ಗುರು ದ್ರೋಣಾಚಾರ್ಯರ ಆದರ್ಶ ಶಿಷ್ಯ ಅರ್ಜುನ

ಮಿತ್ರರೇ, ನಮಗೆಲ್ಲರಿಗೂ ಅರ್ಜುನನು ಗುರು ದ್ರೋಣಾಚಾರ್ಯರ ಪ್ರಿಯ ಶಿಷ್ಯನಾಗಿದ್ದನೆಂದು ತಿಳಿದಿದೆ. ಅರ್ಜುನನ ಮೇಲೆ ಗುರುದೇವರ ವಿಶೇಷ ಕೃಪೆಯಿರುವುದು, ದ್ರೋಣಾಚಾರ್ಯರ ಇನ್ನಿತರ ಶಿಷ್ಯರಿಗೆ ಸಹನೆಯಾಗುತ್ತಿರಲಿಲ್ಲ. ಆದ್ದರಿಂದ ಅವರೆಲ್ಲರೂ ಅರ್ಜುನನೊಂದಿಗೆ ಒರಟಾಗಿ ನಡೆದುಕೊಳ್ಳುತ್ತಿದ್ದರು. ಒಂದು ದಿನ, ದ್ರೋಣಾಚಾರ್ಯರು ತಮ್ಮ ಶಿಷ್ಯರೆಲ್ಲರನ್ನು ಕರೆದುಕೊಂಡು ನದಿ ತೀರಕ್ಕೆ ಹೋದರು. ಅಲ್ಲಿ ಒಂದು ವಟವೃಕ್ಷದ ಕೆಳಗೆ ನಿಂತುಕೊಂಡು ಗುರುದೇವರು ಅರ್ಜುನನಿಗೆ ‘ಅರ್ಜುನಾ, ನಾನು ಆಶ್ರಮದಲ್ಲಿ ನನ್ನ ಧೋತರವನ್ನು ಮರೆತು ಬಂದಿದ್ದೇನೆ. ಅದನ್ನು ತೆಗೆದುಕೊಂಡು ಬಾ, ಹೋಗು’ ಎಂದು ಹೇಳಿದರು.

ತನ್ನ ಗುರುಗಳ ಆಜ್ಞೆಯನ್ನು ಕೇಳಿ ಅರ್ಜುನನು ಧೋತರ ತರಲು ಆಶ್ರಮಕ್ಕೆ ಹೋದನು. ಆಗ ಗುರು ದ್ರೋಣಾಚಾರ್ಯರು ಕೆಲವು ಶಿಷ್ಯಂದಿರಿಗೆ ಹೇಳಿದರು. ‘ಗದೆ ಮತ್ತು ಬಾಣಕ್ಕಿಂತ ಮಂತ್ರದಲ್ಲಿ ಅಧಿಕ ಶಕ್ತಿಯಿದೆ. ನಾನು ಮಂತ್ರವನ್ನು ನುಡಿದು ಒಂದೇ ಬಾಣದಿಂದ ಈ ವಟವೃಕ್ಷದ ಎಲ್ಲ ಎಲೆಗಳಲ್ಲಿ ರಂಧ್ರವನ್ನು ಮಾಡಬಲ್ಲೆನು’ ಎಂದು ಹೇಳಿ ದ್ರೋಣಾಚಾರ್ಯರು ಭೂಮಿಯ ಮೇಲೆ ಒಂದು ಮಂತ್ರವನ್ನು ಬರೆದರು ಮತ್ತು ಆ ಮಂತ್ರವನ್ನು ಜಪಿಸಿ ಬಾಣವನ್ನು ಬಿಟ್ಟರು. ಆ ಬಾಣವು ವೃಕ್ಷದ ಎಲ್ಲ ಎಲೆಗಳಲ್ಲಿ ರಂಧ್ರವನ್ನು ಮಾಡಿತು. ಇದನ್ನು ನೋಡಿ ಗುರುದೇವರು ಇದನ್ನು ಹೇಗೆ ಮಾಡಿದರೆಂದು ಎಲ್ಲ ಶಿಷ್ಯಂದಿರು ಆಶ್ಚರ್ಯಚಕಿತರಾದರು.

