ತೇಜಸ್ವಿ ವಿಚಾರಗಳಿಂದ ಓತಪ್ರೋತಹಿಂದೂ ಧರ್ಮ ಪ್ರಸಾರಕ ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದರ ಜನನ, ಬಾಲ್ಯ ಹಾಗೂ ಶಿಕ್ಷಣ

ಸ್ವಾಮಿ ವಿವೇಕಾನಂದರ ಮೂಲ ಹೆಸರು ನರೇಂದ್ರನಾಥ. ಸ್ವಾಮಿ ವಿವೇಕಾನಂದರ ಜನ್ಮವು ದಿನಾಂಕ ೧೨ ಜನವರಿ, ೧೮೬೩ರಲ್ಲಿ ಕೊಲ್ಕತ್ತಾದಲ್ಲಿ ಆಯಿತು. ಬಾಲ್ಯದಲ್ಲಿಯೇ ವಿವೇಕಾನಂದರ ವರ್ತನೆಯಲ್ಲಿ ಎರಡು ವಿಷಯಗಳು ಪ್ರಖರವಾಗಿ ಕಂಡು ಬರತೊಡಗಿತು. ಅವರು ಪ್ರವೃತ್ತಿಯಿಂದಲೇ ಶ್ರದ್ಧೆ ಮತ್ತು ದಯಾಮಯ ಹೃದಯವುಳ್ಳವರಾಗಿದ್ದರು. ಎರಡನೇ ವಿಷಯವೆಂದರೆ ಬಾಲ್ಯದಿಂದಲೇ ಅವರು ಯಾವುದೇ ಸಾಹಸಮಯವಾದ ಕಾರ್ಯವನ್ನು ಹಿಂಜರಿಯದೇ ಮಾಡುತ್ತಿದ್ದರು. ಸ್ವಾಮಿ ವಿವೇಕಾನಂದರ ಸಂಪೂರ್ಣ ಕುಟುಂಬವು ಆಧ್ಯಾತ್ಮ ಮಾರ್ಗದಲ್ಲಿದ್ದುದರಿಂದ ಬಾಲ್ಯದಿಂದಲೇ ಅವರ ಮೇಲೆ ಧರ್ಮದ ಕುರಿತು ಯೋಗ್ಯ ಸಂಸ್ಕಾರವಾಯಿತು. ೧೮೭೦ ರಲ್ಲಿ ಅವರನ್ನು ಈಶ್ವರಚಂದ್ರ ವಿದ್ಯಾಸಾಗರ ಇವರ ಶಾಲೆಗೆ ಸೇರಿಸಲಾಯಿತು. ಶಾಲೆಯಲ್ಲಿರುವಾಗಲೇ ಅಧ್ಯಯನದೊಂದಿಗೆ ಬಲೋಪಾಸನೆಯನ್ನು ಮಾಡಿದರು.

ಬಾಲ್ಯದಲ್ಲಿ ಸ್ವಾಮಿ ವಿವೇಕಾನಂದರು ಸ್ವಭಾಷಾಭಿಮಾನಿಗಳಾಗಿದ್ದರು. ಅದನ್ನು ದರ್ಶಿಸುವಒಂದು ಪ್ರಸಂಗ -ಅವರು ಆಂಗ್ಲದಲ್ಲಿ ಶಿಕ್ಷಣವನ್ನು ಕಲಿಯಬೇಕಾದ ಸಮಯದಲ್ಲಿ ‘ಇದು ಪರಕೀಯರ ಭಾಷೆ, ಅಂದರೆ ಹೊರಗಿನವರ ಭಾಷೆ. ಇದನ್ನು ನಾನು ಖಂಡಿತವಾಗಿಯೂ ಕಲಿಯುವುದಿಲ್ಲ’ ಎಂದು ಹಠ ಹಿಡಿದು ಸುಮಾರು ೭-೮ ತಿಂಗಳು ಅವರು ಆಂಗ್ಲ ಭಾಷೆಯನ್ನು ಕಲಿಯಲು ವಿರೋಧ ವ್ಯಕ್ತಪಡಿಸಿದರು. ಮುಂದೆ ಬೇರೆ ದಾರಿಯಿಲ್ಲದೆ ಅವರು ಆಂಗ್ಲ ಭಾಷೆಯನ್ನು ಕಲಿತರು. ವಿವೇಕಾನಂದರು ಮೆಟ್ರಿಕ್ ಪರೀಕ್ಷೆಯನ್ನು ಅತ್ಯಧಿಕ ಅಂಕಗಳನ್ನು ಗಳಿಸಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿ ತಮ್ಮ ಮನೆತನದ ಹಾಗೂ ಶಾಲೆಯ ಕೀರ್ತಿ ಪತಾಕೆಯನ್ನು ಎತ್ತರಕ್ಕೇರಿಸಿದರು. ಮುಂದೆ ಕೊಲ್ಕತ್ತಾದ ಪ್ರಿಸಿಡೆನ್ಸಿ ಮಹಾವಿದ್ಯಾಲಯದಿಂದ ಅವರು ‘ತತ್ವಜ್ಞಾನ’ ವಿಷಯದಲ್ಲಿ ಎಂ. ಎ. ಪದವಿಯನ್ನು ಪಡೆದರು.

