ಶ್ರೀಗಣೇಶ ಏಕದಂತ ಹೇಗೆ ಆದರು?

ಕಾರ್ತವೀರ್ಯನನ್ನು ವಧೆ ಮಾಡಿ ಕೃತಾರ್ಥರಾದ ಪರಶುರಾಮರು ಕೈಲಾಸಕ್ಕೆ ಹೋದರು. ಅಲ್ಲಿ ಅವರಿಗೆ ಗಣಗಳ ಮತ್ತು ಗಣಾಧೀಶನಾದ ಗಣಪತಿಯ ಭೇಟಿ ಆಯಿತು. ಪರಶುರಾಮರಿಗೆ ಭಗವಾನ ಶಂಕರನ ಭೇಟಿ ಮಾಡುವ ಇಚ್ಛೆ ಇತ್ತು, ಆದರೆ ಆ ಸಮಯದಲ್ಲಿ ಶಿವ-ಪಾರ್ವತಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.

ಶ್ರೀ ಪರಶುರಾಮರು ಗಣೇಶನಿಗೆ ಹೀಗೆ ಹೇಳಿದರು "ಪರಮೇಶ್ವರನಿಗೆ ನಮಸ್ಕಾರ ಮಾಡಲು ಅಂತಃಪುರಕ್ಕೆ ಹೊರಟಿದ್ದೇನೆ, ಅವರಿಗೆ ವಂದಿಸಿ ಶೀಘ್ರವಾಗಿ ಹಿಂತಿರುಗುವೆನು. ಯಾರ ಕೃಪೆಯಿಂದ ನಾನು ಕಾರ್ತವೀರ್ಯನನ್ನು ವಧಿಸಿ, ಇಪ್ಪತ್ತೊಂದು ಬಾರಿ ಭೂಮಿಯನ್ನು ಕ್ಷತ್ರೀಯ ರಹಿತ ಮಾಡಿದೆನೋ ಅಂಥಾ ಜಗದ್ಗುರುವಿಗೆ ನಾನು ಶೀಘ್ರವಾಗಿ ಭೇಟಿ ಆಗಲೇಬೇಕು". ಇದನ್ನು ಕೇಳಿದ ಗಣೇಶನು "ನೀವು ಸ್ವಲ್ಪ ಸಮಯ ಕಾಯ್ದಿರಿ", ಎಂದನು.

ಆದರೆ ಗಣೇಶನ ಮಾತು ಕೇಳದೆ ಪರಶುರಾಮನು ಪರಶು ಹಿಡಿದು ನಿರ್ಭಯತೆಯಿಂದ ಹೊರಟರು. ಗಣೇಶನು ಅವರನ್ನು ತಡೆದು ಪ್ರೇಮ ಮತ್ತು ನಮ್ರತೆಯಿಂದ ಕೇಳಿಕೊಂಡನು. ಗಣೇಶನಿಗೆ ಹೊಡೆಯಲು ಪರಶುರಾಮನು ಪರಶು ಎತ್ತಿದನು. ಗಣೇಶನು ಧರ್ಮದ ಸಾಕ್ಷಿಯಾಗಿ ಪುನಃ ಪರಶುರಾಮನನ್ನು ಅವಸರದಲ್ಲಿ ಹೋಗಬೇಡಿ ಎಂದು ಮತ್ತೆ ತಡೆದನು. ಆದರೂ ಪರಶುರಾಮರು ನಿರಾಕರಿಸಿದರು. ಆಗ ಗಣೇಶನು ತನ್ನ ಸೊಂಡಿಲನ್ನು ಕೋಟಿ ಯೋಜನದಷ್ಟು ದೊಡ್ಡದಾಗಿ ಮಾಡಿ ಅದರಲ್ಲಿ ಪರಶುರಾಮರನ್ನು ಸಿಲುಕಿಸಿ ಸಪ್ತಲೋಕಗಳಲ್ಲಿ ಅವರನ್ನು ತಿರುಗಿಸುತ್ತಾನೆ. ಆ ಭ್ರಮಣದಿಂದ ಕೋಪಗೊಂಡ ಪರಶುರಾಮನು ಸಾವಧಾನರಾಗಿ ಗುರುದತ್ತರು ಹೇಳಿರುವ ಸ್ತೋತ್ರಕವಚ ಓದಿ ಗಣೇಶನ ಮೇಲೆ ಪರಶು ಎಸೆದರು. ಅದನ್ನು ವ್ಯರ್ಥ ಮಾಡಬೇಕೆಂದು ಗಣೇಶನು ತನ್ನ ಎಡಗಡೆಯ ದಂತವನ್ನು ಮುಂದೆ ಮಾಡಿದರು. ಆಗ ಪರಶು ವ್ಯರ್ಥವಾಯಿತು, ಆದರೆ ಗಣೇಶನ ದಂತ ಮುರಿಯಿತು.

