ಶ್ರದ್ಧಾವಂತ ಬಾಲಕ ಜಟಿಲ ಮತ್ತು ಗೋಪಾಲ ಅಣ್ಣ

ಬಾಲಮಿತ್ರರೇ, ಇದು ಬಹಳ ಹಿಂದೆ ನಡೆದ ಘಟನೆ. ಆ ದಿನಗಳಲ್ಲಿ ಪ್ರತಿಯೊಂದು ಊರಿನಲ್ಲಿಯೂ ಪಾಠಶಾಲೆಗಳಿರಲಿಲ್ಲ. ಇಂತಹ ಒಂದು ಊರಿನಲ್ಲಿ ಓರ್ವ ವಿಧವೆಯಿದ್ದಳು. ಅವಳ ಮಗನ ಹೆಸರು ಜಟಿಲ. ಜಟಿಲನು ತನ್ನ ತಾಯಿಯ ಏಕೈಕ ಆಧಾರವಾಗಿದ್ದನು. ತಾಯಿಗೆ ತನ್ನ ಮಗ ಓದಿ- ಬರೆದು ಉಚ್ಚ ಶಿಕ್ಷಣ ಪಡೆದುಕೊಂಡು ಸಂಸಾರದಲ್ಲಿ ಕೀರ್ತಿ ಪಡೆಯಲಿ ಎಂಬ ಆಸೆಯಿತ್ತು. ಆದರೆ ಜಟಿಲನ ಊರಿನಲ್ಲಿ ಪಾಠಶಾಲೆಯಿರಲಿಲ್ಲ, ಆದ್ದರಿಂದ ಅವನ ತಾಯಿಯು ಜಟಿಲನನ್ನು ಬೇರೆ ಊರಿನಲ್ಲಿದ್ದ ಪಾಠಶಾಲೆಗೆ ಸೇರಿಸಿದಳು. ಆ ಊರು ಅವನ ಬಸ್ತಿಯಿಂದ ತುಂಬಾ ದೂರವಿತ್ತು. ಜಟಿಲನಿಗೆ ಆ ಊರಿಗೆ ಹೋಗಲು ಒಂದು ಅರಣ್ಯವನ್ನು ದಾಟಿ ಹೋಗಬೇಕಾಗಿತ್ತು.

ಜಟಿಲನಿಗೆ ಓದಿನಲ್ಲಿ ತುಂಬಾ ಅಭಿರುಚಿಯಿತ್ತು. ಅವನ ಶಿಕ್ಷಕರು ಎಲ್ಲ ಮಕ್ಕಳೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದರು ಹಾಗೂ ಸಹಪಾಠಿಗಳಾದ ಮಕ್ಕಳೂ ಎಲ್ಲರೊಂದಿಗೂ ಹೊಂದಿಕೊಂಡು ಹೋಗುತ್ತಿದ್ದರು. ಆದ್ದರಿಂದ ಅವನು ಆನಂದದಿಂದ ಪಾಠಶಾಲೆಗೆ ಹೋಗುತ್ತಿದ್ದನು. ಹಗಲಿನಲ್ಲಿ ಹೋಗುವಾಗ ಅವನಿಗೆ ಭಯವಾಗುತ್ತಿರಲಿಲ್ಲ. ಆದರೆ ಪಾಠಶಾಲೆಯಿಂದ ಮರಳಿ ಮನೆಗೆ ಬರುವಾಗ ಆ ಕಾಡನ್ನು ದಾಟಲು ಬಹಳ ಹೆದರಿಕೆಯಾಗುತ್ತಿತ್ತು. ಆ ಕಾಡು ಭಯಂಕರವಾಗಿತ್ತು ಹಾಗೂ ಅಲ್ಲಿ ಹಲವಾರು ಕಾಡು ಪ್ರಾಣಿಗಳು ವಾಸ ಮಾಡುತ್ತಿದ್ದವು. ಮನೆಗೆ ಮರಳುವಾಗ ಕತ್ತಲಾಗುತ್ತಿತ್ತು ಹಾಗೂ ಪ್ರಾಣಿಗಳ ಧ್ವನಿಯು ತುಂಬಾ ದುಗುಡ ಉಂಟು ಮಾಡುತ್ತಿತ್ತು. ಯಾವುದಾದರೂ ಪ್ರಾಣಿ ಕಾಣಿಸಿದರರೆ ಅವನು ಹೇಗೋ ತಪ್ಪಿಸಿಕೊಂಡು ತನ್ನ ಪ್ರಾಣ ಉಳಿಸಿಕೊಂಡು ಮನೆಗೆ ಮರಳಿ ಬರುತ್ತಿದ್ದನು.

