ಸೂರದಾಸರು ಮತ್ತು ಕಸಗುಡಿಸುವವ

ಒಂದು ಕಾಲದಲ್ಲಿ ಸೂರದಾಸರೆಂಬ ಒಬ್ಬ ದೈವಭಕ್ತರಿದ್ದರು. ಅವರು ಅಧ್ಯಾತ್ಮವನ್ನು ಅಧ್ಯಯನ ಮಾಡಲು ಮತ್ತು ತಿಳಿದುಕೊಳ್ಳಲು ಜಿಜ್ಞಾಸುಗಳಾಗಿದ್ದರು. ಅವರು ಒಬ್ಬ ಗುರುಗಳ ಬಳಿಗೆ ಹೋಗಿ, ಭಗವಂತನ ಸಾಮೀಪ್ಯವು ದೊರೆಯಲು ತಮಗೆ ಆಧ್ಯಾತ್ಮಿಕ ಸಾಧನೆಯ ಬಗ್ಗೆ ಮಾರ್ಗದರ್ಶನ ನೀಡಲು ಕೇಳಿಕೊಂಡರು.

ಸೂರದಾಸರಿಗೆ ತುಂಬಾ ಕೋಪ ಇದೆ ಎಂದು ಗುರುಗಳಿಗೆ ತಿಳಿದಿತ್ತು. ದೋಷವು ಸೂರದಾಸರನ್ನು ಭಗವಂತನೊಂದಿಗೆ ಒಂದಾಗಲು ಅಡ್ಡಿಯಾಗುತ್ತದೆ, ಆದ್ದರಿಂದ ತೀವ್ರವಾದ ಸಾಧನೆಯನ್ನು ಹೇಳಿಕೊಡುವ ಮೊದಲು ಅವರ ತಯಾರಿ ಮಾಡಬೇಕೆಂದು ನಿಶ್ಚಯಿಸಿದರು. ಗುರುಗಳು ಉತ್ತರಿಸಿದರು. ಆತ್ಮೀಯ ಸೂರದಾಸರೇ, ಇನ್ನು ಮುಂದಿನ ಒಂದು ತಿಂಗಳ ಕಾಲ ನೀವು ನಿಮ್ಮ ಎಲ್ಲ ಚಟುವಟಿಕೆಗಳನ್ನು ಮಾಡುತ್ತಿರುವಾಗಲೂ ಭಗವಂತನ ನಾಮಜಪವನ್ನು ಮಾಡುತ್ತಿರಿ. ನಂತರ ಸ್ನಾನ ಮಾಡಿ ನನ್ನ ಬಳಿಗೆ ಪುನಃ ಬನ್ನಿರಿ.

ಅದರ ಮರುದಿನದಿಂದಲೇ ಸೂರದಾಸರು ಎಲ್ಲ ಚಟುವಟಿಕೆಗಳನ್ನು ಮಾಡುತ್ತಿರುವಾಗಲೂ ಭಗವಂತನ ನಾಮಜಪವನ್ನು ಮಾಡಹತ್ತಿದರು. ಒಂದು ತಿಂಗಳ ನಂತರ ಅವರು ನದಿಗೆ ಹೋಗಿ ಸ್ನಾನ ಮಾಡಿದರು, ಗುರುಗಳನ್ನು ಭೇಟಿಯಾಗಲು ಹೊಸ ಬಟ್ಟೆಗಳನ್ನು ಧರಿಸಿಕೊಂಡರು. ಗುರುಗಳ ಆಶ್ರಮಕ್ಕೆ ಹೋಗುತ್ತಿರುವಾಗ ಮಾರ್ಗ ಮಧ್ಯೆ ಒಬ್ಬ ಕಸಗುಡಿಸುತ್ತಿರುವವನ ಅಲಕ್ಷ್ಯತನದಿಂದ ಅವರ ಬಟ್ಟೆಗಳು ಕೊಳೆಯಾದವು. ಸೂರದಾಸರು ಕೋಪಮಾಡಿಕೊಂಡು ಕಸಗುಡಿಸುವವನನ್ನು ಬೈದರು, "ನೀನೇನು ಮಾಡುತ್ತಿರುವೆ, ಮೂರ್ಖ? ನಾನೀಗ ಹಿಂತಿರುಗಿ ಹೋಗಿ ಬಟ್ಟೆಗಳನ್ನು ಒಗೆದು ಒಣಗಿಸಿಕೊಂಡು ಮತ್ತೆ ಸ್ನಾನ ಮಾಡಬೇಕು ಎಷ್ಟು ಸಮಯ ಹಾಳಾಗುತ್ತದೆ."

