ಆದರ್ಶ ಪಾಲಕ

ಪಾಲಕರ ವ್ಯಾಖ್ಯೆ

ತಮ್ಮ ಮಕ್ಕಳಲ್ಲಿರುವ ದೋಷಗಳನ್ನು ನಾಶಗೊಳಿಸಿ ಸದ್ಗುಣಗಳನ್ನು ತರಲು ಸಹಾಯ ಮಾಡುವರೇ ನಿಜವಾದ ಪಾಲಕರಾಗಿದ್ದಾರೆ. ಸದ್ಯದ ಪಾಲಕರ ವ್ಯಾಖ್ಯೆಯೇನಿದೆ? ದುಬಾರಿ ಬಟ್ಟೆಗಳನ್ನು ಖರೀದಿಸಿ ಕೊಡುವುದು, ಅವರಿಗೆ ಬೇಕಾದುದನ್ನು ತಿನ್ನಲು ಕೊಡುವುದು ಹಾಗೂ ದುಬಾರಿ ಶಿಕ್ಷಣವನ್ನು ಕೊಡಿಸಿದರೆ ಅವರ ಕರ್ತವ್ಯವು ಮುಗಿಯುತ್ತದೆ. ಇದರಿಂದ ನಾವು ನಮ್ಮ ಮಕ್ಕಳನ್ನು ಭೋಗಿಗಳನ್ನಾಗಿ ಮಾಡುತ್ತಿದ್ದೇವೆ. ಭೋಗದ ವಿಕಾರದಿಂದ ಅನೇಕ ವಿಕಾರಗಳು ಹುಟ್ಟುತ್ತವೆ. ಭೋಗಿಗಳು ಅನೇಕ ದೋಷಗಳಿಗೆ ಜನ್ಮ ನೀಡುತ್ತಾರೆ ಆದರೆ ತ್ಯಾಗಿಗಳು ಸದ್ಗುಣಗಳಿಗೆ ಜನ್ಮ ನೀಡುತ್ತಾರೆ. ಆಗ ಪಾಲಕರು ಅಂತರ್ಮುಖರಾಗಿ 'ನಾವು ಮಕ್ಕಳಿಗೆ ನಿಜವಾದ ಶಿಕ್ಷಣವನ್ನು ನೀಡುತ್ತಿದ್ದೇವೆಯೇ?' ಎಂಬುದನ್ನು ಆಲೋಚಿಸಬೇಕು. ಒಂದು ಜೀವವನ್ನು ಸದ್ಗುಣಿಯನ್ನಾಗಿ ಮಾಡುವುದು ಪಾಲಕರ ಧರ್ಮವಾಗಿದೆ.

ಆನಂದಿತ ಪಾಲಕರೇ ಆನಂದಮಯ ಪೀಳಿಗೆಯನ್ನು ನಿರ್ಮಿಸುವುದು

ಮಕ್ಕಳ ಮೇಲೆ ಸುಸಂಸ್ಕಾರವನ್ನು ನಿರ್ಮಿಸಲು ಪಾಲಕರ ಹಾಗೂ ಮಕ್ಕಳ ನಡುವೆ ಸುಸಂವಾದವಿರುವುದು ಅವಶ್ಯಕವಾಗಿದೆ. ಸ್ವತಃ ಒತ್ತಡಮುಕ್ತ ಪಾಲಕರು ತಮ್ಮ ಮಕ್ಕಳಿಗೆ ಒತ್ತಡಮುಕ್ತ ಜೀವನವನ್ನು ನಡೆಸಲು ಕಲಿಸಬಹುದು. ತಮ್ಮ ಮಕ್ಕಳೊಂದಿಗೆ ಸುಸಂವಾದವನ್ನು ಸಾಧಿಸಬಹುದು. ಒತ್ತಡದಲ್ಲಿರುವ ಪಾಲಕರೊಂದಿಗೆ ಮಾತನಾಡಬೇಕೆಂದು ಮಕ್ಕಳಿಗೆ ಅನಿಸುವುದಿಲ್ಲ. ತಮಗೆ ಹೊಳೆಯುವ ಹೊಸ ಕಲ್ಪನೆಗಳು, ವಿಚಾರಗಳು ಹಾಗೂ ತಮ್ಮ ಸಮಸ್ಯೆಗಳನ್ನು ಚಿಂತಾಗ್ರಸ್ತ ಪಾಲಕರಿಗೆ ಹೇಳಬೇಕು ಎಂದು ಅನಿಸುವುದಿಲ್ಲ, ಆದುದರಿಂದಲೇ ಮೊದಲಿಗೆ ಪಾಲಕರು ಒತ್ತಡಮುಕ್ತರಾಗಿರಬೇಕು.

