ಕವಿ ಕಾಳಿದಾಸರ ಕುಶಾಗ್ರ ಬುದ್ಧಿ

ಬಾಲಮಿತ್ರರೇ ಪ್ರಾಚೀನ ಕಾಲದಲ್ಲಿ ರಾಜಾ ಭೋಜ ಹೆಸರಿನ ಪ್ರಸಿದ್ಧ ರಾಜನಿದ್ದನು. ಅವನ ದರಬಾರಿನಲ್ಲಿ ಅನೇಕ ವಿದ್ವಾಂಸರಿದ್ದರು. ರಾಜಾ ಭೋಜರ ಸಭೆಯಲ್ಲಿ ಕಾಳಿದಾಸ ಹೆಸರಿನ ಮಹಾನ್ ಕವಿಗಳಿದ್ದರು. ಕವಿ ಕಾಳಿದಾಸರ ಹೆಸರನ್ನು ನೀವು ಕೇಳಿರಬಹುದು.

ಅವರ ಬುದ್ಧಿವಂತಿಕೆಯ ಕೀರ್ತಿಯು ನಾಲ್ಕೂ ದಿಕ್ಕಿನಲ್ಲಿ ಹರಡಿತ್ತು. ಸ್ವಯಂ ರಾಜಾ ಭೋಜರು ಅನೇಕ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೊದಲು ಅವರ ಅಭಿಪ್ರಾಯವನ್ನು ಪಡೆದುಕೊಳ್ಳುತ್ತಿದ್ದರು. ಕಾಳಿದಾಸರು ಎಲ್ಲಾ ವಿದ್ವಾಂಸರನ್ನೂ ಗೌರವಿಸುತ್ತಿದ್ದರು. ಅವರು ವಿದ್ವಾಂಸರಿಗೆ ಅವರ ಯೋಗ್ಯತೆಗೆ ತಕ್ಕಂತೆ ಸಹಾಯ ಮಾಡುತ್ತಿದ್ದರು.

ಹೀಗೆ ಒಂದು ದಿನನಡೆದ ವಿಷಯವಿದು. ಓರ್ವ ಬಡ ಬ್ರಾಹ್ಮಣನು ಕಾಳಿದಾಸರ ಹತ್ತಿರ ಬಂದನು. ಅವನು ಕಾಳಿದಾಸರಿಗೆ ಸಮಾನವಾದ ಕವಿಯಾಗಿರಲಿಲ್ಲ. ಆದರೆ ಯೋಗ್ಯ-ಅಯೋಗ್ಯವನ್ನು ಅರಿಯುವವನಾಗಿದ್ದನು. ಸರಳ-ಸಾಮಾನ್ಯ, ಆದರೆ ಸನ್ಮಾರ್ಗದಲ್ಲಿ ನಡೆಯುವವನಾಗಿದ್ದನು. ಅವನು ರಾಜಾ ಭೋಜನ ಬಳಿ ಏನಾದರೂ ಸಹಾಯ ಸಿಗಬಹುದೆಂಬ ಆಸೆಯಿಂದ ಬಂದಿದ್ದನು. ಅವನು ಈ ಅಭಿಲಾಷೆಯೊಂದಿಗೆ ಧಾರಾನಗರವನ್ನು ಪ್ರವೇಶಿಸಿದನು. ಕಾಳಿದಾಸರು ಅವನ ಸಂಪೂರ್ಣ ಸ್ಥಿತಿಯನ್ನು ಅರಿತುಕೊಂಡರು. ಅನಂತರ ಕಾಳಿದಾಸರು ಅವನನ್ನು  ‘ರಾಜಸಭೆಯಲ್ಲಿ ರಾಜನನ್ನು ಭೇಟಿಯಾಗಲು ಬರಿಗೈಯಲ್ಲಿ ಹೋಗುವುದಿಲ್ಲ. ರಾಜನಿಗೆ ನೀಡಲು ಏನಾದರೂ ಉಡುಗೊರೆಯನ್ನು ತಂದಿದ್ದೀರಾ?’ ಎಂದು ಕೇಳಿದರು. ಅದಕ್ಕೆ ಆ ಬಡ ಬ್ರಾಹ್ಮಣನು ‘ಕವಿರಾಜ, ನಾನಂತೂ ಕಡುಬಡವ ಹಾಗೂ ರಾಜನಿಗೆ ನೀಡಲು ನನ್ನ ಬಳಿ ಏನೂ ಇಲ್ಲ. ಆದರೆ ನನ್ನ ಮನೆಯ ಪಕ್ಕದಲ್ಲಿರುವ ರೈತನಿಂದ ಭಿಕ್ಷೆ ಬೇಡಿ ಸ್ವಲ್ಪ ಕಬ್ಬನ್ನು ತಂದಿದ್ದೇನೆ. ಅದನ್ನೇ ಅವರಿಗೆ ಕೊಡುತ್ತೇನೆ’ ಎಂದು ಹೇಳಿ ತಾನು ತಂದಿದ್ದ ಕಬ್ಬನ್ನು ತೋರಿಸಿದನು. ಅದಕ್ಕೆ ಕಾಳಿದಾಸರು ‘ಸರಿ ಹಾಗಾದರೆ, ನಾಳೆ ಆ ಕಬ್ಬನ್ನು ತೆಗೆದುಕೊಂಡು ದರಬಾರಿಗೆ ಬನ್ನಿ’ ಎಂದು ಹೇಳಿದರು.