ತದನಂತರ ಗುರು ದ್ರೋಣಾಚಾರ್ಯರು ಎಲ್ಲ ಶಿಷ್ಯರೊಂದಿಗೆ ಸ್ನಾನ ಮಾಡಲು ಹೋದರು. ಅದೇ ಸಮಯದಲ್ಲಿ ಅರ್ಜುನನು ಧೋತರವನ್ನು ತೆಗೆದುಕೊಂಡು ಬಂದನು. ಬರುತ್ತಲೇ ಅವನ ದೃಷ್ಟಿ ಮರದ ಎಲೆಗಳ ಮೇಲೆ ಬಿದ್ದಿತು. ಮೊದಲು ಈ ಮರದ ಎಲೆಗಳಲ್ಲಿ ರಂಧ್ರವಿರಲಿಲ್ಲ. ಈಗ ಇದರ ಎಲೆಗಳಲ್ಲಿ ರಂಧ್ರ ಹೇಗಾಯಿತು, ಎಂದು ಅರ್ಜುನನು ಮನಸ್ಸಿನಲ್ಲಿಯೇ ವಿಚಾರ ಮಾಡತೊಡಗಿದನು. ನಾನು ಗುರುದೇವರ ಧೋತರವನ್ನು ತೆಗೆದುಕೊಂಡು ಬರಲು ಹೋದಾಗ, ಗುರುದೇವರು ಶಿಷ್ಯಂದಿರಿಗೆ ಏನಾದರೂ ರಹಸ್ಯವನ್ನು ತಿಳಿಸಿರಬೇಕು ಎಂದು ವಿಚಾರ ಮಾಡತೊಡಗಿದನು. ಹಾಗೆಯೇ, ಒಂದು ವೇಳೆ ಗುರುದೇವರು ಏನಾದರೂ ರಹಸ್ಯವನ್ನು ಹೇಳಿದ್ದರೆ, ಅಲ್ಲಿ ಅದರ ಗುರುತು ಇರಲೇ ಬೇಕು ಎಂದುಕೊಂಡು, ಅರ್ಜುನನು ಅತ್ತ-ಇತ್ತ ನೋಡಿದನು. ಅವನಿಗೆ ಭೂಮಿಯ ಮೇಲೆ ಬರೆದಿರುವ ಮಂತ್ರ ಕಂಡುಬಂತು. ಆ ಮಂತ್ರವನ್ನು ನೋಡಿ ಅರ್ಜುನನು, ಎಲೆಗಳಲ್ಲಿ ರಂಧ್ರವನ್ನುಂಟು ಮಾಡಿರುವ ರಹಸ್ಯಮಯ ಶಕ್ತಿಯು ಈ ಮಂತ್ರದಲ್ಲಿಯೇ ಅಡಗಿರಬೇಕು, ಹಾಗಿದ್ದರೆ ಈ ಮಂತ್ರ ಎಷ್ಟು ಅದ್ಭುತವಾಗಿರಬೇಕು ಎಂದು ವಿಚಾರ ಮಾಡಿದನು. ಹಾಗಿದ್ದರೆ ಈ ಮಂತ್ರದ ಪ್ರಯೋಗವನ್ನು ಏಕೆ ಮಾಡಿ ನೋಡಬಾರದು? ಎಂದು ಅರ್ಜುನನು ಯೋಚಿಸಿ ತಕ್ಷಣ ಆ ಮಂತ್ರವನ್ನು ಓದಲು ಪ್ರಾರಂಭಿಸಿದನು. ಕೆಲವು ಸಮಯ ಆ ಮಂತ್ರವನ್ನು ಓದಿದ ಬಳಿಕ ಅವನಿಗೆ ಈ ಮಂತ್ರವು ಸಫಲವಾಗುವುದೆಂದು ದೃಢ ವಿಶ್ವಾಸ ಮೂಡಿತು. ಅವನು ಬಿಲ್ಲಿಗೆ ಹೆದೆಯೇರಿಸಿ, ಮಂತ್ರವನ್ನು ಉಚ್ಚರಿಸುತ್ತಾ ಬಾಣವನ್ನು ಬಿಟ್ಟನು. ಗುರು ದ್ರೋಣಾಚಾರ್ಯರು ಯಾವ ಮರಕ್ಕೆ ಬಾಣವನ್ನು ಬಿಟ್ಟಿದ್ದರೋ ಅದೇ ಮರಕ್ಕೆ ಅರ್ಜುನನೂ ಗುರಿಯಿಟ್ಟನು. ಬಾಣವು ಮೊದಲು ರಂಧ್ರವಾಗಿದ್ದ ಗಿಡದ ಎಲೆಗಳಿಗೆ ತಗುಲಿತು. ಮತ್ತು ಅದೇ ಎಲೆಗಳಲ್ಲಿ ಮೊದಲು ಎಲ್ಲಿ ರಂಧ್ರವಾಗಿತ್ತೋ ಅದರ ಪಕ್ಕದಲ್ಲಿಯೇ ಮತ್ತೊಂದು ಹೊಸ ರಂಧ್ರವಾಯಿತು. ಇದನ್ನು ನೋಡಿ ಅರ್ಜುನನಿಗೆ ಬಹಳ ಆನಂದವಾಯಿತು. ಗುರುದೇವರು ಯಾವ ವಿದ್ಯೆಯನ್ನು ಇತರ ಶಿಷ್ಯಂದಿರಿಗೆ ಕಲಿಸಿದರೋ, ಅದನ್ನು ನಾನೂ ಕಲಿತೆನು ಎಂದು ವಿಚಾರ ಮಾಡಿ ಮನಸ್ಸಿನಲ್ಲಿಯೇ ಪ್ರಸನ್ನನಾಗಿ ಅವನು ಗುರುದೇವರಿಗೆ ಧೋತರವನ್ನು ಕೊಡಲು ನದಿ ತೀರಕ್ಕೆ ಹೋದನು.