ಪಾಲಕರ ಮನಸ್ಸಿನಲ್ಲಿ ಒತ್ತಡ ನಿರ್ಮಾಣವಾಗಲು ಕಾರಣಗಳು

ಅ. ಸತತವಾಗಿ ಭೂತಕಾಲದಲ್ಲಿರುವುದು : ಸತತವಾಗಿ ಭೂತಕಾಲದಲ್ಲಿ ಇರುವ ಪಾಲಕರು ಮಕ್ಕಳೊಂದಿಗೆ ಸಂವಾದವನ್ನು ಸಾಧಿಸಲಾರರು. ಮಕ್ಕಳು ಯಾವಾಗಲೂ ವರ್ತಮಾನಕಾಲದಲ್ಲಿ ಇರುವುದರಿಂದ ಅನಂದದಿಂದ ಇರುತ್ತಾರೆ. ನಾವು ಯಾವಾಗಲೂ ನಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಳ್ಳುತ್ತಿರುತ್ತೇವೆ. ನೆರೆಹೊರೆಯವರೊಂದಿಗೆ ನಡೆದ ಪ್ರಸಂಗ, ಅತ್ತೆಯ ಬೈಗುಳು, ಕಾರ್ಯಾಲಯದಲ್ಲಿ ಅಧಿಕಾರಿಗಳ ಮಾತು ಇಂತಹ ಅನೇಕ ವಿಷಯಗಳ ಪ್ರವಾಹವು ಮನಸ್ಸಿನಲ್ಲಿ ಹರಿಯುತ್ತಲೇ ಇರುತ್ತದೆ. ಮಕ್ಕಳು ಸಹಜವಾಗಿ ಹೇಳುತ್ತಿರುವ ವಿಷಯವನ್ನೂ ನಾವು ಕೇಳುವ ಸ್ಥಿತಿಯಲ್ಲಿರುವುದಿಲ್ಲ. ಆದುದರಿಂದ ನಾವು ಸತತವಾಗಿ ವರ್ತಮಾನ ಕಾಲದಲ್ಲಿ ಇರಲು ಕಲಿಯಬೇಕು. ನಾವು ಭೂತಕಾಲದ ವಿಚಾರದಲ್ಲಿ ಮಗ್ನರಾಗಿರುವುದರಿಂದ ನಮ್ಮ ಹಾಗೂ ಮಕ್ಕಳೊಂದಿಗೆ ಉತ್ತಮ ಸಂವಾದ ಆಗಲು ಸಾಧ್ಯವಾಗುವುದಿಲ್ಲ.

