‘ದೇಶಬಂಧು’ ಚಿತ್ತರಂಜನ ದಾಸ್

ಕಲ್ಕತ್ತ ಉಚ್ಚ ನ್ಯಾಯಾಲಯದ ಖ್ಯಾತ ವಕೀಲರಾಗಿದ್ದ ಭುವನ ಮೋಹನದಾಸರ ಮಗ ಚಿತ್ತರಂಜನ ಭಾರತದ ಗಣ್ಯ ರಾಷ್ಟ್ರೀಯ ನಾಯಕರಲ್ಲಿ ಒಬ್ಬರು. ಜನನ 1870ರ ನವೆಂಬರ್ 5ರಂದು. ದಾಸ್ ಮನೆತನದವರು ಬ್ರಹ್ಮಸಮಾಜದವರು. ಭುವನಮೋಹನದಾಸರು ಬೌದ್ಧಿಕ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲೂ ಆಸಕ್ತರಾಗಿದ್ದರು. ತುಂಬಾ ಧಾರಾಳ ಪ್ರವೃತ್ತಿಯ ಅವರು ತಮ್ಮ ಕೊನೆಗಾಲದಲ್ಲಿ ದಿವಾಳಿಯಾದರು. ಚಿತ್ತರಂಜನದಾಸರ ರಾಷ್ಟ್ರೀಯ ಭಾವನೆಗಳಿಗೆ ಸ್ಫೂರ್ತಿ ನೀಡಿದವರು ಅವರ ತಂದೆ.

ಪಾಶ್ಚಾತ್ಯ ಸಾಹಿತ್ಯ, ಮತಧರ್ಮ, ದರ್ಶನ ಮುಂತಾದವುಗಳಲ್ಲಿ ಆಸಕ್ತಿ ತಳೆದಿದ್ದ ಚಿತ್ತ ರಂಜನ ದಾಸರು ಬ್ರಹ್ಮಸಮಾಜ ಕುರಿತ ಗ್ರಂಥಗಳನ್ನೂ ವೈಷ್ಣವ ಸಾಹಿತ್ಯವನ್ನೂ ರಾಮಕೃಷ್ಣ ಪರಮಹಂಸರ ಬೋಧನೆಗಳನ್ನೂ ವಿವೇಕಾನಂದರ ಕೃತಿಗಳನ್ನೂ ವಿಶೇಷವಾಗಿ ಅಧ್ಯಯನ ಮಾಡಿದರು. ಚಿತ್ತ ರಂಜನ ದಾಸರ ಮೇಲೆ ರಾಜಕೀಯವಾಗಿ ಪ್ರಭಾವ ಬೀರಿದವರು ಬಂಗಾಲಿ ಕಾದಂಬರಿಕಾರರಾದ ಬಂಕಿಮ್ ಚಂದ್ರ. ಅವರು ಸಾರ್ವಜನಿಕ ಸೇವೆ ಹಾಗೂ ಭಾಷಣ ಕಲೆಯಲ್ಲಿ ತರಬೇತು ಪಡೆದದ್ದು ಸುರೇಂದ್ರನಾಥ ಬ್ಯಾನರ್ಜಿಯವರಿಂದ.