ಸ್ನಾನ ಮಾಡಿ ಮರಳಿ ಬರುವಾಗ ದ್ರೋಣಾಚಾರ್ಯರು, ಯಾವ ವಟವೃಕ್ಷದ ಎಲೆಗಳಿಗೆ ಅವರು ಗುರಿಯನ್ನು ಇಟ್ಟಿದ್ದರೋ, ಅದೇ ಎಲೆಗಳಲ್ಲಿ ಮತ್ತೊಂದು ರಂಧ್ರವಾಗಿರುವುದನ್ನು ನೋಡಿದರು. ಆಗ ಅವರು ತಮ್ಮೊಂದಿಗಿದ್ದ ಎಲ್ಲ ಶಿಷ್ಯಂದಿರಿಗೆ ‘ಸ್ನಾನದ ಮೊದಲು ಈ ಮರದ ಎಲ್ಲ ಎಲೆಗಳಲ್ಲಿ ಒಂದೊಂದೇ ರಂಧ್ರವಿತ್ತು. ಈ ಎರಡನೆಯ ರಂಧ್ರವನ್ನು ನಿಮ್ಮಲ್ಲಿ ಯಾರು ಮಾಡಿದರು’ ಎಂದು ಪ್ರಶ್ನಿಸಿದರು.

ಎಲ್ಲ ಶಿಷ್ಯಂದಿರು ‘ನಾವಂತೂ ಮಾಡಿಲ್ಲ’ ಎಂದು ಹೇಳಿದರು.

ಗುರು ದ್ರೋಣಾಚಾರ್ಯರು ಅರ್ಜುನನ ಕಡೆಗೆ ತಿರುಗಿ, ಅವನಿಗೆ ಪ್ರಶ್ನಿಸಿದರು. ‘ಇದನ್ನು ನೀನು ಮಾಡಿದ್ದೀಯಾ?’ ಎಂದು ಪ್ರಶ್ನಿಸಿದರು. ಗುರುದೇವರು ಪ್ರಶ್ನಿಸಿದಾಗ ಅರ್ಜುನನಿಗೆ ಸ್ವಲ್ಪ ಅಂಜಿಕೆಯಾಯಿತು, ಆದರೆ ಅವನು ಸುಳ್ಳು ಹೇಗೆ ತಾನೆ ಹೇಳಬಹುದು? ಅವನು ‘ಗುರುದೇವಾ, ನಾನು ನಿಮ್ಮ ಆಜ್ಞೆಯಿಲ್ಲದೇ, ನಿಮ್ಮ ಮಂತ್ರವನ್ನು ಪ್ರಯೋಗಿಸಿದೆನು. ನೀವು ಇವರೆಲ್ಲರಿಗೂ ಈ ವಿದ್ಯೆಯನ್ನು ಕಲಿಸಿದ್ದು, ನಾನು ನಿಮಗೆ ಈ ವಿಷಯದಲ್ಲಿ ಕೇಳಿದರೆ, ನಿಮ್ಮ ಸಮಯ ವ್ಯರ್ಥವಾಗುವುದೆಂದು, ಈ ವಿದ್ಯೆಯನ್ನು ನಾನೇ ಕಲಿತುಕೊಳ್ಳಬೇಕು ಎಂದೆನಿಸಿತು. ಗುರುದೇವರೇ, ನನ್ನಿಂದ ಬಹಳ ದೊಡ್ಡ ತಪ್ಪಾಯಿತು. ನನ್ನನ್ನು ಕ್ಷಮಿಸಬೇಕು’ ಎಂದು ಕೇಳಿದನು.

