ಮಹಾರಾಣಾ ಪ್ರತಾಪ

ಹಿಂದೂಸ್ಥಾನದ ಇತಿಹಾಸದಲ್ಲಿ ಮಹಾರಾಣಾ ಪ್ರತಾಪ ಪ್ರಾತಃಸ್ಮರಣೀಯರು. ಸ್ವದೇಶ, ಸ್ವಧರ್ಮ, ಸಂಸ್ಕೃತಿ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯ ಇವುಗಳ ರಕ್ಷಣೆಯನ್ನು ಪ್ರಾಣ ಪಣಕ್ಕಿಟ್ಟು ಮಾಡುವ ಶೂರ ವೀರರ ಪರಂಪರೆಯಲ್ಲಿ ಇವರ ಹೆಸರು ಸುವರ್ಣಾಕ್ಷರಗಳಲ್ಲಿ ಕೆತ್ತಲಾಗಿದೆ. ಮಹಾರಾಣಾ ಪ್ರತಾಪಸಿಂಹರ ಸ್ಮೃತಿದಿನದ ನಿಮಿತ್ತ ಅವರನ್ನು ಸ್ಮರಿಸೋಣ !

​ಮಹಾರಾಣಾ ಪ್ರತಾಪ ಬಾಲ್ಯ

ಮೇವಾಡದ ಮೇರುಮಣಿ ‘ಮಹಾರಾಣಾ ಪ್ರತಾಪ’ ಈ ಹೆಸರು ತಿಳಿಯದೆ ಇದ್ದವರಿಲ್ಲ ? ಹಿಂದೂಸ್ಥಾನದ ಇತಿಹಾಸದಲ್ಲಿ ಪ್ರೇರಣಾದಾಯಕವಾದ ಮಹಾರಾಣಾ ಪ್ರತಾಪ ಹೆಸರು ಸಾಹಸ, ಶೌರ್ಯ, ತ್ಯಾಗಗಳ ಪ್ರತೀಕವಾಗಿದೆ. ಮೇವಾಡದ ಸಿಸೋದಿಯಾ ಮನೆತನದಲ್ಲಿ ಬಾಪ್ಪಾ ರಾವಳ, ರಾಣಾ ಹಮೀರ, ರಾಣಾ ಸಾಂಗ ಇತ್ಯಾದಿ ಅನೇಕ ಶೂರವೀರರು ಜನ್ಮತಾಳಿದರು. ಈ ಮಹಾನ್ ಮನೆತನದಲ್ಲಿಯೇ ೧೫೪೦ರಲಲ್ಲಿ ಮಹಾರಾಣಾ ಪ್ರತಾಪ ಜನ್ಮ ತಾಳಿದ್ದು. ಇವರು ಮೇವಾಡದ ರಾಣಾ ಉದಯ ಸಿಂಹ (ದ್ವಿತೀಯ) ಇವರ ಜ್ಯೇಷ್ಠ ಪುತ್ರರಾಗಿದ್ದಾರೆ. ಸ್ವಾಭಿಮಾನ ಹಾಗೂ ಸದಾಚಾರ ಪ್ರತಾಪಸಿಂಹರ ಮುಖ್ಯ ಗುಣಗಳಾಗಿದ್ದವು. ಅವರಿಗೆ ಚಿಕ್ಕಂದಿನಿಂದಲೇ ಮೈದಾನದಲ್ಲಿನ ಆಟ ಹಾಗೂ ಶಸ್ತ್ರಾಸ್ತ್ರಗಳನ್ನು ಉಪಯೋಗಿಸುವುದರಲ್ಲಿ ಆಸಕ್ತಿಯಿತ್ತು.