ಬ್ರಾಹ್ಮಣನು ರಾತ್ರಿ ತಂಗಲು ಸ್ಥಳೀಯ ಧರ್ಮಶಾಲೆಯಲ್ಲಿ ಒಂದು ಜಾಗ ಹುಡುಕಿ, ರಾತ್ರಿ ಕಳೆದ ಮೇಲೆ ಬೆಳಗ್ಗೆ ಬೇಗ ಎದ್ದು ಸಂಧ್ಯಾದಿ ಕರ್ಮಗಳನ್ನು ಮಾಡಿ ರಾಜಸಭೆಗೆ ಹೋಗಲು ನಿಶ್ಚಯಿಸಿದನು. ಬಾಲಮಿತ್ರರೇ, ಎಲ್ಲಾ ಕಡೆಯಲ್ಲಿಯೂ ಸ್ವಲ್ಪ ಕೆಟ್ಟ ಜನರು ಇರುತ್ತಾರೆ ಎನ್ನುವುದು ನಿಮಗೆ ತಿಳಿದಿದೆ. ಅದೇ ರೀತಿ ಆ ಧರ್ಮಶಾಲೆಯಲ್ಲಿದ್ದ ಕೆಲವು ಕೆಟ್ಟ ಜನರು ಆ ಬಡಬ್ರಾಹ್ಮಣನ ಹತ್ತಿರವಿದ್ದ ಗಂಟಿನಲ್ಲಿ ಏನಿದೆ ಎಂದು ಅದನ್ನು ಕದ್ದು ನೋಡಿದರು. ಅದರಲ್ಲಿದ್ದ ಕಬ್ಬನ್ನು ತೆಗೆದುಕೊಂಡು ತಿಂದರು ಹಾಗೂ ಅಲ್ಲೇ ಒಲೆಯಿಂದ ಅರ್ಧ ಸುಟ್ಟಿದ್ದ ಕಟ್ಟಿಗೆಗಳನ್ನು ಆ ಗಂಟಿನೊಳಗೆ ಇಟ್ಟು ಮೊದಲಿನಂತೆ ಇಟ್ಟುಬಿಟ್ಟರು. ಇದರಿಂದ ಬ್ರಾಹ್ಮಣನು ಬೆಳಗ್ಗೆ ಎದ್ದು ನೋಡಿದಾಗ ಅವನಿಗೆ ತಾನು ರಾಜನಿಗೋಸ್ಕರ ತಂದಿದ್ದ ಕಬ್ಬನ್ನು ಯಾರೋ ಕದ್ದು ತಿಂದಿದ್ದಾರೆ ಎನ್ನುವುದು ಗೊತ್ತಾಗಲೇ ಇಲ್ಲ.

