ದತ್ತ ಜಯಂತಿ ಅನ್ವರ್ಥವಾಗಿ ಆಚರಿಸೋಣ !

ಮಾರ್ಗಶಿರ ಶುಕ್ಲ ಪಕ್ಷ ಚತುರ್ದಶಿ, ಕಲಿಯುಗ ವರ್ಷ ೫೧೧೫ (೧೬-೧೨-೨೦೧೩) ರಂದು ದತ್ತ ಜಯಂತಿಯಿದೆ. ವಿದ್ಯಾರ್ಥಿ ಮಿತ್ರರೇ, ದತ್ತನ ಉಪಾಸನೆ ಮಾಡುವುದೆಂದರೆ, ದತ್ತನ ಹಾಗೆ ಪ್ರತಿಯೊಬ್ಬ ವ್ಯಕ್ತಿ ಮತ್ತು ವಸ್ತುಗಳಿಂದ ಸತತವಾಗಿ ಕಲಿಯುವುದು ಹಾಗೂ ಕಲಿಯುವ ನಿರ್ಣಯ ಮಾಡುವುದು ! ದತ್ತಜಯಂತಿಯ ನಿಮಿತ್ತ ನಾವು ಶ್ರೀ ದತ್ತ ಗುರುವಿನ ಬಗ್ಗೆ ಶಾಸ್ತ್ರೀಯ ಮಾಹಿತಿಯನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ.

೧. ದತ್ತನ ಹೆಸರುಗಳು ಮತ್ತು ಅವುಗಳ ಅರ್ಥ

೧ಅ. ದತ್ತ :‘ನಮ್ಮ ಅಸ್ತಿತ್ವ ಎಂದರೆ 'ಆತ್ಮ'', ಎಂಬುದರ ಅನುಭೂತಿಯನ್ನು ನೀಡುವವನು ! ಪ್ರತಿಯೊಬ್ಬರಲ್ಲಿಯೂ ಆತ್ಮವಿದೆ; ಆದ್ದರಿಂದ ನಾವು ಪ್ರತಿಯೊಬ್ಬರೂ ನಡೆಯುತ್ತೇವೆ, ಮಾತನಾಡುತ್ತೇವೆ ಹಾಗೂ ನಗುತ್ತೇವೆ. ಇದರಿಂದ ‘ನಮ್ಮಲ್ಲಿ ದೇವರಿದ್ದಾರೆ', ಎಂಬುದು ಸತ್ಯವಾಗಿದೆ. ಅದರ ಹೊರತು ನಮ್ಮ ಅಸ್ತಿತ್ವವೇ ಇಲ್ಲ. ನಮಗೆ ಇದರ ಅರಿವಾದರೆ, ನಾವು ಪ್ರತಿಯೊಬ್ಬರೊಂದಿಗೆ ಪ್ರೇಮದಿಂದಲೇ ವರ್ತಿಸುವೆವು. ಈ ದತ್ತ ಜಯಂತಿಗೆ ನಾವು ಈ ಅರಿವನ್ನು ಜಾಗೃತಗೊಳಿಸಲು ನಿಶ್ಚಯಿಸೋಣ.

೧ ಆ. ಅವಧೂತ : 'ಯಾರು ಅಹಂನ್ನು ತೊಳೆಯುತ್ತಾನೋ, ಅವನು ಅವಧೂತ !' ಅಧ್ಯಯನ ಮಾಡುವಾಗ ನಮ್ಮ ಮನಸ್ಸಿಗೆ ಒತ್ತಡ ಬರುತ್ತದೆಯಲ್ಲವೇ ? ಅಧ್ಯಯನ ಮಾಡಲು ಬುದ್ಧಿಶಕ್ತಿಯನ್ನು ದೇವರೇ ನೀಡುತ್ತಾರೆ; ಆದರೆ ‘ನಾನು ಅಧ್ಯಯನ ಮಾಡುತ್ತೇನೆ', ಎಂದು ಅನಿಸುವುದರಿಂದ ಒತ್ತಡ ಬರುತ್ತದೆ. ಇದೇ ನಮ್ಮಲ್ಲಿರುವ ಅಹಂಕಾರ. ದತ್ತ ಜಯಂತಿಯಂದು ನಾವು ‘ಹೇ ದತ್ತಾತ್ರೇಯ, ನೀನೇ ನನಗೆ ನನ್ನಲ್ಲಿರುವ ಅಹಂನ್ನು ನಾಶಗೊಳಿಸುವ ಶಕ್ತಿ ಮತ್ತು ಬುದ್ಧಿಯನ್ನು ನೀಡು.' ಎಂದು ಪ್ರಾರ್ಥಿಸೋಣ.