ಆ. ನಕಾರಾತ್ಮಕವಾಗಿ ಮಾತನಾಡುವುದು : ‘ನಿನಗೆ ಏನೂ ಬರುವುದಿಲ್ಲ, ನೀನು ಯಾವುದಕ್ಕೂ ಉಪಯೋಗವಿಲ್ಲ‘ ಎಂಬ ನಕಾರಾತ್ಮಕ ಮಾತುಗಳಿಂದ ಮಕ್ಕಳ ಮನಸ್ಸಿನ ಮೇಲೆ ಗಾಯವಾಗುತ್ತದೆ. ಒಂದು ವೇಳೆ ದೇಹದ ಮೇಲೆ ಮಾಡಿದ ಗಾಯವು ಗುಣವಾದರೂ ಮನಸ್ಸಿನ ಗಾಯವನ್ನು ಗುಣಪಡಿಸಲು ನಮ್ಮಿಂದ ಸಾಧ್ಯವಿಲ್ಲ. ಆದುದರಿಂದ ಮಾತನಾಡುವಾಗ ಸಕಾರಾತ್ಮಕವಾಗಿ ಮಾತನಾಡಬೇಕು. ನಮ್ಮ ಮಾತಿನಿಂದ ಮಕ್ಕಳಿಗೆ ಪ್ರೋತ್ಸಾಹ ಸಿಗಬೇಕು.

ಇ. ತಮ್ಮ ತಪ್ಪುಗಳನ್ನು ಮಕ್ಕಳ ಮುಂದೆ ಒಪ್ಪಿಕೊಳ್ಳದಿರುವುದು : ತಮ್ಮ ತಪ್ಪುಗಳನ್ನು ಒಪ್ಪಿಕೊಂಡರೆ ಮನಸ್ಸಿನ ಮೇಲಿರುವ ಒತ್ತಡವು ಕಡಿಮೆಯಾಗುತ್ತದೆ. ಮಕ್ಕಳ ಮನಸ್ಸಿನಲ್ಲಿ ನಮ್ಮ ವಿಷಯದಲ್ಲಿ ಆದರದ ಸ್ಥಾನವು ನಿರ್ಮಾಣವಾಗುತ್ತದೆ. ನಮ್ಮನ್ನು ನೋಡಿ ಮಕ್ಕಳೂ ಪ್ರಾಮಾಣಿಕವಾಗಿ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಕಲಿಯುತ್ತಾರೆ. ನಾವು ತಪ್ಪುಗಳನ್ನು ಮುಚ್ಚಿಟ್ಟರೆ ನಮ್ಮ ಮನಸ್ಸಿನಲ್ಲಿ ಒತ್ತಡ ನಿರ್ಮಾಣವಾಗುತ್ತದೆ. ಮಕ್ಕಳಿಗೆ ನಮ್ಮ ಎಲ್ಲ ತಪ್ಪುಗಳು ತಿಳಿಯುತ್ತವೆ. ಅವರಿಗೆ ‘ಅಪ್ಪ ಹಾಗೂ ಅಮ್ಮ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ, ನಾನೇಕೆ ಒಪ್ಪಿಕೊಳ್ಳಬೇಕು ?‘ ಎಂದು ಅನಿಸತೊಡಗುತ್ತದೆ. ಇದರಿಂದಾಗಿ ಮಕ್ಕಳ ಹಾಗೂ ಪಾಲಕರ ನಡುವೆ ಸೂಕ್ಷ್ಮ ಒಡಕು ನಿರ್ಮಾಣವಾಗುತ್ತದೆ.

ಈ. ಯಾವಾಗಲೂ ಮಕ್ಕಳ ದೋಷವನ್ನೇ ನೋಡುವುದು : ಮಕ್ಕಳಲ್ಲಿರುವ ದೋಷಗಳನ್ನೇ ನೋಡುತ್ತಿದ್ದರೆ ಮನಸ್ಸಿನಲ್ಲಿ ಒತ್ತಡ ಉಂಟಾಗುತ್ತದೆ. ನಾವು ಮಕ್ಕಳಲ್ಲಿರುವ ಗುಣಗಳನ್ನು ನೋಡಿ ಅವುಗಳನ್ನು ಪ್ರಶಂಶಿಸಬೇಕು. ಇದರಿಂದಾಗಿ ಮಕ್ಕಳು ತಮ್ಮ ದೋಷಗಳನ್ನು ಒಪ್ಪಿ ಅವುಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಾರೆ; ಆದರೆ ಬಹಳಷ್ಟು ಪಾಲಕರು ತಮ್ಮ ಮಕ್ಕಳಲ್ಲಿರುವ ದೋಷಗಳನ್ನೇ ಸತತವಾಗಿ ತೋರಿಸುತ್ತಾರೆ. 'ಸತತವಾಗಿ ಮಕ್ಕಳ ದೊಷವನ್ನು ನೋಡುವುದು ಒತ್ತಡ ಹಾಗೂ ಸತತವಾಗಿ ಮಕ್ಕಳ ಗುಣಗಳನ್ನು ನೋಡುವುದು ಆನಂದ', ಈ ಸೂತ್ರವನ್ನು ಆಚರಣೆಗೆ ತಂದರೆ ಒತ್ತಡವು ಕಡಿಮೆಯಾಗಲು ಸಹಾಯವಾಗುತ್ತದೆ.