ಮಹಾರಾಣಾ ಪ್ರತಾಪ ಪಟ್ಟಾಭಿಷೇಕ

ರಾಜಪುತ ಮನೆತನದಲ್ಲಿ ತಂದೆಯ ನಂತರ ಜ್ಯೇಷ್ಠಪುತ್ರನನ್ನೇ ಸಿಂಹಾಸನದಲ್ಲಿ ಕುಳ್ಳಿರಿಸುವ ರೂಢಿಯಿತ್ತು. ಉದಯ ಸಿಂಹರ ಇನ್ನೋರ್ವ ರಾಣಿಗೆ ಅವಳ ಮಗ ಜಗಮಲ್ಲ ರಾಜನಾಗಬೇಕು ಎಂಬ ಇಚ್ಛೆಯಿತ್ತು. ಆದರೆ ಜಗಮಲ್ಲ ಎಂಬವನು ಪ್ರತಾಪಸಿಂಹರಂತೆ ಶೂರ, ಸ್ವಾಭಿಮಾನಿ ಹಾಗೂ ಸಾಹಸಿಯಾಗಿರಲಿಲ್ಲ. ಆದುದರಿಂದ ಎಲ್ಲ ಸರದಾರರ ಹಾಗೂ ಮೇವಾಡದ ಜನತೆಯ ಪ್ರಬಲವಾದ ಆಗ್ರಹಕ್ಕೆ ಮಣಿದು ಪ್ರತಾಪಸಿಂಹರು ಪಟ್ಟಾಭಿಷೇಕ ಮಾಡಿಸಿಕೊಂಡರು.

ಮಾತೃಭೂಮಿಯನ್ನು ಮುಘಲ ಮುಸಲ್ಮಾನರ ವಶದಿಂದ ಬಿಡಿಸಲಿಕ್ಕಾಗಿ ಕಠೋರವಾದ ಪ್ರತಿಜ್ಞೆ

ಮೇವಾಡದ ನಾಲ್ಕೂ ಸೀಮೆಯಲ್ಲಿ ಮುಘಲ ಮುಸಲ್ಮಾನರು ಮುತ್ತಿಗೆ ಹಾಕಿದ್ದರು. ಮಹಾರಾಣಾ ಪ್ರತಾಪಸಿಂಹರ ತಮ್ಮಂದಿರಾದ ಶಕ್ತಿಸಿಂಹ ಹಾಗೂ ಜಗಮಲ್ಲ ಇವರಿಬ್ಬರೂ ಅಕ್ಬರ ವಶದಲ್ಲಿದ್ದರು. ಶತ್ರುವಿನೊಂದಿಗೆ ಹೋರಾಡಲು ಶಕ್ತಿಶಾಲಿ ಸೈನ್ಯವನ್ನು ನಿರ್ಮಿಸುವುದು ಮಹಾರಾಣಾ ಪ್ರತಾಪ ಸಿಂಹರ ಮೊದಲ ಸಮಸ್ಯೆಯಾಗಿತ್ತು. ಅದಕ್ಕಾಗಿ ಅಪಾರವಾದ ಹಣದ ಅವಶ್ಯಕತೆಯಿತ್ತು. ಮಹಾರಾಣಾ ಪ್ರತಾಪಸಿಂಹರ ಬೊಕ್ಕಸ ಬರಿದಾಗಿತ್ತು. ತದ್ವಿರುದ್ಧ ಅಕ್ಬರನಲ್ಲಿ ಬಲಿಷ್ಠ ಸೈನ್ಯ, ಅಪಾರವಾದ ಸಂಪತ್ತು ಹಾಗೂ ಭಾರತೀಯ ಮೂಲದವರೇ ಆಗಿದ್ದು ವಿರೋಧಿಗಳಾಗಿದ್ದ ಅನೇಕ ಹಿಂದೂ ಸರದಾರರಿದ್ದರು. ಇಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ಮಹಾರಾಣಾ ಪ್ರತಾಪರು ವಿಚಲಿತ ಅಥವಾ ನಿರಾಶರಾಗಲಿಲ್ಲ. ಅವರು ಎಂದಿಗೂ ‘ಅಕ್ಬರನಿಗಿಂತ ನಾವು ದುರ್ಬಲರಾಗಿದ್ದೇವೆ’, ಎನ್ನುವ ನಿರಾಶೆಯ ಉದ್ಗಾರವನ್ನು ತೆಗೆಯಲಿಲ್ಲ. ನಮ್ಮ ಮಾತೃಭೂಮಿಯು ಗುಲಾಮಗಿರಿಯಿಂದ ಶೀಘ್ರದಲ್ಲಿ ಹೇಗೆ ಮುಕ್ತವಾಗಿಸುವುದು, ಎನ್ನುವ ಒಂದೇ ಹಂಬಲ ಅವರಲ್ಲಿತ್ತು.

