ಶಿಷ್ಯನನ್ನು ಸಾಧನೆಯಲ್ಲಿ ಮುಂದೆ ಕೊಂಡೊಯ್ಯುವ ಗುರುಗಳ ತಳಮಳ !

ರಾಮನೆಂಬ ಶಿಷ್ಯನು ಗುರುಗಳು ನೀಡಿದ ಎಲ್ಲ ಸೇವೆಯನ್ನು ನಮೃತೆಯಿಂದ ಹಾಗೂ ಸೇವಾಭಾವದಿಂದ ಆಜ್ಞಾಪಾಲನೆ ಎಂದು ಮಾಡುತ್ತಿದ್ದನು. ಆದುದರಿಂದ ಗುರುಗಳು ರಾಮನನ್ನು ತನ್ನ ಉತ್ತರಾಧಿಕಾರಿ ಎಂದು ನೇಮಿಸುತ್ತಾರೆ. ಎಂದಿನಂತೆಯೇ ಅವನು ಈ ಹೊಸ ಸೇವೆಯನ್ನೂ ತಳಮಳ ಹಾಗೂ ಸೇವಾಭಾವದಿಂದ ಮಾಡುತ್ತಿದ್ದನು.

ಸ್ವಲ್ಪ ಸಮಯದ ನಂತರ ಸೋಮ ಎಂಬ ಕುಶಾಗ್ರ ಬುದ್ಧಿಯ ಯುವಕನು ಗುರುಗಳ ಶಿಷ್ಯತ್ವವನ್ನು ಸ್ವೀಕರಿಸುತ್ತಾನೆ ಹಾಗೂ ಅಲ್ಪ ಕಾಲಾವಧಿಯಲ್ಲಿಯೇ ಅವನು ಗುರುಗಳ ಮನಸ್ಸನನ್ನು ಗೆಲ್ಲುತ್ತಾನೆ. ಅವನ ಬುದ್ಧಿಗೆ ಚಾಲನೆ ಸಿಗಬೇಕೆಂದು ಗುರುಗಳು ಉತ್ತರಾಧಿಕಾರಿ ಪದವಿಯಲ್ಲಿರುವ ರಾಮನಿಗೆ ಅಡುಗೆ ಮನೆಯ ಸೇವೆಯ ಜವಾಬ್ದಾರಿಯನ್ನು ನೀಡುತ್ತಾರೆ ಹಾಗೂ ಸೋಮನನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸುತ್ತಾರೆ. ಆದರೂ ರಾಮನ ಮನಸ್ಸಿನಲ್ಲಿ ಯಾವುದೇ ವಿಕಲ್ಪ ಬರದೇ ಅವನು ಗುರುಗಳಿಗೆ ಇಷ್ಟವಾಗುವಂತೆ ನೀಡಿದ ಸೇವೆಯನ್ನು ಮಾಡುತ್ತಿರುತ್ತಾನೆ.

ಕೆಲವು ದಿನಗಳ ನಂತರ ಸೋಮನ ಅಹಂಕಾರ ಹೆಚ್ಚುತ್ತದೆ. ಇದರಿಂದಾಗಿ ಸಹಸಾಧಕರು ಅವನ ಬದಲಾಗಿ ಅಡುಗೆ ಮನೆಯಲ್ಲಿ ಸೇವೆ ಮಾಡುವ ರಾಮನಿಂದ ಸಂದೇಹ ನಿವಾರಣೆಯನ್ನು ಮಾಡಿಕೊಳ್ಳತೊಡಗಿದರು. ಅದನ್ನು ನೋಡಿ ಸೋಮನ ಮನಸ್ಸಿನಲ್ಲಿ ರಾಮನ ಬಗ್ಗೆ ದ್ವೇಷಭಾವನೆ ನಿರ್ಮಾಣವಾಗುತ್ತದೆ.

ಒಂದು ದಿನ ಸೋಮ ಗುರುಗಳ ಬಳಿ ಹೋಗಿ ತನ್ನ ದ್ವೇಷಭಾವನೆಯನ್ನು ವ್ಯಕ್ತಪಡಿಸುತ್ತಾನೆ. ಆಗ ಗುರುಗಳು 'ರಾಮನ ಉತ್ತರಾಧಿಕಾರಿ ಪದವಿಯನ್ನು ತೆಗೆದು ನಿನಗೆ ಕೊಟ್ಟೆ; ಏಕೆಂದರೆ ನನಗೆ ಇದರಿಂದ ಯಾವುದೇ ಸೇವೆ ಮಾಡಿದರೂ ಗುರುಗಳ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿ ಭಾವಪೂರ್ಣವಾಗಿ ಸೇವೆ ಮಾಡುತ್ತಾರೆಯೋ ಅವರೇ ನಿಜವಾದ ಅರ್ಥದಲ್ಲಿ ಗುರುಗಳ ಮನಸ್ಸನ್ನು ಗೆಲ್ಲಬಲ್ಲರು ಎಂಬುದನ್ನು ನಿನಗೆ ಕಲಿಸಬೇಕಿತ್ತು. ಇಂದಿನಿಂದ ನೀನು ಅಡುಗೆ ಮನೆಯಲ್ಲಿ ಸೇವೆ ಮಾಡುವೆ ಹಾಗೂ ರಾಮನು ನನ್ನ ಉತ್ತರಾಧಿಕಾರಿಯಾಗಿರುವನು' ಎಂದು ಅಪ್ಪಣೆ ಮಾಡುತ್ತಾರೆ.

