ದಶರಥ ಕೌಸಲ್ಯಾ ವಿವಾಹ

ಒಮ್ಮೆ ನಾರದರು ಲಂಕೆಯ ರಾಜನಾದ ರಾವಣನನ್ನು ಭೇಟಿಯಾಗಲು ಹೋಗಿದ್ದರು. ಆಗ ರಾವಣನು ಬಹಳ ಅಹಂಕಾರದಿಂದ ತನ್ನ ಸಾಮರ್ಥ್ಯದ ಬಗ್ಗೆ ವರ್ಣಿಸಿದನು; ಆದರೆ ನಾರದರು ಅವನಿಗೆ ನಿನ್ನ ಮರಣವು ಸೂರ್ಯವಂಶದ ದಶರಥ – ಕೌಸಲ್ಯಾ ಇವರ ಪುತ್ರ ರಾಮಚಂದ್ರನ ಕೈಯಿಂದಲೇ ಆಗುವುದು ಎಂದು ಹೇಳಿ ಎಚ್ಚರಿಸಿದ್ದರು.

ರಾವಣನು ಭವಿಷ್ಯದ ಸತ್ಯವನ್ನು ತಿಳಿಯಲು ಬ್ರಹ್ಮದೇವರನ್ನು ಭೇಟಿಯಾದನು. ಅವರು ’ಇದು ಸತ್ಯವಿದೆ, ಇಂದಿನಿಂದ ಮೂರನೆಯ ದಿನಕ್ಕೆ ಕೋಸಲ ದೇಶದ ರಾಜಧಾನಿಯಲ್ಲಿ ದಶರಥ – ಕೌಸಲ್ಯಾರ ವಿವಾಹವು ನಡೆಯಲಿದೆ’ ಎಂದು ಹೇಳಿದರು. ಈ ವಿವಾಹವು ನೆಡಯಬಾರದೆಂದು ರಾವಣನು ಸೈನ್ಯವನ್ನು ಕಳುಹಿಸಿ ಕೌಸಲ್ಯೆಯನ್ನು ಅಪಹರಿಸಿ ತಂದನು. ಆದರೆ ಸ್ತ್ರೀ ಹತ್ಯೆಯ ಪಾಪ ಬೇಡವೆಂದು ಅವಳನ್ನು ಒಂದು ಪೆಟ್ಟಿಗೆಯಲ್ಲಿ ಇಟ್ಟು ಸಮುದ್ರದಲ್ಲಿ ಬಿಟ್ಟನು. ಆ ಪೆಟ್ಟಿಗೆಗಾಗಿ ಎರಡು ಮೀನುಗಳಲ್ಲಿ ಜಗಳ ಪ್ರಾರಂಭವಾಯಿತು ಹಾಗೂ ಯುದ್ಧದಲ್ಲಿ ಗೆದ್ದವರು ಆ ಪೆಟ್ಟಿಗೆಯ ಮಾಲಿಕರು ಎಂಬುದಾಗಿ ನಿರ್ಧರಿಸಲಾಯಿತು. ಅವರು ಆ ಪೆಟ್ಟಿಗೆಯನ್ನು ತಂದು ಒಂದು ದ್ವೀಪದಲ್ಲಿ ಇಟ್ಟರು.

ಇಲ್ಲಿ ರಾಜಪುತ್ರ ದಶರಥನು ಕೋಸಲ ದೇಶಕ್ಕೆ ಹೋಗಲು ಆಪ್ತೇಷ್ಟರು ಹಾಗೂ ಸೈನ್ಯದೊಂದಿಗೆ ಸಮುದ್ರಮಾರ್ಗದಿಂದ ಹಡಗಿನಲ್ಲಿ ಹೊರಟನು. ಈ ಬಗ್ಗೆ ತಿಳಿಯುತ್ತಲೇ ರಾವಣನು ಆಕಾಶದಿಂದ ಶಸ್ತ್ರವೃಷ್ಟಿ ಮಾಡಿಸಿ ಹಡಗುಗಳನ್ನು ಒಡೆದು ನೀರಿನಲ್ಲಿ ಮುಳುಗಿಸಿದನು. ಒಂದು ಹಲಗೆಯ ಆಧಾರದಿಂದ ದಶರಥನು ಈಜುತ್ತ ಒಂದು ದ್ವೀಪವನ್ನು ತಲುಪಿದನು. ಅಲ್ಲಿ ಅವನು ಆ ಪೆಟ್ಟಿಗೆಯನ್ನು ನೋಡಿದನು. ಅದನ್ನು ತೆರೆದಾಗ ಅದರಲ್ಲಿ ಅವನಿಗೆ ಕೌಸಲ್ಯೆ ಕಾಣಿಸಿದಳು. ಇಬ್ಬರೂ ಪರಸ್ಪರ ನಡೆದ ಸಂಗತಿಯನ್ನು ವಿವರಿಸಿದರು. ಇಬ್ಬರೂ ಆಕಸ್ಮಿಕವಾಗಿ ವಿವಾಹವು ನಿಶ್ಚಿತವಾದ ದಿನವೇ ಭೇಟಿಯಾದರು. ಅತ್ಯಂತ ಆನಂದದಿಂದ ಪಂಚಮಹಾಭೂತಗಳ ಸಾಕ್ಷಿಯಿಂದ ಇಬ್ಬರೂ ವಿವಾಹ ಮಾಡಿಕೊಂಡರು.