೧ ಇ. ದಿಗಂಬರ : ದಿಗಂಬರದ ಅರ್ಥ ಯಾರಿಗೆ 'ದಿಕ್', ಅಂದರೆ 'ದಿಕ್ಕು' ಇದೇ 'ಅಂಬರ', ಅಂದರೆ 'ವಸ್ತ್ರ'ವಾಗಿರುತ್ತದೆ ! ಯಾರು ಸರ್ವವ್ಯಾಪಿಯಾಗಿದ್ದಾನೆ, ಹಾಗೂ ಎಲ್ಲ ದಿಕ್ಕುಗಳನ್ನು ವ್ಯಾಪಿಸಿಕೊಂಡಿದ್ದಾನೆಯೋ, ಅವನು ದಿಗಂಬರ ! ಈ ದೇವತೆ ಶ್ರೇಷ್ಠವಾಗಿರುವುದರಿಂದ, ನಮ್ಮಂತಹ ಸಾಮಾನ್ಯ ಜೀವಗಳು ಅವರಿಗೆ ಶರಣಾಗಬೇಕು. ಹಾಗೆ ಮಾಡಿದರೆ, ನಮಗೆ ಅವರ ಕೃಪೆಯಾಗುವುದು. ‘ಹೇ ದತ್ತಾತ್ರೇಯಾ, ಶರಣಾಗುವುದು ಹೇಗೆ, ಎಂಬುದನ್ನು ನೀನೇ ನಮಗೆ ಕಲಿಸು' ಎಂದು ನಾವು ಪ್ರಾರ್ಥನೆ ಮಾಡೋಣ,

೨. ದತ್ತನ ಜನ್ಮದ ಇತಿಹಾಸ

೨ ಅ. ಬ್ರಹ್ಮ, ವಿಷ್ಣು ಮತ್ತು ಮಹೇಶ ಇವರು ಮಹಾಪತಿವ್ರತೆ ಅನುಸೂಯ ಮಾತೆಯನ್ನು ಪರೀಕ್ಷಿಸಲು ನಿರ್ಧರಿಸುವುದು : ಅತ್ರಿಋಷಿಯ ಪತ್ನಿ ಅನುಸೂಯಾ ಮಹಾನ ಪತಿವೃತೆಯಾಗಿದ್ದಳು. ಅವಳು ಧರ್ಮಾಚರಣೆಗನುಸಾರ, ಅಂದರೆ ಯಾವುದೇ ಕಠಿಣ ಪ್ರಸಂಗದಲ್ಲಿಯೂ ದೇವರಿಗೆ ಇಷ್ಟವಾಗುವ ಹಾಗೆಯೇ ವರ್ತಿಸುತ್ತಿದ್ದಳು. ಅವಳು ಎಂದಿಗೂ ಅಧರ್ಮದಿಂದ ವರ್ತಿಸುತ್ತಿರಲಿಲ್ಲ. ಈ ವಿಷಯ ಬ್ರಹ್ಮ, ವಿಷ್ಣು ಮತ್ತು ಮಹೇಶರಿಗೆ ತಿಳಿದಾಗ ಅವರು ಅನುಸೂಯಾ ಮಾತೆಯನ್ನು ಪರೀಕ್ಷಿಸಲು ನಿರ್ಧರಿಸಿದರು. ಅವರು ಅತಿಥಿಗಳ ರೂಪಧಾರಣೆ ಮಾಡಿ ಅವರ ಆಶ್ರಮಕ್ಕೆ ಭೋಜನ ಸಮಯದಲ್ಲಿ ಹೋದರು. ಆಗ ಅವಳ ಪತಿ ಅತ್ರಿಋಷಿ ತಪಶ್ಚರ್ಯಕ್ಕಾಗಿ ಹೊರಗೆ ಹೋಗಿದ್ದರು. ಆಗ ಅನುಸೂಯಾ ಅವರನ್ನು ಸಂಬೋಧಿಸಿ “ನನ್ನ ಪತಿ ಬಂದ ನಂತರ ನಾನು ನಿಮಗೆ ಭೋಜನ ನೀಡುವೆನು" ಎಂದಳು. ಆಗ ಮೂವರೂ ದೇವರು “ಅವರು ಬರುವ ತನಕ ನಾವು ನಿಲ್ಲುವುದಿಲ್ಲ. ನಮಗೆ ಈಗಲೇ ಭೋಜನ ನೀಡಿ. ನಿಮ್ಮ ಮನೆಗೆ ಬಂದಿರುವ ಅತಿಥಿಗಳು ಯಾವತ್ತೂ ಉಪವಾಸವಿದ್ದು ಹಿಂತಿರುಗುವುದಿಲ್ಲ, ಎಂದು ನಾವು ಕೇಳಿದ್ದೇವೆ; ಆದರೆ ನಮ್ಮ ಒಂದು ಷರತ್ತು ಇದೆ, ‘ಮೈಮೇಲೆ ಯಾವುದೇ ವಸ್ತ್ರ ಧಾರಣೆ ಮಾಡದೆ ನೀವು ನಮಗೆ ಭೋಜನವನ್ನು ಬಡಿಸಬೇಕು." ಎಂದು ಹೇಳಿದರು.

