ನೈತಿಕತೆಯನ್ನು ಹೆಚ್ಚಿಸಿ, ಸದಾ ಸತ್ಯವನ್ನೇ ಹೇಳಿ !

ಬಾಲಮಿತ್ರರೇ, ನಿಮಗೆಲ್ಲರಿಗೂ ‘ಸದಾ ಸತ್ಯವನ್ನೇ ಹೇಳಬೇಕು’ ಎಂಬುದು ತಿಳಿದಿದೆ. ಆದರೆ ಮಕ್ಕಳು ತಪ್ಪುಗಳಾದಾಗ ಯಾರಾದರೂ ‘ಬೈದರೇ’ ಎಂಬ ಹೆದರಿಕೆಯಿಂದ ಸುಳ್ಳು ಹೇಳುತ್ತಾರೆ.

ಅ. ಸುಳ್ಳು ಹೇಳುವುದರ ದುಷ್ಪರಿಣಾಮಗಳು

೧. ಸುಳ್ಳು ಹೇಳುವುದರಿಂದ ಪಾಪ ತಗಲುತ್ತದೆ. ತಪ್ಪನ್ನು ಅಡಗಿಸಲು ಸುಳ್ಳು ಹೇಳಿದಾಗ ವ್ಯಕ್ತಿಗೆ ೨ ಪಾಪಗಳ ದಂಡ ತೆರಬೇಕಾಗುತ್ತದೆ. ಅದನ್ನು ಇಂದಲ್ಲ ನಾಳೆಯಾದರೂ ತೆರಬೇಕಾಗುತ್ತದೆ. ಇದರಲ್ಲಿ ಮೊದಲನೇ ಪಾಪವೆಂದರೆ ತಪ್ಪು ಮಾಡುವುದು, ಹಾಗೂ ಎರಡನೇ ಪಾಪವೆಂದರೆ ಆ ತಪ್ಪನ್ನು ಮುಚ್ಚಲು ಸುಳ್ಳು ಹೇಳುವುದು.

೨. ನಾವು ಒಂದು ಸುಳ್ಳನ್ನು ಮುಚ್ಚಲು ಪ್ರಯತ್ನಿಸಿದರೆ ಆ ಒಂದು ಸುಳ್ಳನ್ನು ಮುಚ್ಚಲು ನಮಗೆ ಅನೇಕ ಸುಳ್ಳುಗಳನ್ನು ಹೇಳಬೇಕಾಗುತ್ತದೆ. ಒಮ್ಮೆ ಸುಳ್ಳು ಹೇಳುವ ರೂಢಿಯಾದರೆ ಜನರ ಎದುರು ಸುಳ್ಳು ಹೇಳುವಾಗ ನಾಚಿಕೆಯೂ ಆಗುವುದಿಲ್ಲ. ಇದರಿಂದಾಗಿ ಸುಳ್ಳು ಹೇಳುವ ಮಕ್ಕಳು ಮುಂದೆ ಅಯೋಗ್ಯವಾದ ಮಾರ್ಗದಲ್ಲಿ ಹೋಗಿ ಪಾಪದ ಪಾಲುದಾರರಾಗುತ್ತಾರೆ.

೩. ಮಗುವು ಚಿಕ್ಕ ಚಿಕ್ಕ ವಿಷಯಗಳಿಗೂ ಸುಳ್ಳು ಹೇಳಿದರೆ ಅವನ ಮೇಲೆ ಸುಳ್ಳು ಹೇಳುವ ಸಂಸ್ಕಾರವಾಗುತ್ತದೆ. ಇಂತಹ ಮಕ್ಕಳು ದೊಡ್ಡವರಾದಾಗ ಭ್ರಷ್ಟಾಚಾರ, ಕಳ್ಳತನ ಹಾಗೂ ತಪ್ಪು ಪ್ರವೃತ್ತಿಗಳಿಂದ ಯುಕ್ತರಾಗಬಹುದು ಹಾಗೂ ಅವರು ಸಮಾಜಕ್ಕಾಗಿ ತೊಂದರೆ ನೀಡುವರಾಗುತ್ತಾರೆ.