ಕೆಲವು ದಿನಗಳ ನಂತರ ಸೋಮನು ಗುರುಗಳಲ್ಲಿ ತನ್ನ ಮನೆಗೆ ಹೋಗುವ ಅನುಮತಿ ಕೇಳುತ್ತಾನೆ. ಆಗ ಶ್ರೀ ಗುರುಗಳು ಶಾಂತವಾಗಿರುತ್ತಾರೆ. ಅವರಿಗೆ ಸೋಮನು ಆ ಸಮಯದಲ್ಲಿ ಮನೆಗೆ ಹೋಗುವುದು ಇಷ್ಟವಿರುವುದಿಲ್ಲ; ಆದರೆ ಸೋಮನು ಗುರುಗಳ ಅನುಮತಿ ಇಲ್ಲದಿದ್ದರೂ ಮನೆಗೆ ಹೋಗುತ್ತಾನೆ. ಬಹಳ ಸಮಯದ ನಂತರ ಅವನು ಮರಳಿ ಬರುತ್ತಾನೆ ಹಾಗೂ ಗುರುಗಳ ಎದುರು ನಿಲ್ಲುತ್ತಾನೆ. ಆಗ ಗುರುಗಳ ಕಣ್ಣಿನಲ್ಲಿ ಕಣ್ಣಿರು ಬರುತ್ತದೆ ಹಾಗೂ ಅವರು ಅವನ ಕಡೆಗೆ ಸುಮ್ಮನೆ ನೋಡುತ್ತಾರೆ; ಆದರೆ ಮರುಕ್ಷಣವೇ ಕಠೋರವಾಗಿ ರಾಮನಿಗೆ 'ಇವನಿಗಾಗಿ ಆಶ್ರಮದ ಬಾಗಿಲು ಮುಚ್ಚಿವೆ, ಇವನು ಇಲ್ಲಿಂದ ಹೊರಡಬೇಕು' ಎಂದು ಆಜ್ಞೆ ಮಾಡುತ್ತಾರೆ.

ಕೆಲ ಸಮಯದ ನಂತರ ರಾಮನು ತಡೆಯಲಾರದೇ ಗುರುಗಳಿಗೆ 'ಗುರುಗಳೇ, ನೀವು ಸೋಮನ ವಿಷಯದಲ್ಲಿ ಅಷ್ಟೊಂದು ಕಠೋರ ನಿರ್ಣಯ ತೆಗೆದುಕೊಂಡಿರುವಿರಿ; ಆದರೆ ನಿಮ್ಮ ಕಣ್ಣಿನಲ್ಲಿ ಕಣ್ಣೀರು ಏಕಿತ್ತು?' ಎಂದು ಕೇಳುತ್ತಾನೆ. ಅದಕ್ಕೆ ಗುರುಗಳು 'ಅವನಿಗೆ ಸಾಧನೆಯಲ್ಲಿ ಮುಂದೆ ಹೋಗುವ ಕ್ಷಮತೆಯು ಬಹಳ ಇತ್ತು; ಆದರೆ ಅವನು ಮನೆಗೆ ಹೋಗಿ ಕೆಟ್ಟ ಸಂಗತಿಗಳಿಂದ ಸಾಧನೆಯ ಎಲ್ಲ ಫಲವನ್ನು ಕಳೆದುಕೊಂಡು ಭಿಕ್ಷುಕನಾಗಿ ಬಂದನು, ಈ ವಿಷಯವೆ ನನ್ನ ಆಶ್ರುಗಳ ಕಾರಣ' ಎಂದು ಹೇಳಿದರು.

ಮಕ್ಕಳೇ, ಮೇಲಿನ ಕಥೆಯಿಂದ 'ಗುರುಗಳು ತಮ್ಮ ಶಿಷ್ಯನ ಸಾಧನೆಯಲ್ಲಿ ಪ್ರಗತಿಯಾಗಬೇಕು ಎಂದು ಸತತ ಚಡಪಡಿಸುತ್ತಿರುತ್ತಾರೆ' ಎಂಬುದು ಗಮನಕ್ಕೆ ಬರುತ್ತದೆ. ಆದುದರಿಂದಲೇ ಗುರುಗಳನ್ನು 'ಬ್ರಹ್ಮ' ಎಂದರೆ ದೇವರೊಂದಿಗೆ ಹೋಲಿಸುತ್ತಾರೆ!