೨ ಆ. ಅನುಸೂಯ ಮಾತೆ ಪತಿಯನ್ನು ಸ್ಮರಿಸಿ ‘ಮೂರೂ ದೇವತೆಗಳೆಂದರೆ ತನ್ನ ಮಕ್ಕಳು', ಎನ್ನುವ ಭಾವವನ್ನಿಡುವುದರಿಂದ ಅವರು ಸಣ್ಣ ಮಕ್ಕಳಾಗಿ ರೂಪಾಂತರವಾಗುವುದು : ಅನುಸೂಯಾ ದೇವಿಯು ಪತಿಯನ್ನು ಪರಮೇಶ್ವರನೆಂದು ತಿಳಿದುಕೊಳ್ಳುವವಳು. ಅವಳು ವಿಚಾರ ಮಾಡಿದಳು, ‘ನಾನು ಮನಸ್ಸಿನಿಂದ ಅತ್ಯಂತ ನಿರ್ಮಲವಾಗಿದ್ದೇನೆ. ನನ್ನ ಮನಸ್ಸಿನಲ್ಲಿ ಯಾವುದೇ ಕೆಟ್ಟ ವಿಚಾರವಿಲ್ಲ.' ಅವಳು ಸ್ವಲ್ಪ ಹೊತ್ತು ಪತಿಯನ್ನು ಸ್ಮರಿಸಿದಳು. ಆಗ ಅವಳು ಈ ಅತಿಥಿಗಳೆಂದರೆ ನನ್ನ ಮಕ್ಕಳಾಗಿದ್ದಾರೆ', ಎನ್ನುವ ಭಾವವನ್ನಿಟ್ಟುಕೊಂಡಳು. ಆದ್ದರಿಂದ ಆ ಅತಿಥಿಗಳು ಸಣ್ಣ ಮಕ್ಕಳ ರೂಪ ತಾಳಿದರು. ಮಕ್ಕಳೇ ಇದು ಹೇಗಾಯಿತು ? ಅನುಸೂಯಾ ಮಾತೆಯು ಪತಿಯನ್ನು ದೇವರೆಂದು ನಂಬಿ ಪ್ರತಿಯೊಂದು ಕೃತಿ ಮಾಡುತ್ತಿದ್ದಳು. ಅವಳ ಮನಸ್ಸಿನಲ್ಲಿ ಯಾವುದೇ ಪುರುಷರ ವಿಷಯದಲ್ಲಿ ಒಂದು ಕ್ಷಣವೂ ಕೆಟ್ಟ ವಿಚಾರ ಬರುತ್ತಿರಲಿಲ್ಲ; ಆದ್ದರಿಂದ ಬ್ರಹ್ಮ, ವಿಷ್ಣು ಮತ್ತು ಮಹೇಶ ಈ ದೇವತೆಗಳು ಮಕ್ಕಳಾದರು. ಅನಂತರ ಅನುಸೂಯಾ ಆ ಮಕ್ಕಳನ್ನು ಮಡಿಲಲ್ಲಿ ತೆಗೆದುಕೊಂಡು ಹಾಲುಣಿಸಿದಳು.

೨ ಇ. ಮೂರೂ ದೇವತೆಗಳು ಪ್ರಕಟವಾಗಿ ವರ ಬೇಡಲು ಹೇಳಿದಾಗ 'ಮಕ್ಕಳು ತನ್ನಲ್ಲಿಯೇ ಇರಲಿ', ಎಂದು ಹೇಳುತ್ತಾಳೆ. ಅವರು ವರನೀಡಿದಾಗ ಬ್ರಹ್ಮದೇವನಿಂದ ಚಂದ್ರ, ವಿಷ್ಣುವಿನಿಂದ ದತ್ತ ಹಾಗೂ ಶಂಕರನಿಂದ ದುರ್ವಾಸ ಹೀಗೆ ಮೂವರು ಬಾಲಕರು ಅನುಸೂಯಾಳಿಗೆ ದೊರೆಯುವುದು : ಅನಂತರ ಅನುಸೂಯಳ ಪತಿ ಅತ್ರಿಋಷಿ ಆಶ್ರಮಕ್ಕೆ ಬಂದು ನೋಡುವಾಗ ಅಲ್ಲಿ ಮೂವರು ತೇಜಸ್ವಿ ಬಾಲಕರು ಕಾಣಿಸಿದರು. ನಡೆದಿರುವ ಎಲ್ಲ ಘಟನೆಗಳನ್ನು ಮಾತೆ ಋಷಿಗಳಿಗೆ ಹೇಳಿದಳು. ಆಗ ಅವರು ‘ಈ ಮೂರು ಬಾಲಕರು ಯಾರು, ಎಂಬುದನ್ನು ಗುರುತಿಸಿದರು. ಆಗ ಬ್ರಹ್ಮ, ವಿಷ್ಣು ಮತ್ತು ಮಹೇಶ ಇವರು ಪ್ರಕಟವಾಗಿ ‘ಯಾವುದೇ ವರವನ್ನು ಕೇಳಿರಿ' ಎಂದು ಹೇಳಿದರು. ಆಗ ಅವರಿಬ್ಬರೂ “ಈ ಬಾಲಕರು ನಮ್ಮಲ್ಲಿಯೇ ಇರಲಿ" ಎಂದು ವರ ಕೇಳಿದರು. ಅದೇ ರೀತಿ ವರವನ್ನು ನೀಡಿ ದೇವತೆಗಳು ತಮ್ಮ ಲೋಕಗಳಿಗೆ ಹಿಂದಿರುಗಿದರು. ಆದ್ದರಿಂದ ಬ್ರಹ್ಮ ದೇವರಿಂದ ಚಂದ್ರ, ವಿಷ್ಣುವಿನಿಂದ ದತ್ತ ಹಾಗೂ ಶಂಕರನಿಂದ ದುರ್ವಾಸ ಹೀಗೆ ಮೂವರು ಬಾಲಕರು ಅನುಸೂಯ ಮಾತೆಗೆ ದೊರಕಿದರು. ಅವರಲ್ಲಿ ಚಂದ್ರ ಮತ್ತು ದುರ್ವಾಸ ಇವರು ತಪಶ್ಚರ್ಯಕ್ಕಾಗಿ ಹೊರಟು ಹೋದರು ಹಾಗೂ ದತ್ತ ವಿಷ್ಣುವಿನ ಕಾರ್ಯಕ್ಕಾಗಿ ಪೃಥ್ವಿಯಲ್ಲಿ ಉಳಿದನು. ಈ ರೀತಿ ದತ್ತನ ಜನ್ಮವಾಯಿತು.