ಇದನ್ನು ಕೇಳಿ ದ್ರೋಣಾಚಾರ್ಯರು ‘ಇಲ್ಲ ಅರ್ಜುನಾ, ನೀನು ಯಾವುದೇ ತಪ್ಪು ಮಾಡಿಲ್ಲ, ನಿನ್ನಲ್ಲಿ ಜಿಜ್ಞಾಸೆಯಿದೆ (ಕಲಿಯುವ ಹಂಬಲ), ಸಂಯಮವಿದೆ ಮತ್ತು ಕಲಿಯುವ ಆಸಕ್ತಿಯಿದೆ. ಮಂತ್ರದ ಮೇಲೆ ವಿಶ್ವಾಸವಿದೆ. ಮಂತ್ರಶಕ್ತಿಯ ಪ್ರಭಾವವನ್ನು ನೋಡಿ, ಇನ್ನುಳಿದ ಎಲ್ಲ ಶಿಷ್ಯಂದಿರು ಕೇವಲ ಆಶ್ಚರ್ಯಚಕಿತರಾದರು ಮತ್ತು ನನ್ನೊಂದಿಗೆ ಹೊರಟು ಬಂದರು. ಅವರಲ್ಲಿ ಒಬ್ಬನೇ ಒಬ್ಬ ಕೂಡ ಮಂತ್ರವನ್ನು ಪ್ರಯೋಗಿಸಿ ನೋಡಿ ಎಲೆಗಳಲ್ಲಿ ಇನ್ನೊಂದು ರಂಧ್ರ ಮಾಡುವ ವಿಚಾರವನ್ನೂ ಮಾಡಲಿಲ್ಲ. ನೀನು ಧೈರ್ಯವನ್ನು ತೋರಿಸಿ, ಪ್ರಯತ್ನಿಸಿ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವೆ’ ಎಂದು ಹೇಳಿದರು. ‘ನೀನು ನನ್ನ ಸರ್ವೋತ್ತಮ ಶಿಷ್ಯ ಎಂದು ಇಂದು ಸಿದ್ಧಪಡಿಸಿರುವೆ. ಅರ್ಜುನಾ, ನಿನಗಿಂತ ಒಳ್ಳೆಯ ಧನುರ್ಧಾರಿ ಇನ್ಯಾರೂ ಇರಲು ಸಾಧ್ಯವಿಲ್ಲ’ ಎಂದು ಹೇಳಿದರು.

ಮಿತ್ರರೇ, ಈ ಕಥೆಯಿಂದ ಅರ್ಜುನನ ಯಾವ ಯಾವ ಗುಣಗಳು ನಮಗೆ ಅರಿವಾಯಿತು?

ಆಜ್ಞಾಪಾಲನೆ, ಜಿಜ್ಞಾಸೆ, ಕಲಿಯುವ ಆಸಕ್ತಿ, ಗುರುಗಳ ಮೇಲೆ ಶ್ರದ್ಧೆಯಿಡುವುದು, ನಿಷ್ಠೆಯಿಂದ ಅಧ್ಯಯನ ಮಾಡುವುದು, ಸತ್ಯ ನುಡಿಯುವುದು, ತಪ್ಪಾದಾಗ ಕ್ಷಮೆ ಕೋರುವುದು, ಇವೆಲ್ಲ ಗುಣಗಳು ನಮ್ಮ ಗಮನಕ್ಕೆ ಬಂದಿತು ಅಲ್ಲವೇ. ಈ ಎಲ್ಲ ಗುಣಗಳ ಕಾರಣವೇ ಅರ್ಜುನನು ತನ್ನ ಗುರುದೇವರ ಪ್ರಿಯ ಶಿಷ್ಯನಾದನು.