅಲ್ಲಿ ಪ್ರತಿಕಾರ ತೀರಿಸಿಕೊಳ್ಳಲು ಬಂದಿರುವುದಾಗಿ ತಮ್ಮ ಮಾತಿನಲ್ಲಿ ಕೆಲವು ಸಲ ಹೇಳಿದ್ದರು. ಜನರಲ್ ಡಾಯರ ಅಷ್ಟರಲ್ಲಿ ಮರಣ ಹೊಂದಿದ್ದರು. ಓಡವಾಯರಇನ್ನೂ ಬದುಕಿದ್ದರು. ಅಷ್ಟರಲ್ಲಿ ಉಧಮಸಿಂಗರು ಮೋಟಾರು ಗಾಡಿಯನ್ನು ಚಲಾಯಿಸಲು ಕಲಿತಿದ್ದರು. ಒಮ್ಮೆ ಅವರು ಓಡವಾಯರ ಅವರನ್ನು ತಮ್ಮ ಗಾಡಿಯಲ್ಲಿ ಕರೆದುಕೊಂಡು ಹೋಗಿದ್ದು, ಅವರನ್ನು ಸಮಕ್ಷಮ ನೋಡಿರುವುದಾಗಿ ಕೂಡ ಹೇಳಿದ್ದರು. ‘ಒಂದು ದಿವಸ ಅವನನ್ನು ಕೊಂದು ನಾನು ಭಗತಸಿಂಗನಂತೆ ಗಲ್ಲು ಶಿಕ್ಷೆಗೆ ಗುರಿಯಾಗುವೆನು’ ಎಂದು ಅವರು ಬಹಳ ಅಭಿಮಾನದಿಂದ ಹೇಳುತ್ತಿದ್ದರು.ಆದರೆ ಯಾರೂ ಅವರ ಮಾತಿಗೆ ಗಮನ ನೀಡುತ್ತಿರಲಿಲ್ಲ.

ಮುಂದೆ ದೇವರ ಕೃಪೆಯಿಂದ ಶಿವಸಿಂಗ ಜೋಹಲ ಎನ್ನುವವರ ಆಸರೆ ದೊರಕಿತು. ಶಿವಸಿಂಗ ಇವರು ಲಂಡನನಲ್ಲಿ ವಾಸಿಸುತ್ತಿದ್ದರೂ ಕೂಡ ಮೂಲತ: ಹಿಂದೂಸ್ಥಾನಿಯಾಗಿದ್ದರು. ಕಾಕೋರಿ ಜನಕರಾದ ರಾಮಪ್ರಸಾದ ಬಿಸ್ಮಿಲ ಇವರ ತಂದೆಗೆ ಇವರ ಪರಿಚಯವಿತ್ತು. ಅಲ್ಲಿ ಉಧಮಸಿಂಗರಿಗೆ ಚಳುವಳಿಯನ್ನು ನಡೆಸುವ ಅನೇಕರ ಸಾಮಿಪ್ಯವು ದೊರಕಿತು ಮತ್ತು ಅವರ ಪರಿಚಯ ವಿ. ಕೆ. ಕೃಷ್ಣ ಮೆನನ ಮತ್ತು ಕೇಸರಿ ಪತ್ರಿಕೆಯ ಲಂಡನ್ನಿನ ವರದಿಗಾರರಾದ ದತ್ತೋಪಂತ ತಾಮ್ಹಣಕರ ಇವರೊಂದಿಗೆ ಆಯಿತು. ಅವರು ಅವರಿಗೆ ಸಭೆಗಳಲ್ಲಿ ಭಾಷಣಗಳನ್ನು ಮಾಡಲು ಸಹಾಯ ಮಾಡತೊಡಗಿದರು. ಒಂದು ದಿವಸ ದತ್ತೊಪಂತ ಹಾರ್ವರ್ಡ ಪಾರ್ಕನಲ್ಲಿ ಭಾಷಣವನ್ನು ಮಾಡುತ್ತಿದ್ದರು. ಅದೇ ಸಮಯದಲ್ಲಿ ಅಲ್ಲಿಯೇ ಪಕ್ಕದಲ್ಲಿ ಪ್ರಿನ್ಸ ಆಫ್ ವೇಲ್ಸ ಟೆರೆಸ ಕೆನ್ಸಿಂಗ್ಟನಲ್ಲಿ ವಾಸಿಸುತ್ತಿದ್ದ ಓಡವಾಯರ ಅಲ್ಲಿಂದ ಹಾದು ಹೋಗುತ್ತಿದ್ದನು. ಅವನಿಗೆ ಹಿಂದೂಸ್ಥಾನದ ಸ್ವಾತಂತ್ರ್ಯದ ಉಚ್ಚಾರಣೆ ಸಹಿಸಲಾಗಲಿಲ್ಲ. ಭಾಷಣವನ್ನು ಮಧ್ಯದಲ್ಲಿಯೇ ನಿಲ್ಲಿಸುತ್ತಾ, ಅವನು ದತ್ತೋಪಂತರ ಮೇಲೆ ಕೂಗಾಡಿದನು. ‘ನೀವು ಸ್ವಾತಂತ್ರ್ಯ ಪಡೆಯಲು ಯೋಗ್ಯರಲ್ಲ. ಮೊದಲು ಅಸ್ಪೃಶ್ಯತೆ ಬಗ್ಗೆ ಮಾತನಾಡಿ’ ಎಂದನು. ದತ್ತೋಪಂತರು ಉತ್ತರಿಸುವ ಸಲುವಾಗಿ ತೇಜಸ್ವಿ ಮುದ್ರೆಯಿಂದ ಅವನಿಗೆ ‘ಸ್ವತ: ನೀನೇ ಅಸ್ಪೃಶ್ಯನಾಗಿದ್ದೀಯ!’ ಎಂದರು. ನಂತರ ಅವರು ಭಾಷಣವನ್ನು ಕೇಳುವವರನ್ನು ಉದ್ದೇಶಿಸಿ ‘ಜಲಿಯನವಾಲಾಬಾಗನ ಕಟುಕನನ್ನು ನೋಡಿ!’ ಎಂದು ನುಡಿದರು. ಇದೆಲ್ಲವನ್ನು ನೋಡುತ್ತ, ಕೇಳುತ್ತಿರುವಾಗ ಮೇಲಿನಿಂದ ಶಾಂತವಾಗಿ ಕಾಣಿಸುತ್ತಿದ್ದ ಉಧಮಸಿಂಗರು ಒಳಗಿನಿಂದ ಕುದಿಯುತ್ತಿದ್ದರು. ಇನ್ನೂ ವಿಳಂಬ ಮಾಡದೇ ಇವನನ್ನು ಮುಗಿಸಬೇಕು ಎಂದುಕೊಂಡರು.

ಎರಡನೇ ಮಹಾಯುದ್ಧವು ಪ್ರಾರಂಭವಾಗುತ್ತಲೇ ೧೯೩೬ ರಿಂದ ೧೯೩೯ರ ಅವಧಿಯೊಳಗೆ ಉಧಮಸಿಂಗರು ಎರಡು ಸಲ ಯುರೋಪ ಹೋಗಿ ಬಂದರು. ಜಿನೀವಾದಲ್ಲಿ ಅವರಿಗೆ ದೇಶಭಕ್ತ ಸರದಾರ ಅಜಿತಸಿಂಗ ಇವರ ಭೇಟಿಯಾಯಿತು. ತದನಂತರ ಅವರು ತಾಷ್ಕೆಂಟಿಗೂ ಹೋಗಿ ಬಂದರು. ಈ ರೀತಿ ಸ್ವಾತಂತ್ರ್ಯಕ್ಕಾಗಿ ಅವರ ಪ್ರಯತ್ನಗಳು ನಡೆದಿದ್ದವು. ಇಂಗ್ಲೆಂಡಿಗೆ ಮರಳಿದ ನಂತರ ಪೂರ್ಣ ಸನ್ನಧ್ಧವಾದ ಸಮುದ್ರದ ಸೈನ್ಯದೊಂದಿಗೆ ಸರಕಾರದ ನಿದ್ದೆಗೆಡಿಸಿದರು. ಇಂಗ್ಲೆಂಡಿಗೆ ಮರಳಿ ಬರುತ್ತಲೇ ಅವರಿಗೆ ತಮ್ಮ ಪ್ರತಿಜ್ಞೆಯ ನೆನಪಾಯಿತು. ತಾವು ಓಡವಾಯರನನ್ನು ಕೊಲ್ಲುವುದಾಗಿ ಶಿವಸಿಂಗರಿಗೆ ಹೇಳಿದರು. ಆದರೆ ಶಿವಸಿಂಗರವರು ‘ನೀನಾದರೋ ಬರೀ ಬಾಯಿಬಡುಕನಂತೆ ಕಾಣಿಸುತ್ತೀ. ನಿನ್ನಿಂದ ಈ ಕೆಲಸವಾಗುವುದೆಂದು ನನಗನ್ನಿಸುವುದಿಲ್ಲ’ವೆಂದು ಹೇಳಿದರು. ಆಗ ಉಧಮಸಿಂಗರು ‘ನಾನು ನಿರಂತರವಾಗಿ ಅದನ್ನೇ ಕನಸುಮನಸ್ಸಿನಲ್ಲಿಯೂ ಯೋಚಿಸುತ್ತಾ ನನ್ನ ಪ್ರತಿಜ್ಞೆಗೆ ಬದ್ಧನಾಗಿದ್ದೇನೆ’ ಎಂದು ನುಡಿದರು. ಆದರೆ ಉಧಮಸಿಂಗರು ಅವರಿಗೆ ಒಂದೇ ಸಮಯದಲ್ಲಿ ಓಡವಾಯರ ಮತ್ತು ಭಾರತದ ಮಂತ್ರಿಯನ್ನು ಕೊಲ್ಲುವ ಇಚ್ಛೆಯಿದೆಯೆಂದು ತಿಳಿಸಿದರು. ಏಕೆಂದರೆ ಒಬ್ಬನನ್ನು ಕೊಂದರೂ ಒಮ್ಮೆ ಗಲ್ಲುಶಿಕ್ಷೆಯಾಗುತ್ತದೆ. ಹಾಗೂ ಇಬ್ಬರನ್ನು ಕೊಂದರೂ ಒಂದೇ ಸಲ ಗಲ್ಲುಶಿಕ್ಷೆಯಾಗುತ್ತದೆ ಎನ್ನುವದು ಅವರ ಸರಳವಾದ ಲೆಕ್ಕವಾಗಿತ್ತು. ನನ್ನ ದೇಶದ ಭವಿಷ್ಯವನ್ನು ಬರೆಯಲು ಲಂಡನ್ನಿನ ಮಂತ್ರಿ ಇಂಗ್ಲೆಂಡಿನಲ್ಲಿ ಏಕೆ? ಎನ್ನುವುದು ಅವರ ವಾದವಾಗಿತ್ತು.