ದೇವರು ಭಕ್ತರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ ಎಂಬುದು ತಿಳಿಯುತ್ತದೆ ! ಭಕ್ತ ಪ್ರಹ್ಲಾದನಿಗಾಗಿ ಅವರು ಕಂಬದಿಂದ ಪ್ರಕಟವಾದರು, ಸಂತ ಜನಾಬಾಯಿಗಾಗಿ ಅವರು ಹಿಟ್ಟು ತಯಾರಿಸಿದರು. ನಾವು ಭಕ್ತರಾದರೆ, ನಮ್ಮ ವರ್ತನೆ ದೇವರಿಗೆ ಇಷ್ಟವಾಗುವಂತಾದರೆ, ಅವರು ನಮಗಾಗಿ ಏನು ಬೇಕಾದರೂ ಮಾಡಬಹುದು. ಅನುಸೂಯಾ ಮಾತೆಯ ಸಂದರ್ಭದಲ್ಲಿಯೂ ಹಾಗೆಯೇ ಆಯಿತು. ನಾವು ಕೂಡ ಇಂದಿನಿಂದ ದೇವರಿಗೆ ಇಷ್ಟವಾಗುವಂತಹ ಭಕ್ತರಾಗಲು ಪ್ರಯತ್ನಿಸೋಣ.

೩. ದತ್ತನ ಕಾರ್ಯ

ದತ್ತ ವಿಷ್ಣುವಿನ ಅವತಾರವಾಗಿದ್ದು ಅವನ ಕಾರ್ಯ ಸೃಷ್ಟಿಯ ರಕ್ಷಣೆ, ಜನರಲ್ಲಿ ಭಕ್ತಿಯ ಆಕರ್ಷಣೆಯನ್ನು ನಿರ್ಮಿಸುವುದು ಹಾಗೂ ಜನರಿಗೆ ಆದರ್ಶ ಮತ್ತು ಆನಂದಮಯ ಜೀವನ ನಡೆಸಲು ಕಲಿಸುವುದಾಗಿದೆ.

೪. ದತ್ತನ ಗುರುಗಳು

ದತ್ತನು ೨೪ ಗುರುಗಳನ್ನು ಸ್ವೀಕರಿಸಿದನು. ಇದರಿಂದ ದತ್ತ ನಮಗೆ ‘ನಿರಂತರವಾಗಿ ಕಲಿಯುವ ಸ್ಥಿತಿಯಲ್ಲಿರಬೇಕು', ಎಂಬುದನ್ನು ಕಲಿಸುತ್ತಾನೆ. ಯಾರು ಕಲಿಯುವ ಸ್ಥಿತಿಯಲ್ಲಿರುತ್ತಾರೆಯೋ, ಅವರೇ ಜ್ಞಾನಗ್ರಹಿಸಲು ಸಾಧ್ಯ. ಈ ದತ್ತ ಜಂತಿಗೆ ನಾವು ನಿರಂತರ ಕಲಿಯುವ ಸ್ಥಿತಿಯಲ್ಲಿದ್ದು ಆನಂದಮಯ ಜೀವನ ನಡೆಸಲು ನಿರ್ಧರಿಸೋಣ. ಅದಕ್ಕಾಗಿ ನಾವು ದತ್ತನು ಸ್ವೀಕರಿಸಿದ ಕೆಲವು ಗುರುಗಳ ಮಾಹಿತಿಯನ್ನು ನೋಡೋಣ.