ಆ. ಸತ್ಯ ಹೇಳುವುದರಿಂದಾಗುವ ಲಾಭಗಳು

೧. ಮಕ್ಕಳೇ, ಸಂಸ್ಕೃತದಲ್ಲಿ ‘ಸತ್ಯವೇವ ಜಯತೆ’ ಎಂಬ ಸುಭಾಷಿತವಿದೆ. ಸತ್ಯದ ಅಂದರೆ ಸತ್ಯವನ್ನು ಹೇಳುವವರ ವಿಜಯವಾಗುತ್ತದೆ. ಸುಳ್ಳು ಹೇಳುವವರಿಗೆ ರಾಕ್ಷಸರು ಸಹಾಯ ಮಾಡಿದರೆ ಸತ್ಯವನ್ನು ಹೇಳುವವರಿಗೆ ಭಗವಂತನು ಸಹಾಯ ಮಾಡುತ್ತಾನೆ. ಸತ್ಯದ ಮಾರ್ಗದಲ್ಲಿ ನಡೆಯುವವರಿಗೆ ಆರಂಭದಲ್ಲಿ ಬಹಳ ಕಷ್ಟಗಳು ಬಂದರೂ ಭಗವಂತನು ಅವರೊಂದಿಗೆ ಇರುವುದರಿಂದ ಕೊನೆಗೆ ಅವರ ವಿಜಯವಾಗುತ್ತದೆ.

೨. ಸತ್ಯದ ಮಾರ್ಗದಲ್ಲಿ ನಡೆಯುವುದರಿಂದ ಈಶ್ವರನ ಸಮರ್ಥನೆ ದೊರೆಯುತ್ತದೆ. ಅನೇಕ ಜನರಿಗೆ ಸತ್ಯವನ್ನು ಹೇಳುವುದು ಕಠಿಣವಾಗಿದೆ ಎಂದು ಅನಿಸಿದರೆ ಕೆಲವರಿಗೆ ಸತ್ಯವನ್ನು ಹೇಳುವುದರಿಂದ ನನ್ನ ಮೇಲೆ ಸಂಕಟ ಬರಬಹುದು ಎಂದು ಅನಿಸುತ್ತದೆ. ಈ ಎರಡೂ ವಿಚಾರಗಳು ತಪ್ಪಾಗಿವೆ. ಸತ್ಯವನ್ನು ಹೇಳುವವರೊಂದಿಗೆ ಭಗವಂತನೇ ಇರುತ್ತಾನೆ. ಮಕ್ಕಳೇ, ಭಗವಂತನ ಕೃಪೆಯನ್ನು ಪಡೆಯಲು ಸಂಪೂರ್ಣ ಜೀವನದಲ್ಲಿ ಸತ್ಯದ ಮಾರ್ಗದಲ್ಲಿಯೇ ನಡೆಯಬೇಕಾಗುತ್ತದೆ.

೩. ಯಾರು ಸತ್ಯದ ಮಾರ್ಗದಲ್ಲಿ ನಡೆಯುತ್ತಾರೆ, ಭಗವಂತನು ಅವರ ರಕ್ಷಣೆಯನ್ನು ಮಾಡುತ್ತಾನೆ. ಇದರ ಉದಾಹರಣೆಯನ್ನು ನಾವು ಒಂದು ಕಥೆಯಿಂದ ತಿಳಿದುಕೊಳ್ಳೋಣ.

