ದತ್ತನ ಪರಿವಾರದ ಭಾವಾರ್ಥ

ದತ್ತನ ಹಿಂದೆ ನಿಂತಿರುವ ಹಸುವು ಪೃಥ್ವಿ ಹಾಗೂ ನಾಲ್ಕು ನಾಯಿಗಳು ನಾಲ್ಕು ವೇದಗಳ ಪ್ರತೀಕವಾಗಿವೆ. ಅತ್ತಿ ವೃಕ್ಷದಲ್ಲಿ ದತ್ತ ತತ್ತ್ವವು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಅತ್ತಿ ವೃಕ್ಷವು ದತ್ತನ ಪೂಜನೀಯ ರೂಪವಾಗಿದೆ.

ದತ್ತಗುರುಗಳು ಪೃಥ್ವಿಯನ್ನು ಗುರುವನ್ನಾಗಿ ಸ್ವೀಕರಿಸಿ ಪೃಥ್ವಿಯಿಂದ ಸಹನಶೀಲತೆ ಹಾಗೂ ಸಹಿಷ್ಣುತೆಯ ಪಾಠ ಕಲಿತರು. ಅಂತೆಯೇ ಅಗ್ನಿಯನ್ನು ಗುರುವಾಗಿ ಸ್ವೀಕರಿಸಿ ಅಗ್ನಿಯ ಜ್ವಾಲೆಯಿಂದ ಈ ದೇಹವು ಕ್ಷಣಿಕವಾಗಿದೆ ಎಂಬುದನ್ನು ಕಲಿತರು. ಈ ರೀತಿಯಲ್ಲಿ ದತ್ತಗುರುಗಳು ಚರಾಚರದಲ್ಲಿರುವ ಪ್ರತಿಯೊಂದು ವಸ್ತುವಿನಲ್ಲಿರುವ ಈಶ್ವರನ ಅಸ್ತಿತ್ವವನ್ನು ಅರಿತುಕೊಳ್ಳಲು ೨೪ ಗುರುಗಳನ್ನು ಮಾಡಿಕೊಂಡರು.

ದತ್ತಗುರುಗಳ ಮೊದಲ ಅವತಾರ 'ಶ್ರೀಪಾದ ಶ್ರೀವಲ್ಲಭ', ಎರಡನೇ ಅವತಾರ 'ಶ್ರೀ ನೃಸಿಂಹ ಸರಸ್ವತಿ', ಮೂರನೇ ಅವತಾರ 'ಮಾಣಿಕಪ್ರಭು' ಹಾಗೂ ನಾಲ್ಕನೇ ಅವತಾರ 'ಶ್ರೀ ಸ್ವಾಮಿ ಸಮರ್ಥ ಮಹಾರಾಜ'ರು ಆಗಿದ್ದಾರೆ. ಈ ನಾಲ್ಕು ಅವತಾರಗಳು ಪೂರ್ಣಾವತಾರಗಳಾಗಿದ್ದು ಅನೇಕ ಅಂಶಾತ್ಮಕ ಅವತಾರಗಳಿವೆ. ಜೈನ ಪಂಥದವರು ದತ್ತಗುರುಗಳನ್ನು 'ನೇಮೀನಾಥ' ಎಂದು ನೋಡುತ್ತಾರೆ.

ದತ್ತಗುರುಗಳು ದಿನವಿಡಿ ಬಹಳ ಸಂಚರಿಸುತ್ತಾರೆ. ಅವರು ಸ್ನಾನಕ್ಕಾಗಿ ವಾರಣಾಸಿಗೆ, ಚಂದನವನ್ನು ಹಚ್ಚಿಕೊಳ್ಳಲು ಪ್ರಯಾಗಕ್ಕೆ ಹೋದರೆ, ಮದ್ಯಾಹ್ನದ ಭಿಕ್ಷೆಗಾಗಿ ಕೊಲ್ಹಾಪುರಕ್ಕೆ ಹೋಗುತ್ತಾರೆ; ಹಾಗೂ ಮದ್ಯಾಹ್ನದ ಊಟಕ್ಕಾಗಿ ಬೀಡ ಜಿಲ್ಲೆಯ ಗೋದಾವರಿಯ ತೀರದಲ್ಲಿರುವ ಪಾಂಚಾಳೇಶ್ವರಕ್ಕೆ ಹೋದರೆ, ತಾಂಬೂಲಕ್ಕಾಗಿ ಮರಾಠವಾಡದಲ್ಲಿ ರಾಕ್ಷಸಭುವನವನ್ನು ತಲುಪುತ್ತಾರೆ, ಪ್ರವಚನ ಹಾಗೂ ಕೀರ್ತನೆಗಳನ್ನು ಕೇಳಲು ಬಿಹಾರದ ನೈಮಿಷ್ಯಾರಣ್ಯವನ್ನು ಪ್ರವೇಶಿಸಿದರೆ, ಮಲಗಲು ಮಾಹುರಗಡಕ್ಕೆ ಹೋಗುತ್ತಾರೆ ಹಾಗೂ ಗಿರನಾರನಲ್ಲಿ ಯೋಗಾಭ್ಯಾಸ ಮಾಡುತ್ತಾರೆ.

