’ರಾಷ್ಟ್ರೀಯವಾದದ ಜನಕ’ರಲ್ಲೊಬ್ಬರೆಂದು ಪರಿಗಣಿಸಲ್ಪಡುವ ಬಿಪಿನ್ ಚಂದ್ರ ಪಾಲ್

ಬಿಪಿನ್ ಚಂದ್ರ ಪಾಲ್

ಬಿಪಿನ್ ಚಂದ್ರ ಪಾಲ್

ಭಾರತದ ರಾಜಕೀಯ ಇತಿಹಾಸದಲ್ಲಿ ಬಾಲ್ ಗಂಗಾಧರ ತಿಲಕ ಹಾಗೂ ಲಾಲಾ ಲಜಪತ್ ರಾಯ ಇವರ ಜೊತೆಗೂಡಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಬಿಪಿನ್ ಚಂದ್ರ ಪಾಲ್ ಇಂದು ‘ಕ್ರಾಂತಿಕಾರಿ ವಿಚಾರಗಳ ಜನಕ’ರೆಂದೂ ಪ್ರಸಿದ್ಧರಾಗಿದ್ದಾರೆ. ಸಾಹಸ, ಸಹಕಾರ ಮತ್ತು ತ್ಯಾಗದ ಬಲದಿಂದ ಲಾಲ್-ಬಾಲ್-ಪಾಲ್ ಸಂಪೂರ್ಣ ರಾಜಕೀಯ ಸ್ವರಾಜ್ಯದ ಬೇಡಿಕೆಯನ್ನು ಪ್ರಸ್ತಾಪಿಸಿದವರು. ಇವರು ಪ್ರಾರಂಭಿಸಿದ ಸ್ವದೇಶೀ ಚಳುವಳಿಯು (ಕೇವಲ ಸ್ವದೇಶೀ ವಸ್ತುಗಳ ಬಳಕೆ) ಇಡೀ ರಾಷ್ಟ್ರವನ್ನೇ ವ್ಯಾಪಿಸಿತು.

ಲಾಲ್ -ಬಾಲ್ - ಪಾಲ್

ಲಾಲ್ -ಬಾಲ್ – ಪಾಲ್

ಸಿಲ್ಹಟ್.ನ (ಇಂದಿನ ಬಾಂಗ್ಲಾದೇಶ) ಒಂದು ಹಳ್ಳಿಯ ಶ್ರೀಮಂತ ಕುಟುಂಬದಲ್ಲಿ ೭ ನವೆಂಬರ್, ೧೮೫೮ರಂದು ಜನಿಸಿದ ಪಾಲ್, ತಮ್ಮ ಶಿಕ್ಷಣವನ್ನು ಮಾಧ್ಯಮಿಕ ಹಂತದಲ್ಲೇ ಮೊಟಕುಗೊಳಿಸಬೇಕಾಯಿತು. ಇದೇ ಸಮಯದಲ್ಲಿ ಅವರು ಕೇಶವಚಂದ್ರ ಸೇನ್ ಮತ್ತು ಪಂಡಿತ್ ಶಿವನಾಥ ಶಾಸ್ತ್ರೀ ಮುಂತಾದ ಪ್ರಖ್ಯಾತ ಬಂಗಾಳಿ ನೇತಾರರ ಸಂಪರ್ಕಕ್ಕೆ ಬಂದರು. ೧೯೦೭ ರಲ್ಲಿ ಪಾಲ್ ಇಂಗ್ಲೆಂಡಿನಲ್ಲಿ ವಿಚಾರವಾದಿ ವಿದ್ಯಾರ್ಥಿ ಆಗಿದ್ದರು. ಅಲ್ಲಿ ‘ಸ್ವರಾಜ್’ ಪತ್ರಿಕೆಯನ್ನು ಪ್ರಾರಂಭಿಸಿದ ಅವರು ಮುಂದಿನ ವರ್ಷವೇ ಭಾರತಕ್ಕೆ ಮರಳಿ ಸಂಪೂರ್ಣವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ‘ಬಂದೇ ಮಾತರಂ’ ಖಟ್ಲೆಯಲ್ಲಿ ಶ್ರೀ. ಅರವಿಂದರವರ ವಿರುದ್ಧ ಸಾಕ್ಷ್ಯ ನೀಡಲು ನಿರಾಕರಿಸಿದ ಪಾಲ್ ೬ ತಿಂಗಳ ಕಾರಾಗೃಹವಾಸವನ್ನು ಅನುಭವಿಸಬೇಕಾಯಿತು.