ಒಂದು ದಿನ ಮಹಾರಾಣಾ ಪ್ರತಾಪ ಸಿಂಹರು ತಮ್ಮ ವಿಶ್ವಾಸಿ ಸರದಾರರನ್ನು ಒಟ್ಟುಗೂಡಿಸಿ ಅವರಿಗೆ ಹೇಳಿದರು, “ನನ್ನ ಶೂರ ರಾಜಪುತ ಬಾಂಧವರೇ, ನಮ್ಮ ಮಾತೃಭೂಮಿ, ಪುಣ್ಯಭೂಮಿ ಮೇವಾಡ ಮುಸಲ್ಮಾನರ ವಶದಲ್ಲಿದೆ. ಇಂದು ನಾನು ನಿಮ್ಮ ಮುಂದೆ ಪ್ರತಿಜ್ಞೆ ಮಾಡುವುದೇನೆಂದರೆ, ಚಿತ್ತೋಡ ಸ್ವತಂತ್ರವಾಗುವ ತನಕ ನಾನು ಬೆಳ್ಳಿಬಂಗಾರದ ತಟ್ಟೆಯಲ್ಲಿ ಊಟ ಮಾಡುವುದಿಲ್ಲ. ಮೆತ್ತಗಿನ ಹಾಸಿಗೆಯಲ್ಲಿ ಮಲಗುವುದಿಲ್ಲ, ರಾಜವೈಭವವನ್ನು ಅನುಭವಿಸುವುದಿಲ್ಲ, ಅದರ ಬದಲು ನಾನು ಪತ್ರಾವಳಿಯಲ್ಲಿ ಊಟ ಮಾಡುವೆನು, ಭೂಮಿಯ ಮೇಲೆ ಮಲಗುವೆನು ಹಾಗೂ ಗುಡಿಸಲಿನಲ್ಲಿ ವಾಸಿಸುವೆನು! ಶೂರ ಸರದಾರರೇ, ಚಿತ್ತೋಡ ಸ್ವತಂತ್ರಗೊಳಿಸುವ ನನ್ನ ಪ್ರತಿಜ್ಞೆಯನ್ನು ಪೂರ್ಣಗೊಳಿಸಲಿಕ್ಕಾಗಿ ತನು-ಮನ-ಧನದಿಂದ ನೀವೆಲ್ಲರೂ ಸಹಾಯ ಮಾಡುವಿರಿ ಎಂದು ನನಗೆ ವಿಶ್ವಾಸವಿದೆ.” ಪ್ರತಾಪಸಿಂಹರ ಇಂತಹ ಕಠೋರವಾದ ಪ್ರತಿಜ್ಞೆಯನ್ನು ಕೇಳಿ ಅಲ್ಲಿ ಉಪಸ್ಥಿತರಿದ್ದ ಎಲ್ಲ ಸರದಾರರ ಮನಸ್ಸಿನಲ್ಲಿ ಉತ್ಸಾಹ ಉಕ್ಕಿ ಅವರು ಒಕ್ಕುರುಲಿನಿಂದ ಮಾತು ನೀಡಿದರು, “ಹೇ ರಾಜಾ, ನಮ್ಮ ಶರೀರದಲ್ಲಿ ರಕ್ತದ ಕೊನೆ ಹನಿಯಿರುವ ತನಕ ಚಿತ್ತೋಡದ ಮುಕ್ತಿಗಾಗಿ ನಿಮಗೆ ಸಹಾಯ ಮಾಡುವೆವು ಹಾಗೂ ನಿಮ್ಮ ಹೆಗಲಿಗೆ ಹೆಗಲು ಕೊಟ್ಟು ಹೋರಾಡುವೆವು ! ನಾವು ಸಾವನ್ನಪ್ಪುವೆವು, ಆದರೆ ಧ್ಯೇಯದಿಂದ ದೂರ ಹೋಗುವುದಿಲ್ಲ. ಮಹಾರಾಣಾ, ನಾವು ಎಲ್ಲರೂ ನಿಮ್ಮ ಬೆಂಬಲಕ್ಕಿದ್ದೇವೆ !”

ಹಳದಿಘಾಟ ಯುದ್ಧ

ಮಹಾರಾಣಾ ಪ್ರತಾಪಸಿಂಹರನ್ನು ಮೋಸದಿಂದ ತನ್ನ ಗುಲಾಮರನ್ನಾಗಿ ಮಾಡಲು ಅಕ್ಬರನು ಬಹಳ ಪ್ರಯತ್ನ ಮಾಡಿದನು; ಆದರೆ ಅದು ವ್ಯರ್ಥವಾಯಿತು. ಕೊನೆಗೆ ಅಕ್ಬರನು ಮಹಾರಾಣಾ ಪ್ರತಾಪಸಿಂಹರನ್ನು ಸೋಲಿಸಿ ಬಂಧಿಸಲು ತನ್ನ ಪುತ್ರ ಸಲೀಂ (ಜಹಾಂಗೀರ)ನ ನೇತೃತ್ವದಲ್ಲಿ ಬಾದಶಾಹೀ ಸೈನ್ಯವನ್ನು ಕಳಿಸಿದನು. ಅಕ್ಬರನಿಗೆ ಶರಣಾಗಿರುವ ಜಯಪುರದ ರಾಜಾ ಮಾನಸಿಂಗ್ ಮತ್ತು ಮತಾಂತರವಾಗಿದ್ದ ರಾಜಪುತ ಸರದಾರ ಮಹಾಬತಖಾನ ಇವರೊಂದಿಗೆ ಸೈನ್ಯಗಳು ಮಹಾರಾಣಾ ಪ್ರತಾಪಸಿಂಹರ ದಂಡೆತ್ತಿ ಹೋದವು. ಮಹಾರಾಣಾ ಪ್ರತಾಪ ಸಿಂಹರ ೨೮ ಸಾವಿರ ಸೈನ್ಯ ಹಾಗೂ ಅಕ್ಬರನ ೨ ಲಕ್ಷ ಸೈನ್ಯ ಹಳದಿಘಾಟಿನಲ್ಲಿ ಮುಖಾಮುಖಿಯಾದವು. ಹೋರಾಟದ ಆವೇಶದಲ್ಲಿ ಮಹಾರಾಣಾ ಪ್ರತಾಪಸಿಂಹರು ತನ್ನ ಕುದುರೆಯ ಮೇಲಿಂದ ನೇರವಾಗಿ ಸಲೀಂನ ಆನೆಯ ಮೇಲೇರಿ ಹೋದರು. ಇತಿಹಾಸ ಪ್ರಸಿದ್ಧ ‘ಚೇತಕ’ ಎಂಬ ಕುದುರೆಯೂ ಅಂಜದೆ ಸಲೀಂನ ಆನೆಯ ಮೇಲೆಯೇ ಜಿಗಿಯಿತು, ರಾಣಾ ಪ್ರತಾಪಸಿಂಹರು ಭರ್ಜಿಯನ್ನೆಸೆದರು. ಸಲೀಂ ಮಾವುತನ ಹಿಂದೆ ಆಶ್ರಯ ಪಡೆದ ಕಾರಣ ಭರ್ಜಿ ಮಾವುತನಿಗೆ ತಗುಲಿ ಅವನು ಸಾವನ್ನಪ್ಪಿದನು. ಸಲೀಂ ಅದೃಷ್ಟವಶಾತ್ ಬದುಕಿದನು.