ದಿನವೆಲ್ಲ ದ್ವೀಪದಲ್ಲಿ ತಿರುಗಾಡುವುದು ಹಾಗೂ ರಾತ್ರಿ ಪೆಟ್ಟಿಗೆಯಲ್ಲಿ ಇರುವುದು ಹೀಗೆ ಅವರ ದಿನಕ್ರಮ ಪ್ರಾರಂಭವಾಯಿತು. ಒಂದು ರಾತ್ರಿ ಯುದ್ಧದಲ್ಲಿ ಗೆದ್ದ ಮೀನು ಪೆಟ್ಟಿಗೆ ಬಳಿ ಬಂದು ಪೆಟ್ಟಿಗೆಯನ್ನು ಅದರ ದವಡೆಯಲ್ಲಿ ಹಿಡಿದು ಲಂಕೆಯ ತೀರದಲ್ಲಿ ತಂದು ಇಟ್ಟಿತು.

ರಾವಣನು ಬ್ರಹ್ಮದೇವರ ವಾಣಿಯು ಅಸತ್ಯವಾಯಿತೆಂದು ಅವರಿಗೆ ತಿಳಿಸಬೇಕು ಎಂದು ದೊಡ್ಡ ಪೌರುಷದಿಂದ ಬ್ರಹ್ಮದೇವರ ಬಳಿ ಹೋದನು. ಆದರೆ ಅವನಿಗೆ ದಶರಥ ಕೌಸಲ್ಯೆಯರ ವಿವಾಹ ಆಗಿರುವುದರ ಬಗ್ಗೆ ತಿಳಿಯಿತು. ಹಾಗೆಯೇ ಅವರು ಇರುವ ಸ್ಥಳವೂ ತಿಳಿಯಿತು. ರಾವಣನು ಮರಳಿ ಹೋಗಿ ಆ ಪೆಟ್ಟಿಗೆಯನ್ನು ತರಿಸಿದನು ಮತ್ತು ಅವರಿಬ್ಬರನ್ನು ಕೊಲ್ಲಲು ಖಡ್ಗವನ್ನು ತೆಗೆದನು. ಆಗ ದಶರಥನೂ ಕ್ಷಾತ್ರಧರ್ಮವನ್ನು ನೆನೆದು ಯುದ್ಧಕ್ಕೆ ಸಿದ್ಧನಾದನು; ಆದರೆ ರಾವಣನ ಪತ್ನಿ ಸಾಧ್ವಿ ಮಂಡೋದರಿಯು ರಾವಣನಿಗೆ ವಿವಿಧ ರೀತಿಯಿಂದ ತಿಳಿಸಿ ಹೇಳಿ ಈ ಅನರ್ಥವನ್ನು ತಡೆದಳು. ರಾವಣನು ತನ್ನ ಅವಿಚಾರದಿಂದ ರಾಮನು ಈಗಲೇ ಅವತಾರ ತಾಳಬಹುದು ಎಂಬ ಭಯದಿಂದ ಹಿಂದೆ ಸರಿದನು ಹಾಗೂ ದಶರಥ ಕೌಸಲ್ಯೆಯರನ್ನು ವಿಮಾನದಿಂದ ಅಯೋಧ್ಯೆಗೆ ಕಳುಹಿಸಿದನು. ಇಬ್ಬರೂ ಸುಖವಾಗಿ ಮರಳಿ ಬಂದಿರುವುದನ್ನು ನೋಡಿ ಎಲ್ಲರಿಗೂ ಆನಂದವಾಯಿತು.