ಒಂದು ದಿನ ಜಟಿಲನು ಅಳುತ್ತಾ ತನಗೆ ಆಗುತ್ತಿರುವ ಭಯದ ಬಗ್ಗೆ ತಾಯಿಗೆ ಹೇಳಿದನು. ಅವನ ವ್ಯಥೆಯನ್ನು ಕೇಳಿಸಿಕೊಂಡು ಅವನ ತಾಯಿಗೆ ಕಣ್ಣೀರು ತಡೆಯಲು ಆಗಲಿಲ್ಲ. ಜೀವನ ನಡೆಸಲು ಅವನ ತಾಯಿ ಸಹ ಕಷ್ಟಪಟ್ಟು ದಿನವೆಲ್ಲಾ ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಆ ಬಡ ತಾಯಿಯು ತನ್ನ ಮಗನನ್ನು ಕರೆದುಕೊಂಡು ಬರಲು ಪಾಠಶಾಲೆಗೆ ಹೇಗೆ ತಾನೆ ಹೋಗಲು ಸಾಧ್ಯ? ಆದರೆ ಅವಳು ಸೋಲೊಪ್ಪಿಕೊಳ್ಳಲಿಲ್ಲ. ಅವಳು ಜಟಿಲನಿಗೆ ಧೈರ್ಯ ನೀಡಿದಳು ಹಾಗೂ ‘ನೋಡು ಕಂದ, ಈ ಜಗತ್ತಿನಲ್ಲಿ ಯಾರಿಗೆ ಯಾರೂ ಇರುವುದಿಲ್ಲವೋ, ಅವರನ್ನು ಭಗವಂತನೇ ನೋಡಿಕೊಳ್ಳುತ್ತಾರೆ, ಅವರೇ ಅವರನ್ನು ರಕ್ಷಿಸುತ್ತಾರೆ ! ನೀನು ಯಾವ ಕಾಡಿನಿಂದ ಹೋಗುತ್ತೀಯೋ, ಅಲ್ಲಿ ನಿನ್ನ ಅಣ್ಣ ಗೋಪಾಲನು ಇರುತ್ತಾನೆ. ನಿನಗೇನಾದರೂ ಒಂದು ವೇಳೆ ಭಯವಾದರೆ, ನೀನು ಅವನನ್ನು ಕರಿ. ಅವನು ದಾರಿಯುದ್ದಕ್ಕೂ ನಿನ್ನೊಂದಿಗೆ ಖಂಡಿತವಾಗಿಯೂ ಬರುವನು’ ಎಂದು ಹೇಳಿದಳು. ಜಟಿಲನಿಗೆ ತಾಯಿಯ ಈ ಮಾತು ಕೇಳಿ ಹರ್ಷವಾಯಿತು. ಅವನಿಗೆ ತನ್ನ ತಾಯಿಯ ಮಾತಿನ ಮೇಲೆ ವಿಶ್ವಾಸವಿತ್ತು. (ಬಾಲಮಿತ್ರರೇ, ಗೋಪಾಲ ಅಂದರೆ ಭಗವಾನ್ ಶ್ರೀಕೃಷ್ಣ !)