ಸ್ವಾಮೀ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ಭೇಟಿ!

ನರೇಂದ್ರನ ಮನೆಯಲ್ಲಿ ಹಿರಿಯ ಸಂಬಂಧಿಕರಾದ ಡಾ. ರಾಮಚಂದ್ರ ದತ್ತ ಇವರು ರಾಮಕೃಷ್ಣರ ಭಕ್ತರಾಗಿದ್ದರು. ಧರ್ಮಭಾವನೆಯಿಂದ ಪ್ರೇರಿತರಾದ ನರೇಂದ್ರನ ಮನಸ್ಸಿನಲ್ಲಿ ಚಿಕ್ಕಂದಿನಿಂದಲೇ ತೀವ್ರ ವೈರಾಗ್ಯ ಉತ್ಪನ್ನವಾಗಿರುವುದನ್ನು ಕಂಡು ಡಾ. ದತ್ತ ಇವರು ಒಮ್ಮೆ ನರೇಂದ್ರನಿಗೆ ‘ನಿನ್ನ ಜೀವನದ ಉದ್ದೇಶವು ಧರ್ಮಕಾರ್ಯವೇ ಆಗಿದ್ದರೆ, ನೀನು ‘ಬ್ರಹ್ಮೋ ಸಮಾಜ’ ಇತ್ಯಾದಿಗಳ ಸುಳಿಯಲ್ಲಿ ಬೀಳಬೇಡ. ನೀನು ನೇರವಾಗಿ ದಕ್ಷಿಣೇಶ್ವರದಲ್ಲಿರುವ ಶ್ರೀ ರಾಮಕೃಷ್ಣ ಪರಮಹಂಸರನ್ನು ಭೇಟಿಯಾಗು, ಹೋಗು’ ಎಂದು ಹೇಳಿದರು. ಒಂದು ದಿನ ಅವರಿಗೆ ಅವರ ಪಕ್ಕದ ಮನೆಯವರಾದ ಶ್ರೀ ಸುರೇಂದ್ರನಾಥ ಇವರಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ದರ್ಶನವಾಯಿತು. ಪ್ರಾರಂಭದ ಕೆಲವು ದಿನಗಳು ಶ್ರೀ ರಾಮಕೃಷ್ಣರು ನರೇಂದ್ರನನ್ನು ತಮ್ಮಿಂದ ಒಂದು ಕ್ಷಣವೂ ದೂರವಿಡಲು ಇಚ್ಛಿಸುತ್ತಿರಲಿಲ್ಲ. ನರೇಂದ್ರನನ್ನು ತಮ್ಮ ಹತ್ತಿರ ಕುಳ್ಳಿರಿಸಿಕೊಂಡು ಅನೇಕ ಉಪದೇಶಗಳನ್ನು ಮಾಡುತ್ತಿದ್ದರು. ಅವರಿಬ್ಬರೇ ಇರುವಾಗ ಅವರಲ್ಲಿ ಬಹಳ ಚರ್ಚೆಯಾಗುತ್ತಿತ್ತು. ಶ್ರೀ ರಾಮಕೃಷ್ಣರು ಅಪೂರ್ಣವಾಗಿ ಉಳಿದಿರುವ ತಮ್ಮ ಕಾರ್ಯವನ್ನು ನರೇಂದ್ರನಿಗೆ ವಹಿಸಿಕೊಡುವ ಯೋಚನೆಯಲ್ಲಿದ್ದರು. ಒಂದು ದಿನ ಶ್ರೀ ರಾಮಕೃಷ್ಣರು ಒಂದು ಕಾಗದದ ತುಂಡಿನ ಮೇಲೆ ‘ನರೇಂದ್ರನು ಲೋಕಶಿಕ್ಷಣದ ಕಾರ್ಯವನ್ನು ಮಾಡುವನು’ ಎಂದು ಬರೆದರು. ಅದನ್ನು ತಮಾಷೆಯಾಗಿ ತೆಗೆದುಕೊಂಡು ನರೇಂದ್ರನು ಅವರಿಗೆ ‘ಈ ಎಲ್ಲ ಕಾರ್ಯಗಳು ನನ್ನಿಂದ ಆಗುವುದಿಲ್ಲ’ ಎಂದಾಗ ಶ್ರೀ ರಾಮಕೃಷ್ಣರು ಕೂಡಲೇ ದೃಢವಾಗಿ ‘ಏನದು ಆಗುವುದಿಲ್ಲವೆಂದರೆ? ಅರೆ, ನಿನ್ನ ಎಲುಬುಗಳು ಕೂಡ ಈ ಕಾರ್ಯವನ್ನು ಮಾಡುವವು!’ ಎಂದರು. ಮುಂದೆ ಶ್ರೀ ರಾಮಕೃಷ್ಣ ಪರಮಹಂಸರು ನರೇಂದ್ರನಿಗೆ ಸನ್ಯಾಸ ದೀಕ್ಷೆಯನ್ನು ನೀಡಿ ಅವರ ನಾಮಕರಣವನ್ನು ‘ಸ್ವಾಮಿ ವಿವೇಕಾನಂದ’ ಎಂದು ಮಾಡಿದರು.