ಸಾವಿರಾರು ಮುಸಲ್ಮಾನ ಸೈನಿಕರು ಸುತ್ತುವರಿದಿರುವ ಭದ್ರಕೋಟೆಯೊಳಗೆ ನುಗ್ಗಿ ನೇರವಾಗಿ ಸೇನಾಪತಿಯ ಮೇಲೆಯೇ ಹಲ್ಲೆ ಮಾಡುವ ರಾಣಾ ಪ್ರತಾಪಸಿಂಹರ ಶೌರ್ಯವು ಇಂದಿಗೂ ಪ್ರತಿಯೊಬ್ಬ ಹಿಂದೂವನ್ನು ರೋಮಾಂಚನಗೊಳಿಸುತ್ತದೆ ! ಧರ್ಮಕ್ಕಾಗಿ ಪ್ರಾಣವನ್ನೂ ಪಣಕ್ಕಿಡಲು ಕಲಿಸುತ್ತದೆ ! ಮಹಾರಾಣಾ ಪ್ರತಾಪ ಸಿಂಹರು ಬಂದ ಮಿಂಚಿನ ವೇಗದಲ್ಲಿ ಹೊರಟು ಹೋದರು. ಈ ಯುದ್ಧದಲ್ಲಿ ಚೇತಕ ಬಹಳ ಗಾಯಗೊಂಡಿತು. ಆದರೂ ಅದು ತನ್ನ ಸ್ವಾಮಿಯ ಜೀವವನ್ನು ಉಳಿಸಲಿಕ್ಕಾಗಿ ಒಂದು ದೊಡ್ಡ ಹಳ್ಳ ದಾಟಲು ಜಿಗಿಯಿತು. ಹಳ್ಳವನ್ನು ದಾಟಿದ ತಕ್ಷಣ ನೆಲಕ್ಕುರುಳಿದ ಚೇತಕನ ಪ್ರಾಣ ಹಾರಿಹೋಯಿತು. ಚೇತಕನ ಮೃತ್ಯುವಿನಿಂದ ಮಹಾರಾಣಾರಿಗೆ ಬಹಳ ದುಃಖವಾಯಿತು. ಚೇತಕ ಪ್ರಾಣ ಬಿಟ್ಟಿರುವ ಸ್ಥಳದಲ್ಲಿ ಮಾಹಾರಾಣಾ ಪ್ರತಾಪಸಿಂಹರು ಒಂದು ಸುಂದರವಾದ ಉದ್ಯಾನವನವನ್ನು ನಿರ್ಮಿಸಿದರು. ಅನಂತರ ಬಂದ ಅಕ್ಬರನಿಗೆ ಸ್ವತಃ ೬ ತಿಂಗಳು ಯುದ್ಧ ನಡೆಸಿಯೂ ಮಾಹಾರಾಣಾ ಪ್ರತಾಪಸಿಂಹರನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಅಕ್ಬರ ಬರಿಗೈಯಲ್ಲಿ ದೆಹಲಿಗೆ ಹಿಂತಿರುಗಿದನು. ಕೊನೆಯ ಪ್ರಯತ್ನವೆಂದು ಅಕ್ಬರನು ೧೫೮೪ ರಲ್ಲಿ ಮಹಾಪರಾಕ್ರಮಿ ಸೇನಾಪತಿ ಜಗನ್ನಾಥನಿಗೆ ವಿಶಾಲವಾದ ಸೈನ್ಯವನ್ನು ನೀಡಿ ಮೇವಾಡದ ಮೇಲೆ ಆಕ್ರಮಿಸಲು ಕಳಿಸಿದನು. ೨ ವರ್ಷ ಅತ್ಯಂತ ಪ್ರಯತ್ನ ಮಾಡಿಯೂ ಮಹಾರಾಣಾ ಪ್ರತಾಪಸಿಂಹರನ್ನು ಹಿಡಿಯಲು ಅವನಿಗೂ ಸಾಧ್ಯವಾಗಲಿಲ್ಲ.