ಉ. ತಮ್ಮ ಪ್ರತಿಷ್ಠೆಯನ್ನು ಮೆರೆಯುವುದು : ಪಾಲಕರು ತಮ್ಮ ವ್ಯವಹಾರದಲ್ಲಿನ ತಮ್ಮ ಪದವಿಗೆ ಹೊಂದಿಕೊಂಡು ಮಾತನಾಡುತ್ತಾರೆ. ಅವರು ತಮ್ಮನ್ನು ಮರೆಯುವುದಿಲ್ಲ. ‘ನಾನು ಆಧುನಿಕ ವೈದ್ಯನಾಗಿದ್ದೇನೆ‘, ‘ನಾನು ವಕೀಲನಾಗಿದ್ದೇನೆ‘ ಅಥವಾ ‘ನಾನು ಅಧಿಕಾರಿಯಾಗಿದ್ದೇನೆ‘ ಎಂಬ ತಮ್ಮ ಪ್ರತಿಮೆಯನ್ನು ಜಾಗೃತವಾಗಿಟ್ಟುಕೊಂಡೆ ಮಾತನಾಡುವುದರಿಂದ ಪಾಲಕರು ಹಾಗೂ ಮಕ್ಕಳ ನಡುವೆ ಎಂದಿಗೂ ಸುಸಂವಾದವಾಗುವುದಿಲ್ಲ. ಬದಲಾಗಿ ಪಾಲಕರಿಗೆ ಒತ್ತಡ ಉಂಟಾಗುತ್ತದೆ ಹಾಗೂ ಮಕ್ಕಳು ಮಾತು ಕೇಳುವುದಿಲ್ಲ. ಮಕ್ಕಳೊಂದಿಗೆ ಪಾಲಕರ ಭೂಮಿಕೆಯಲ್ಲಿ ಬಂದು ಸಹಜವಾಗಿ ಮಾತನಾಡಬೇಕು. 'ವ್ಯವಹಾರದ ಪ್ರತಿಮೆ ಇಟ್ಟು ಮಾತನಾಡಿದರೆ ಒತ್ತಡ ಹಾಗೂ ಮಕ್ಕಳ ಪಾಲಕರೆಂದು ಮಾತನಾಡಿದರೆ ಆನಂದ' ಎಂಬ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಊ. ಅಧಿಕಾರವಾಣಿಯಿಂದ ಮಾತನಾಡುವುದು : ನಾವು ಮಕ್ಕಳೊಂದಿಗೆ ಮಾತನಾಡುವಾಗ ಅಧಿಕಾರವಾಣಿಯಿಂದ ಮಾತನಾಡಿದರೆ ಅವರಲ್ಲಿ ಒತ್ತಡ ಉಂಟಾಗುತ್ತದೆ, ಮಕ್ಕಳಿಗೆ ನಮ್ಮ ಮಾತುಗಳು ಇಷ್ಟವಾಗುವುದಿಲ್ಲ. ನಾವು ಅವರೊಂದಿಗೆ ಅಧಿಕಾರಕ್ಕಿಂತಲೂ ಪ್ರೀತಿಯಿಂದ ಮಾತನಾಡಬೇಕು. ಯಾರಾದರೂ ನಮ್ಮೊಂದಿಗೆ ಆಧಿಕಾರವಾಣಿಯಲ್ಲಿ ಮಾತನಾಡಿದರೆ ಅದನ್ನು ಸ್ವೀಕರಿಸಬೇಕೆಂದು ನಮಗೆ ಹೇಗೆ ಅನಿಸುವುದಿಲ್ಲವೋ ಹಾಗೆ ಮಕ್ಕಳಿಗೂ ಕೂಡ ಇಷ್ಟವಾಗುವುದಿಲ್ಲ. 'ಅಧಿಕಾರವಾಣಿಯಲ್ಲಿ ಮಾತನಾಡಿದರೆ ಒತ್ತಡ ಹಾಗೂ ಪ್ರೀತಿಯಿಂದ ಮಾತನಾಡಿದರೆ ಆನಂದ' ಎಂಬ ವಿಷಯವನ್ನು ಆಚರಣೆಗೆ ತರಬೇಕು.