ಸ್ವಾಮಿ ವಿವೇಕಾನಂದರ ಧರ್ಮ ಪ್ರಸಾರದ ಕಾರ್ಯ ಪ್ರಾರಂಭ

ಶ್ರೀ ರಾಮಕೃಷ್ಣ ಪರಮಹಂಸರ ಮಹಾಸಮಾಧಿಯ ನಂತರ ಸ್ವಾಮಿ ವಿವೇಕಾನಂದರು ತಮ್ಮ ಗುರುಬಂಧುಗಳಾದ ತಾರಕನಾಥರ ಸಹಾಯದೊಂದಿಗೆ ಕೊಲ್ಕತ್ತಾ ಹತ್ತಿರ ವರಾಹನಗರದ ಭಾಗದಲ್ಲಿ ಒಂದು ಹಳೆಯ ಪಾಳು ಬಿದ್ದ ಕಟ್ಟಡದಲ್ಲಿ ‘ರಾಮಕೃಷ್ಣ ಮಠ’ದ ಸ್ಥಾಪನೆಯನ್ನು ಮಾಡಿದರು. ಮಠದ ಸ್ಥಾಪನೆಯ ಮುಂಚೆ ಆ ಜಾಗೆಯಲ್ಲಿ ಭೂತಗಳು ವಾಸಿಸುತ್ತವೆಯೆಂದು ಜನರು ಮಾತನಾಡಿಕೊಳ್ಳುತ್ತಿದ್ದರು. ವಿವೇಕಾನಂದರು ಶ್ರೀ ರಾಮಕೃಷ್ಣರು ಉಪಯೋಗಿಸಿದ ವಸ್ತುಗಳನ್ನು ಮತ್ತು ಅವರ ಚಿತಾಭಸ್ಮದ ಕಲಶವನ್ನು ಆ ಸ್ಥಳದಲ್ಲಿ ಇತ್ತರು ಮತ್ತು ಅವರ ಭಕ್ತರು ಅಲ್ಲಿ ವಾಸಿಸತೊಡಗಿದರು.

ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದ ಜಯಭೇರಿ

ಶಿಕಾಗೋ ಪ್ರಯಾಣದ ಪೂರ್ವಸೂಚನೆ
ಒಂದು ರಾತ್ರಿ ಅರ್ಧ ಎಚ್ಚರದಲ್ಲಿರುವಾಗ ಸ್ವಾಮಿ ವಿವೇಕಾನಂದರು ಒಂದು ಅದ್ಭುತ ಕನಸು ಕಂಡರು. ‘ಶ್ರೀ ರಾಮಕೃಷ್ಣ ಪರಮಹಂಸರು ಜ್ಯೋತಿರ್ಮಯ ದೇಹವನ್ನು ಧರಿಸಿ ಸಮುದ್ರದಿಂದ ಮುಂದೆ ಹೋಗುತ್ತಿದ್ದಾರೆ ಮತ್ತು ಸ್ವಾಮಿ ವಿವೇಕಾನಂದರನ್ನು ತಮ್ಮ ಹಿಂದೆ ಬರುವಂತೆ ಸನ್ನೆ ಮಾಡುತ್ತಿದ್ದಾರೆ’. ಕ್ಷಣದಲ್ಲಿ ಸ್ವಾಮೀಜಿಯ ಕಣ್ಣುಗಳು ತೆರೆದವು. ಅವರ ಹೃದಯದಲ್ಲಿ ಅವರ್ಣನೀಯ ಆನಂದ ತುಂಬಿತು. ಆದರೊಂದಿಗೆ ಅವರಿಗೆ ‘ಹೊರಡು’ ಎನ್ನುವಂತಹ ದೇವವಾಣಿಯು ಸುಸ್ಪಷ್ಟವಾಗಿ ಕೇಳಿಬಂತು. ಪರದೇಶಕ್ಕೆ ಹೋಗುವ ಸಂಕಲ್ಪವು ದೃಢವಾಯಿತು. ಒಂದೆರಡು ದಿನಗಳ್ಲಿಯೇ ಪ್ರವಾಸದ ಎಲ್ಲ ತಯಾರಿಯು ಪೂರ್ಣವಾಯಿತು.