ಗುರುಗಳು ಸನ್ನಿವೇಶವನ್ನು ಗಮನಿಸಿದರು. ಸೂರದಾಸರು ಆಶ್ರಮವನ್ನು ತಲುಪಿದ ಮೇಲೆ ಅವರು ಹೇಳಿದರು, "ಆತ್ಮೀಯ ಸೂರದಾಸರೇ, ನೀವು ಮುಂದಿನ ಸಾಧನೆಗೆ ಇನ್ನೂ ತಯಾರಾಗಿಲ್ಲ." ಮುಂದಿನ ಒಂದು ತಿಂಗಳು ಕಾಲ ಎಲ್ಲ ಚಟುವಟಿಕೆಗಳನ್ನು ಮಾಡುತ್ತಿರುವಾಗಲೂ ಭಗವಂತನ ನಾಮಜಪವನ್ನು ಮಾಡಿರಿ, ತಿಂಗಳು ಕಳೆದ ನಂತರ ಮತ್ತೆ ಸ್ನಾನ ಮಾಡಿ ನನ್ನನ್ನು ಭೇಟಿಯಾಗಲು ಬನ್ನಿರಿ.

ಸೂರದಾಸರು ಗುರುಗಳ ಆಜ್ಞೆಯನ್ನು ಒಪ್ಪಿಕೊಂಡು ನಿತ್ಯದ ಎಲ್ಲ ಚಟುವಟಿಕೆಗಳನ್ನು ಮಾಡುತ್ತಿರುವಾಗಲೂ ಭಗವಂತನ ನಾಮಜಪವನ್ನು ಮಾಡಲು ಮರಳಿ ಹೋದರು. ತಿಂಗಳು ಕಳೆದ ನಂತರ ಆಶ್ರಮಕ್ಕೆ ಉತ್ಸಾಹದಿಂದ ಹೋಗುತ್ತಿರುವಾಗ, ಮತ್ತದೇ ಘಟನೆ ಜರುಗಿತು. ಸಲ ಕಸಗುಡಿಸುತ್ತಿದ್ದವನು ಅಕಸ್ಮಾತ್ತಾಗಿ ತನ್ನ ಹೊಲಸಾದ ಪೊರಕೆಯನ್ನು ಸೂರದಾಸರ ಮೈಮೇಲೆ ತಾಗಿಸಿದನು. ಮತ್ತೆ ಸೂರದಾಸರು ಕಸಗುಡಿಸುತ್ತಿದ್ದವನ ಮೇಲೆ ಸಿಟ್ಟು ಮಾಡಿಕೊಂಡರು, ಗುರುಗಳು ಅವರನ್ನು ಮರಳಿ ಕಳುಹಿಸಿದರು ಮತ್ತು ಇನ್ನೊಂದು ತಿಂಗಳ ಕಾಲ ಭಗವಂತನ ನಾಮಜಪವನ್ನು ಮಾಡಲು ಹೇಳಿದರು.

ಹೀಗೆ ಮೂರು ತಿಂಗಳು ಕಳೆದ ಮೇಲೆ, ಸೂರದಾಸರು ಗುರುಗಳನ್ನು ಕಾಣಲು ಹೋಗುತ್ತಿದ್ದರು, ಆಗ ಅಸಾಮಾನ್ಯವಾದ ಘಟನೆ ಜರುಗಿತು. ಕಸಗುಡಿಸುವವನು ಸೂರದಾಸರು ಬರುತ್ತಿರುವುದನ್ನು ನೋಡಿದನು. ತಾನು ಮಾಡಿದ್ದು ಅಕಸ್ಮಾತ್ ಆಗಿ ಘಟಿಸಿದ ಕೃತ್ಯವಾಗಿತ್ತು, ಆದರೂ ಕೂಡ ಸೂರದಾಸರು ತನ್ನನ್ನು ಬೈದದ್ದನ್ನು ನೆನಪುಮಾಡಿಕೊಂಡನು. ಸೂರದಾಸರು ಹೊಸ ಬಟ್ಟೆಗಳನ್ನು ಧರಿಸಿದ್ದನ್ನು ಕಸಗುಡಿಸುವವನು ನೋಡಿದನು. ಸಲ ಸೂರದಾಸರು ಏನಾದರೂ ಮಾಡುವುದು ಅಥವಾ ಹೇಳುವುದಕ್ಕಿಂತ ಮೊದಲೇ ಸೂರದಾಸರ ಮೇಲೆ ಕ್ರುದ್ಧಗೊಂಡಿದ್ದ ಕಸಗುಡಿಸುವವನು ಉದ್ದೇಶಪೂರ್ವಕವಾಗಿ ತನ್ನ ಕಸದ ತೊಟ್ಟಿಯಲ್ಲಿದ್ದ ಎಲ್ಲ ಕಸವನ್ನು ಸೂರದಾಸರ ತಲೆಯ ಮೇಲೆ ಸುರಿದುಬಿಟ್ಟನು.

