ತಂದೆ-ತಾಯಿಗೆ ನಮಸ್ಕಾರ ಮಾಡಲು ನಾಚಿಕೊಳ್ಳಬೇಡಿ !

ಮಾತೃ ದೇವೋ ಭವ | ಪಿತೃ ದೇವೋ ಭವ |

(ತಾಯಿ-ತಂದೆ ದೇವರಿಗೆ ಸಮಾನ), ಎಂಬುದನ್ನು ನಮ್ಮ ಮಹಾನ ಹಿಂದೂ ಸಂಸ್ಕೃತಿಯು ಕಲಿಸುತ್ತದೆ. 'ತಾಯಿ-ತಂದೆ ಮತ್ತು ಗುರು ಇವರ ಸೇವೆ ಮಾಡುವುದು, ಇದು ಎಲ್ಲಕ್ಕಿಂತ ಉತ್ತಮ ತಪಶ್ಚರ್ಯೆಯಾಗಿದೆ' ಎಂದು 'ಮನುಸ್ಮೃತಿ' ಗ್ರಂಥದಲ್ಲಿ ಹೇಳಲಾಗಿದೆ. ಪುಂಡಲೀಕನ ಈ ತಪಶ್ಚರ್ಯೆಯಿಂದಲೇ ವಿಠ್ಠಲನು ಅವನ ಮೇಲೆ ಪ್ರಸನ್ನನಾಗಿದ್ದನು. ಮಕ್ಕಳೇ, ಪುಂಡಲೀಕನ ಆದರ್ಶವನ್ನು ಮುಂದಿಟ್ಟು, ನಮ್ಮ ತಂದೆ ತಾಯಂದಿರ ಆಜ್ಞಾಪಾಲನೆಯನ್ನು ಮನಸಾರೆ ಮಾಡುವುದು, ಮತ್ತು ಅವರಲ್ಲಿ ಲೀನಭಾವವನ್ನಿಟ್ಟು ಸೇವೆ-ಶುಶ್ರೂಷೆ ಮಾಡುವುದು, ನಮ್ಮ ಕರ್ತವ್ಯವೇ ಆಗಿದೆ.

ತುಷ್ಟಾಯಾಂ ಮಾತರಿ ಶಿವೇ ತುಷ್ಟೆ ಪಿತರಿ ಪಾರ್ವತಿ |
ತವ ಪ್ರೀತಿರ್ಭವೇದ್ದೇವಿ ಪರಬ್ರಹ್ಮ ಪ್ರಸೀದತಿ || ೨೬||

-ಮಹಾನಿರ್ವಾಣತಂತ್ರ

ಭಾವಾರ್ಥ : ತಂದೆ-ತಾಯಿ ಸಂತುಷ್ಟರಾದರೆ ಪರಮೇಶ್ವರನೂ ಪ್ರಸನ್ನನಾಗುತ್ತಾನೆ. ಆದ್ದರಿಂದ ಮಕ್ಕಳೇ, ತಂದೆ-ತಾಯಿ ಹೇಳಿದ್ದನ್ನು ಮನಸಾರೆ ಕೇಳಿ. ಅವರ ಕಾರ್ಯದಲ್ಲಿ ಅವರಿಗೆ ಸಹಾಯ ಮಾಡಿ. ಅವರನ್ನು ದೇವರ ಸಮಾನರೆಂದು ತಿಳಿದು ಅವರ ಸೇವೆ ಮಾಡಿರಿ.