ಒಂದು ದಿನ ಸಂಜೆಯ ಸಮಯದಲ್ಲಿ ಜಟಿಲನು ಕಾಡಿನಿಂದ ಸಾಗಿ ಮನೆಗೆ ಮರಳುತ್ತಿದ್ದನು. ಅವನಿಗೆ ಸಮೀಪದಲ್ಲಿಯೇ ಹುಲಿಯ ಗರ್ಜನೆ ಕೇಳಿಸಿತು. ಅದನ್ನು ಕೇಳಿದ ತಕ್ಷಣ ಅವನಿಗೆ ತುಂಬಾ ಭಯವಾಯಿತು. ಅವನಿಗೆ ಆ ಹುಲಿಯಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದು ತೋಚುತ್ತಿರಲಿಲ್ಲ. ಅವನು ಅಳಲಾರಂಭಿಸಿದನು. ಆಗ ಅವನಿಗೆ ತಾಯಿಯ ಮಾತು ನೆನಪಾಯಿತು ಹಾಗೂ ಅವನು ತುಂಬಾ ಆರ್ತನಾಗಿ, ‘ಗೋಪಾಲ ಅಣ್ಣಾ, ಗೋಪಾಲ ಅಣ್ಣಾ, ಎಲ್ಲಿದ್ದೀಯಾ? ಬೇಗ ಬಾ! ಈಗ ನೀನೇ ನನ್ನನ್ನು ರಕ್ಷಿಸು’ ಎಂದು ಕರೆಯತೊಡಗಿದನು. ತಾಯಿಯ ಮಾತಿನ ಮೇಲೆ ಜಟಿಲನಿಗೆ ದೃಢವಾದ ನಂಬಿಕೆಯಿತ್ತು ಆದ್ದರಿಂದ ಜಟಿಲನು ಸಂಪೂರ್ಣ ಶ್ರದ್ಧೆಯಿಂದ ಕರೆದನು. ಅಷ್ಟರಲ್ಲೇ ಅವನ ಕರೆಯನ್ನು ಕೇಳಿದ ಶ್ರೀಕೃಷ್ಣನು ಅವನನ್ನು ರಕ್ಷಿಸಲು ಓರ್ವ ಗೋಪಾಲನ ರೂಪದಲ್ಲಿ ಅಲ್ಲಿ ಪ್ರತ್ಯಕ್ಷನಾದನು ಹಾಗೂ ಅವನು ಬಾಲಕ ಜಟಿಲನಿಗೆ ಧೈರ್ಯ ನೀಡಿದನು. ಅವನ ಬೆನ್ನಿನ ಮೇಲೆ ಕೈ ಸವರುತ್ತಾ, ಅವನ ಕಣ್ಣೀರನ್ನು ಒರೆಸಿದನು. ಗೋಪಾಲನ ಸ್ವರೂಪದಲ್ಲಿ ಬಂದ ಭಗವಾನ್ ಶ್ರೀಕೃಷ್ಣನು ಅವನನ್ನು ಸುರಕ್ಷಿತವಾಗಿ ಊರಿಗೆ ತಲುಪಿಸಿದನು. ಅನಂತರ ಇದು ನಿತ್ಯ ಕ್ರಮವಾಯಿತು. ಕಾಡಿಗೆ ಬಂದ ತಕ್ಷಣ ಜಟಿಲನು ‘ಗೋಪಾಲ ಅಣ್ಣ’ನನ್ನು ಕರೆದ ತಕ್ಷಣ ಗೋಪಾಲ ಅಣ್ಣನು ತಕ್ಷಣ ಅವನಿದ್ದಲ್ಲಿಗೆ ಬರುತ್ತಿದ್ದನು ಹಾಗೂ ಜಟಿಲನನ್ನು ಮನೆಯ ತನಕ ಬಿಟ್ಟು ಬರುತ್ತಿದ್ದನು. ಇತ್ತ ಜಟಿಲನ ತಾಯಿಗೆ, ಅತ್ತ ಪಾಠಶಾಲೆಯಲ್ಲಿ ಯಾರಿಗೂ ಈ ವಿಷಯವೇ ತಿಳಿದಿರಲಿಲ್ಲ. ಜಟಿಲನು ಹೆದರದೆ ಪ್ರತೀ ದಿನ ಶಾಲೆಗೆ ಹೋಗುತ್ತಿದ್ದುದರಿಂದ ಅವಳಿಗೋ ನೆಮ್ಮದಿ ಎನಿಸಿತು.

ಒಮ್ಮೆ ಜಟಿಲನ ಶಿಕ್ಷಕರ ಮನೆಯಲ್ಲಿ ಒಂದು ಧಾರ್ಮಿಕ ಕಾರ್ಯಕ್ರಮವಿತ್ತು. ಅದಕ್ಕಾಗಿ ಅವರು ಪ್ರತಿಯೊಬ್ಬ ವಿಧ್ಯಾರ್ಥಿಗೆ ತಮ್ಮ ಮನೆಯಿಂದ ಯಥಾಶಕ್ತಿ ಹಾಲನ್ನು ತರುವಂತೆ ಹೇಳಿದ್ದರು. ಇದನ್ನು ಕೇಳಿಸಿಕೊಂಡ ತಕ್ಷಣ ಜಟಿಲನಿಗೆ ಚಿಂತೆಯಾಯಿತು. ಅವನು ಕಡು ಬಡ. ತಾಯಿಯಂತು ಬೇರೆಯವರ ಮನೆಯಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದರಿಂದ ಒಪ್ಪೊತ್ತಿನ ಊಟಕ್ಕೆ ಮಾತ್ರ ಸಾಕಾಗುತ್ತಿತ್ತು. ಇದೆಲ್ಲ ಗೊತ್ತಿದ್ದೂ ತಾನು ತಾಯಿಯ ಬಳಿ ಹಾಲು ಬೇಕು ಎಂದಾದರೂ ಹೇಗೆ ಹೇಳುವುದು ? ಎಂದು ಅವನು ತನ್ನ ವ್ಯಥೆಯನ್ನು ಮರುದಿನ ತನ್ನ ಗೋಪಾಲ ಅಣ್ಣನೊಡನೆ ತೋಡಿಕೊಂಡನು. ಮರುದಿನ ಶಾಲೆಗೆ ಹೋಗುವ ಸಮಯದಲ್ಲಿ ಗೋಪಾಲ ಅಣ್ಣನು ಅವನಿಗೆ ಒಂದು ಬಟ್ಟಲು ತುಂಬಿ ಹಾಲು ನೀಡಿದನು.