ಇದೇ ಸಮಯದಲ್ಲಿ ಅವರು ತಾನು ಹಿಂದೂಸ್ಥಾನಕ್ಕೆ ಮರಳಿ ಹೋಗುತ್ತಿದ್ದೇನೆ ಎನ್ನುವ ಸಮಾಚಾರವನ್ನು ಎಲ್ಲೆಡೆ ಹರಡಿದರು. ತಾನು ಮೋಟಾರು ವಾಹನದಿಂದ ಪ್ರಯಾಣ ಮಾಡುವುದಾಗಿ ಹೇಳಿ ಅವರು ಲಂಡನ್ನಿನ ‘ಅಟೋಮೊಬಾಯಿಲ ಅಸೋಸಿಯೇಷನ’ ರವರಿಂದ ಪ್ರವಾಸದ ಮಾರ್ಗದರ್ಶಿಕೆ ಮತ್ತು ನಕಾಶೆ ಇತ್ಯಾದಿಗಳನ್ನು ತೆಗೆದುಕೊಂಡರು. ಅಲ್ಲಿ ಅವರಿಗೆ ಆತ್ಮರಕ್ಷಣೆಗಾಗಿ ಆಯುಧಗಳನ್ನು ಇಟ್ಟುಕೊಳ್ಳುವ ಸಲಹೆ ದೊರಕಿತು. ಈ ವಿಷಯವನ್ನೇ ಮುಂದಿಟ್ಟುಕೊಂಡು ಅವರು ಶಸ್ತ್ರಾಸ್ತ್ರಗಳನ್ನು ಖರೀದಿಸಿದರು. ಯುದ್ಧ ನಡೆಯುತ್ತಿರುವ ಸಮಯವಾಗಿದ್ದರಿಂದ ಶಸ್ತ್ರಾಸ್ತ್ರಗಳು ಯಾವುದೇ ಅಡೆತಡೆಯಿಲ್ಲದೇ ದೊರಕುತ್ತಿದ್ದವು. ಒಬ್ಬ ಬ್ರಿಟಿಷ ಮನುಷ್ಯನಿಗೆ ಸಾರಾಯಿಯನ್ನು ಕುಡಿಸಿ, ಅವರು ಅತೀ ಕಡಿಮೆ ದರದಲ್ಲಿ ಅಮೇರಿಕಾದಲ್ಲಿ ತಯಾರಿಸಲ್ಪಟ್ಟ ‘ಸ್ಮಿತ ಅಂಡ ವೇಸನ ನ. ೪೫೫ ರಿವಾಲ್ವರ’ ಮತ್ತು ೨೫ ಗುಂಡುಗಳನ್ನು ದೊರಕಿಸಿಕೊಂಡರು. ಆದರೆ ಅವರು ಕೊಟ್ಟ ಗುಂಡುಗಳು ಬಹುತೇಕವಾಗಿ ಹಳೆಯದಾಗಿದ್ದರಿಂದ ಆ ಬಂದೂಕಿನಲ್ಲಿ ಸರಿಯಾಗಿ ಕುಳಿತುಕೊಳ್ಳುತ್ತಿರಲಿಲ್ಲ. ಅದರಿಂದಾಗಿ ಅವರಿಗೆ ಸ್ವಲ್ಪ ಹಿನ್ನಡೆಯಾದಂತಾಗಿತ್ತು. ನಂತರ ಅವರು ಓಡವಾಯರ ವಾಸಿಸುತ್ತಿದ್ದ ಕೆನ್ಸಿಂಗಟನ ಭಾಗದಲ್ಲಿ ದಂಗೆಗಳನ್ನು ಎಬ್ಬಿಸಿದರು ಮತ್ತು ಯಾವುದೋ ಕಾರಣದಿಂದ ತಾವೇ ಓಡವಾಯರನಿಗೆ ತಮ್ಮ ಪರಿಚಯವನ್ನು ಮಾಡಿಕೊಡುತ್ತ, ಸ್ನೇಹವನ್ನು ಬೆಳೆಸಿದರು. ಪರಿಚಯ ಹೆಚ್ಚಾದಂತೆಲ್ಲ ಒಮ್ಮೆ ಓಡವಾಯರ ಚಹಾ ಕುಡಿಯಲು ಕೂಡ ಆಮಂತ್ರಿಸಿದ್ದ. ಇದರ ಹಿಂದಿರುವ ಉದ್ದೇಶವೇನೆಂದರೆ ಅವನನ್ನು ಸರಿಯಾಗಿ ಗಮನಿಸುವುದು ಮತ್ತು ಅವರೊಂದಿಗೆ ಸುಖಾಸುಮ್ಮನೇ ಬೇರೆ ಯಾರೂ ಸಾಯಬಾರದೆನ್ನುವುದೇ ಅವರ ಉದ್ದೇಶವಾಗಿತ್ತು. ಆದರೆ ಇದೆಲ್ಲವನ್ನೂ ಗಮನಿಸಿದಾಗ ಅವರಿಗೆ ಓಡವಾಯರನನ್ನು ಕೊಲ್ಲಲು ಸಾಕಷ್ಟು ಅವಕಾಶಗಳು ಒದಗಿದ್ದರೂ ಯಾಕೆ ಕೊಲ್ಲಲಿಲ್ಲವೆನ್ನುವುದು ಸಂಶಯವಾಗುತ್ತದೆ. ಅದಕ್ಕೆ ತಕ್ಕ ಉತ್ತರವನ್ನೂ ಕೂಡ ಉಧಮಸಿಂಗರವರು ನೀಡಿದ್ದರು. ಅವರ ಅಭಿಪ್ರಾಯದಂತೆ ಓಡವಾಯರ ಹಿಂದೂಸ್ಥಾನದ ತಪ್ಪಿತಸ್ಥನಿದ್ದು ಅವನನ್ನು ಕೊಲ್ಲುವುದು ರಾಷ್ಟ್ರೀಯ ಕರ್ತವ್ಯವಾಗಿದೆಯೆಂದು ತಿಳಿದಿದ್ದರು. ಈ ಕರ್ತವ್ಯವನ್ನು ತುಂಬಿದ ಸಭೆಯಲ್ಲಿ ನಿರ್ವಹಿಸಬೇಕು. ಆಗ ‘ಒಬ್ಬ ಹಿಂದೂಸ್ಥಾನಿ ಮನುಷ್ಯನು ಅವನನ್ನೇಕೆ ಕೊಂದನೆನ್ನುವುದು ಎಲ್ಲರಿಗೂ ತಿಳಿಯಲಿ’ ಎನ್ನುವುದೇ ಅದರ ಹಿಂದಿರುವ ಉದ್ದೇಶವಾಗಿತ್ತು. ಈ ಎಲ್ಲ ವಿಚಾರಗಳು ಅವರಿಗೆ ಭಗತ್ ಸಿಂಗ್.ನ ಆದರ್ಶದಿಂದ ದೊರಕಿತ್ತು. ಇಂತಹ ಮಹಾನ ವ್ಯಕ್ತಿಯ ಒಂದು ಅಸಾಮಾನ್ಯಕೃತ್ಯದ ಅನುಕರಣೆ ಮಾಡಬೇಕೆಂದು ಅನಿಸುವ ಶಿಷ್ಯನೂ ಕೂಡ ಅಸಾಮಾನ್ಯನಾಗಿರಬೇಕಾಗುತ್ತದೆ.

ಎಲ್ಲ ರೀತಿಯ ತಯಾರಿಗಳು ಪೂರ್ಣಗೊಂಡಿತ್ತು. ಸೇಡು ತೀರಿಸಲು ಕೇವಲ ಒಂದು ಸುವರ್ಣ ಅವಕಾಶದ ನಿರೀಕ್ಷೆ ಇತ್ತು, ಮತ್ತು ಬೇಗನೆ ಆ ಸಂಧಿಯು ಕೈಗೂಡಿತು. ‘ಇಂಡಿಯಾ ಆಫೀಸ’ ಕಛೇರಿಯ ಗೋಡೆಯ ಮೇಲೆ ಅವರಿಗೆ ಒಂದು ಭಿತ್ತಿ ಪತ್ರ ಕಾಣಿಸಿತು. ಅದರಲ್ಲಿ ೧೩ ಮಾರ್ಚ ೧೯೪೦ ರಂದು ಕಾಕ್ಸಟನ್ ಸಭಾಗೃಹದಲ್ಲಿ ‘ಈಸ್ಟ ಇಂಡಿಯಾ ಅಸೋಸಿಯೇಷನ್ಮತ್ತು ‘ರಾಯಲ್ ಏಶಿಯಾಟಿಕ್ ಸೊಸಾಯಟಿ’ ಇವರ ವತಿಯಿಂದ ಒಂದು ಸಭೆಯನ್ನು ಆಯೋಜಿಸಲಾಗಿದೆಯೆಂದು ಬರೆಯಲಾಗಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ಭಾರತದ ಮಂತ್ರಿಯಾಗಿರುವ ಝೆಟಲೆಂಡರಾಗಿದ್ದು, ಈ ಸಭೆಯಲ್ಲಿ ಹಾಜರಿರುವವರಲ್ಲಿ ಓಡವಾಯರ ಸಹ ಒಬ್ಬ ಎಂದು ಬರೆಯಲಾಗಿತ್ತು. ಅದನ್ನು ಓದುತ್ತಲೇ ಉಧಮಸಿಂಗರಿಗೆ ಅತೀವ ಸಂತೋಷವಾಯಿತು. ಆ ಸಂತೋಷದಲ್ಲಿಯೇ ಅವರು ತಮ್ಮ ಯೋಜನೆಯ ಪೂರ್ಣ ತಯಾರಿಯನ್ನು ಮಾಡಿಕೊಂಡರು. ದಿನಾಂಕ ೧೨ ಮಾರ್ಚ ೧೯೪೦ ರಂದು ಅವರು ತಮ್ಮೆಲ್ಲ ಮಿತ್ರರನ್ನು ಊಟಕ್ಕೆ ಆಮಂತ್ರಿಸಿದರು. ಅದುವೇ ಕೊನೆ!

