ಶ್ರೀ ಗಣೇಶ ಚತುರ್ಥಿ

ಮಹತ್ವ

ಶ್ರೀ ಗಣೇಶ ಚತುರ್ಥಿಯ ತಿಥಿಯಂದು ಪೃಥ್ವಿಯ ಮೇಲೆ ಶ್ರೀ ಗಣೇಶ ತತ್ವವು ೧೦೦೦ಪಟ್ಟು ಹೆಚ್ಚು ಕಾರ್ಯರತವಾಗುತ್ತದೆ. ಈ ದಿನದಂದು ಆದಷ್ಟು ಹೆಚ್ಚು ‘ಶ್ರೀ ಗಣೇಶಾಯ ನಮಃ |’ ಅಥವಾ ‘ಓಂ ಗಂ ಗಣಪತಯೇ ನಮಃ |’ ಜಪಿಸಿ!

ಈ ಗಣೇಶ ಚತುರ್ಥಿಯಂದು ನಾವೇನು ಮಾಡಬಹುದು ಎಂದು ಸಂಕ್ಷಿಪ್ತವಾಗಿ ನೋಡೋಣ

ಅ.ಸಾಕ್ಷಾತ್ ಶ್ರೀಗಣೇಶನು ನಮ್ಮ ಮನೆಗೆ ಬರುವವನಿದ್ದಾನೆ ಎಂಬ ಭಾವವನ್ನಿರಿಸಿ ಎಲ್ಲ ಪೂರ್ವತಯಾರಿಗಳನ್ನು ಮಾಡುವುದು
ಆ.ಕುಟುಂಬದವರೆಲ್ಲ ಒಂದು ದಿನ ಮೊದಲೇ ಬರುವುದು
ಇ.ಮನೆ ಮತ್ತು ಪರಿಸರದ ಸ್ವಚ್ಛತೆ, ಅಲಂಕಾರ, ಪೂಜೆಯ ತಯಾರಿ ಇತ್ಯಾದಿ ಸೇವೆಗಳನ್ನು ಎಲ್ಲರೂ ಸೇರಿ ಮಾಡುವುದು
ಈ.ಗಣೇಶೋತ್ಸವದಲ್ಲಿ ಗಣಪತಿಗೆ ಮೊದಲ ಮಹತ್ವ ಮತ್ತು ಅಲಂಕಾರ ಹಾಗೂ ಆಡಂಬರಕ್ಕೆ ದ್ವಿತೀಯ ಮಹತ್ವವನ್ನು ಕೊಡಬೇಕು ಎಂಬ ಅರಿವಿಟ್ಟುಕೊಂಡಿರಬೇಕು (ಗಣಪತಿಯ ಮೂರ್ತಿಯನ್ನು ಇಡುವ ಸ್ಥಳವನ್ನು ನಿರಂತರವಾಗಿ ಸ್ವಚ್ಛವಾಗಿರಿಸುವುದು, ಅಲ್ಲಿ ದೀಪ ಬೆಳಗಿಸಿಡುವುದು, ಪ್ರತ್ಯಕ್ಷ ಗಣಪತಿಯೇ ಅಲ್ಲಿ ಕುಳಿತಿದ್ದಾನೆ ಎಂಬ ಭಾವದಿಂದ ವ್ಯವಹರಿಸುವುದು)
ಉ.ಮನೆಯ ಮುಖ್ಯದ್ವಾರಕ್ಕೆ ಮಾವಿನಎಲೆ ಮತ್ತು ಗೊಂಡೆ ಹೂವುಗಳ ಸಾತ್ತ್ವಿಕ ತೋರಣವನ್ನು ಕಟ್ಟುವುದು, ಮನೆಯೆದುರು ಹಾಗೂ ಗಣಪತಿಯ ಎದುರು ಸಾತ್ತ್ವಿಕ ರಂಗೋಲಿ ಯನ್ನು ಹಾಕುವುದು ಮತ್ತು ಅದನ್ನು ಹಾಕುವಾಗ ನಮ್ಮೊಂದಿಗೆ ಮಕ್ಕಳನ್ನು ಸೇರಿಸಿಕೊಳ್ಳುವುದು
ಊ.ಪ್ರತಿದಿನ ಗಣಪತಿಗೆ ಗರಿಕೆಯನ್ನು ಅರ್ಪಿಸುವುದು

ಗಣೇಶನು ಏಕೆ ಪ್ರಥಮ ವಂದ್ಯನು ?