ಜಟಿಲನು ಪಾಠಶಾಲೆ ತಲುಪಿದನು. ಅವನ ಕೈಯಲ್ಲಿದ್ದ ಬಟ್ಟಲನ್ನು ನೋಡಿ ಎಲ್ಲರೂ ಅವನನ್ನು ಹೀಯಾಳಿಸಿದರು. ಆದ್ದರಿಂದ ಜಟಿಲನು ಅಳತೊಡಗಿದನು. ಗೋಪಾಲ ಅಣ್ಣನು ಅಂದರೆ ಭಗವಾನ್ ಶ್ರೀಕೃಷ್ಣನಿಗೆ ಅವನು ಅಳುವುದು ಒಳ್ಳೆಯದೆನಿಸಲಿಲ್ಲ. ಅವನ ಹೃದಯ ಕರಗಿತು. ಅವನು ತನ್ನ ಪ್ರಿಯ ಭಕ್ತನಿಗೆ ದುಃಖವಾಗಿರುವುದನ್ನು ನೋಡಿ ಒಂದು ಚಮತ್ಕಾರ ಮಾಡಿದನು. ಜಟಿಲನ ಶಿಕ್ಷಕರು ಅವನ ಬಟ್ಟಲನ್ನು ಖಾಲಿ ಮಾಡಿದರು, ಆಗ ಅವನ ಬಟ್ಟಲು ತಕ್ಷಣ ತುಂಬಿ ಹೋಯಿತು. ಹೀಗೆ ಮಾಡುತ್ತಾ-ಮಾಡುತ್ತಾ ಶಿಕ್ಷಕರ ಮನೆಯಲ್ಲಿರುವ ಎಲ್ಲ ಪಾತ್ರೆಗಳು ಹಾಲಿನಿಂದ ತುಂಬಿಹೋದವು. ಆದರೆ ಆ ಬಟ್ಟಲಿನಲ್ಲಿರುವ ಹಾಲು ಮಾತ್ರ ಮುಗಿಯಲೇ ಇಲ್ಲ!

ಈ ಚಮತ್ಕಾರವನ್ನು ನೋಡಿ ಜಟಿಲನ ಶಿಕ್ಷಕರು ಹಾಗೂ ಸಹಪಾಠಿಗಳು ಅವನಲ್ಲಿ ಕ್ಷಮೆಯಾಚಿಸಿದರು ಹಾಗೂ ಇದೆಲ್ಲಾ ಹೇಗಾಯಿತು ಎಂದು ಕೇಳಿದರು. ಅದಕ್ಕೆ ಜಟಿಲನು ಆ ಬಟ್ಟಲನ್ನು ತನಗೆ ತನ್ನ ಗೋಪಾಲ ಅಣ್ಣನು ನೀಡಿದ್ದಾಗಿ ಹೇಳಿದನು. ಶಿಕ್ಷಕರು ಜಟಿಲನೊಡನೆ ಆ ‘ಗೋಪಾಲ ಅಣ್ಣ’ನನ್ನು ಭೇಟಿಯಾಗಲು ಹೊರಟರು. ಆದರೆ ಅವರಿಗೆ ದರ್ಶನವಾಗಲಿಲ್ಲ. ಮಕ್ಕಳೇ, ಯಾರು ಭಕ್ತರನ್ನು ಹೀಯಾಳಿಸುವರೋ ಅವರಿಗೆ ಭಗವಂತನು ದರ್ಶನ ನೀಡುವುದಿಲ್ಲ. ಭಗವಂತನು ಕೇವಲ ಭಕ್ತರಿಗೆ ಮಾತ್ರ ದರ್ಶನ ನೀಡುತ್ತಾನೆ.

ಬಾಲಮಿತ್ರರೇ, ಈ ಉದಾಹರಣೆಯಿಂದ ತಿಳಿಯುವುದೇನೆಂದರೆ ಜಟಿಲನಿಗೆ ಗೋಪಾಲನ ಮೇಲೆ ಅಪಾರ ಶ್ರದ್ಧೆಯಿದ್ದ ಕಾರಣ ಭಗವಾನ್ ಶ್ರೀಕೃಷ್ಣನು ಅವನಿಗೆ ಸಹಾಯ ಮಾಡಲು ಬಂದನು. ನಾವು ಸಹ ಇದೇ ರೀತಿ ಅಪಾರ ಶ್ರದ್ಧೆಯಿಂದ ಭಗವಂತನನ್ನು ಕರೆದರೆ, ಹಾಗೂ ಅವನ ಭಕ್ತರಾದರೆ ಅವನು ನಮ್ಮ ಜೊತೆ ಕೂಡ ಇರುತ್ತಾರೆ.