ದನ್ನು ತಿಳಿದ ಎಲ್ಲಾ ದೇವ-ದೇವತೆಗಳು ಒಂದು ಕಡೆ ಸೇರಿದರು. ಶಿವ-ಪಾರ್ವತಿ ಕೂಡ ಹೊರಗೆ ಬಂದರು. ನಡೆದ ಘಟನೆ ತಿಳಿದ ಮೇಲೆ ಪಾರ್ವತಿಯು ಪರಶುರಾಮನಿಗೆ "ಅರೇ ರಾಮ, ನಿನ್ನ ಜನ್ಮವು ಬ್ರಾಹ್ಮಣವಂಶದಲ್ಲಿ ಆಗಿದೆ, ನೀನು ಪಂಡಿತನಾಗಿದ್ದು, ಜಮದಗ್ನಿಯ ಪುತ್ರನು ಮತ್ತು ಯೋಗಿರಾಜನ ಶಿಷ್ಯನೂ ಹೌದು. ನಿನ್ನ ತಾಯಿ, ಮಾಮಾ, ಅಜ್ಜ ಎಲ್ಲರೂ ಶ್ರೇಷ್ಠರು. ಆದರೂ ನೀನು ಯಾವ ದೋಷದ ಕಾರಣದಿಂದ ಹೀಗೆ ಮಾಡಿದೆ? ಅಮೋಘವಾದ ಪರಶುವಿನಿಂದ ಯಾರದರೂ ಸಿಂಹವನ್ನು ಹೊಡೆಯಬಹುದು, ಅಂತ ಪರಶುವನ್ನು ನೀನು ಗಣೇಶನ ಮೇಲೆ ಪ್ರಯೋಗ ಮಾಡಿದಿ! ನಿನ್ನಂತ ಕೋಟಿ ಕೋಟಿ ರಾಮರಿಗೆ ಹೊಡೆಯಲು ಗಣೇಶನು ಸಮರ್ಥನಾಗಿದ್ದಾನೆ. ಅರೇ, ಈ ಗಣೇಶನು ಕೃಷ್ಣನ ಅಂಶ. ದೊಡ್ಡ ವ್ರತದ ಕಾರಣದಿಂದ ಇವನ ಜನ್ಮವಾಗಿದೆ", ಎಂದಳು.

ಆಗ ಶ್ರೀವಿಷ್ಣು "ಹೇ ದೇವಿ ಪಾರ್ವತಿ, ನಿಮಗೆ ಗಣೇಶ ಮತ್ತು ಕಾರ್ತಿಕೇಯ ಹೇಗೊ, ಹಾಗೆ ಪರಶುರಾಮ ಕೂಡ, ಇವರ ಸ್ನೇಹ ಮತ್ತು ಪ್ರೇಮದಲ್ಲಿ ಯಾವ ಬೇಧವೂ ಇಲ್ಲ. ಇಂದಿನಿಂದ ನಿಮ್ಮ ಪುತ್ರನ ಹೆಸರು ಏಕದಂತ ಎಂದಾಗಿದೆ. ಇವರ ಕುಲದಲ್ಲಿ ಎಂಟು ನಾಮಗಳಿವೆ-ಗಣೇಶ, ಏಕದಂತ, ಹೇರಂಬ, ವಿಘ್ನನಾಯಕ, ಲಂಬೊಧರ, ಶೂರ್ಪಕರ್ಣ, ಗಜವಕ್ರ, ಗೃಹಗಜ", ಎಂದರು. ಶ್ರೀವಿಷ್ಣು ಗಣೇಶಸ್ತೋತ್ರ ಕಥೆ ಪಠಣ ಮಾಡಿ ಹೀಗೆ ಹೇಳಿದರು "ಹೇ ದುರ್ಗೇ, ಈ ಪರಶುರಾಮನ ಮೇಲೆ ಸಿಟ್ಟು ಮಾಡಬೇಡ. ಈ ಘಟನೆಯಿಂದಲೇ ಗಣೇಶನಿಗೆ ’ಏಕದಂತ’ ನಾಮವು ಪ್ರಾಪ್ತವಾಗಿದೆ. ನೀವು ಪುತ್ರನಾದ ಪರಶುರಾಮನಿಗೆ ಅಭಯ ಹಸ್ತ ನೀಡಿ", ಎಂದರು. ಅಂದಿನಿಂದ ಶ್ರೀ ಗಣೇಶನಿಗೆ ಏಕದಂತ ಎಂದೂ ಹೆಸರು ಬಂತು.

Leave a Comment