ಕ್ರಾಂತಿಕಾರಿಗಳಿಗೆ ಮಾಡಿದ ಸಹಾಯ

1885ರಲ್ಲಿ ಚಿತ್ತರಂಜನದಾಸರು ಖಾಸಗಿಯಾಗಿ ಪರೀಕ್ಷೆಗೆ ಕುಳಿತು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರೆಸಿಡೆನ್ಸಿ ಕಾಲೇಜು ಸೇರಿ ಪದವಿ ಗಳಿಸಿದರು (1890). ಅನಂತರ ಇಂಗ್ಲೆಂಡಿಗೆ ತೆರಳಿ ಅಲ್ಲಿಯೇ 1894ರಲ್ಲಿ ಬ್ಯಾರಿಸ್ಟರ್ ಆದರು. ದಾಸರು 1894ರಲ್ಲಿ ಭಾರತಕ್ಕೆ ಹಿಂದಿರುಗಿ ಕಲ್ಕತ್ತ ಉಚ್ಚ ನ್ಯಾಯಾಲಯದಲ್ಲಿ ವಕೀಲಿ ಆರಂಭಿಸಿದರು. 1907ರಲ್ಲಿ ಒಂದು ಮೊಕದ್ದಮೆಯಲ್ಲಿ ಚಿತ್ತ ರಂಜನ ದಾಸರ ಸಾಮರ್ಥ್ಯ ಪ್ರಕಟವಾಯಿತು. ಆದರೆ ಆ ಮೊಕದ್ದಮೆಯಲ್ಲಿ ಅವರು ಜಯ ಗಳಿಸಲಿಲ್ಲ. ಆದರೆ ಮರುವರ್ಷ ಆಲಿಪುರ ಬಾಂಬ್ ಮೊಕದ್ದಮೆಯಲ್ಲಿ ಆರೋಪಿಯಾಗಿದ್ದ ಅರವಿಂದ ಘೋಷರ (ನಂತರದ ಶ್ರೀ ಅರೊಬಿಂದೊ) ಪರವಾಗಿ ಅವರು ಮಾಡಿದ ವಾದ ಯಶಸ್ವಿಯಾಯಿತು. ರಾಜಕೀಯ ಕ್ಷೇತ್ರದಲ್ಲೂ ವಕೀಲರ ವಲಯಗಳಲ್ಲೂ ಚಿತ್ತರಂಜನ್ ದಾಸರ ಕೀರ್ತಿ ಬೆಳೆಯಿತು. 1910-11ರ ಢಾಕಾ ಪಿತೂರಿ ಮೊಕದ್ದಮೆಯಲ್ಲೂ ಚಿತ್ತ ರಂಜನ್ ದಾಸರು ಹೆಸರು ಗಳಿಸಿದರು. 1913ರ ವೇಳೆಗೆ ವೃತ್ತಿಯಲ್ಲಿ ಅವರು ಉನ್ನತರೆನಿಸಿದ್ದರು. ಅವರ ತಂದೆಯೂ ಮಾಡಿದ್ದ ಸಾಲ, ಅವರೂ ಮಾಡಿದ್ದ ಸಾಲಗಳನ್ನು ಅವರು ಸಂಪೂರ್ಣವಾಗಿ ತೀರಿಸಿದರು. ಕಾನೂನಿನ ಪ್ರಕಾರ ಪಾವತಿಮಾಡಬೇಕಾಗಿರದಿದ್ದ ಈ ಋಣಿಗಳನ್ನು ಪಾವತಿ ಮಾಡಿದ್ದು ಅವರ ಪ್ರಾಮಾಣಿಕತೆಗೆ ನಿದರ್ಶನ. ಇದರಿಂದ ಚಿತ್ತರಂಜನ್ ದಾಸರು ರಾಷ್ಟ್ರಾದ್ಯಂತ ಮೆಚ್ಚುಗೆ ಗಳಿಸಿದರು.

ಚಿತ್ತರಂಜನ ದಾಸರು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ರಾಷ್ಟ್ರಪ್ರೇಮಿಯಾಗಿದ್ದರು. ಅನುಶೀಲನ ಸಮಿತಿ ಎಂಬ ಕ್ರಾಂತಿಕಾರಿ ಸಂಸ್ಥೆಯೊಂದಿಗೆ ಅವರು ಸಂಬಂಧ ಇಟ್ಟುಕೊಂಡಿದ್ದರು. ಬಂಗಾಲ ವಿಭಜನೆಯ ವಿರುದ್ಧ ಹೋರಾಡಿದರು. ಸ್ವದೇಶಿ ಚಳುವಳಿಯಲ್ಲಿ ಪಾಲ್ಗೊಂಡರು. ಅವರು ಅಖಿಲ ಭಾರತ ರಾಜಕೀಯ ಚಳವಳಿ ಸೇರಿದ್ದು 1917ರಲ್ಲಿ. ರಾಜಕಾರಣ ಅವರಿಗೆ ಧರ್ಮವಾಗಿತ್ತು. ಪಾಶ್ಚಾತ್ಯರ ಅನುಕರಣೆಯನ್ನು ಅವರು ಒಪ್ಪುತ್ತಿರಲಿಲ್ಲ. 1918ರಲ್ಲಿ ಮುಂಬಯಿಯಲ್ಲಿ ನಡೆದ ಕಾಂಗ್ರೆಸ್ ವಿಶೇಷಾಧಿವೇಶನದಲ್ಲೂ ದೆಹಲಿಯಲ್ಲಿ ನಡೆದ ವಾರ್ಷಿಕಾಧಿವೇಶನದಲ್ಲೂ ಅವರು ಮಾಂಟೆಗೂ- ಚೆಮ್ಸ್‍ಫರ್ಡ್ ಸುಧಾರಣೆಗಳನ್ನು ವಿರೋಧಿಸಿದರು. ಅವರು ಪ್ರಾಂತೀಯ ಸ್ವಾಯತ್ತತೆಯನ್ನು ಪ್ರತಿಪಾದಿಸಿದರು. 1919ರಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಕುರಿತ ವಿಚಾರಣಾ ಸಮಿತಿಯ ಸದಸ್ಯರಾಗಿದ್ದರು.

ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕುವುದು !

1920ರಲ್ಲಿ ಗಾಂಧೀಜಿಯ ಅಸಹಕಾರ ಚಳವಳಿಯನ್ನು ಚಿತ್ತರಂಜನ್ ದಾಸರು ಒಪ್ಪಲಿಲ್ಲ. ಆದರೆ ಮೂರು ತಿಂಗಳುಗಳ ಅನಂತರ ಅದನ್ನೊಪ್ಪಿಕೊಂಡು ಗಾಂಧೀಜಿಯ ನಾಯಕತ್ವದಲ್ಲಿ ಚಳವಳಿಗೆ ಸಿದ್ಧರಾದರು. ಒಳ್ಳೆಯ ಸಂಪಾದನೆಯಿದ್ದ ವಕೀಲಿಯನ್ನು ಒಮ್ಮೆಗೇ ತ್ಯಜಿಸಿದರು. ಚಿತ್ತರಂಜನರ ಈ ಮಹಾತ್ಯಾಗಕ್ಕೆ ದೇಶವೇ ಮಾರುಹೋಯಿತು. 1921ರಲ್ಲಿ ಅವರನ್ನು ಕಾಂಗ್ರೆಸ್ ಅಧಿವೇಶನಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಬ್ರಿಟನ್ನಿನ ವೇಲ್ಸ್ ರಾಜಕುಮಾರನ ಭಾರತ ಭೇಟಿಯನ್ನು ಬಹಿಷ್ಕರಿಸಿದ್ದಕ್ಕಾಗಿ ಚಿತ್ತರಂಜನದಾಸರೂ ಅವರ ಪತ್ನಿ ಬಸಂತಿ ದೇವಿಯೂ ಮಗ ಚಿರರಂಜನರೂ ಸೋದರಿ ಊರ್ಮಿಳಾದೇವಿಯೂ ಬಂಧನಕ್ಕೆ ಒಳಗಾದರು. ಅವರು ಆರು ತಿಂಗಳ ಕಾರಾಗೃಹವಾಸ ಅನುಭವಿಸಬೇಕಾಯಿತು.