ಹದಿಮೂರನೇ ತಾರೀಕಿನ ಬೆಳಗಾಯಿತು. ತಮ್ಮ ಸ್ಮಿತ ಅಂಡ ವೆಸನ್ ಪಿಸ್ತೂಲನಲ್ಲಿ ಗುಂಡು ತುಂಬಿಸಿ ಕೆಲವು ಬಿಡಿ ಕಾಡತೂಸುಗಳನ್ನು ಒಂದು ಚೀಲದಲ್ಲಿ ತೆಗೆದುಕೊಂಡರು. ಒಂದು ವೇಳೆ ವಿದೇಶಿಯನು ಕೈಕೊಟ್ಟಿದ್ದಲ್ಲಿ ಅಂದರೆ ಅವುಗಳು ನಕಲಿಯದಾಗಿದ್ದಲ್ಲಿ ಜೊತೆಯಲ್ಲಿ ಇರಲೆಂದು ಒಂದು ಚಾಕುವನ್ನು ಸಹ ತಮ್ಮ ಕೋಟನ ಒಳ ಜೇಬಿನಲ್ಲಿಟ್ಟುಕೊಂಡು, ಶಿಸ್ತಾಗಿ ಹೊರಟು ಸಭಾಂಗಣವನ್ನು ತಲುಪಿದರು. ಲಾರ್ಡ ಝೆಟಲ್ಯಾಂಡ ವ್ಯಾಸಪೀಠದ ಮೇಲೆ ಕುಳಿತಿದ್ದರೆ, ಕೆಳಗಿನ ಸಾಲಿನಲ್ಲಿ ಎಡಗಡೆಗೆ ಓಡವಾಯರ ಕುಳಿತಿರುವುದು ಕಾಣಿಸಿತು. ಸಭೆಯಲ್ಲಿ ಬಹಳ ಗದ್ದಲವಿತ್ತು. ಜನರಿಗೆ ಕುಳಿತುಕೊಳ್ಳಲು ಸ್ಥಳಾವಕಾಶವಿಲ್ಲದ್ದರಿಂದ ಜನರು ಗೋಡೆಗೆ ಒರಗಿ ನಿಂತುಕೊಂಡಿದ್ದರು. ಉಧಮಸಿಂಗರು ಜನರನ್ನು ಸರಿಸುತ್ತ ಸಾಧ್ಯವಾದಷ್ಟು ಓಡವಾಯರ ಹತ್ತಿರ ಹೋಗತೊಡಗಿದರು. ಝೆಟಲ್ಯಾಂಡರ ಭಾಷಣ ಮುಕ್ತಾಯಗೊಂಡಿತು. ವಂದನಾರ್ಪಣೆ ಪ್ರಾರಂಭವಾದ ಕೂಡಲೇ ಸಭೆಯು ಈಗ ಮುಕ್ತಾಯವಾಗುವುದೆಂದು ಜನರು ತಮ್ಮಲ್ಲಿಯೇ ಪಿಸುಧ್ವನಿಯಲ್ಲಿ ಮಾತನಾಡತೊಡಗಿದರು. ಸ್ವಲ್ಪ ಜಾಗ ಸಿಕ್ಕ ಕೂಡಲೇ ಉಧಮಸಿಂಗರು ಮುಂದೆ ಸರಿದರು. ಮತ್ತು ಅವರು ತಮ್ಮ ರಿವಾಲ್ವರನ್ನು ಹೊರತೆಗೆದು ಗುಂಡನ್ನು ಒಂದೇ ಸಮನೆ ಹಾರಿಸತೊಡಗಿದರು. ಮೊದಲಿನ ಎರಡು ಗುಂಡುಗಳಲ್ಲಿಯೇ ಓಡವಾಯರ ಸತ್ತನು .ಆದರೆ ಅವರು ದ್ವೇಷ, ಸಿಟ್ಟಿನಿಂದ ಗುಂಡುಗಳನ್ನು ಹಾರಿಸುತ್ತಲೇ ಇದ್ದರು. ಕೊನೆಯ ಎರಡು ಗುಂಡುಗಳು ಝೆಟಲ್ಯಾಂಡರಿಗೆ ತಗುಲಿತು. ಆದರೆ ಅವರು ಬದುಕುಳಿದರು. ಒಂದೊಂದು ಗುಂಡ ಲಾರ್ಡ ಲ್ಯಾಮಿಂಗಟನ್ ಮತ್ತು ಸರ್ ಲುಯಿ ಡೆನ್ಇವರಿಗೆ ತಗುಲಿತು. ದಾರಿಬಿಡುವಂತೆ ತಿಳಿಸುತ್ತಾ, ಉಧಮಸಿಂಗರು ಹೊರ ಹೋಗ ತೊಡಗಿದಾಗ ಒಬ್ಬ ವಯಸ್ಸಾದ ಹೆಂಗಸು ಅವರ ಕೋಟನ್ನು ಹಿಂದಿನಿಂದ ಜಗ್ಗಿ ಹಿಡಿದು ತಡೆದಳು. ಮುಗ್ಗರಿಸಿದ ಉಧಮಸಿಂಗರು ತಮ್ಮನ್ನು ಸಂಭಾಳಿಸಿ ಕೊಳ್ಳುತ್ತಿರುವಾಗ ಕ್ಲಾರ್ಡ ರಿಚೆಸ ಇವರು ಒಬ್ಬ ವಾಯುದಳದ ಸಿಪಾಯಿಯ ಸಹಾಯದೊಂದಿಗೆ ಅವರನ್ನು ಸೆರೆಹಿಡಿದರು.

ಈ ವಿಷಯವು ಎಲ್ಲೆಡೆಗೆ ಹರಡುತ್ತಲೇ ಎಲ್ಲರಿಗೂ ೧೯೦೯ ನೇ ಇಸವಿಯಲ್ಲಿ ಹುತಾತ್ಮರಾದ ಮದನಲಾಲ ಧಿಂಗ್ರಾರವರು ಇದೇ ಸ್ಥಳದಲ್ಲಿ ಮಾಡಿದ ಕರ್ಜನ್ ವಾಯಲಿಯ ಹತ್ಯೆಯ ನೆನಪಾಯಿತು. ಆದರೆ ಹಿಂದೂಸ್ಥಾನದಲ್ಲಿ ಸ್ವಾರ್ಥಿ ಮತ್ತು ಅಧಿಕಾರಲಾಲಸೆಯ ಪುಢಾರಿಗಳು ಇದರ ನಿಷೇಧವನ್ನು ಮಾಡತೊಡಗಿದರು, ಅವರ ಹಿಂಬಾಲಕರು ಈ ನಿಷೇಧದ ಕುರಿತು ಸಭೆಯನ್ನು ಏರ್ಪಡಿಸಿದರು. ಗಾಂಧೀಜಿಯವರು ‘ದಾರಿತಪ್ಪಿದವರ ಕೃತ್ಯ ಇದಾಗಿದೆಯೆಂದು’ ತಮ್ಮ ವಿಶ್ಲೇಷಣೆಯನ್ನು ನೀಡಿ ನಿರಾಳವಾದರು. ಸ್ವಾತಂತ್ರ್ಯವೀರ ಸಾವರಕರರು ಮಾತ್ರ ಇದರ ಪ್ರಶಂಸೆಯನ್ನು ಮಾಡಿದರು. ಜನತೆಯು ಉಧಮಸಿಂಗರ ಈ ಪ್ರತಿಕಾರದಿಂದ ನಿಬ್ಬೆರಗಾಯಿತು. ಅಲ್ಲಿ ಜರ್ಮನಿಯಲ್ಲಿ ಮಾತ್ರ ಈ ಪ್ರತಿಕಾರ ಕುರಿತು ಮುಕ್ತಕಂಠದಿಂದ ಪ್ರಶಂಸಿಸಿದರು. ಗಂಡಸಿನ ಗರ್ವ ಗಂಡಸಿಗೆ ಗೊತ್ತು ‘ಬರ್ಲಿನೆಸ ಬೋರಸೇನ ಸಾಯಟುಂಗ’ ಎನ್ನುವ ಜರ್ಮನ ದಿನಪತ್ರಿಕೆಯಲ್ಲಿ ಉಧಮಸಿಂಗರ ವರ್ಣನೆಯನ್ನು ‘ಹಿಂದೂಸ್ಥಾನದ ಸ್ವಾತಂತ್ರ್ಯ ಯುದ್ಧದ ಮಿನುಗುವ ದೀಪ’ ಎಂದು ವಾರ್ತೆಯನ್ನು ಪ್ರಕಟಿಸಲಾಯಿತು. ‘ಹಿಂದುಸ್ಥಾನದ ಕ್ರೋಧದ ನಾಂದಿಯಿದು. ತಮ್ಮ ರಾಜ್ಯದಲ್ಲಿ ಹಿಂದೂಸ್ಥಾನಿಗಳು ಸುಖವಾಗಿದ್ದಾರೆ ಎಂದು ಹೇಳುವ ಆಂಗ್ಲರಿಗೆ ಇದೊಂದು ಬಲವಾದ ಏಟು ನೀಡಿದಂತಾಗಿದೆ’. ಅಮೇರಿಕಾದ ಪ್ರಸಿದ್ಧ ಲೇಖಕ ಮತ್ತು ಪತ್ರಕಾರ ವಿಲಿಯಮ್ ಶಿರ್ ಅವರು ಈ ಪ್ರಸಂಗ ನಡೆದಾಗ ಬರ್ಲಿನನಲ್ಲಿದ್ದರು. ಅವರು ತಮ್ಮ ‘ಬರ್ಲಿನ ಡೈರಿಯಲ್ಲಿ’ ದಿನಾಂಕ ೧೪ ಮಾರ್ಚ ೧೯೪೦ರ ಪುಟದಲ್ಲಿ ಒಬ್ಬ ಗಾಂಧೀಜಿಯನ್ನು ಬಿಟ್ಟರೆ ಇತರೆ ಬಹುತೇಕ ಎಲ್ಲ ಹಿಂದೂಸ್ಥಾನಿ ಜನರು ಓಡವಾಯರನ ಹತ್ಯೆಯು ಈಶ್ವರನು ಆತನಿಗೆ ನೀಡಿದ ಶಿಕ್ಷೆ ಎಂದು ತಿಳಿಯುತ್ತಾರೆ ಎಂದು ಬರೆದಿದ್ದರು. ಇದೇ ಓಡವಾಯರ ಅಮೃತಸರ ಹತ್ಯಾಕಾಂಡಕ್ಕೆ ಜವಾಬ್ದಾರನಾಗಿದ್ದಾನೆ. ಇಂದು ಸಂಪೂರ್ಣ ಜರ್ಮನಿಯ ವೃತ್ತಪತ್ರಿಕೆಗಳು ‘ಹಿಂದಿ ಸ್ವಾತಂತ್ರ್ಯವೀರನ ಕೃತ್ಯ! ಅತ್ಯಾಚಾರಿಗೆ ಗುಂಡು ಹಾಕಿ ಕೊಲ್ಲಿ’ ಎಂದು ಪ್ರಕಟಿಸಿವೆ ಎಂದು ಬರೆದಿದ್ದರು.

ಮೊಕದ್ದಮೆ ನಡೆದು ಉಧಮಸಿಂಗರಿಗೆ ಅವರು ನಿರೀಕ್ಷಿಸಿದಂತೆ ಗಲ್ಲು ಶಿಕ್ಷೆ ವಿಧಿಸಲಾಯಿತು. ಅದಕ್ಕೆ ಉಧಮಸಿಂಗರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ ತಮ್ಮ ಅಂತಿಮ ಭಾಷಣದಲ್ಲಿ ”ನಾನು ಈ ಕೃತ್ಯವನ್ನು ಮಾಡಿದ ಕಾರಣವೇನೆಂದರೆ, ಅವನು ಸಾಯುವುದಕ್ಕೆ ಲಾಯಕ್ಕಾಗಿದ್ದನು! ಅವನು ನನ್ನ ದೇಶದ ಅಪರಾಧಿಯಾಗಿದ್ದನು! ಅವನು ನನ್ನ ದೇಶಬಾಂಧವರನ್ನು ಹೊಸಕಿ ಕೊಲ್ಲಲು ಪ್ರಯತ್ನಿಸಿದನು! ನಾನು ಅವನನ್ನೇ ಕೊಂದು ಹಾಕಿದೇನು! ನಾನು ಕಳೆದ ೨೧ ವರ್ಷಗಳಿಂದ ಪ್ರತಿಕಾರದ ಪ್ರತೀಕ್ಷೆಯಲ್ಲಿದ್ದೆನು. ಅದೀಗ ಪೂರ್ಣವಾಯಿತು. ನಾನು ನನ್ನ ಮರಣದ ಕಲ್ಪನೆಯಿಂದ ಕಿಂಚಿತ್ತೂ ವಿಚಲಿತನಾಗಿಲ್ಲ. ನಾನು ನನ್ನ ದೇಶಕ್ಕಾಗಿ ಬಲಿದಾನ ನೀಡುತ್ತಿದ್ದೇನೆ. ಬ್ರಿಟಿಶರ ಅತ್ಯಾಚಾರಕ್ಕೆ ಸಿಲುಕಿ ನನ್ನ ಅನೇಕ ದೇಶಬಾಂಧವರು ಸಾಯುವುದನ್ನು ನೋಡಿದ್ದೇನೆ ಮತ್ತು ನಾನು ಅದರ ನಿಷೇಧವನ್ನು ನನ್ನ ಈ ಕೃತ್ಯದಿಂದ ವ್ಯಕ್ತಪಡಿಸಿದೆನು. ನನ್ನ ಮಾತೃಭೂಮಿಯ ಪ್ರೀತ್ಯರ್ಥವಾಗಿ ನನಗೆ ಮರಣ ಒದಗಿ ಬಂದಿದೆ. ಇದಕ್ಕಿಂತ ದೊಡ್ಡ ಸನ್ಮಾನ ಇನ್ಯಾವುದಿದೆ?” ಎಂದು ನುಡಿದರು.