ಪ್ರತಿಯೊಬ್ಬ ಮಗುವು ತಂದೆ-ತಾಯಿಗೆ ಕೃತಜ್ಞರಾಗಿರಬೇಕು. ನಾವು ಯಾವುದೇ ಸಾಮಾನ್ಯ ವ್ಯಕ್ತಿಯ ಮುಂದೆ ವಿನಮ್ರರಾಗಿರಬೇಕು. ನಾವು ಇತರರ ಜೊತೆ ಮಾನಸನ್ಮಾನದಿಂದಲೇ ವರ್ತಿಸಬೇ ಕು. ಪ್ರತಿಯೊಬ್ಬ ತಂದೆ-ತಾಯಂದಿರು ಅನೇಕ ಕಷ್ಟಗಳನ್ನು ಸಹಿಸಿರುತ್ತಾರೆ ಮತ್ತು ತ್ಯಾಗಗಳನ್ನೂ ಮಾಡಿರುತ್ತಾರೆ. ಒಂದು ವೇಳೆ ಶಿಕ್ಷಕರು ಅಥವಾ ತಂದೆ ತಾಯಂದಿರು ಮಕ್ಕಳಿಗೆ ಶಿಕ್ಷೆ ನೀಡಿದರೂ ಕೂಡ, ಮಕ್ಕಳು ಅದರ ಬಗ್ಗೆ ಕೃತಜ್ನತೆ ವ್ಯಕ್ತಪಡಿಸಬೇಕು. ಅವರು ನಮ್ಮ ಮೇಲೆ ಏಕೆ ಸಿಟ್ಟು ಮಾಡಿದರು? ಎಂಬುದರ ಬಗ್ಗೆ ಮಕ್ಕಳು ವಿಚಾರ ಮಾಡಬೇಕು. 'ನಿಜವಾಗಿಯೂ ನಮ್ಮಿಂದ ಏನಾದರೂ ತಪ್ಪು ಆಗಿರಬೇಕು', ಎಂಬ ವಿಚಾರವನ್ನು ಅವನು ಮಾಡಲು ತಿಳಿವಳಿಕೆಯನ್ನು ಉಪಯೋಗಿಸಬೇಕು. ಏಕೆಂದರೆ ಸಿಟ್ಟು ಮಾಡುವುದರಿಂದ ತಂದೆ-ತಾಯಿ ಅಥವಾ ಶಿಕ್ಷಕರಿಗೆ ವೈಯಕ್ತಿಕವಾಗಿ ಎನೂ ಲಾಭ ಆಗುವುದಿಲ್ಲ. 'ನಮ್ಮ ಮಕ್ಕಳು ಸುಧಾರಿಸಬೇಕು, ಅವರ ಆಚರಣೆಯು ಆದರ್ಶವಾಗಿರಬೇಕು ಹಾಗೂ ಜನರು ಅವರನ್ನು ಒಳ್ಳೆಯವರು ಎಂದು ಮೆಚ್ಚಬೇಕು' ಎಂಬ ವಿಚಾರವನ್ನೇ ಅವರು ಮನದಲ್ಲಿಟ್ಟು ಸಿಟ್ಟು ಮಾಡುತ್ತಾರೆ. ಬೇರೆಯವರ ಮಕ್ಕಳ ಮೇಲೆ ತಂದೆ-ತಾಯಂದಿರು ಸಿಟ್ಟು ಮಾಡುವುದಿಲ್ಲ. ತಮ್ಮ ಮಕ್ಕಳ ಮೇಲಿರುವ ಪ್ರೀತಿಯಿಂದಲೇ ಈ ಸಿಟ್ಟು ವ್ಯಕ್ತವಾಗುತ್ತದೆ. ಆದ್ದರಿಂದ ಮಕ್ಕಳು ಈ ಬಗ್ಗೆ ಮನದಲ್ಲಿ ಸಿಟ್ಟು ಇಟ್ಟುಕೊಳ್ಳದೆ ತಂದೆ ತಾಯಂದಿರ, ಶಿಕ್ಷಕರ ಪ್ರತಿ ಆಭಾರವನ್ನು ವ್ಯಕ್ತಪಡಿಸಬೇಕು.