ಸ್ವರಾಜ್ಯ ಪಕ್ಷದ ಸ್ಥಾಪನೆ

1922ರಲ್ಲಿ ಚಿತ್ತರಂಜನ ದಾಸರು ಗಯಾ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾದರು. ಚೌರಿ ಚೌರಾದ ಹಿಂಸಾತ್ಮಕ ಘಟನೆಯಿಂದ ನೊಂದು ಗಾಂಧಿಯವರು ಅಸಹಕಾರ ಚಳುವಳಿಯನ್ನು ಹಿಂದೆಗೆಕೊಂಡಾಗ ದೇಶದಲ್ಲೆಲ್ಲ ನಿರಾಸೆ ಹಬ್ಬಿತ್ತು. ಆ ಸಮಯದಲ್ಲಿ ಚಿತ್ತ ರಂಜನ ದಾಸರು ಭಾರತೀಯ ರಾಜಕಾರಣಕ್ಕೆ ಹೊಸ ತಿರುವೊಂದನ್ನು ನೀಡಲು ಯತ್ನಿಸಿದರು. ವಿಧಾನ ಸಭೆಗಳನ್ನು ಪ್ರವೇಶಿಸಿ ಅಲ್ಲಿಂದ ವಿರೋಧ ವ್ಯಕ್ತಪಡಿಸಬೇಕೆಂದು ಸೂಚಿಸಿದರು. ಆದರೆ ಗಾಂಧಿಯವರು ಇದನ್ನು ಒಪ್ಪಲಿಲ್ಲ. ಗಯಾ ಅಧಿವೇಶನದಲ್ಲಿ ಚಿತ್ತ ರಂಜನ ದಾಸರ ಸೂಚನೆ ಬಿದ್ದುಹೋಯಿತು. ಅವರು ಅಧ್ಯಕ್ಷತೆಗೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸಂಸ್ಥೆಯೊಳಗೆ ಸ್ವರಾಜ್ಯ ಪಕ್ಷವನ್ನು ಕಟ್ಟಿದರು. ಮೋತಿಲಾಲ್ ನೆಹರೂ, ಅಲಿ ಸಹೋದರರು, ಅಜ್ಮಲ್ ಖಾನ್, ವಿ.ಜೆ. ಪಟೇಲ್ ಮುಂತಾದವರು ಚಿತ್ತ ರಂಜನ ದಾಸರೊಂದಿಗೆ ಸೇರಿಕೊಂಡರು. 1923ರಲ್ಲಿ ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಸಮ್ಮತಿ ನೀಡಿತು. 1923ರಲ್ಲಿ ನಡೆದ ಚುನಾವಣೆಗಳಲ್ಲಿ ಸ್ವರಾಜ್ಯ ಪಕ್ಷದವರೂ ಬಂಗಾಲದಲ್ಲಿ ಮಹಾ ವಿಜಯಗಳಿಸಿದರು. ಸಭೆಯಲ್ಲಿ ಚಿತ್ತ ರಂಜನ ದಾಸರ ವಿರೋಧದಿಂದಾಗಿ ಸರ್ಕಾರಕ್ಕೆ ಸೋಲಾಯಿತು. ಅದು ಮಂಡಿಸಿದ ಆಯ-ವ್ಯಯಕ್ಕೆ ಒಪ್ಪಿಗೆ ದೊರಕಲಿಲ್ಲ. 1924ರಲ್ಲಿ ಸ್ವರಾಜ್ಯ ಪಕ್ಷದವರು ಕಲ್ಕತ್ತ ಕಾರ್ಪೊರೇಷನ್‍ನಲ್ಲಿ ಸ್ಥಾನ ಗಳಿಸಿದರು. ಚಿತ್ತ ರಂಜನ ದಾಸರು ಮೇಯರ್ ಆಗಿ ಒಳ್ಳೆಯ ಸಂಪ್ರದಾಯಗಳನ್ನು ಸ್ಥಾಪಿಸಿದರು. 1923 ಮತ್ತು 1924ರಲ್ಲಿ ಅವರು ಅಖಿಲ ಭಾರತ ಕಾರ್ಮಿಕ ಸಂಘ ಕಾಂಗ್ರೆಸಿನ ಅಧ್ಯಕ್ಷರೂ 1925ರಲ್ಲಿ ಬಂಗಾಲ ಪ್ರಾಂತೀಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.

ಮಾತೃ ಸಂಸ್ಕೃತಿಯ ಪ್ರೇಮಿ ದೇಶಬಂಧು

ದೇಶೀಯ ಭಾಷಾ ಮಾಧ್ಯಮದ ಮೂಲಕ ರಾಷ್ಟ್ರೀಯ ಶಿಕ್ಷಣ ದೊರಕಬೇಕೆಂದು ಅವರು ಹೇಳುತ್ತಿದ್ದರು. ಪಾಶ್ಚಾತ್ಯ ಶಿಕ್ಷಣದಿಂದ ಆತ್ಮಹೀನ ಸಂಸ್ಕೃತಿಯ ಬೆಳವಣಿಗೆಯಾಗುತ್ತಿದೆಯೆಂದು ಅವರಿಗೆ ದುಃಖವಾಗಿತ್ತು.

ಚಿತ್ತ ರಂಜನ ದಾಸರು ಒಳ್ಳೆಯ ಪ್ರಬಂಧಕಾರರೂ ಕವಿಯೂ ಆಗಿದ್ದರು. ಚಿತ್ತ ರಂಜನ ದಾಸರು ತಮ್ಮ ಆಸ್ತಿಯನ್ನೆಲ್ಲ ದೇಶಸೇವೆಗಾಗಿ ದತ್ತಿಯಾಗಿ ಕೊಟ್ಟರು. 1925ರ ಜೂನ್ 16 ರಂದು ಚಿತ್ತ ರಂಜನ ದಾಸರು ಡಾರ್ಜಿಲಿಂಗಿನಲ್ಲಿ ಅನಾರೋಗ್ಯದಿಂದ ಅಸುನೀಗಿದರು. ತಮ್ಮ ನೆಚ್ಚಿನ ದೇಶಬಂಧು ಅಂತಿಮ ಯಾತ್ರೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಿ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಕೃಪೆ : ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

Leave a Comment