ಎ. ‘ಎಷ್ಟು ವ್ಯಕ್ತಿಗಳೋ ಅಷ್ಟೇ ಪ್ರಕೃತಿಗಳು‘ ಈ ತತ್ವವನ್ನು ತಿಳಿದು ವ್ಯವಹಾರ ಮಾಡದಿರುವುದು : ಪಾಲಕರೇ, ಎಷ್ಟು ವ್ಯಕ್ತಿಗಳೋ ಅಷ್ಟೇ ಪ್ರಕೃತಿಗಳಿವೆ. ನಮ್ಮ ಮಕ್ಕಳ ಪ್ರಕೃತಿ ಯಾವುದು, ಅವರ ಇಷ್ಟಾನಿಷ್ಟ, ಶಾರೀರಿಕ ಹಾಗೂ ಮಾನಸಿಕ ಕ್ಷಮತೆ ಎಲ್ಲ ವಿಷಯಗಳ ಬಗ್ಗೆ ಪಾಲಕರು ವಿಚಾರ ಮಾಡಬೇಕು. ಬಹಳಷ್ಟು ಪಾಲಕರು ತಮ್ಮ ಮಕ್ಕಳೊಂದಿಗೆ ಸ್ಪರ್ಧಾವೃತ್ತಿ ಹಾಗೂ ಸಮಾಜದಲ್ಲಿನ ತಮ್ಮ ಪ್ರತಿಷ್ಠೆಯಂತೆ ವ್ಯವಹಾರ ಮಾಡುತ್ತಾರೆ. ಇದರಿಂದ ಪಾಲಕರು ಹಾಗೂ ಮಕ್ಕಳ ಮನಸ್ಸಿನಲ್ಲಿ ಒತ್ತಡ ನಿರ್ಮಾಣವಾಗುತ್ತದೆ. ಹೀಗೆ ಆಗದಿರಲು ‘ಮಕ್ಕಳ ಪ್ರಕೃತಿಯನ್ನು ತಿಳಿದುಕೊಂಡು ಸಂವಾದ ಆನಂದ ಹಾಗೂ ಮಕ್ಕಳ ಪ್ರಕೃತಿಯನ್ನು ತಿಳಿಯದೇ ಸಂವಾದ ಒತ್ತಡ‘ ಎಂಬ ಅಂಶವನ್ನು ಗಮನದಲ್ಲಿಡುವುದು ಅವಶ್ಯಕವಾಗಿದೆ.