ದಿನಾಂಕ ೩೧ ಜುಲೈ ೧೯೪೦ರಂದು ಉಧಮಸಿಂಗರನ್ನು ಲಂಡನನ್ನಿನ ಪೆಂಟನವಿಲೆ ಜೈಲಿನಲ್ಲಿ, ಮದನಲಾಲ ಧಿಂಗ್ರಾರನ್ನು ಗಲ್ಲಿಗೇರಿಸಿದಲ್ಲಿಯೇ ಗಲ್ಲು ವಿಧಿಲಾಯಿತು. ಭಗತಸಿಂಗರ ಆದರ್ಶಹೊಂದಿದ್ದ ಉಧಮಸಿಂಗರನ್ನು ಭಗತಸಿಂಗನಂತೆಯೇ ಅವರ ಮೃತ ದೇಹವನ್ನು ಹಿಂದೂಸ್ಥಾನದ ವಶಕ್ಕೆ ಕೊಡದೇ ಹೊರಗಿಂದ ಹೊರಗೇ ವಿಲೇವಾರಿ ಮಾಡಲಾಯಿತು. ಆದರೆ ಅನೇಕ ಸ್ಥಳೀಯ ಹಿಂದೂಸ್ಥಾನಿ ದೇಶಭಕ್ತರು, ಭಾರತ ಸರಕಾರ ಮತ್ತು ಪಂಜಾಬ ಸರಕಾರವು ಅವರ ಅವಶೇಷವನ್ನು ಹಿಂದೂಸ್ಥಾನಕ್ಕೆ ಮರಳಿ ತರಲು ಸಾಕಷ್ಟು ಪ್ರಯತ್ನಿಸಿದರು. ಕೊನೆಗೂ ಅವರ ಪ್ರಯತ್ನಗಳಿಗೆ ಯಶಸ್ಸು ದೊರಕಿ ದಿನಾಂಕ ೨೦ ಜುಲೈ ೧೯೭೪ ರಂದು ಅವರ ಅವಶೇಷಗಳನ್ನು ಇಲ್ಲಿಗೆ ತರಲಾಯಿತು. ಆ ಪವಿತ್ರ ಅವಶೇಷಗಳನ್ನು ಜಲಿಯನವಾಲಾ ಬಾಗನಲ್ಲಿ ಒಂದು ವ್ಯಾಸಪೀಠದ ಮೇಲೆ ಇಡಲಾಯಿತು. ಹಾಗೂ ಸಾವಿರಾರು ಜನರು ಅದರ ದರ್ಶನವನ್ನು ಪಡೆದರು, ಅದರ ಮೇಲೆ ಪುಷ್ಪಗಳನ್ನರ್ಪಿಸಿದರು. ನಂತರ ಆ ಪೆಟ್ಟಿಗೆಯ ಮೆರವಣಿಗೆಯನ್ನು ಚಂದಿಗಡ, ಲುಧಿಯಾನಾ, ಜಾಲಂಧರ ಮತ್ತು ಅವರ ಜನ್ಮಸ್ಥಳವಾದ ಸುನಾಮಗೆ ಕೊಂಡೊಯ್ಯಲಾಯಿತು. ಕೊನೆಗೆ ಲಕ್ಷಾಂತರ ಜನರ ಜಯಕಾರದೊಂದಿಗೆ ಅವರ ಅಸ್ಥಿಯನ್ನ ಆನಂದಪೂರನಲ್ಲಿ ಗಂಗಾ ಮತ್ತು ಸಟ್ಲೆಜ ನದಿಗಳ ಸಂಗಮದಲ್ಲಿ ವಿಸರ್ಜಿಸಲಾಯಿತು.

೨೧ ವರ್ಷಗಳ ಪ್ರತೀಕಾರದ ಧ್ಯೇಯವನ್ನಿಟ್ಟುಕೊಂಡು ಕೊನೆಗೂ ಅದನ್ನು ಪೂರ್ಣಗೊಳಿಸಲು ಹಸನ್ಮುಖರಾಗಿ ಬಲಿದಾನಗೈದ ‘ಪಂಜಾಬಿನ ಹುಲಿ ಉಧಮಸಿಂಗ’ ಇವರಿಗೆ ನಮ್ಮ ವಿನಮ್ರ ನಮಸ್ಕಾರಗಳು!

Leave a Comment