ಸರ್ವ-ಧರ್ಮ ಸಮ್ಮೇಳನಕ್ಕಾಗಿ ರವಾನೆ
೩೧ ಮೇ ೧೮೯೩ ರಂದು ‘ಪೆನೆನ್ಸುಲಾರ್’ ಹಡಗಿನಲ್ಲಿ ಮುಂಬಯಿಯ ತೀರವನ್ನು ಬಿಟ್ಟು ಅಮೇರಿಕಾದತ್ತು ಸ್ವಾಮಿ ವಿವೇಕಾನಂದರು ಪ್ರಯಾಣಿಸಿದರು. ೧೪ ಜುಲೈ ರಂದು ಸ್ವಾಮೀಜಿ ಕೆನಡಾದ ವ್ಯಾಂಕೂವರ ಬಂದರನ್ನು ತಲುಪಿದರು. ಅಲ್ಲಿಂದ ರೈಲಿನ ಮೂಲಕ ಅಮೇರಿಕಾದ ಪ್ರಖ್ಯಾತ ಶಿಕಾಗೋ ಮಹಾನಗರಕ್ಕೆ ಬಂದರು. ಅಲ್ಲಿ ಆಯೋಜಿಸಲಾದ ಸರ್ವಧರ್ಮ ಸಮ್ಮೇಳನವು ಸಪ್ಟೆಂಬರ ೧೧ ರಂದು ಪ್ರಾರಂಭವಾಗಲಿದೆಯೆಂದು ಅವರಿಗೆ ತಿಳಿಯಿತು. ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ಅವಶ್ಯಕವಾದ ಪರಿಚಯಪತ್ರವು ಅವರೊಂದಿಗೆ ಇರಲಿಲ್ಲ. ಅಲ್ಲದೇ ಪ್ರತಿನಿಧಿಯೆಂದು ಪುನ: ಹೆಸರು ನೊಂದಾಯಿಸುವ ಅವಧಿ ಕೂಡ ಮುಗಿದಿತ್ತು. ಆದರೆ ಪರದೇಶದಲ್ಲಿ ಸ್ವಾಮೀಜಿಗಳು ಎಲ್ಲಿ ಹೋಗುತ್ತಿದ್ದರೋ ಅಲ್ಲೆಲ್ಲ್ಲ ಜನರು ಅವರೆಡೆಗೆ ಆಕರ್ಷಿಲ್ಪಡುತ್ತಿದ್ದರು. ಮೊದಲನೇ ದಿನವೇ ‘ಹಾರ್ವರ್ಡ ವಿದ್ಯಾಪೀಠದ’ ಗ್ರೀಕ ಭಾಷೆಯ ಪ್ರಾಚಾರ್ಯರಾದ ಜೆ.ಎಚ್. ರೈಟ್ ರವರು ಸ್ವಾಮೀಜಿಗಳೊಂದಿಗೆ ನಾಲ್ಕು ಗಂಟೆಗಳಷ್ಟು ಕಾಲ ಮಾತನಾಡುತ್ತ ಕುಳಿತರು. ಸ್ವಾಮೀಜಿಯವರ ಅಗಾಧ ಪ್ರತಿಭೆ ಹಾಗೂ ಅವರ ಅಪ್ರತಿಮ ಬುದ್ಧಿಮತ್ತೆಯಿಂದ ಅವರು ಎಷ್ಟು ಮಂತ್ರಮುಗ್ಧರಾದರೆಂದರೆ, ಸ್ವಾಮೀಜಿಯವರಿಗೆ ಧರ್ಮಸಮ್ಮೇಳನದಲ್ಲಿ ಪ್ರತಿನಿಧಿಯೆಂದು ಪ್ರವೇಶವನ್ನು ಒದಗಿಸಿ ಕೊಡುವ ಎಲ್ಲ ಜವಾಬ್ದಾರಿಯನ್ನು ಆ ಪ್ರಾಧ್ಯಾಪಕರು ಸ್ವತ: ವಹಿಸಿಕೊಂಡರು.

ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದ ಸಹಭಾಗಿತ್ವ

ಭಾರತವೆಂಬ ಸುವರ್ಣಭೂಮಿಯ ಸತ್ಪುರಷರಾದ ಶ್ರೇಷ್ಠತಮವಾದ ಸನಾತನ ಹಿಂದೂ ಧರ್ಮದ ಪರಿಚಯವನ್ನು ಜಗತ್ತಿಗೆ ಮಾಡಿಕೊಡುವುದು ಒಂದು ದೈವೀ ಯೋಗವೇ ಆಗಿತ್ತು. ಆಮೇರಿಕಾದ ಶಿಕಾಗೋದಲ್ಲಿ ದಿನಾಂಕ ೧೧ ಸಪ್ಟೆಂಬರ ೧೮೯೩ ರಂದು ನಡೆದ ಸರ್ವಧರ್ಮ ಸಮ್ಮೇಳನದ ಮಾಧ್ಯಮದಿಂದ ಹಿಂದೂ ಧರ್ಮದ ಬಗ್ಗೆ ತಿಳಿದುಕೊಳ್ಳಲು ಆಹ್ವಾನಿಸಿದ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ನಿಜವಾದ ಪ್ರತಿನಿಧಿಯಾದರು. ಸೋಮವಾರ, ದಿನಾಂಕ ೧೧ ಸಪ್ಟೆಂಬರ ೧೮೯೩ ರಂದು ಬೆಳಿಗ್ಗೆ ಧರ್ಮಗುರುಗಳ ಪ್ರಾರ್ಥನೆಯ ನಂತರ ಸಂಗೀತಮಯ ವಾತಾವರಣದಲ್ಲಿ ಸರ್ವಧರ್ಮ ಸಮ್ಮೇಳನದ ಶುಭಾರಂಭವಾಯಿತು. ವ್ಯಾಸಪೀಠದ ಮಧ್ಯಭಾಗದಲ್ಲಿ ಅಮೇರಿಕಾದ ರೋಮನ ಕೆಥೊಲಿಕ ಪಂಥದ ಧರ್ಮಪ್ರಮುಖರು ಇದ್ದರು. ಸ್ವಾಮಿ ವಿವೇಕಾನಂದರು ಯಾವುದೇ ಒಂದು ವಿಶಿಷ್ಠ ಪಂಥದ ಪ್ರತಿನಿಧಿಯಾಗಿರಲಿಲ್ಲ. ಅವರು ಸಂಪೂರ್ಣ ಭಾರತವರ್ಷದ ಸನಾತನ ಹಿಂದೂ ವೈದಿಕ ಧರ್ಮದ ಪ್ರತಿನಿಧಿಯಾಗಿ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ ಆರರಿಂದ ಏಳು ಸಾವಿರದಷ್ಟು ಸ್ಟ್ರೀ ಪುರುಷ ಪ್ರತಿನಿಧಿಗಳು ಉಪಸ್ಥಿತರಾಗಿದ್ದರು. ಅಧ್ಯಕ್ಷರ ಸೂಚನೆಯ ಮೇರೆಗೆ ಗುರುಗಳ ಸ್ಮರಣೆಯನ್ನು ಮಾಡಿಕೊಂಡು ಸ್ವಾಮೀಜಿಗಳು ತಮ್ಮ ಸ್ಥಳದಿಂದ ಎದ್ದರು. ಹಾಗೂ ‘ಅಮೇರಿಕಾದ ನನ್ನ ಸಹೋದರ ಸಹೋದರಿಯರೇ’ ಎಂದು ಸಭೆಯಲ್ಲಿರುವವರನ್ನು ಸಂಬೋಧಿಸಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಅವರ ಚೈತನ್ಯಪೂರ್ಣ ಮತ್ತು ತೇಜಸ್ವಿ ವಾಣಿಯಿಂದ ಎಲ್ಲರೂ ಮಂತ್ರಮುಗ್ಧರಾದರು. ಆ ಶಬ್ದಗಳು ಎಂತಹ ಅದ್ಭುತ ಶಕ್ತಿಯಿಂದ ತುಂಬಿದ್ದವು ಎಂದರೆ, ಸ್ವಾಮಿ ವಿವೇಕಾನಂದರ ಆ ಶಬ್ದಗಳನ್ನು ಉಚ್ಚರಿಸುತ್ತಲೇ ಸಾವಿರಾರು ಸ್ತ್ರೀ ಪುರುಷರು ತಮ್ಮ ಸ್ಥಳದಿಂದ ಎದ್ದು ನಿಂತರು ಮತ್ತು ಅವರು ಚಪ್ಪಾಳೆಯ ಪ್ರಚಂಡ ಸುರಿಮಳೆಯನ್ನು ಮಾಡಿದರು. ಜನರ ಹರ್ಷದಿಂದ ತುಂಬಿದ ಧ್ವನಿ ಮತ್ತು ಕರತಾಡನ ನಿರಂತರವಾಗಿತ್ತು. ಸ್ವಾಮಿ ವಿವೇಕಾನಂದರ ಆ ಭಾವಪೂರ್ಣ ಶಬ್ದಗಳಲ್ಲಿರುವ ಸತ್ವದಿಂದ ಎಲ್ಲ ಶ್ರೋತ್ರುಗಳ ಹೃದಯವು ಸ್ಪಂದಿಸಿತು. ಉಪಸ್ಥಿತ ವಕ್ತಾರರಲ್ಲಿ ‘ಸಹೋದರ ಸಹೋದರರಿಯರೇ’ ಎಂಬ ಶಬ್ದಗಳಿಂದ ಸಕಲ ಮಾನವ ಜಾತಿಯನ್ನು ಆಹ್ವಾನಿಸುವ ಸ್ವಾಮಿಜಿ ವಿವೇಕಾನಂದರು ಅದ್ವಿತೀಯರಾಗಿದ್ದರು.