ಇದು ಬಹಳ ಹಿಂದಿನ ಸಮಯದ ಮಾತಾಗಿದೆ. ಕಾಡಿನಲ್ಲಿ ಒಂದು ಹಸಿದ ಹುಲಿಗೆ ಒಂದು ಹಸು ಕಾಣಿಸಿತು. ಹುಲಿಯು ಆ ಹಸುವಿನ ಬೇಟೆಯಾಡುವುದರಲ್ಲಿತ್ತು, ಅಷ್ಟರಲ್ಲಿಯೇ ಆ ಹಸುವು ‘ಹುಲಿರಾಯಾ, ನನ್ನ ಕರುವು ಇನ್ನೂ ಎಳೆಕೂಸು, ನಾನು ಅದಕ್ಕೆ ಹಾಲುಣಿಸಿ ಬರುವೆನು, ಆನಂತರ ನೀನು ನನ್ನನ್ನು ತಿನ್ನಬಹುದು’ ಎಂದು ಕೇಳಿತು. ಹುಲಿಗೆ ಹಸುವಿನ ಮಾತಿನ ಮೇಲೆ ವಿಶ್ವಾಸವಾಗಲಿಲ್ಲ ಹಾಗೂ ಅದು ‘ನಿನ್ನ ಮಾತಿನ ಮೇಲೆ ಹೇಗೆ ವಿಶ್ವಾಸ ಮಾಡಲಿ, ನೀನು ಹಾಲುಣಿಸಿ ಬರುವೆಯೆಂದು ಹೇಗೆ ನಂಬಲಿ ?’ ಎಂದು ಕೇಳಿತು. ಆಗ ಹಸುವು ‘ಸತ್ಯವೇ ನನ್ನ ತಾಯಿ-ತಂದೆ, ಸತ್ಯವೇ ನನ್ನ ಬಂಧುಬಳಗ. ನಾನು ಸತ್ಯದ ಆಚರಣೆಯನ್ನು ಮಾಡದಿದ್ದರೆ ಪರಮಾತ್ಮನು ನನ್ನಿಂದ ಪ್ರಸನ್ನನಾಗುವನೇ?’ ಎಂದು ಹೇಳಿತು. ಇದನ್ನು ಕೇಳಿ ಹುಲಿಯು ಅದರ ಮೇಲೆ ವಿಶ್ವಾಸ ಇರಿಸಿ ಅದಕ್ಕೆ ಹೋಗಲು ಬಿಟ್ಟಿತು. ಸ್ವಲ್ಪ ಸಮಯದ ನಂತರ ಕರುವಿಗೆ ಹಾಲುಣಿಸಿ ಹಸುವು ಪುನಃ ಹುಲಿ ಇದ್ದಲ್ಲಿ ಬಂತು. ಬಂದಿರುವ ಹಸುವನ್ನು ನೋಡಿ ಹುಲಿಗೆ ಆಶ್ಚರ್ಯವಾಯಿತು. ಹಾಗೂ ಹಸುವಿನ ಸತ್ಯದ ಆಚರಣೆಯನ್ನು ನೋಡಿ ಹುಲಿಯು ಅದನ್ನು ತಿನ್ನುವ ವಿಚಾರವನ್ನು ಬಿಟ್ಟು ಹಸುವಿಗೆ ಜೀವದಾನ ನೀಡಿತು.

೪. ಸತ್ಯವನ್ನು ಹೇಳುವ ವಿದ್ಯಾರ್ಥಿಗಳು ಶಿಕ್ಷಕರ ಮುದ್ದಿನವರಾಗಿರುತ್ತಾರೆ : ‘ಸತ್ಯಂ ಶಿವಂ ಸುಂದರಂ’ ಅಂದರೆ ಯಾವುದು ಸತ್ಯವಾಗಿದೆ ಅದು ಕಲ್ಯಾಣಕಾರಿ ಶಿವನ ಸ್ವರೂಪವಾಗಿದ್ದು ಸುಂದರವಾಗಿದೆ, ಅಂದರೆ ಸತ್ಯವು ಈಶ್ವರಸ್ವರೂಪವಾಗಿದೆ. ಆದುದರಿಂದ ಮಕ್ಕಳೇ, ತಾವೂ ಸದಾ ಸತ್ಯವನ್ನು ಹೇಳಿ ಶಿಕ್ಷಕರ ಮುದ್ದಿನವರಾಗಿರಿ.

ಮಿತ್ರರೇ, ಈಗ ಸತ್ಯದ ಆಚರಣೆಯನ್ನು ಮಾಡುವ ಸನಾತನದ ಬಾಲಸಾಧಕರ ಉದಾಹರಣೆಗಳನ್ನು ನೋಡೋಣ.