ಬ್ರಾಹ್ಮಣನು ಮುಂಜಾನೆ ಎದ್ದು ತನ್ನ ನಿತ್ಯ ಕರ್ಮಗಳನ್ನು ಮುಗಿಸಿ ರಾಜಸಭೆಯನ್ನು ತಲುಪಿದನು. ರಾಜನು ದರಬಾರಿನವರೊಂದಿಗೆ ಬಂದು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡನು. ಕಾಳಿದಾಸರು ಒಂದು ಪ್ರಮುಖ ಆಸನದ ಮೇಲೆ ಕುಳಿತುಕೊಂಡಿದ್ದರು. ಬೇರೆ ಗೌರವಾನ್ವಿತ ವ್ಯಕ್ತಿಗಳು ಕೂಡ ಅಲ್ಲಿ ಉಪಸ್ಥಿತರಿದ್ದರು. ಬ್ರಾಹ್ಮಣನು ಸ್ವಲ್ಪ ಅಂಜಿಕೆಯಿಂದಲೇ ನಿಧಾನವಾಗಿ ಮುಂದೆ ಬಂದನು ಹಾಗೂ ರಾಜನಿಗೆ ಸಾದರ ಪ್ರಣಾಮಗಳನ್ನು ಸಲ್ಲಿಸಿದನು. ಅವನು ರಾಜನಿಗೆ ‘ಹೇ ಮಹಾರಾಜಾ, ರಾಜರು, ದೇವರು ಹಾಗೂ ಗುರುಗಳ ಬಳಿಗೆ ಬರಿಗೈಯಲ್ಲಿ ಹೋಗಬಾರದು ಎನ್ನುವುದನ್ನು ನಾನು ಕೇಳಿದ್ದೇನೆ. ಆದ್ದರಿಂದ ದಯವಿಟ್ಟು ನನ್ನ ಈ ತುಚ್ಛ ಕಾಣಿಕೆಯನ್ನು ಸ್ವೀಕರಿಸಿ’ ಎಂದು ಹೇಳಿ ಅವನು ತನ್ನ ಗಂಟನ್ನು ಬಿಚ್ಚಿದನು. ಅವನು ತನ್ನ ಗಂಟನ್ನು ಬಿಚ್ಚಿದ ತಕ್ಷಣ ಅವನಿಗೆ ಕಬ್ಬಿನ ಬದಲಾಗಿ ಅಲ್ಲಿ ಅರ್ಧ ಸುಟ್ಟ ಕಟ್ಟಿಗೆಗಳು ಕಂಡವು ! ಬ್ರಾಹ್ಮಣನು ಗಾಬರಿಗೊಂಡನು. ಅವನ ಬಳಿ ಸ್ಪಷ್ಟೀಕರಣ ನೀಡಲು ಶಬ್ದಗಳೇ ಇರಲಿಲ್ಲ. ಅವನು ತುಂಬ ಗಾಬರಿಗೊಂಡನು. ಅವನಿಗೆ ಕಬ್ಬಿನ ಜಾಗದಲ್ಲಿ ಯಾರು ಆ ಸುಟ್ಟ ಕಟ್ಟಿಗೆಗಳನ್ನು ಇಟ್ಟಿದ್ದಾರೆ ಎನ್ನುವುದು ತಿಳಿಯಲಿಲ್ಲ. ಇದಂತೂ ರಾಜನ ಅವಮಾನವಾಗಿತ್ತು. ರಾಜ ದರಬಾರಿನಲ್ಲಿ ‘ಬ್ರಾಹ್ಮಣನನ್ನು ಶಿಕ್ಷಿಸಿ’ ಎಂಬ ಕೂಗು ಎದ್ದ ಕೇಳಿಸಿತು.