‘ಹಿಂದೂ ಸಮಾಜವು ಬಡವಾಗಿರಬಹುದು; ಆದರೆ ಅದು ಘೃಣಾಸ್ಪದವಲ್ಲ. ಅದು ದೀನವಾಗಿರಬಹುದು, ದು:ಖಿತವಾಗಿರಬಹುದು, ಆದರೆ ಅತ್ಯಮೂಲ್ಯವಾದಂತಹ ಪಾರಮಾರ್ಥಿಕ ಸಂಪತ್ತಿನ ಉತ್ತರಾಧಿಕಾರಿಯಾಗಿದೆ. ಧರ್ಮದ ಕ್ಷೇತ್ರದಲ್ಲಿ ಅದು ಜಗದ್ಗುರುವಾಗಬಲ್ಲದು, ಇದು ಹಿಂದೂ ಧರ್ಮದ ಯೋಗ್ಯತೆಯಾಗಿದೆ’ ಈ ಶಬ್ದಗಳಿಂದ ಹಿಂದೂ ಧರ್ಮದ ಮಹತ್ವವನ್ನು ಬಣ್ಣಿಸಿದರು. ಅನೇಕ ಶತಕಗಳ ನಂತರ ಸ್ವಾಮಿ ವಿವೇಕಾನಂದರು ಹಿಂದೂ ಸಮಾಜಕ್ಕೆ ಅದರ ಸೀಮೆಯು ಎಷ್ಟು ವಿಸ್ತೃತವಾಗಿದೆಯೆನ್ನುವುದನ್ನು ತೋರಿಸಿಕೊಟ್ಟರು. ಸ್ವಾಮಿ ವಿವೇಕಾನಂದ ಯಾವುದೇ ಧರ್ಮದ ನಿಂದನೆ ಅಥವಾ ಟೀಕೆಯನ್ನು ಮಾಡಲಿಲ್ಲ. ಯಾವುದೇ ಧರ್ಮವನ್ನು ಅವರು ಕ್ಷುದ್ರವೆನ್ನಲಿಲ್ಲ. ಹಿಂದೂ ಧರ್ಮದ ಕುರಿತು ವಿದೇಶಿಯರ ತುಚ್ಚ ನಡುವಳಿಕೆ ಮತ್ತು ಅಪಮಾನಗಳೆಂಬ ಕೆಸರನ್ನು ಮೆತ್ತಿಕೊಂಡಿದ್ದ ಹಿಂದೂ ಧರ್ಮವನ್ನು ಸ್ವಾಮಿ ವಿವೇಕಾನಂದರು ಕೆಸರಿನಿಂದ ಪ್ರತ್ಯೇಕಿಸಿ, ಜಗತ್ತಿಗೆ ಅದರ ಮೂಲ ತೇಜಸ್ವಿ ಸ್ವರೂಪವನ್ನು ಪರಿಚಯಿಸಿದರು. ಹಿಂದೂ ಧರ್ಮವನ್ನು ಸರ್ವಧರ್ಮ ಸಮ್ಮೇಳನದಲ್ಲಿ ಸರ್ವೋಚ್ಚ ಸ್ಥಾನದಲ್ಲಿ ಕುಳ್ಳಿರಿಸಿದರು! ಈ ಸಮ್ಮೇಳನದಲ್ಲಿ ಹಿಂದೂಸ್ಥಾನದ ಕುರಿತು ಮಾತನಾಡುವಾಗ ಅವರು ‘ಹಿಂದೂಸ್ಥಾನವು ಪುಣ್ಯಭೂಮಿಯಾಗಿದೆ, ಕರ್ಮಭೂಮಿಯಾಗಿದೆ ಎಂಬುವುದು ನಿಚ್ಚಳವಾದ ಸತ್ಯ! ಯಾವುದಾದರೊಂದು ದೇಶವನ್ನು ‘ಅಂತರ್ದೃಷ್ಟಿ ಹೊಂದಿರುವ ಮತ್ತು ಆಧ್ಯಾತ್ಮದ ಮಾತೃಭೂಮಿ’ ಎಂದು ಕರೆಯಬಹುದಾದರೆ ಅದು ಕೇವಲ ಹಿಂದೂಸ್ಥಾನ! ಪ್ರಾಚೀನ ಕಾಲದಿಂದಲೂ ಇಲ್ಲಿ ಅನೇಕ ಧರ್ಮಸಂಸ್ಥಾಪಕರ ಉದಯವಾಗಿದೆ. ತ್ರಾಹಿ-ತ್ರಾಹಿ ಎನ್ನುವ ಜಗತ್ತನ್ನು ಅವರು ಪರಮಪವಿತ್ರ ಮತ್ತು ಸನಾತನವಾದಂತಹ ಆಧ್ಯಾತ್ಮಿಕ ಸತ್ಯದ ಶಾಂತಿಜಲದಿಂದ ತೃಪ್ತರನ್ನಾಗಿಸಿದ್ದಾರೆ. ಜಗತ್ತಿದಲ್ಲಿ ಪರಧರ್ಮದ ಕುರಿತು ಸಹಿಷ್ಣುತೆಯನ್ನು ಮತ್ತು ಪ್ರೇಮವನ್ನು ಕೇವಲ ಈ ಭಾರತ ಭೂಮಿಯಲ್ಲಿಯೇ ಅನುಭವಿಸಲು ಸಾಧ್ಯವಿದೆ’ ಎಂದು ನುಡಿದರು.