ಗಣಪತಿಯ ಅನುಮತಿಯಿಲ್ಲದೇ ಯಾವುದೇ ದಿಕ್ಕಿನಿಂದ ಇತರ ದೇವತೆಗಳು ಪೂಜಾಸ್ಥಳಕ್ಕೆ ಬರಲಾರರು; ಆದುದರಿಂದ ಎಲ್ಲ ಮಂಗಲಕಾರ್ಯಗಳಲ್ಲಿ ಅಥವಾ ಇತರ ಯಾವುದೇ ದೇವತೆಯ ಪೂಜೆ ಮಾಡುವಾಗ ಮೊದಲು ಗಣಪತಿಯ ಪೂಜೆ ಮಾಡುತ್ತಾರೆ. ಒಮ್ಮೆ ಗಣಪತಿಯು ದಿಕ್ಕುಗಳನ್ನು ಮುಕ್ತಗೊಳಿಸಿದರೆ ಯಾವ ದೇವತೆಯ ಪೂಜೆ ಮಾಡುವುದಿರುತ್ತದೆಯೋ, ಆ ದೇವತೆಯು ಪೂಜಾಸ್ಥಳಕ್ಕೆ ಬರಬಹುದು. ಇದನ್ನೇ ಮಹಾದ್ವಾರದ ಅಥವಾ ಮಹಾಗಣಪತಿಯ ಪೂಜೆ ಎನ್ನುತ್ತಾರೆ.

ಮೂರ್ತಿ

ಆವೆ(ಜೇಡಿ) ಮಣ್ಣಿನಿಂದ ತಯಾರಿಸಿದ ಮತ್ತು ಮಣೆಯ ಮೇಲೆ ಕುಳಿತುಕೊಂಡಿರುವ, ಮೂರ್ತಿಶಾಸ್ತ್ರಕ್ಕನುಸಾರ ತಯಾರಿಸಿದ, ನೈಸರ್ಗಿಕ ಬಣ್ಣಗಳನ್ನು ಹಚ್ಚಿದ ಮೂರ್ತಿಯನ್ನಿರಿಸಬೇಕು.

ಹೆಚ್ಚಾಗಿ ಎಡಮುರಿ ಗಣಪತಿಯನ್ನೇ ಏಕೆ ಪೂಜೆ ಮಾಡುತ್ತಾರೆ?

ಬಲಗಡೆಯ ಸೊಂಡಿಲು:

ಸೊಂಡಿಲಿನ ಪ್ರಾರಂಭದ ತಿರುವು ಬಲಗಡೆಗೆ ಇರುವ ಮೂರ್ತಿ ಎಂದರೆ ದಕ್ಷಿಣಮೂರ್ತಿ ಅಂದರೆ ದಕ್ಷಿಣಾಭಿಮುಖಿ ಮೂರ್ತಿ. ದಕ್ಷಿಣ ಎಂದರೆ ದಕ್ಷಿಣ ದಿಕ್ಕು ಅಥವಾ ಬಲಬದಿ. ಬಲಬದಿಯು ಸೂರ್ಯನಾಡಿಗೆ ಸಂಬಂಧಪಟ್ಟಿದೆ ಹಾಗೂ ದಕ್ಷಿಣ ದಿಕ್ಕು ಯಮಲೋಕದ ಕಡೆಗೆ ಕರೆದೊಯ್ಯುವುದಾಗಿದೆ. ಯಾರು ಯಮಲೋಕದ ದಿಕ್ಕನ್ನು ಎದುರಿಸಬಲ್ಲರೋ ಅವರು ಶಕ್ತಿಶಾಲಿಯಾಗಿರುತ್ತಾರೆ. ಅಂತೆಯೇ ಸೂರ್ಯನಾಡಿಯು ಚಲನೆಯಲ್ಲಿರುವವನು ತೇಜಸ್ವಿಯಾಗಿರುತ್ತಾನೆ. ಇವೆರಡೂ ಅರ್ಥದಲ್ಲಿ ಬಲಗಡೆಗೆ ಸೊಂಡಿಲಿರುವ (ಬಲಮುರಿ) ಶ್ರೀಗಣಪತಿಗೆ ‘ಜಾಗೃತ’ ಗಣಪತಿ ಎಂದು ಹೇಳಲಾಗುತ್ತದೆ. ದಕ್ಷಿಣದಲ್ಲಿರುವ ಯಮಲೋಕದಲ್ಲಿ ಪಾಪ-ಪುಣ್ಯಗಳ ಪರೀಕ್ಷೆಯಾಗುವುದರಿಂದ ಆ ದಿಕ್ಕು ಬೇಡವೆನಿಸುತ್ತದೆ. ಮೃತ್ಯುವಿನ ನಂತರ ದಕ್ಷಿಣ ದಿಕ್ಕಿಗೆ ಹೋದಾಗ (ಯಮಲೋಕಕ್ಕೆ) ಯಾವ ರೀತಿ ಪರೀಕ್ಷೆ ಆಗುತ್ತದೆಯೋ ಅದೇ ರೀತಿಯ ಪರೀಕ್ಷೆಯು ಮೃತ್ಯುವಿನ ಮೊದಲು ದಕ್ಷಿಣಕ್ಕೆ ಮುಖ ಮಾಡಿ ಕುಳಿತರೆ ಅಥವಾ ಕಾಲು ಚಾಚಿ ಮಲಗಿದರೆ ಆಗುತ್ತದೆ; ದಕ್ಷಿಣಾಭಿಮುಖಿ ಮೂರ್ತಿಯ ಪೂಜೆಯನ್ನು ನಿತ್ಯದ ಪದ್ಧತಿಯಂತೆ ಮಾಡಲಾಗುವುದಿಲ್ಲ; ಏಕೆಂದರೆ, ದಕ್ಷಿಣದಿಂದ ‘ತಿರ್ಯಕ್’ (ರಜ-ತಮ) ಲಹರಿಗಳು ಬರುತ್ತವೆ. ಇಂತಹ ಮೂರ್ತಿಗೆ ಕರ್ಮಕಾಂಡದಲ್ಲಿನ ಎಲ್ಲ ನಿಯಮಗಳನ್ನೂ ಕಟ್ಟುನಿಟ್ಟಾಗಿ ಪಾಲಿಸಿ, ಪೂಜಾವಿಧಿಯನ್ನು ಮಾಡಲಾಗುತ್ತದೆ. ಅದರಿಂದ ಸಾತ್ವಿಕತೆಯು ಹೆಚ್ಚುತ್ತದೆ ಮತ್ತು ದಕ್ಷಿಣ ದಿಕ್ಕಿನಿಂದ ಬರುವ ರಜ-ತಮ ಲಹರಿಗಳಿಂದ ತೊಂದರೆಯಾಗುವುದಿಲ್ಲ.