೧. ಒಮ್ಮೆ ಸನಾತನದ ಬಾಲಸಾಧಕಿಯಾದ ಕು. ದೇವಶ್ರೀಗೆ ಯಾರೋ ಆಟವಾಡಿಸಲು ‘ದೇವಶ್ರೀ, ಹೊರಗೆ ಬಾಗಿಲ ಬಳಿ ಹೋಗಿ ನೋಡು, ಯಾರೋ ಹೆಂಗಸು ಬಂದಿದ್ದಾರೆ’ ಎಂದು ಹೇಳಿದರು. ಇದನ್ನು ಕೇಳಿ ದೇವಶ್ರಿಯು ಬಾಗಿಲಿನ ಬಳಿ ಹೋಗಿ ನೋಡಿದಾಗ ಅವಳಿಗೆ ಯಾರೂ ಕಾಣಿಸಲಿಲ್ಲ. ಆಗ ಅವಳು ಬಂದು ‘ಅಲ್ಲಿ ಯಾರೂ ಕಾಣಿಸಲಿಲ್ಲ’ ಎಂದು ಹೇಳಿದಳು. ಹೀಗೆ ೨ ಬಾರಿ ಆದಾಗ ದೇವಶ್ರಿಯು ಆ ವ್ಯಕ್ತಿಗೆ ‘ಹಾಸ್ಯದಲ್ಲಿಯೂ ಸುಳ್ಳು ಹೇಳುವುದು ಯೋಗ್ಯವಲ್ಲ, ನಾನು ನಿಮ್ಮ ಹೆಸರನ್ನು ಗುರುದೇವರಿಗೆ ಹೇಳುತ್ತೇನೆ’ ಎಂದು ಹೇಳಿದಳು. ಈ ಸಾಮಾನ್ಯ ಘಟನೆಯಲ್ಲಿಯೂ ಕು. ದೇವಶ್ರಿಯ ಮನಸ್ಸಿನಲ್ಲಿ ಸತ್ಯವನ್ನು ಹೇಳುವ ಸಂಸ್ಕಾರವು ಎಷ್ಟು ದೃಢವಾಗಿದೆ ಎಂಬುದು ತಿಳಿಯುತ್ತದೆ.

೨. ಸನಾತನ ಸಂಸ್ಥೆಯ ವಾರಣಾಸಿಯ ಬಾಲಸಾಧಕಿಯಾದ ಕು. ಈಶಾಳು ತನ್ನ ಸಹೋದರಿ ನಮಿತಾ ಹಾಗೂ ಅವಳ ಇಬ್ಬರು ಸ್ನೇಹಿತೆಯರೊಂದಿಗೆ ಹಾವು-ಏಣಿ ಆಟವಾಡುತ್ತಿದ್ದಳು. ಆಗ ಓರ್ವ ಗೆಳತಿಯು ಇನ್ನೊಬ್ಬ ಗೆಳತಿಗೆ ಮೋಸ ಮಾಡಲು ಪ್ರಯತ್ನಿಸುತ್ತಿದ್ದಳು. ಆಗ ಈಶಾಳು ಅವಳಿಗೆ ‘ನಾವು ಇತರರಿಗೆ ಮೋಸ ಮಾಡಲು ಪ್ರಯತ್ನಿಸಿದರೆ ನಿಶ್ಚಿತವಾಗಿಯೂ ಸೋಲುತ್ತೇವೆ. ಆದುದರಿಂದ ನಾವು ಯಾವಾಗಲೂ ಸತ್ಯವನ್ನೇ ಹೇಳಬೇಕು’ ಎಂದು ಹೇಳಿದಳು.

ಮಿತ್ರರೇ, ನಾವು ಯಾವಾಗಲೂ ಸತ್ಯನಿಷ್ಠರಾಗಿರಬೇಕು. ಸತ್ಯನಿಷ್ಠ ಅಂದರೆ ಪ್ರಾಮಾಣಿಕರಾಗುವುದು ಆವಶ್ಯಕವಾಗಿದೆ. ಪ್ರಾಮಾಣಿಕ ವ್ಯಕ್ತಿಯು ಎಲ್ಲರಿಗೂ ಇಷ್ಟವಾಗುತ್ತಾನೆ. ಪ್ರಾಮಾಣಿಕತೆಯ ಒಂದು ಉದಾಹರಣೆಯನ್ನು ಕಥೆಯ ಮೂಲಕ ತಿಳಿದುಕೊಳ್ಳೋಣ.