ಪ್ರವಚನಗಳ ಮೂಲಕ ಪ್ರಸಾರಕಾರ್ಯ

ವಿದೇಶದಲ್ಲಿ ಭಾರತದ ಹೆಸರನ್ನು ಉಜ್ವಲಗೊಳಿಸಿ ಕೊಲ್ಕತ್ತಾಗೆ ಮರಳಿದ ಸ್ವಾಮೀಜಿಯನ್ನು ವಿಜೃಂಭಣೆಯಿಂದ ಸ್ವಾಗತಿಸಲಾಯಿತು. ‘ನನ್ನ ಚಳುವಳಿಯ ಯೋಜನೆ’ ‘ಭಾರತೀಯ ಜೀವನದ ವೇದಾಂತ’ ‘ನಮ್ಮ ಇಂದಿನ ಕರ್ತವ್ಯ’ ‘ಭಾರತೀಯ ಮಹಾಪುರುಷ’ ‘ಭಾರತದ ಭವಿಷ್ಯ’ ಇಂತಹ ವಿಷಯಗಳ ಮೇಲೆ ಅವರು ಪ್ರವಚನಗಳನ್ನು ನೀಡಲು ಪ್ರಾರಂಭಿಸಿದರು. ಸ್ವಾಮಿ ವಿವೇಕಾನಂದರು ವಿದೇಶ ಮತ್ತು ಸ್ವದೇಶಗಳಲ್ಲಿ ನೀಡಿರುವ ಪ್ರವಚನಗಳಲ್ಲಿ ತಮ್ಮ ಅಭಿಪ್ರಾಯವನ್ನು ಸಮಯ ಸಮಯಕ್ಕೆ ಓತಪ್ರೋತವಾಗಿ ಪ್ರಖರವಾದ ಭಾಷೆಯಲ್ಲಿ ಮಂಡಿಸಿದರು. ಸ್ವಾಮಿ ವಿವೇಕಾನಂದರ ಈ ವಿಚಾರಧಾರೆಯಿಂದ ಜನರ ಮೇಲೆ ಬಹುದೊಡ್ಡ ಪ್ರಮಾಣದಲ್ಲಿ ಪರಿಣಾಮವಾಯಿತು. ವಿದೇಶದಲ್ಲಿಯೂ ಅವರು ವೇದಾಂತದ ವಿಶ್ವವಾಣಿಯ ಪ್ರಚಾರವನ್ನು ಮಾಡಿದ್ದರು. ಅದರಿಂದಾಗಿ ಆರ್ಯಧರ್ಮ, ಆರ್ಯಜಾತಿ, ಆರ್ಯಭೂಮಿಗಳಿಗೆ ಜಗತ್ತಿನಲ್ಲಿ ಪ್ರತಿಷ್ಠೆ ಲಭಿಸಿತು.

‘ಪರಹಿತಕ್ಕಾಗಿ ಸರ್ವಸ್ವವನ್ನು ಸಮರ್ಪಿಸುವುದೆಂದರೆ ನಿಜವಾದ ಸನ್ಯಾಸತ್ವ’