ಅದೃಷ್ಟದ ಕಠೋರವಾದ ಪರೀಕ್ಷೆ

ಗುಡ್ಡ-ಕಾಡುಗಳಲ್ಲಿ ಅಲೆದಾಡುವಾಗ ಸಹ ಮಾಹಾರಾಣಾ ಪ್ರತಾಪಸಿಂಹರ ಕುಟುಂಬದವರು ಅವರೊಂದಿಗೆ ಇರುತ್ತಿದ್ದರು. ಶತ್ರು ಯಾವ ಕ್ಷಣದಲ್ಲಿಯೂ ಬೆಂಬೆತ್ತಬಹುದು ಎನ್ನುವ ಅಂಜಿಕೆ ಅವರೆಲ್ಲರಿಗೂ ಇರುತ್ತಿತ್ತು. ಅರಣ್ಯದಲ್ಲಿ ಆಹಾರವಿಲ್ಲದೆ ಬಹಳ ಬವಣೆಯಾಗುತ್ತಿತ್ತು ಆದರೂ ‘ಶತ್ರು ಬರುತ್ತಿದ್ದಾನೆ’ ಎನ್ನುವ ವಾರ್ತೆ ಸಿಕ್ಕಿದಾಕ್ಷಣ ಮುಂದಿರುವ ಅನ್ನವನ್ನು ಬಿಟ್ಟು ಹೋಗಬೇಕಾಗುತಿತ್ತು. ಒಂದು ದಿನ ಮಾಹಾರಾಣಿ ಅರಣ್ಯದಲ್ಲಿ ರೊಟ್ಟಿ ಕಾಯಿಸುತ್ತಿದ್ದರು. ಎಲ್ಲರೂ ತಮ್ಮ ತಮ್ಮ ಪಾಲಿನ ರೊಟ್ಟಿ ತಿಂದರು. ಮಾಹಾರಾಣಿ ತನ್ನ ಮಗಳಿಗೆ ಅರ್ಧ ರೊಟ್ಟಿ ತಿನ್ನಲು ಹೇಳಿದರು ಹಾಗೂ ಉಳಿದ ರೊಟ್ಟಿ ರಾತ್ರಿಗಾಗಿ ಕಟ್ಟಿಡಲು ಹೇಳಿದರು. ಅಷ್ಟರಲ್ಲಿ ಒಂದು ಕಾಡುಬೆಕ್ಕು ಬಂದು ಹುಡುಗಿಯ ಕೈಯಲ್ಲಿದ್ದ ರೊಟ್ಟಿಯನ್ನು ಕಸಿದುಕೊಂಡು ಹೋಯಿತು. ರಾಜಕುಮಾರಿ ಅಸಹಾಯಕತೆಯಿಂದ ಅಳುತ್ತಾ ಕುಳಿತಳು. ಇಂದು ಅವಳ ಅದೃಷ್ಟದಲ್ಲಿ ರೊಟ್ಟಿಯ ಒಂದು ತುಂಡು ಸಹ ಇರಲಿಲ್ಲ. ಈ ದೃಶ್ಯವನ್ನು ನೋಡಿ ವಜ್ರಹೃದಯಿ ಮಹಾರಾಣಾ ಪ್ರತಾಪರು ಸಹ ಸ್ವಲ್ಪ ವಿಚಲಿತರಾದರು. ಇದೆಲ್ಲ ವ್ಯರ್ಥವಾಗುತ್ತದೆಯೋ ಏನೋ, ಎಂದು ಅವರಿಗನಿಸಿತು. ಮನಸ್ಸಿನ ಗೊಂದಲದ ಮಧ್ಯದಲ್ಲೇ ಅವರು ಅಕ್ಬರನೊಂದಿಗೆ ಒಪ್ಪಂದ ಮಾಡಲು ನಿರ್ಣಯಿಸಿದರು. (ಅನೇಕ ಇತಿಹಾಸಕಾರರು ಹೇಳುತ್ತಾರೆ, ಅಕ್ಬರನನ್ನು ಮಂಕುಗೊಳಿಸಲಿಕ್ಕಾಗಿ ಒಪ್ಪಂದದ ಮಾತುಕತೆ ಆರಂಭಿಸುವುದು ಒಂದು ತಂತ್ರವಾಗಿತ್ತು ಎಂದು) ಅಕ್ಬರನ ದರಬಾರಿನಲ್ಲಿ ಪ್ರತಾಪಸಿಂಹರ ಹಿತೈಷಿಯಾಗಿದ್ದ ರಾಜಕವಿ ಪೃಥ್ವಿರಾಜರು ಮಹಾರಾಣಾ ಪ್ರತಾಪ ಸಿಂಹರಿಗೆ ರಾಜಸ್ಥಾನಿ ಭಾಷೆಯಲ್ಲಿ ಕವಿತೆಯ ರೂಪದಲ್ಲಿ ಒಂದು ದೊಡ್ಡ ಪತ್ರ ಬರೆದು ಒಪ್ಪಂದದ ವಿಚಾರದಿಂದ ದೂರಮಾಡಿದರು. ಕವಿ ಪೃಥ್ವಿರಾಜರ ಈ ಪತ್ರದಿಂದ ಮಹಾರಾಣಾ ಪ್ರತಾಪ ಸಿಂಹರಿಗೆ ಹತ್ತು ಸಾವಿರ ಸೈನಿಕರ ಬಲ ಸಿಕ್ಕಿದಂತಾಯಿತು. ಅವರ ವಿಚಲಿತವಾಗಿರುವ ಮನಸ್ಸು ಸ್ಥಿರವಾಯಿತು. ಅಕ್ಬರನೊಂದಿಗೆ ಒಪ್ಪಂದ ಮಾಡುವ ವಿಷಯವನ್ನು ಅವರು ಮನಸ್ಸಿನಿಂದ ಕಿತ್ತೆಸೆದರು. ಹೆಚ್ಚಿನ ತೀವ್ರತೆಯಿಂದ ಹಾಗೂ ದೃಢತೆಯಿಂದ ಸೈನ್ಯ ಸಂಗ್ರಹಿಸಿ ತನ್ನ ಧ್ಯೇಯ ಸಾಧಿಸುವ ಪ್ರಯತ್ನದಲ್ಲಿ ಅವರು ಮಗ್ನರಾದರು.