ಆದರೆ ಸಲ, ಸೂರದಾಸರು ತಮ್ಮ ಕೈಗಳನ್ನು ಜೋಡಿಸಿ ನಮಸ್ಕಾರ ಮಾಡುತ್ತಾ ಹೇಳಿದರು ನಾನು ನಿನಗೆ ಕೃತಜ್ಞನಾಗಿದ್ದೇನೆ. ನೀನೆ ನನ್ನ ಗುರು. ನೀನು ನನಗೆ ಕೋಪವೆಂಬ ದೋಷದಿಂದ ಹೊರಗೆ ಬರಲು ಕಲಿಸಿರುವಿ. ಕಸಗುಡಿಸುವವನು ಆಶ್ಚರ್ಯಚಕಿತನಾದನು ಮತ್ತು ನಾಚಿಕೆಯಿಂದ ತನ್ನ ತಲೆ ತಗ್ಗಿಸಿದನು.

ಸಲ, ಸೂರದಾಸರು ಗುರುಗಳ ಆಶ್ರಮವನ್ನು ತಲುಪಿದಾಗ ಗುರುಗಳು ಅವರಿಗೋಸ್ಕರ ಕಾಯುತ್ತಿದ್ದರು. ಗುರುಗಳು ಸಂತೋಷಭರಿತರಾಗಿ ತಾಯಿಯು ತನ್ನ ಮಗುವು ಏನಾದರೂ ಸಾಧನೆ ಮಾಡಿದಾಗ ಅದರ ಬೆನ್ನುತಟ್ಟುವಂತೆ ಸೂರದಾಸರ ತಲೆಯಮೇಲೆ ಕೈಯಾಡಿಸಿದರು.

ಒಂದು ತಿಂಗಳು ಕಾಲ ಮಾಡಿದ ಪ್ರಯತ್ನದ ನಂತರ ಸೂರದಾಸರು ಉತ್ಸುಕರಾಗಿ ತಮ್ಮ ಗುರುಗಳ ಬಳಿಗೆ ಹೋಗುತ್ತಿರುವಾಗ ಸೂರದಾಸರು ಅಕಸ್ಮಾತ್ತಾಗಿ ಮಾರ್ಗ ಮಧ್ಯ ಎದುರಾದ ಕಸಗುಡಿಸುತ್ತಿದ್ದವನಿಂದ ಹೇಗೆ ಕಿರಿಕಿರಿ ಅನುಭವಿಸಿದರು ಎಂದು ನಾವು ಕಲ್ಪಿಸಿಕೊಳ್ಳಬಹುದು. ನಮ್ಮ ಜೀವನದಲ್ಲಿಯೂ ಕೂಡ ನಾವು ಕೋಪಗೊಳ್ಳುವಂತೆ ಮಾಡುವ ಇಂತಹ ಬಹಳಷ್ಟು ಪ್ರಸಂಗಗಳನ್ನು ಎದುರಿಸಿರುತ್ತೇವೆ.

ಮೇಲಿನ ಕಥೆಯು ನಮಗೆ ತಿಳಿಸಿದಂತೆ, ಮೂರು ತಿಂಗಳುಗಳ ಕಾಲ ಸೂರದಾಸರು ಭಗವಂತನ ನಾಮಜಪವನ್ನು ಮಾಡಿದ್ದರಿಂದ ಮತ್ತು ಗುರುಗಳ ಆಜ್ಞೆಯನ್ನು ಪಾಲಿಸಿದ್ದರಿಂದ ಕ್ರೋಧದಿಂದ ಸಂಪೂರ್ಣವಾಗಿ ಹೊರಗೆ ಬಂದರು. ಕ್ರೋಧದಿಂದ ಹೊರಗೆ ಬರಲು ಸಹಾಯ ಮಾಡಿದ ಕಸಗುಡಿಸುವವನನ್ನು ಅವರು ಗುರುವೆಂದು ತಿಳಿದರು. ನಾವೂ ಕೂಡ ಎಲ್ಲ ಪ್ರಸಂಗಗಳನ್ನು ನಮ್ಮ ದೋಷಗಳನ್ನು ಅರ್ಥೈಸಿಕೊಳ್ಳಲು ಮತ್ತು ಅವುಗಳಿಂದ ಹೊರಗೆ ಬರಲು ಸದವಕಾಶ ಎಂಬ ದೃಷ್ಟಿಕೋನದಿಂದ ನೋಡಬೇಕು. ಇದು ಕೇವಲ ಭಗವಂತನ ನಾಮಸ್ಮರಣೆಯಿಂದ ಸಿಗುವ ಬಲದಿಂದ ಮಾತ್ರ ಸಾಧ್ಯವಾಗುತ್ತದೆ.