ಏ. ತಿಳಿಸಿ ಹೇಳದಿರುವುದು : ಮಕ್ಕಳಿಗೆ ಪ್ರತಿಯೊಂದು ವಿಷಯವನ್ನು ತಿಳಿಸಿ ಹೇಳಬೇಕು. ಮಕ್ಕಳ ಮಟ್ಟಕ್ಕೆ ಹೋಗಿ ಹೇಳುವುದು ಉತ್ತಮ. ಮಗು ೧ ನೇ ತರಗತಿಯಲ್ಲಿದ್ದರೂ ಪಾಲಕರು ಅವನ ಮಟ್ಟಕ್ಕೆ ಬಂದು ಮಾತನಾಡಬೇಕು. ಇದರಿಂದ ಮಕ್ಕಳು ನಮ್ಮ ಮಾತನ್ನು ಕೇಳುತ್ತಾರೆ. ಆದರೆ ಪಾಲಕರು ತಮ್ಮದೇ ಮಟ್ಟದಲ್ಲಿರುತ್ತಾರೆ. ಇದರಿಂದ ಮಕ್ಕಳು ಹೇಳಿದ್ದನ್ನು ಕೇಳುವುದಿಲ್ಲ. ಪಾಲಕರ ಅಹಂಕಾರದಿಂದ ಹೀಗೆ ಆಗುತ್ತದೆ. ‘ಮಕ್ಕಳ ಮಟ್ಟಕ್ಕೆ ಹೋಗಿ ಮಾತನಾಡುವುದು ಆನಂದ ಹಾಗೂ ತಮ್ಮದೇ ಮಟ್ಟದಲ್ಲಿದ್ದು ಮಾತನಾಡುವುದು ಒತ್ತಡ‘ ಎಂಬ ಅಂಶವನ್ನು ಆಚರಣೆಗೆ ತಂದರೆ ಒತ್ತಡವು ಕಡಿಮೆಯಾಗುತ್ತದೆ.

ಐ. ಮಕ್ಕಳೊಂದಿಗೆ ಸಂವಾದ ಬೆಳೆಸುವುದು : ಮಕ್ಕಳ ಸಮಸ್ಯೆಯನ್ನು ಯಾರೂ ಕೇಳುವುದಿಲ್ಲ. ಪಾಲಕರು 'ನಮಗೆ ಕೆಲಸವಿದೆ' ಎಂದರೆ, ಶಿಕ್ಷಕರು' ತಮ್ಮ ಅಧ್ಯಯನಕ್ರಮವನ್ನು (ಸಿಲೇಬಸ್) ಪೂರ್ಣಗೊಳಿಸಬೇಕು' ಎಂದು ಹೇಳುತ್ತಾರೆ. ಇದರಿಂದಾಗಿ ಇಂದು ಮಕ್ಕಳು ಮಾನಸಿಕ ಬಂದೀಗಳಾಗಿದ್ದಾರೆ. ಮಕ್ಕಳ ಮನಸ್ಸಿನಲ್ಲಿ ಪಾಲಕರ ಬಗ್ಗೆ ಆದರ ಹಾಗೂ ವಿಶ್ವಾಸವು ಉಳಿದಿಲ್ಲ. ನಂತರ 'ಮಕ್ಕಳು ಮಾತು ಕೇಳುವುದಿಲ್ಲ' ಎಂದು ಪಾಲಕರ ಮನಸ್ಸಿನಲ್ಲಿ ಒತ್ತಡ ಉಂಟಾಗುತ್ತದೆ. ಅನೌಪಚಾರಿಕವಾಗಿ ಮಾತನಾಡಿದಾಗ ಮನಸ್ಸು ಹೊಂದಿಕೊಳ್ಳುತ್ತದೆ. ಅದಕ್ಕಾಗಿ ಪ್ರತಿದಿನ ಮಕ್ಕಳೊಂದಿಗೆ ೧೫ ನಿಮಿಷ ಅನೌಪಚಾರಿಕವಾಗಿ ಮಾತನಾಡುವುದು ಅವಶ್ಯಕವಾಗಿದೆ. ಇದರಿಂದ ಮಕ್ಕಳು ಮುಕ್ತ ಮನಸ್ಸಿನವರಾಗುತ್ತಾರೆ. ಪ್ರತೀದಿನ ಮಕ್ಕಳೊಂದಿಗೆ ೧೫ ನಿಮಿಷ ಅನೌಪಚಾರಿಕವಾಗಿ ಮಾತನಾಡುವುದು ಅನಂದ ಹಾಗೂ ಪ್ರತೀದಿನ ಅನೌಪಚಾರಿಕ ಸಂವಾದ ಇಲ್ಲದಿರುವುದು ಒತ್ತಡ, ಈ ಅಂಶವನ್ನು ಗಮನದಲ್ಲಿಟ್ಟು ಅದರಂತೆಯೇ ವರ್ತಿಸಿದರೆ ಪಾಲಕರು ಮಕ್ಕಳೊಂದಿಗೆ ಉತ್ತಮ ಸಂವಾದವನ್ನು ಬೆಳೆಸಬಲ್ಲರು.