ಭಾಮಾಶಾಹನ ಸ್ವಾಮಿಭಕ್ತಿ

ಭಾಮಾಶಾಹ ಎಂಬ ಹೆಸರಿನ ರಾಜಪುತ ಸರದಾರ ಮಹಾರಾಣಾ ಪ್ರತಾಪಸಿಂಹರ ಪೂರ್ವಜರ ರಾಜಸಭೆಯಲ್ಲಿ ಮಂತ್ರಿಯಾಗಿದ್ದನು. ತನ್ನ ಸ್ವಾಮಿಯು ಅರಣ್ಯದಲ್ಲಿ ಅಲೆದಾಡುವಂತಹ ಆಪತ್ತು ನೋಡಿ ಅವನ ಮನಸ್ಸಿಗೆ ಚುಚ್ಚುತ್ತಿತ್ತು. ಮಾಹಾರಾಣಾ ಪ್ರತಾಪಸಿಂಹರ ಸ್ಥಿತಿಯನ್ನು ನೋಡಿ ಭಾಮಾಶಾಹನ ಮನಸ್ಸು ಕರಗಿತು. ಅವನು ೨೫ ಸಾವಿರ ಸೈನಿಕರನ್ನು ೧೨ ವರ್ಷ ಪಾಲನೆ ಪೋಷಣೆ ಮಾಡುವಷ್ಟು ಸಂಪತ್ತನ್ನು ಸ್ವಾಮಿಯ ಚರಣಕ್ಕೆ ಅರ್ಪಣೆ ಮಾಡಿದಾಗ ಮಹಾರಾಣ ಪ್ರತಾಪಸಿಂಹರ ಅಂತಃಕರಣ ಕೃತಜ್ಞತೆಯಿಂದ ತುಂಬಿ ಹೋಯಿತು. ಪ್ರಾರಂಭದಲ್ಲಿ ಪ್ರತಾಪಸಿಂಹರು ಭಾಮಾಶಾಹನ ಸಂಪತ್ತನ್ನು ನಮ್ರತೆಯಿಂದ ತಿರಸ್ಕರಿಸಿದರು; ಆದರೆ ಭಾಮಾಶಾಹನ ಮನಃಪೂರ್ವಕ ಆಗ್ರಹಕ್ಕಾಗಿ ಕೊನೆಗೆ ಅವರು ಸ್ವೀಕರಿಸಿದರು. ಭಾಮಾಶಾಹನ ಕೊಡುಗೆಯ ನಂತರ ಮಹಾರಾಣಾ ಪ್ರತಾಪಸಿಂಹರಿಗೆ ಅನೇಕ ಸ್ಥಳಗಳಿಂದ ಹಣ ಬರಲು ಪ್ರಾರಂಭವಾಯಿತು. ಈ ಹಣವನ್ನು ಉಪಯೋಗಿಸಿ ಅವರು ತನ್ನ ಸೈನ್ಯಬಲವನ್ನು ಹೆಚ್ಚಿಸಿಕೊಂಡರು ಹಾಗೂ ಸಂಪೂರ್ಣ ಮೇವಾಡ ಪ್ರಾಂತವನ್ನು ಸ್ವತಂತ್ರಗೊಳಿಸಿದರು; ಆದರೆ ಇನ್ನೂ ಚಿತ್ತೋಡ ಮುಸಲ್ಮಾನರ ವಶದಲ್ಲಿಯೇ ಇತ್ತು.