೪ ಅ ಪೃಥ್ವಿ : ನಾವು ಪೃಥ್ವಿಯ ಹಾಗೆ ಸಹನಶೀಲರಾಗಿರಬೇಕು. ಚಿಕ್ಕ ಮಗು ತಾಯಿಯ ಮಡಿಲಲ್ಲಿರುವಾಗ ಅವಳಿಗೆ ತುಳಿಯುತ್ತದೆ, ಮೈ ಮೇಲೆ ಮಲ-ಮೂತ್ರ ವಿಸರ್ಜಿಸುತ್ತದೆ, ಆದರೂ ತಾಯಿ ಅದರ ಮೇಲೆ ಕೋಪಿಸಿಕೊಳ್ಳುವುದಿಲ್ಲ. ನಾವು ಕೂಡ ಭೂಮಿಯ ಮೇಲೆ ಮಲ-ಮೂತ್ರ ವಿಸರ್ಜಿಸುತ್ತೇವೆ. ಭೂಮಿಯನ್ನು ನೇಗಿಲಿನಿಂದ ಉಳುತ್ತೇವೆ. ಆದರೂ ಭೂಮಿ ತಾಯಿಯು ಯಾವತ್ತೂ ದೂರುವುದಿಲ್ಲ. ತದ್ವಿರುದ್ಧ ನಾವು ಬಿತ್ತಿದ ಧಾನ್ಯಕ್ಕಿಂತ ಅನೇಕಪಟ್ಟು ಹೆಚ್ಚು ಧಾನ್ಯವನ್ನು ನಮಗೆ ನೀಡುತ್ತಾಳೆ. ಅದೇ ರೀತಿ ನಮಗೆ ಯಾರಾದರೂ ಅಪಶಬ್ದಗಳಿಂದ ಮಾತನಾಡಿದರೆ, ಅಥವಾ ಯಾರಾದರೂ ನಮಗೆ ಅವಮಾನ ಮಾಡಿದರೆ, ನಾವು ಕೋಪಿಸಿಕೊಳ್ಳದೆ ಅವರನ್ನು ಕ್ಷಮಿಸಿ ಅವರೊಂದಿಗೆ ಪ್ರೇಮದಿಂದ ವರ್ತಿಸಬೇಕು. ಪೃಥ್ವಿಯ ಈ ಗುಣವನ್ನು ಕಲಿಯುವ ಪ್ರಯತ್ನ ಮಾಡಿದರೆ ನಾವು ಇತರರಿಗೆ ಆನಂದ ನೀಡಬಹುದು.

೪ ಆ. ವಾಯು : ಗಾಳಿ ಎಲ್ಲಿಯೇ ಹೋದರೂ, ಅದು ವಿರಕ್ತ ಆಗಿರುತ್ತದೆ. ನಾವು ಕೆಟ್ಟ ಹುಡುಗರೊಂದಿಗೆ ಹೋದರೆ ತಕ್ಷಣ ಅವರಂತೆಯೇ ಆಗುತ್ತೇವೆ. ನಾವು ಕೂಡ ಗಾಳಿಯಂತೆ ವಿರಕ್ತ ಆಗಿರಬೇಕು.

೪ ಇ. ಆಕಾಶ : ಆತ್ಮವು ಆಕಾಶದಂತೆ ಚರಾಚರದಲ್ಲಿನ ವಸ್ತುಗಳನ್ನು ವ್ಯಾಪಿಸಿಕೊಂಡಿದೆ. ಅದು ಎಲ್ಲರೊಂದಿಗೆ ಸಮಭಾವದಿಂದ ವರ್ತಿಸುತ್ತದೆ. ಯಾರೊಂದಿಗೂ ಶತ್ರುತ್ವ ಇಲ್ಲದಿರುವುದರಿಂದ ಅದು ನಿರ್ಮಲವಾಗಿದೆ. ನಾವು ಕೂಡ ಮನಸ್ಸಿನಿಂದ ನಿರ್ಮಲವಾಗಿರಲು ಪ್ರಯತ್ನಿಸಬೇಕು.

೪ ಈ. ನೀರು : ನಾವು ನೀರಿನಂತೆ ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸಬೇಕು. ನೀರು ಯಾರೊಂದಿಗೂ ಭೇದಭಾವ ಮಾಡುವುದಿಲ್ಲ. ಎಲ್ಲರೊಂದಿಗೂ ಸಮಾನವಾಗಿ ವರ್ತಿಸುತ್ತದೆ. ನಾವು ಯಾವ ಪಾತ್ರೆಯಲ್ಲಿ ನೀರನ್ನು ಇಡುತ್ತೇವೆಯೋ, ನೀರು ಅದೇ ಆಕಾರವನ್ನು ಹೊಂದುತ್ತದೆ. ಹಾಗೆಯೇ ನಾವು ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ನೀರು ಎತ್ತರದ ಸ್ಥಳವನ್ನು ತ್ಯಜಿಸಿ ತಗ್ಗು ಪ್ರದೇಶವನ್ನು ಸ್ವೀಕರಿಸುತ್ತದೆ. ಅದೇ ರೀತಿ ನಾವು ಕೂಡ ನಮ್ಮಲ್ಲಿನ ಅಹಂಮನ್ನು ತ್ಯಾಗ ಮಾಡಿ ಶರಣಾಗತರಾಗಬೇಕು.

೪ ಉ. ಅಗ್ನಿ : ಅಗ್ನಿ ಅಂಧಕಾರವನ್ನು ಹೋಗಲಾಡಿಸುತ್ತದೆ. ನಾವು ಕೂಡ ನಮ್ಮಲ್ಲಿರುವ ಹಾಗೂ ಇತರರ ಜೀವನದಲ್ಲಿನ ಅಹಂಕಾರ ಸ್ವರೂಪದ ಅಜ್ಞಾನವನ್ನು ನಾಶಗೊಳಿಸಬೇಕು. ಹಾಗೆ ಮಾಡಿದರೆ ಮಾತ್ರ ನಾವು ಮತ್ತು ಸಮಾಜ ಆನಂದಮಯ ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆ. ಅಗ್ನಿಯ ಜ್ವಾಲೆ ಕ್ಷಣದಲ್ಲಿಯೇ ನಾಶವಾಗುತ್ತದೆ. ಅದೇ ರೀತಿ ನಮ್ಮ ದೇಹವೂ ಕ್ಷಣಭಂಗುರವಾಗಿದೆ (ನಶ್ವರವಾಗಿದೆ). ಅದರ ಬಗ್ಗೆ ಸುಳ್ಳು ಅಭಿಮಾನವನ್ನಿಟ್ಟುಕೊಳ್ಳುವುದಕ್ಕಿಂತ ದೇವರ ಅಸ್ಥಿತ್ವವನ್ನು ಮನ್ನಿಸಬೇಕು. 'ದೇಹ ಇಂದು ಇದೆ ನಾಳೆ ಇರುವುದಿಲ್ಲ; ಆದರೆ ನಮ್ಮಲ್ಲಿರುವ ಆತ್ಮ ಚಿರಂತನವಾಗಿದೆ', ಎಂಬುದನ್ನು ಜಾಗೃತಗೊಳಿಸುವ ದಿನವೇ ದತ್ತ ಜಯಂತಿ.