ಒ. ಅಪೇಕ್ಷೆ ಇಟ್ಟುಕೊಳ್ಳುವುದು : ನಾವು ಮಕ್ಕಳೊಂದಿಗೆ ಅಪೇಕ್ಷೆಯಿಟ್ಟು ವ್ಯವಹಾರ ಮಾಡುತ್ತಿದ್ದರೆ ಮಕ್ಕಳಿಗೆ ನಮ್ಮ ಮಾತು ಇಷ್ಟವಾಗುವುದಿಲ್ಲ. ಅವರಲ್ಲಿ ಅಹಂ ಕಡಿಮೆಯಿರುವುದರಿಂದ ಅವರಿಗೆ ಅಪೇಕ್ಷೆಯ ಸ್ಪಂದನಗಳು ತಿಳಿಯುತ್ತವೆ. ನಾವು ಅವರೊಂದಿಗೆ ನಿರಪೇಕ್ಷತೆಯಿಂದ ವರ್ತಿಸಬೇಕು. ಎಲ್ಲಿ ನಿರಪೇಕ್ಷೆಯಿದೆಯೋ ಅಲ್ಲಿ ಪ್ರೇಮವಿದೆ. ‘ಮುದಿಗಾಲದಲ್ಲಿ ಮಗನು ನನ್ನನ್ನು ನೋಡಿಕೊಳ್ಳುತ್ತಾನೆ, ಸಮಾಜದಲ್ಲಿ ನನ್ನ ಹೆಸರನ್ನು ಉಜ್ವಲಗೊಳಿಸುತ್ತಾನೆ ಹಾಗೂ ಬೆಳೆಸುತ್ತಾನೆ' ಎಂದು ಅಪೇಕ್ಷಿಸುವುದಕ್ಕಿಂತಲೂ ‘ದೇವರು ನನ್ನನ್ನು ನೋಡಿಕೊಳ್ಳುತ್ತಾನೆ‘ ಎಂಬ ವಿಚಾರ ಮಾಡುವುದು ಯೋಗ್ಯವಾಗಿದೆ; ಏಕೆಂದರೆ 'ಅಪೇಕ್ಷೆ ಇಟ್ಟುಕೊಂಡು ವ್ಯವಹಾರ ಒತ್ತಡ ಹಾಗೂ ನಿರಪೇಕ್ಷೆಯಿಂದ ವ್ಯವಹಾರವೇ ಆನಂದ'.

ಪಾಲಕರೇ, ಮೇಲಿನ ಎಲ್ಲ ಅಂಶಗಳನ್ನು ಕೃತಿಯಲ್ಲಿ ತಂದ ನಂತರ ನಾವು ಆನಂದಿತರಾಗುತ್ತೇವೆ. ಇದರಿಂದಾಗಿ ನಾವು ಸಂಸ್ಕಾರಯುತ ಪೀಳಿಗೆಯನ್ನು ನಿರ್ಮಿಸಬಹುದು. ಈ ಎಲ್ಲ ಅಂಶಗಳನ್ನು ಕೃತಿಯಲ್ಲಿ ತರಲು ನಾವು ಕುಲದೇವತೆಯ ಉಪಾಸನೆಯನ್ನು ಮಾಡಬೇಕು.

– ಶ್ರೀ. ರಾಜೇಂದ್ರ ಪಾವಸಕರ (ಗುರುಜೀ), ಪನವೇಲ.

Leave a Comment