ಕೊನೆಯ ಇಚ್ಛೆ

ಮಹಾರಾಣಾ ಪ್ರತಾಪಸಿಂಹರ ಮರಣಶಯ್ಯೆಯೂ ಹುಲ್ಲಿನ ಹಾಸಿಗೆ ಆಗಿತ್ತು. ಕೊನೆಯುಸಿರೆಳೆಯುವ ತನಕ (೧೫೯೭ ) ಮೃದುವಾದ ಹಾಸಿಗೆಯಲ್ಲಿ ಮಲಗಲಿಲ್ಲ; ಏಕೆಂದರೆ ಚಿತ್ತೋಡ ಸ್ವತಂತ್ರಗೊಳಿಸುವ ಪ್ರತಿಜ್ಞೆಯು ಪೂರ್ಣಗೊಳ್ಳಲಿಲ್ಲ. ಕೊನೆಯ ಕ್ಷಣದಲ್ಲಿ ತಮ್ಮ ಪುತ್ರ ಅಮರಸಿಂಹನ ಕೈಹಿಡಿದುಕೊಂಡು ಅವರು ತನ್ನ ಪ್ರತಿಜ್ಞೆಯನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ಅವನಿಗೆ ವಹಿಸಿಕೊಟ್ಟು ಶಾಂತರೀತಿಯಲ್ಲಿ ಪ್ರಾಣ ತ್ಯಜಿಸಿದರು. ಅಕ್ಬರನಂತಹ ಕ್ರೂರ ಬಾದಶಾಹನೊಂದಿಗೆ ಮಾಹಾರಾಣಾ ಪ್ರತಾಪ ಸಿಂಹರು ನಡೆಸಿದ ಹೋರಾಟಕ್ಕೆ ಇತಿಹಾಸದಲ್ಲಿ ಇನ್ನೊಂದು ಉದಾಹರಣೆ ಇಲ್ಲ. ಹೆಚ್ಚುಕಡಿಮೆ ಸಂಪೂರ್ಣ ರಾಜಸ್ಥಾನ ಅಕ್ಬರನ ವಶಕ್ಕೆ ಹೋಗಿರುವಾಗ ಮಹಾರಾಣಾ ಪ್ರತಾಪಸಿಂಹರು ತಮ್ಮ ಸಣ್ಣ ಮಾತೃಭೂಮಿಗಾಗಿ ೨೫ ವರ್ಷ ಹೋರಾಡಿದರು. ಬಾದಶಾಹನು ಬಹಳ ಪ್ರಯತ್ನ ಮಾಡಿದರೂ ಮಹಾರಾಣಾ ಪ್ರತಾಪಸಿಂಹರು ಕೊನೆಯ ತನಕ ಅಜಿಂಕ್ಯರಾಗಿದ್ದರು. ಅಷ್ಟೇ ಅಲ್ಲ, ಅವರು ಮುಘಲ ಮುಸಲ್ಮಾನರ ಹಿಡಿತದಿಂದ ರಾಜಸ್ಥಾನದ ಬಹಳಷ್ಟು ಭೂಮಿಯನ್ನೂ ಸ್ವತಂತ್ರಗೊಳಿಸಿದರು. ಅಪಾರವಾದ ಕಷ್ಟ-ನಷ್ಟಗಳನ್ನು ಸಹಿಸಿಯೂ ಅವರು ತಮ್ಮ ಕುಲಕ್ಕೆ ಮತ್ತು ರಾಷ್ಟ್ರದ ಪ್ರತಿಷ್ಠೆಗೆ ಆಘಾತವಾಗಲು ಬಿಡಲಿಲ್ಲ. ‘ಸ್ವಾತಂತ್ರ್ಯ’ ಎಂಬ ಶಬ್ಧದ ಪರ್ಯಾಯವೇ ‘ಮಹಾರಾಣಾ ಪ್ರತಾಪಸಿಂಹ’ರಾಗಬೆಕೆನ್ನುವಷ್ಟು ಅವರ ಜೀವನ ತೇಜಸ್ವಿಯಾಗಿತ್ತು. ಹಿಂದೂಸ್ಥಾನದಲ್ಲಿ ಎಲ್ಲಿಯ ತನಕ ವೀರರ ಪೂಜೆ ಆಗುತ್ತಿರುವುದೋ, ಅಲ್ಲಿಯ ತನಕ ಮಹಾರಾಣಾ ಪ್ರತಾಪಸಿಂಹರ ಚರಿತ್ರೆ ಹಿಂದೂಗಳಿಗೆ ಸ್ವಾತಂತ್ರ್ಯ ಹಾಗೂ ದೇಶಾಭಿಮಾನದ ಪಾಠ ನೀಡುತ್ತಲೇ ಇರುವುದು !

– ಸಂಕಲನಕಾರರು : ಶ್ರೀ. ಸಂಜಯ ಮುಳ್ಯೆ, ರತ್ನಗಿರಿ