ನಿಜವಾದ ದಾನಿ

ನಿಜವಾದ ದಾನಿ ಎಂದರೆ ಯಾರು? ಮತ್ತು ಇಂತಹ ದಾನಿಯನ್ನು ಪರಮಾತ್ಮನು ಹೇಗೆ ಗುರುತಿಸಿ ಬಹುಮಾನವನ್ನು ಕೊಡುತ್ತಾನೆ ಎಂದು ನೋಡೋಣ.

ಕಾಶಿಯು ಪ್ರಾಚೀನ ಕಾಲದಿಂದಲೂ ಪ್ರಸಿದ್ಧವಾಗಿದೆ. ಕಾಶಿಯಲ್ಲಿ ಶಿವನು ‘ವಿಶ್ವನಾಥ’ ಎನ್ನುವ ಹೆಸರಿನಲ್ಲಿ ನೆಲೆಸಿದ್ದಾನೆ. ಒಂದು ದಿನ ವಿಶ್ವನಾಥನು ದೇವಸ್ಥಾನದ ಪೂಜಾರಿಯ ಕನಸಿನಲ್ಲಿ ಬಂದು, ವಿದ್ವಾಂಸರನ್ನು ಮತ್ತು ಧರ್ಮಾತ್ಮರನ್ನು ದೇವಸ್ಥಾನಕ್ಕೆ ಕರೆಯಲು ಹೇಳಿದನು. ಪೂಜಾರಿಯು ಮರುದಿನವೇ ನಗರದ ಎಲ್ಲ ವಿದ್ವಾಂಸರು, ಸಾಧುಗಳು, ಪುಣ್ಯಾತ್ಮರು ಮತ್ತು ದಾನಿಗಳನ್ನು ಕರೆದನು. ಎಲ್ಲರೂ ನದಿಯಲ್ಲಿ ಸ್ನಾನ ಮಾಡಿ ದೇವಸ್ಥಾನಕ್ಕೆ ಬಂದು ಸಭಾಮಂಟಪದಲ್ಲಿ ಸೇರಿದರು. ಆ ದಿನ ದೇವಸ್ಥಾನದಲ್ಲಿ ಬಹಳಷ್ಟು ಜನ ನೆರೆದಿದ್ದರು. ಪೂಜಾರಿಯು ತನ್ನ ಸ್ವಪ್ನವನ್ನು ಎಲ್ಲರಿಗೂ ತಿಳಿಸಿದನು. ಶಿವನಿಗೆ ಆರತಿಯಾಯಿತು. ಘಂಟಾನಾದದ ನಂತರ ಅಕಸ್ಮಾತ್ತಾಗಿ ಮಂದಿರವೆಲ್ಲವೂ ಪ್ರಕಾಶಮಾನವಾಗಿ ಕಾಣಿಸತೊಡಗಿತು. ನೋಡಿದಾಗ ವಿಶ್ವನಾಥನ ಮೂರ್ತಿಯ ಹತ್ತಿರ ರತ್ನಾಕ್ಷರಗಳಿಂದ ಬರೆದ ಒಂದು ಬಂಗಾರದ ಪತ್ರವು ಬಿದ್ದಿತ್ತು. ಪೂಜಾರಿಯು ಆ ಪತ್ರವನ್ನು ಓದಿದನು. ಅದರಲ್ಲಿ, ‘ಎಲ್ಲರಿಗಿಂತ ಹೆಚ್ಚು ದಯಾಳು ಮತ್ತು ಪುಣ್ಯಾತ್ಮನಿಗೆ ಇದು ವಿಶ್ವನಾಥನ ಬಹುಮಾನ’ ಎಂದು ರತ್ನಗಳಿಂದ ಬರೆದಿತ್ತು. ಪೂಜಾರಿಯು ತ್ಯಾಗಿಯೂ, ಭಗವದ್ಭಕ್ತನೂ ಆಗಿದ್ದನು. ಆ ಪತ್ರವನ್ನು ಎಲ್ಲರಿಗೂ ತೋರಿಸಿದನು. ಪ್ರತಿ ಸೋಮವಾರ ನಡೆಯುವ ಸಭೆಯಲ್ಲಿ ಯಾರು ತಮ್ಮನ್ನು ತಾವು ಉತ್ತಮ ಪುಣ್ಯಾತ್ಮ ಮತ್ತು ದಯಾಳು ಎಂದು ಸಿದ್ಧಪಡಿಸುತ್ತಾರೆಯೋ ಅವರಿಗೆ ಈ ಸ್ವರ್ಣಪತ್ರವನ್ನು ಕೊಡಲಾಗುವುದು ಎಂದು ಹೇಳಿದನು.