೪ ಊ. ಚಂದ್ರ : ಚಂದ್ರ ತನ್ನ ಶೀತಲ ಕಿರಣಗಳಿಂದ ಇತರರಿಗೆ ಆನಂದ ನೀಡುತ್ತಾನೆ. ನಾವು ನಮ್ಮ ಪ್ರತಿಯೊಂದು ಕೃತಿಯಿಂದ ಇತರರಿಗೆ ಆನಂದವನ್ನು ನೀಡಬೇಕು. ಇಂದು ನಾವು ಅದನ್ನು ತಿಳಿದುಕೊಂಡು ಪ್ರಾರ್ಥನೆ ಮಾಡಬೇಕು, ‘ನೀನು ಹೇಗೆ ನಿನ್ನ ಕಿರಣಗಳಿಂದ ಇತರರಿಗೆ ಆನಂದ ನೀಡುತ್ತಿಯೋ, ಹಾಗೆಯೇ ನನಗೆ ನನ್ನ ವರ್ತನೆ ಮತ್ತು ಮಾತಿನಿಂದ ಇತರರಿಗೆ ಆನಂದ ನೀಡಲು ಸಾಧ್ಯವಾಗಲಿ?' ದತ್ತನ ಚರಣಗಳಲ್ಲಿ ಈ ಮುಂದಿನಂತೆ ಕ್ಷಮೆಯಾಚನೆ ಮಾಡಬೇಕು, ‘ಹೇ ದತ್ತಾತ್ರೇಯಾ, ನಾನು ಇಂದಿನ ತನಕ ನನ್ನ ಕೃತಿಯಿಂದ ಯಾರಿಗಾದರೂ ನೋಯಿಸಿದ್ದರೆ, ನನ್ನನ್ನು ಕ್ಷಮಿಸು' ಎಂದು.

೫. ದತ್ತನ ಪರಿವಾರದ ಭಾವಾರ್ಥ

೫ ಅ. ಹಸು : ದತ್ತನ ಹಿಂದೆ ಇರುವ ಹಸು ಪೃಥ್ವಿ ಮತ್ತು ಕಾಮಧೇನುವಿನ ಪ್ರತಿರೂಪವಾಗಿದೆ. ಕಾಮಧೇನು ನಮಗೆ ಬೇಕಾಗುವ ಎಲ್ಲವನ್ನೂ ನೀಡುತ್ತದೆ. ಪೃಥ್ವಿ ಹಾಗೂ ಹಸು ನಮಗೆ ಎಲ್ಲವನ್ನೂ ನೀಡುತ್ತವೆ.

೫ ಆ. ನಾಲ್ಕು ನಾಯಿಗಳು : ಇವುಗಳು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಇವುಗಳ ಪ್ರತಿರೂಪವಾಗಿವೆ.

೫ ಇ. ಔದುಂಬರ (ಅತ್ತಿ ) : ದತ್ತನ ಪೂಜನೀಯ ರೂಪ ! ಈ ವೃಕ್ಷದಲ್ಲಿ ದತ್ತ ತತ್ತ್ವ ಹೆಚ್ಚು ಪ್ರಮಾಣದಲ್ಲಿರುತ್ತದೆ.

೬. ಮೂರ್ತಿವಿಜ್ಞಾನ

ದತ್ತನ ಮೂರ್ತಿಯಲ್ಲಿನ ವಸ್ತುಗಳ ಭಾವಾರ್ಥ ಈ ಮುಂದಿನಂತಿದೆ.

೬ ಅ. ಕಮಂಡಲ ಮತ್ತು ಜಪಮಾಲೆ : ಇದು ಬ್ರಹ್ಮದೇವನ ಪ್ರತಿರೂಪವಾಗಿದೆ.

೬ ಆ. ಶಂಖ ಮತ್ತು ಚಕ್ರ : ಶ್ರೀವಿಷ್ಣುವಿನ ಪ್ರತಿರೂಪವಾಗಿದೆ.

೬ ಇ. ತ್ರಿಶೂಲ ಮತ್ತು ಡಮರು (ಚರ್ಮವಾದ್ಯ) : ಶಂಕರನ ಪ್ರತಿರೂಪವಾಗಿದೆ.