ಈ ಜಗತ್ತಿನಲ್ಲಿ ವಿನಾಮೂಲ್ಯ ಯಾವುದೇ ವಸ್ತು ಸಿಗುವಂತಿಲ್ಲ. ನಮ್ಮ ತಂದೆ ತಾಯಂದಿರು ನಮಗೆ ರುಚಿಕರ ತಿಂಡಿ-ತಿನಿಸುಗಳು, ಆಕರ್ಷಕ ಆಟಿಕೆಗಳು, ವೈವಿಧ್ಯಮಯ ವಸ್ತ್ರ ಇತ್ಯಾದಿಗಳನ್ನು ಪ್ರೀತಿಯಿಂದ ಕೊಡುತ್ತಾರೆ. ಅದಕ್ಕೆ ಬದಲಾಗಿ ಮಕ್ಕಳು ಅವರಿಗೆ ಏನು ಕೊಡುತ್ತಾರೆ? ಅವರಿಗೆ ಹಣವನ್ನು ನೀಡಲು ಸಾಧ್ಯವಿಲ್ಲ. ಕನಿಷ್ಠಪಕ್ಷ ಮಕ್ಕಳು ತಂದೆ ತಾಯಂದಿರ ಆದರವನ್ನಾದರೂ ನೀಡಬೇಕು. ಮನೆಯಲ್ಲಿರುವ ಹಿರಿಯ ವ್ಯಕ್ತಿಗಳಿಗೆ ಪ್ರತಿದಿನ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳಬೇಕು. ಯಾರಾದರೂ ನಮಗೆ ಏನಾದರು ಕೊಟ್ಟರೆ, ನಾವು ಅವರಿಗೆ ಧನ್ಯವಾದವನ್ನು ಹೇಳುತ್ತೇವೆ. ಆದರಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುವ ಪರಂಪರೆಯ ಭಾರತೀಯ ಪದ್ಧತಿ ಎಂದರೆ, ತಲೆಬಾಗಿ ನಮಸ್ಕಾರ ಮಾಡುವುದು. ಕೆಲವು ಮಕ್ಕಳಿಗೆ ತಂದೆ ತಾಯಂದಿರ ಕಾಲು ಮುಗಿಯಲು ನಾಚಿಕೆ ಆಗುತ್ತದೆ. ನಮ್ಮ ತಾಯಿ ನಮ್ಮ ಬಾಲ್ಯದಲ್ಲಿ ನಮ್ಮ ಮಲ ಮೂತ್ರ ಸ್ವಚ್ಛ ಮಾಡುವುದು, ಬಟ್ಟೆ ತೊಳೆಯುವುದು, ನಮಗೆ ಇಷ್ಟವಾದ ಅಡಿಗೆ ಮಾಡುವುದು, ಊಟ ಮಾಡಿಸುವುದು ಇದಕ್ಕಾಗಿ ಅಪರಿಮಿತವಾಗಿ ಕೆಳಗೆ ಬಗ್ಗುತ್ತಾಳೆ, ಓಡಾಡುತ್ತಾಳೆ. ಮಕ್ಕಳು ಮಾಡಿದ ತಪ್ಪಿಗಾಗಿ ಕೆಲವೊಮ್ಮೆ ತಂದೆ-ತಾಯಂದಿರು ನಾಚಿಕೆಯಿಂದ ತಲೆ ಕೆಳಗೆ ಮಾಡಬೇಕಾಗುತ್ತದೆ. ಇಂತಹ ತಂದೆ ತಾಯಂದಿರ ಋಣವನ್ನು ಮರುಪಾವತಿಸಲು ಸಾಧ್ಯವೇ ಇಲ್ಲ! ಆದುದರಿಂದ ಪ್ರತಿದಿನ ತಂದೆ ತಾಯಿಗೆ ತಲೆಬಾಗಿ ನಮಸ್ಕಾರವನ್ನು ಮಾಡಲು ನಾಚಿಕೊಳ್ಳಬೇಡಿ.

Leave a Comment