ಈ ಕಥೆಯು ಬಾಲಕ ಶಿವಾಜಿಯ ಶಿಕ್ಷಕರಾದ ದಾದೋಜಿ ಕೊಂಡದೇವರಾದ್ದಾಗಿದೆ. ಶಿವಾಜಿ ಮಹಾರಾಜರು ಚಿಕ್ಕವರಿದ್ದಾಗ ಅವರ ತಂದೆ ಶಹಾಜಿ ಭೋಸಲೆಯವರು ಅವರನ್ನು ಶಿಕ್ಷಣ ಪಡೆಯಲು, ಚಾರಿತ್ರ್ಯವು ಉತ್ತಮವಾಗಲು ದಾದೋಜಿ ಕೊಂಡದೇವರ ಬಳಿ ಪುಣೆಗೆ ಕಳುಹಿಸಿದರು. ದಾದೋಜಿ ಕೊಂಡದೇವರು ಶಿವಾಜಿಯ ಶಿಕ್ಷಕರಾಗಿದ್ದರು. ಒಮ್ಮೆ ದಾದೋಜಿ ಕೊಂಡದೇವರು ಶಹಾಜಿ ರಾಜರ ಮಾವಿನ ತೋಟದಲ್ಲಿ ತಿರುಗಾಡುತ್ತಿದ್ದರು. ಆಗ ದಾದೋಜಿಯವರಿಗೆ ಮರದಲ್ಲಿ ಒಂದು ಹಣ್ಣಾದ ಮಾವಿನ ಹಣ್ಣು ಕಾಣಿಸಿತು. ಅವರು ಆ ಹಣ್ಣನ್ನು ತಮಗಾಗಿ ತೆಗೆದುಕೊಂಡರು. ಅವರಿಗೆ ಹಣ್ಣನ್ನು ತೆಗೆದುಕೊಂಡಾಗ ತಾನು ಯಾರಿಗೂ ಕೇಳದೇ ಹಣ್ಣನ್ನು ಕಿತ್ತಿದ್ದೇನೆ, ಆದುದರಿಂದ ಇದು ಕಳ್ಳತನವಾಯಿತು ಎಂದು ಅನಿಸಿತು. ಆಗ ಅವರು ತಕ್ಷಣ ಶಹಾಜಿ ರಾಜರಿಗೆ ಪತ್ರವನ್ನು ಬರೆದು ‘ನಾನು ಯಾರಲ್ಲಿಯೂ ಕೇಳದೆ ತಮ್ಮ ಮಾವಿನ ತೋಟದಲ್ಲಿ ಬೆಳೆದಿರುವ ಮಾವಿನ ಹಣ್ಣನ್ನು ತೆಗೆದಿದ್ದೇನೆ, ಈ ತಪ್ಪಿಗಾಗಿ ನನಗೆ ಶಿಕ್ಷೆಯಾಗಬೇಕು’ ಎಂದು ಹೆಳಿದರು. ಯಾವ ಕೈಯಿಂದ ಮಾವಿನ ಹಣ್ಣನ್ನು ತೆಗೆದಿದ್ದರೋ ಆ ಕೈಯನ್ನು ಕತ್ತರಿಸುವ ತಯಾರಿಯನ್ನೂ ತೋರಿಸಿದ್ದರು. ಶಹಾಜಿ ರಾಜರು ದಾದೋಜಿಯವರಿಗೆ ಇಷ್ಟೊಂದು ದೊಡ್ಡ ಶಿಕ್ಷೆಯನ್ನು ತೆಗೆದುಕೊಳ್ಳಲು ಬಿಡಲಿಲ್ಲ. ಆದರೂ ದಾದೋಜಿಯವರು ಈ ತಪ್ಪಿನ ಶಿಕ್ಷೆಯೆಂದು ಜೀವನಪೂರ್ತಿ ಬಲಗಡೆಯ ಕೈಯನ್ನು ಕತ್ತರಿಸಿರುವ ಕುರ್ತಾವನ್ನು ಧರಿಸುತ್ತಿದ್ದರು.

ಮಿತ್ರರೇ, ಇದರಿಂದ ನಾವೇನು ಕಲಿತೆವು ? ನಾವು ನೈತಿಕತೆಯನ್ನು ಹೆಚ್ಚಿಸಲು ಸತ್ಯವನ್ನು ಹೇಳುವುದು ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ತಿಳಿದೆವು. ಹಾಗಿದ್ದರೆ ಇಂದಿನಿಂದ ನಾವು ಯಾವುದೇ ಆಟದಲ್ಲಿ ಸುಳ್ಳು ಹೇಳುವುದಿಲ್ಲ. ನಮ್ಮ ಪೂರ್ಣ ಜೀವನದಲ್ಲಿ ಕೇವಲ ಸತ್ಯವನ್ನು ಹೇಳಲು ನಿಶ್ಚಯಿಸೋಣ.

Leave a Comment