೬ ಈ. ಜೋಳಿಗೆ : ಇದು ಅಹಂ ನಾಶವಾಗಿರುವುದರ ಸಂಕೇತವಾಗಿದೆ. ಜೋಳಿಗೆ ಹಿಡಿದುಕೊಂಡು ಮನೆಮನೆಗೆ ಅಲೆದಾಡಿ ಭಿಕ್ಷೆ ಬೇಡುವುದರಿಂದ ಅಹಂ ನಾಶವಾಗುತ್ತದೆ.

೭. ಪ್ರಮುಖ ತೀರ್ಥಕ್ಷೇತ್ರಗಳು

೭ ಅ. ಮಾಹೂರು : ತಾಲೂಕು ಕಿನವಟ, ಜಿಲ್ಲೆ ನಾಂದೇಡ, ಮಹಾರಾಷ್ಟ್ರ.

೭ ಆ. ಗಿರನಾರ : ಜುನಾಗಡದ ಸಮೀಪ, ಸೌರಾಷ್ಟ್ರ. ಇದಕ್ಕೆ ೧೦ ಸಾವಿರ ಮೆಟ್ಟಿಲುಗಳಿವೆ.

೭ ಇ. ಕಾರಂಜಾ : ಶ್ರೀ ನೃಸಿಂಹ ಸರಸ್ವತಿಯವರ ಜನ್ಮಸ್ಥಾನ ! ಕಾಶಿಯ ಬ್ರಹ್ಮಾನಂದ ಸರಸ್ವತಿಯವರು ಈ ಸ್ಥಳದಲ್ಲಿ ಪ್ರಥಮತಃ ದತ್ತ ಮಂದಿರವನ್ನು ಸ್ಥಾಪಿಸಿದರು.

೭ ಈ. ಔದುಂಬರ : ಶ್ರೀ ನೃಸಿಂಹ ಸರಸ್ವತಿಯವರು ಚತುರ್ಮಾಸದಲ್ಲಿ ಇಲ್ಲಿ ನಿವಾಸ ಮಾಡಿದ್ದರು. ಈ ಸ್ಥಾನ ಮಹಾರಾಷ್ಟ್ರದ ಭಿಲವಾಡಿ ನಿಲ್ದಾಣದಿಂದ ೧೦ ಕಿ. ಮೀ. ಅಂತರದಲ್ಲಿ ಕೃಷ್ಣಾನದಿಯ ದಡದಲ್ಲಿದೆ.

೭ ಉ. ನರಸೋಬಾಚಿವಾಡಿ : ಇದು ಮಹಾರಾಷ್ಟ್ರದಲ್ಲಿದ್ದು ಶ್ರೀ ನೃಸಿಂಹ ಸರಸ್ವತಿಯವರು ೧೨ ವರ್ಷ ಇಲ್ಲಿ ವಾಸಿಸಿದ್ದರು. ಇಲ್ಲಿ ಕೃಷ್ಣಾ ಮತ್ತು ಪಂಚಗಂಗಾ ನದಿಗಳ ಸಂಗಮವಿದೆ.

೭ ಊ. ಗಾಣಗಾಪುರ : ಇದು ಪುಣೆ-ರಾಯಚೂರು ಮಾರ್ಗದಲ್ಲಿ ಕರ್ನಾಟಕದಲ್ಲಿದೆ. ಇಲ್ಲಿ ಭೀಮಾ ಮತ್ತು ಅಮರಾಜಾ ನದಿಗಳ ಸಂಗಮವಿದೆ. ಶ್ರೀ ನೃಸಿಂಹ ಸರಸ್ವತಿಯವರು ಇಲ್ಲಿ ೨೩ ವರ್ಷಗಳಷ್ಟು ಕಾಲ ವಾಸಿಸುತ್ತಿದ್ದರು.

೮. ಪ್ರವಾಸಕ್ಕಾಗಿ ಪರ್ಯಟನ ಸ್ಥಳಗಳಿಗೆ ಹೋಗದೆ
ತೀರ್ಥಕ್ಷೇತ್ರಗಳಿಗೆ ಹೋಗಿ ಅಲ್ಲಿನ ಚೈತನ್ಯದ ಅನುಭೂತಿಯನ್ನು ಪಡೆಯೋಣ !

ದತ್ತನ ಎಲ್ಲ ತೀರ್ಥಕ್ಷೇತ್ರಗಳೂ ಅತ್ಯಂತ ಜಾಗೃತವಾಗಿವೆ. ನಾವು ಎಲ್ಲೆಲ್ಲೋ ತಿರುಗಾಡಲು ಹೋಗುವುದಕ್ಕಿಂತ ಇಂತಹ ಸ್ಥಾನಗಳಿಗೆ ಭೇಟಿ ನೀಡಬೇಕು; ಏಕೆಂದರೆ ಆ ಸ್ಥಾನದಲ್ಲಿ ನಮಗೆ ಅಲ್ಲಿರುವ ಶಕ್ತಿಯ ಲಾಭವಾಗುವುದು. ಪ್ರವಾಸಸ್ಥಾನಗಳಿಗೆ ಭೇಟಿ ನೀಡುವ ಬದಲು ತೀರ್ಥಕ್ಷೇತ್ರಗಳಿಗೆ ಕರೆದುಕೊಂಡು ಹೋಗಲು ನಿಮ್ಮ ಶಿಕ್ಷಕರಿಗೆ ಹೇಳಿ. ಅನೇಕರಿಗೆ ಈ ಸ್ಥಳಗಳಿಗೆ ಹೋದಾಗ ಶಾಂತವೆನಿಸುವುದು, ಮನಸ್ಸಿನ ಏಕಾಗ್ರತೆ ಹೆಚ್ಚುವುದು, ಹಾಗೂ ಉತ್ಸಾಹ ಹೆಚ್ಚಾಗುವುದು, ಇತ್ಯಾದಿ ಅನೇಕ ಅನುಭೂತಿಗಳು ಬಂದಿವೆ.