ಸ್ವಾಮಿ ವಿವೇಕಾನಂದಭಾರತದ ಆಧ್ಯಾತ್ಮಿಕ ಸಂಸ್ಕೃತಿಯ ಕುರಿತು ಗಾಢವಾದ ಅಭಿಮಾನ ಹೊಂದಿದ್ದರು. ಆದರೆ ಅದರಲ್ಲಿ ನುಸುಳಿರುವ ಅನಿಷ್ಠ ರೂಢಿ, ಪರಂಪರೆ, ಜಾತಿಭೇಧಗಳಂತಹ ಹೀನ ವಿಚಾರಗಳ ಮೇಲೆ ಅವರು ತಮ್ಮ ಭಾಷಣಗಳಲ್ಲಿ ಕಟುವಾಗಿ ಟೀಕಿಸಿದರು ಮತ್ತು ನಿದ್ರಿಸ್ತ ಹಿಂದೂಗಳನ್ನು ಬಡಿದೆಬ್ಬಿಸಿದರು. ಇದೇ ಸಮಯದಲ್ಲಿ ಅವರು ಮಹಿಳೆಯರ ಕುರಿತು ಸಮಾಜದ ನಿಷ್ಕ್ರಿಯತೆಯ ಮೇಲೆ ಪ್ರಹಾರ ಮಾಡಿದರು ಮತ್ತು ತಮ್ಮ ದೇಶಬಾಂಧವರಿಗೆ ಎದ್ದೇಳುವಂತೆ ಕಳಕಳಿಯಿಂದ ಆಹ್ವಾನಿಸಿದರು. ನಿರಾಕಾರ ಸಮಾಧಿಯಲ್ಲಿ ಮಗ್ನರಾಗಿರಬೇಕಾಗಿದ್ದ ಸ್ವಾಮಿ ವಿವೇಕಾನಂದ ಸ್ವತ: ತಮ್ಮ ಸ್ವಾಭಾವಿಕ ಪೃವೃತ್ತಿಯನ್ನು ಬದಿಗಿಟ್ಟು ಅವರು ಜನಸಾಮಾನ್ಯರ ಸುಖ ದು:ಖಗಳ ಐಹಿಕ ವಿಷಯಗಳ ಕುರಿತು ವಿಚಾರವನ್ನು ಮಾಡಿದರು, ಮತ್ತು ಅವರ ಏಳ್ಗೆಗಾಗಿ ಚಡಪಡಿಸಿದರು. ಪರಹಿತಕ್ಕಾಗಿ ಸರ್ವಸ್ವವನ್ನು ಸಮರ್ಪಿಸುವದೆಂದರೆ ನಿಜವಾದ ಸನ್ಯಾಸವೆನ್ನುವುದನ್ನು ಸಿದ್ಧಪಡಿಸಿದರು!

ಆಂಗ್ಲರ ವರ್ಚಸ್ಸು ಇರುವಾಗ ಭಾರತಭೂಮಿ ಮತ್ತು ಹಿಂದೂ ಧರ್ಮ ಇವುಗಳ ಉದ್ದಾರಕ್ಕಾಗಿ ಅಹೋರಾತ್ರಿ ಚಿಂತನೆಯನ್ನು ಮಾಡಿದರು. ಇದಕ್ಕಾಗಿ ತನು, ಮನ, ಧನ ಮತ್ತು ಪ್ರಾಣವನ್ನು ಅರ್ಪಿಸಿದ ಕೆಲವು ರತ್ನಗಳು ಭಾರತ ಭೂಮಿಯಲ್ಲಿ ಆಗಿಹೋದವು. ಅವುಗಳಲ್ಲಿ ದೇದೀಪ್ಯಮಾನವಾದ ರತ್ನವೆಂದರೆ ಸ್ವಾಮಿ ವಿವೇಕಾನಂದ! ಧರ್ಮ ಪ್ರವರ್ತೃಕ, ತತ್ವಚಿಂತಕ, ವಿಚಾರವಂತ ಮತ್ತು ವೇದಾಂತಮಾರ್ಗಿ, ರಾಷ್ಟ್ರ ಸಂತ ಇತ್ಯಾದಿ ವಿವಿಧ ಬಿರುದುಗಳಿಂದ ವಿವೇಕಾನಂದರ ಹೆಸರು ಜಗತ್ತಿನೆಲ್ಲೆಡೆ ಪ್ರಸಿದ್ಧವಾಗಿದೆ. ತುಂಬಿದ ತಾರುಣ್ಯದಲ್ಲಿ ಸನ್ಯಾಸಾಶ್ರಮದ ದೀಕ್ಷೆಯನ್ನು ಪಡೆದುಕೊಂಡು ಹಿಂದೂ ಧರ್ಮದ ಪ್ರಸಾರಕರಾಗಿದ್ದ ತೇಜಸ್ವಿ ಮತ್ತು ಧ್ಯೇಯವಾದಿ ವ್ಯಕ್ತಿತ್ವದ ಇಂದು ಜಯಂತಿಯಾಗಿದೆ. ಈ ದಿನವನ್ನು ‘ಅಂತರರಾಷ್ಟ್ರೀಯ ಯುವ ದಿನ’ವೆಂದು ಆಚರಿಸಲಾಗುತ್ತದೆ. ಸ್ವಾತಂತ್ರ್ಯದ ನಂತರ ಭಾರತಭೂಮಿ ಮತ್ತು ಹಿಂದೂ ಧರ್ಮ ಇವುಗಳ ದುರವಸ್ಥೆಯನ್ನು ತಡೆಯಲು ಇಂದಿಗೂ ಸ್ವಾಮಿ ವಿವೇಕಾನಂದರ ತೇಜಸ್ವಿ ವಿಚಾರಗಳ ಅವಶ್ಯಕತೆಯಿದೆ, ಇದರ ಅರಿವು ಭಾರತೀಯರಿಗೆ ಆಗಬೇಕೆನ್ನುವುದೇ ಈ ಲೇಖನದ ಉದ್ಧೇಶವಾಗಿದೆ.

ಶ್ರೀ. ಚೇತನ