ದೇಶದ ನಾಲ್ಕು ದಿಕ್ಕುಗಳಲ್ಲಿಯೂ ಈ ಸಮಾಚಾರ ಹರಡಿತು. ದೂರ ದೂರದಿಂದ ಎಲ್ಲರೂ ಕಾಶಿಗೆ ಬರಲಾರಂಭಿಸಿದರು. ಒಬ್ಬ ಬ್ರಾಹ್ಮಣನು ಬಹಳ ತಿಂಗಳಿನಿಂದ ಸತತವಾಗಿ ಚಾಂದ್ರಾಯಣ ವ್ರತವನ್ನು ಮಾಡಿದ್ದನು. ಅವನ ಕೈಗೆ ಸ್ವರ್ಣಪತ್ರವನ್ನು ಕೊಡಲಾಯಿತು. ಬ್ರಾಹ್ಮಣನು ಪತ್ರವನ್ನು ಹಿಡಿದ ಕೂಡಲೇ ಅದು ಮಣ್ಣಾಗಿ ಹೋಯಿತು. ಅದರ ಪ್ರಕಾಶವು ನಾಶವಾಯಿತು. ಬ್ರಾಹ್ಮಣನಿಗೆ ನಾಚಿಕೆಯಾಗಿ ಆ ಪತ್ರವನ್ನು ಹಿಂದಿರುಗಿಸಿದನು. ಪೂಜಾರಿಯ ಕೈಗೆ ಸೇರಿದ ಕೂಡಲೇ ಆ ಪತ್ರವು ಪುನಃ ಚಿನ್ನದ್ದಾಯಿತು. ಒಬ್ಬರು ಹಿರಿಯರು ಬಹಳಷ್ಟು ವಿದ್ಯಾಲಯಗಳನ್ನು ಕಟ್ಟಿಸಿದ್ದರು. ಎಷ್ಟೋ ಸ್ಥಳಗಳಲ್ಲಿ ಸೇವಾಶ್ರಮವನ್ನು ನಡೆಸುತ್ತಿದ್ದರು. ಅವರಲ್ಲಿದ್ದ ಹಣವೆಲ್ಲವೂ ದಾನ ಮಾಡಿದ್ದರು. ಇವರು ಸ್ವರ್ಣಪತ್ರವನ್ನು ತೆಗೆದುಕೊಳ್ಳಲು ಬಂದಿದ್ದರು. ಆದರೆ ಅವರ ಕೈಗೆ ಹೋದ ಕೂಡಲೇ ಪತ್ರವು ಮಣ್ಣಾಗಿ ಹೋಯಿತು.

ಇದೇ ರೀತಿ ಬಹಳಷ್ಟು ಜನರು ಬಂದರು. ತಿಂಗಳುಗಳು ಕಳೆದರೂ ಸ್ವರ್ಣ ಪತ್ರವು ಯಾರಿಗೂ ಸಿಗಲಿಲ್ಲ. ಬಹಳಷ್ಟು ಜನರು ವಿಶ್ವನಾಥನ ದೇವಸ್ಥಾನದ ಬಳಿಯೇ ದಾನ, ಪುಣ್ಯಕರ್ಮಗಳನ್ನು ಮಾಡಲಾರಂಭಿಸಿದರು.

ಒಂದು ದಿನ ಒಬ್ಬ ವಯಸ್ಸಾದ ರೈತನು ‘ವಿಶ್ವನಾಥ’ನ ದರ್ಶನಕ್ಕೆಂದು ಬಂದಿದ್ದನು. ಅವನ ಬಟ್ಟೆಗಳು ಹರಿದಿದ್ದವು. ಆ ರೈತನ ಬಳಿ ಬಟ್ಟೆಯಲ್ಲಿ ಸುತ್ತಿದ ಬುತ್ತಿ ಮತ್ತು ಒಂದು ಹರಿದ ಕಂಬಳಿಯಿತ್ತು. ದೇವಸ್ಥಾನದ ಬಳಿ ಜನರು ಬಡವರಿಗೆ ಬಟ್ಟೆಗಳು ಮತ್ತು ತಿಂಡಿಯನ್ನು ಹಂಚುತ್ತಿದ್ದರು. ಒಬ್ಬನು ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಬಿದ್ದು ಒದ್ದಾಡುತ್ತಿದ್ದನು. ಅವನನ್ನು ಯಾರೂ ನೋಡುತ್ತಿರಲಿಲ್ಲ. ಅವನು ಹಸಿವಿನಿಂದ ಬಳಲುತ್ತಿದ್ದನು. ಆ ರೈತನಿಗೆ ಆ ವ್ಯಕ್ತಿಯ ಮೇಲೆ ದಯೆಯುಂಟಾಯಿತು. ಅವನು ತನ್ನ ಬುತ್ತಿಯನ್ನು ಬಡವನಿಗೆ ತಿನ್ನಲು ಕೊಟ್ಟು ಅವನ ಕಂಬಳಿ ಯನ್ನು ಆ ಬಡವನಿಗೆ ಹೊದಿಸಿ ರೈತನು ದೇವಸ್ಥಾನಕ್ಕೆ ಹೋದನು.