ಇಷ್ಟರವರೆಗೆ ಕವಿ ಕಾಳಿದಾಸರು ಸುಮ್ಮನೆ ಇದ್ದರು. ಅವರು ಬ್ರಾಹ್ಮಣನ ಪರಿಸ್ಥಿತಿಯನ್ನು ಅರಿತರು. ಅವರು ಎದ್ದುನಿಂತು ರಾಜದರಬಾರಿನಲ್ಲಿದ್ದ ಜನರನ್ನು ಸುಮ್ಮನಾಗಿಸಿದರು. ಮತ್ತು ರಾಜ ದರಬಾರನ್ನು ಸಂಬೋಧಿಸುತ್ತಾ ‘ಈ ಬ್ರಾಹ್ಮಣನು ಅಪರಾಧಿಯಲ್ಲ. ಅವನಂತೂ ಧರ್ಮ-ಕರ್ಮವನ್ನು ಅರಿಯುವವನಾಗಿದ್ದಾನೆ. ಆದರೆ ಅವನು ಬಡವ. ಇಂತಹ ಸುಖ ಸಮೃದ್ಧಿಯಿರುವ ರಾಜ್ಯದಲ್ಲಿ ತನ್ನ ಸ್ಥಿತಿ ಹೀಗಿರುವ ಬಗ್ಗೆ ಆ ಬಡ ಬ್ರಾಹ್ಮಣನು ಮಾತಿನಲ್ಲಿ ಹೇಗೆ ತಾನೆ ಹೇಳಬಹುದು. ಆ ಕಟ್ಟಿಗೆಗಳು ಅರ್ಧ ಸುಟ್ಟಿವೆ. ಇದರರ್ಥವೇನೆಂದರೆ, ಬಡತನವು ಅವನನ್ನು ಸಾಯಲೂ ಬಿಡುತ್ತಿಲ್ಲ ಹಾಗೂ ಸರಿಯಾಗಿ ಜೀವಿಸಲು ಆಗುತ್ತಿಲ್ಲ. ಅವನ ಈ ಅವಸ್ಥೆ ಬಹಳ ದಯನೀಯವಾಗಿದೆ! ಈ ಅರ್ಧ ಸುಟ್ಟುಹೋಗಿರುವ ಕಟ್ಟಿಗೆಯಿಂದ ಅವನ ಈ ಅವಸ್ಥೆ ಪ್ರಕಟವಾಗುತ್ತಿದೆ. ಆದ್ದರಿಂದ ರಾಜರು ಅವನಿಗೆ ಹಣವನ್ನು ನೀಡಿ ಅವನ ಎಲ್ಲ ಚಿಂತೆಯನ್ನೂ ದೂರಗೊಳಿಸಲಬೇಕಾಗಿ ವಿನಂತಿಸುತ್ತೇನೆ’ ಎಂದು ಹೇಳಿದನು. ಕಾಳಿದಾಸರ ಈ ಮಾತುಗಳನ್ನು ಕೇಳಿ ಸಂಪೂರ್ಣ ರಾಜ ದರಬಾರವು ಆಶ್ಚರ್ಯಗೊಂಡಿತು. ಯಾರೂ ಕೂಡ ಅವರ ಮಾತನ್ನು ಖಂಡಿಸಲಿಲ್ಲ. ಸ್ವತಃ ರಾಜಾ ಭೋಜರೂ ಕಾಳಿದಾಸರ ಈ ಮಾತನ್ನು ಕೇಳಿ ತಲೆದೂಗಿದರು. ಅವರು ಸ್ವರ್ಣ ಮುದ್ರೆಗಳನ್ನು ನೀಡಿ ಆ ಬ್ರಾಹ್ಮಣನನ್ನು ಗೌರವಿಸಿದರು. ಧನಹೀನ ಬ್ರಾಹ್ಮಣನು ಸ್ವರ್ಣಮುದ್ರೆಗಳಿಂದ ತುಂಬಿರುವ ಜೋಳಿಗೆಯನ್ನು ತೆಗೆದುಕೊಂಡು ಮರಳಿ ಊರಿಗೆ ಹೋದನು. ಹೊರಡುವ ಮುಂಚೆ ಅವನು ಕಾಳಿದಾಸರಿಗೆ ಕೃತಜ್ಞತೆಯನ್ನು ಅರ್ಪಿಸಿದನು.

Leave a Comment