ಪಾಲ್ ಓರ್ವ ಶಿಕ್ಷಕ, ಪತ್ರಕರ್ತ, ಲೇಖಕ ಹಾಗೂ ಗ್ರಂಥಪಾಲಕ ಮುಂತಾದ ಹುದ್ದೆಗಳನ್ನು ವಹಿಸಿದವರು. ಆರಂಭದಲ್ಲಿ ಬ್ರಹ್ಮ ಸಮಾಜದ ಸಮರ್ಥಕರಾಗಿದ್ದ ಪಾಲ್, ವೇದಾಂತದ ಕಡೆಗೆ ವಾಲಿದರು. ಮುಂದೆ ಅವರು ಶ್ರೀ ಚೈತನ್ಯರ ವೈಷ್ಣವ ದರ್ಶನದ ಮುಂದಾಳತ್ವ ಕೂಡ ವಹಿಸಿದರು. ಸಮಾಜ ಸುಧಾರಕರಾದ ಪಾಲ್ ಜೀವನದಲ್ಲಿ ಎರಡು ಸಲ ಒಳ್ಳೆಯ ಮನೆತನದ ವಿಧವೆಯರನ್ನು ಮದುವೆ ಮಾಡಿಕೊಂಡಿದ್ದರು. ಅವರು ರಾಜಾರಾಮಮೊಹನರಾಯ, ಕೇಶವಚಂದ್ರ ಸೇನ್, ಶ್ರೀ. ಅರವಿಂದ ಘೋಷ್, ರವೀಂದ್ರನಾಥ ಟಾಗೋರ್, ಆಶುತೋಷ್ ಮುಖರ್ಜಿ ಹಾಗೂ ಆನಿ ಬೆಸೆಟ್ ಮುಂತಾದ ಆಧುನಿಕ ಭಾರತದ ಶಿಲ್ಪಿಗಳ ಜೀವನವನ್ನು ಅಧ್ಯಯನ ಮಾಡಿ, ಒಂದು ಲೇಖನ ಮಾಲೆಯನ್ನು ಪ್ರಕಟಿಸಿದರು. ವ್ಯಾಪಕ ದೃಷ್ಟಿಕೋನ ನೀಡುವ ‘ಸಮಗ್ರ ದೇಶಭಕ್ತಿ’ಯನ್ನು ಅವರು ಉಪದೇಶಿಸಿದರು. ‘ಪರಿದರ್ಶಕ್’ (೧೮೮೬ – ಬಂಗಾಳಿ ಸಾಪ್ತಾಹಿಕ). ‘ನ್ಯೂ ಇಂಡಿಯಾ’ (೧೯೦೨ – ಆಂಗ್ಲ ಸಾಪ್ತಾಹಿಕ) ಹಾಗೂ ‘ಬಂದೇ ಮಾತರಂ’ (೧೯೦೬ – ಬಂಗಾಳಿ ದೈನಿಕ) ಅವರಿಂದ ಪ್ರಕಶಿಸಲ್ಪಟ್ಟ ಕೆಲವು ಪತ್ರಿಕೆಗಳು.

೧೮೮೬ರ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ ಸಿಲ್ಹಟ್.ಅನ್ನು ಪ್ರತಿನಿಧಿಸಿದ್ದರು. ೧೯೩೦ರಲ್ಲಿ ಅವರು ಗಾಂಧಿಯ ‘ಅಸಹಕಾರ ಚಳುವಳಿಗೆ’ ವಿರೋಧವನ್ನು ವ್ಯಕ್ತಪಡಿಸಿದ್ದರು. ೧೯೩೦ ರಲ್ಲೇ ಸಕ್ರಿಯ ರಾಜಕೀಯದಿಂದ ಸಂನ್ಯಾಸ ಪಡೆದ ಪಾಲ್, ರಾಷ್ಟ್ರೀಯ ಪ್ರಶ್ನೆಗಳ ಮೇಲೆ ಟಿಪ್ಪಣಿ ಮಾತ್ರ ಮಾಡ ತೊಡಗಿದರು. ೨೦ ಮೇ ೧೯೩೨ರಂದು ಭಾರತಮಾತೆಯು ಈ ಮಹಾನ್ ದೇಶಭಕ್ತನನ್ನು ಕಳೆದುಕೊಂಡಳು.