ದೇವಸ್ಥಾನದಲ್ಲಿ ಸ್ವರ್ಣಪತ್ರವನ್ನು ಪಡೆಯಲು ಬಂದವರೆಲ್ಲರೂ ಸೋತುಹೋಗಿದ್ದನ್ನು ನೋಡಿ ಪೂಜಾರಿಯು ಸೋಮವಾರದಂದು ವಿಶ್ವನಾಥನ ದರ್ಶನಕ್ಕೆಂದು ಬರುವ ಎಲ್ಲ ದರ್ಶನಾರ್ಥಿಗಳ ಕೈಗೂ ಈ ಸ್ವರ್ಣಪತ್ರವನ್ನು ಕೊಡಲು ನಿರ್ಧರಿಸಿದನು. ರೈತನು ದರ್ಶನಕ್ಕೆಂದು ಹೋದಾಗ ಪೂಜಾರಿಯು ಅವನ ಕೈಗೆ ಸ್ವರ್ಣ ಪತ್ರವನ್ನು ಕೊಟ್ಟನು. ರೈತನ ಕೈಗೆ ಹೋದ ಸ್ವರ್ಣಪತ್ರವು ಸ್ವರ್ಣಪತ್ರವಾಗಿಯೇ ಉಳಿಯಿತು. ಪೂಜಾರಿಯು, ‘ವಿಶ್ವನಾಥನು ನಿನಗಾಗಿ ಈ ಸ್ವರ್ಣಪತ್ರವನ್ನು ಬಹುಮಾನವೆಂದು ನೀಡಿದ್ದಾನೆ’ ಎಂದನು.

ಮಕ್ಕಳೇ, ಇದರಿಂದ ನಾವು ಏನು ತಿಳಿದುಕೊಳ್ಳಬಹುದು?

ದಾನಿಗಳು, ಪುಣ್ಯಾತ್ಮರು, ‘ನಾವೇ ದಯಾವಂತರು’ ಎಂದು ತಿಳಿದು ಸ್ವರ್ಣಪತ್ರವನ್ನು ತೆಗೆದುಕೊಳ್ಳಲು ಬಂದರು. ಆದರೆ ಅವರೆಲ್ಲರೂ ನಿಜವಾದ ದಾನಿಗಳಲ್ಲ. ಏಕೆಂದರೆ ಇವರೆಲ್ಲರೂ ಸ್ವರ್ಣಪತ್ರವನ್ನು ಪಡೆಯುವ ಆಸೆಯಿಂದ ಬಂದಿದ್ದರು. ಆದರೆ ತನ್ನಲ್ಲಿದ್ದ ಸ್ವಲ್ಪ ಬುತ್ತಿ ಮತ್ತು ಒಂದೇ ಒಂದು ಕಂಬಳಿಯನ್ನು ಕೂಡಾ ತನಗಾಗಿ ಇಟ್ಟುಕೊಳ್ಳದೇ ದಾನ ಮಾಡಿದ ರೈತನು ನಿಜವಾದ ದಾನಿಯಾದನು.

ಮಕ್ಕಳೇ, ನಾವು ಇನ್ನೊಬ್ಬರಿಗೆ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ನಮಗಾಗಿ ಎಷ್ಟು ಇಟ್ಟುಕೊಂಡಿದ್ದೇವೆ ಎನ್ನುವುದನ್ನು ಪರಮಾತ್ಮನು ನೋಡುತ್ತಿರುತ್ತಾನೆ. ನಾವು ಎಷ್ಟು ದಾನ ಮಾಡಿದರೂ ಅದರ ಹಿಂದಿನ ಉದ್ದೇಶವು ಮಹತ್ವದ್ದಾಗಿರುತ್ತದೆ. ಆದ್ದರಿಂದ ನಾವು ಕೂಡಾ ನಮ್ಮಲ್ಲಿರುವ ವಸ್ತುಗಳನ್ನು ಅವಶ್ಯಕತೆಯಿರುವವರಿಗೆ ಯಾವುದೇ ಆಸೆಯಿಲ್ಲದೇ ಕೊಡಲು ಪ್ರಯತ್ನ ಮಾಡೋಣ.

– ಕು. ವಿನುತಾ