೯. ದತ್ತನ ಉಪಾಸನೆ ಹೇಗೆ ಮಾಡಬೇಕು ?

೯ ಅ. ಗಂಧ : ದತ್ತನಿಗೆ ಅನಾಮಿಕೆಯಿಂದ (ಕಿರುಬೆರಳಿನ ಪಕ್ಕದ ಬೆರಳಿನಿಂದ) ಗಂಧ ಹಚ್ಚಬೇಕು.

೯ ಆ. ಹೂವು : ಜಾಜಿ ಮತ್ತು ನಿಶಿಗಂಧ ಈ ಹೂವುಗಳನ್ನು ಏಳು ಅಥವಾ ಏಳರ ಪಟ್ಟುಗಳಲ್ಲಿ ಅರ್ಪಿಸಬೇಕು.

೯ ಇ. ಊದುಬತ್ತಿ : ಚಂದನ, ಕೇದಗೆ, ಮಲ್ಲಿಗೆ, ಜಾಜಿ ಅಥವಾ ಕನಕಾಂಬರ ಇತ್ಯಾದಿ ಸುಗಂಧದ ಊದುಬತ್ತಿಗಳನ್ನು ಹಚ್ಚಬೇಕು.

೯ ಈ. ಅತ್ತರ (ಸುಗಂಧದ್ರವ್ಯ) : ದತ್ತನಿಗೆ 'ಲಾವಂಚದ ಬೇರು'ಈ ಸುಗಂಧದ ಅತ್ತರ ಅರ್ಪಿಸಬೇಕು.

೯ ಉ. ಪ್ರದಕ್ಷಿಣೆ : ದತ್ತನ ಸುತ್ತಲೂ ೭ ಪ್ರದಕ್ಷಿಣೆ ಹಾಕಬೇಕು.

೧೦. ಪ್ರತಿಯೊಂದು ದೇವತೆಯ ಶಾಸ್ತ್ರೀಯ ಮಾಹಿತಿಯನ್ನು ತಿಳಿದುಕೊಂಡು ಅದನ್ನು ಇತರರಿಗೂ ಹೇಳಿ ಧರ್ಮಪ್ರಸಾರ ಮಾಡಿ !

ಮಕ್ಕಳೇ, ಇಂದು ನಾವು ‘ದತ್ತ'ದೇವರ ಮಾಹಿತಿಯನ್ನು ತಿಳಿದುಕೊಂಡೆವು. ಇದರಿಂದ ನಮಗೆ ಧರ್ಮಶಿಕ್ಷಣ ತೆಗೆದುಕೊಳ್ಳುವ ಅವಶ್ಯಕತೆಯೆಷ್ಟಿದೆ, ಎಂಬುದು ತಿಳಿಯಿತು. ಶಾಲೆಗಳಲ್ಲಿ ನಮ್ಮ ದೇವತೆಗಳ ಮಾಹಿತಿಯನ್ನು ನೀಡದಿರುವುದರಿಂದ ನಮ್ಮ ದೇವತೆಗಳ ವಿಷಯದಲ್ಲಿ ಶ್ರದ್ಧೆ ಹೆಚ್ಚಾಗುವುದಿಲ್ಲ. ಅಷ್ಟೇ ಅಲ್ಲ ನಮಗೆ ಯಾರಾದರೂ ಅದರ ವಿಷಯದಲ್ಲಿ ಮಾಹಿತಿಯನ್ನು ಕೇಳಿದರೆ, ನಮಗೆ ಹೇಳಲು ಬರುವುದಿಲ್ಲ. ಈ ಸ್ಥಿತಿಯನ್ನು ಬದಲಾಯಿಸಲಿಕ್ಕಾಗಿ ನಾವು ನಮ್ಮ ಪ್ರತಿಯೊಂದು ದೇವತೆಯ ಶಾಸ್ತ್ರೀಯ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗೂ ಇತರರಿಗೂ ಹೇಳೋಣ. ಹೀಗೆ ಮಾಡಿದರೆ ದತ್ತಾತ್ರೇಯನಿಗೆ ಇಷ್ಟವಾಗುವುದು. ಹಾಗಾದರೆ, ಮಕ್ಕಳೇ, ತಮ್ಮ ದೇವತೆಗಳ ಮಾಹಿತಿಯನ್ನು ಸಮಾಜಕ್ಕೆ ಹೇಳಿ ಧರ್ಮಪ್ರಸಾರ ಮಾಡುವಿರಲ್ಲವೇ?

– ಶ್ರೀ. ರಾಜೇಂದ್ರ ಪಾವಸಕರ, ಪನವೇಲ.

Leave a Comment