ದತ್ತಪೂಜೆಗಾಗಿ ಸಗುಣ ಮೂರ್ತಿಗಿಂತಲೂ ಪಾದುಕೆ ಅಥವಾ ಅತ್ತಿ ವೃಕ್ಷದ ಪೂಜೆ ಮಾಡುತ್ತಾರೆ. ಮೊದಲು ದತ್ತನ ಬಹಳಷ್ಟು ಮೂರ್ತಿಗಳು ಏಕಮುಖಿಯಾಗಿದ್ದವು. ಈಗ ಮೂರು ಮುಖದ (ತ್ರಿಮುಖ) ಮೂರ್ತಿಗಳು ಪ್ರಚಲಿತವಾಗಿವೆ. ದತ್ತನು 'ಗುರುದೇವ' ಆಗಿದ್ದಾನೆ. ದತ್ತಾತ್ರೇಯನನ್ನು ಪರಮಗುರು ಎಂದು ತಿಳಿಯಲಾಗಿದೆ. ಅವರ ಉಪಾಸನೆಯನ್ನು ಗುರುಗಳ ಸ್ವರೂಪದಲ್ಲಿಯೇ ಮಾಡಬೇಕು. 'ಶ್ರೀ ಗುರುದೇವದತ್ತ', 'ಶ್ರೀ ಗುರುದೇವದತ್ತ' ಎಂದು ಅವರ ಜಯಘೋಷ ಮಾಡುತ್ತಾರೆ, 'ದಿಗಂಬರಾ ದಿಗಂಬರಾ ಶ್ರೀಪಾದ ವಲ್ಲಭ ದಿಗಂಬರಾ' ಎಂಬ ನಾಮಗೀತೆಯೂ ಇದೆ.

ದತ್ತಾತ್ರೇಯರ ಭುಜದಲ್ಲಿ ಒಂದು ಜೋಳಿಗೆ ಇದೆ. ಅದರ ಭಾವಾರ್ಥವು ಮುಂದಿನಂತಿದೆ: ಜೋಳಿಗೆಯು ಜೇನುಗೂಡಿನ ಪ್ರತೀಕವಾಗಿದೆ. ಜೇನುನೊಣಗಳು ಹೇಗೆ ಆಲ್ಲಲಿ ಹೋಗಿ ಮಕರಂದವನ್ನು ಒಟ್ಟುಗೂಡಿಸಿ ಒಂದೆಡೆ ಸಂಗ್ರಹಿಸುತ್ತವೆಯೋ, ಅಂತೆಯೇ ದತ್ತ ದೇವರು ಪ್ರತಿದಿನ ತಿರುಗಾಡಿ ಭಿಕ್ಷೆಯನ್ನು ಸಂಗ್ರಹಿಸುತ್ತಾರೆ. ಪ್ರತಿದಿನ ತಿರುಗಾಡಿ ಭಿಕ್ಷೆ ಬೇಡುವುದರಿಂದ ಅಹಂ ಕಡಿಮೆಯಾಗುತ್ತದೆ; ಆದುದರಿಂದ ಜೋಳಿಗೆಯು ಅಹಂ ನಷ್ಟವಾಗಿರುವುದರ ಪ್ರತೀಕವಾಗಿದೆ.

ಆಧಾರ : ಸನಾತನ ನಿರ್ಮಿತ ಗ್ರಂಥ 'ದತ್ತ'