ಎಡಗಡೆಯ ಸೊಂಡಿಲು:

ಸೊಂಡಿಲಿನ ಪ್ರಾರಂಭದ ತಿರುವು ಎಡಗಡೆಗೆ ಇರುವ ಮೂರ್ತಿ ಎಂದರೆ ವಾಮಮುಖಿ ಮೂರ್ತಿ. ವಾಮ ಎಂದರೆ ಎಡಬದಿಯ ದಿಶೆ ಅಥವಾ ಉತ್ತರ ದಿಕ್ಕು. ಎಡಬದಿಗೆ ಚಂದ್ರನಾಡಿ ಇದ್ದು ಅದು ಶೀತಲತೆಯನ್ನು ಕೊಡುತ್ತದೆ; ಉತ್ತರ ದಿಕ್ಕು ಅಧ್ಯಾತ್ಮಕ್ಕೆ ಪೂರಕ ಹಾಗೂ ಆನಂದ ದಾಯಕವಾಗಿದೆ; ಆದ್ದರಿಂದಲೇ ವಾಮಮುಖಿ (ಎಡಮುರಿ) ಶ್ರೀಗಣಪತಿಯನ್ನು ಪೂಜೆಯಲ್ಲಿಡುತ್ತಾರೆ.

ಶ್ರೀಗಣೇಶ ಮೂರ್ತಿಯ ಅಲಂಕಾರ ಹೀಗಿರಲಿ!

ಇತ್ತೀಚೆಗೆ ಗಣೇಶೋತ್ಸವಕ್ಕಾಗಿ ಮಾಡಲಾಗುವ ಅಲಂಕಾರಕ್ಕಾಗಿ ವಿವಿಧ ರೀತಿಯ ಬಣ್ಣಗಳಿಂದ ಹಾಗೂ ಮಿನುಗುವ ಕಾಗದ, ಥರ್ಮಾಕೋಲ್, ಪ್ಲಾಸ್ಟಿಕ್ ಮುಂತಾದವುಗಳನ್ನು ಉಪಯೋಗಿಸಲಾಗುತ್ತದೆ. ಅಲ್ಲದೇ ಬಣ್ಣಬಣ್ಣದ ವಿದ್ಯುತ್ ದೀಪಗಳ ಮಾಲೆಯನ್ನೂ ಬಳಸಲಾಗುತ್ತದೆ. ಈ ವಸ್ತುಗಳು ಕೃತಕ ಹಾಗೂ ರಾಸಾಯನಿಕ ವಸ್ತುಗಳಿಂದ ತಯಾರಿಸಲಾಗುತ್ತದೆ. ಹಾಗಾಗಿ ಈ ವಸ್ತುಗಳಲ್ಲಿ ರಜತಮದ ಪ್ರಮಾಣವು ಹೆಚ್ಚಿರುತ್ತದೆ. ಅಲ್ಲದೇ ಅಂತಹವುಗಳು ವಾತಾವರಣದಲ್ಲಿನ ರಜತಮವನ್ನು ಆಕರ್ಷಿಸಿ ಅಲ್ಲಿನ ಪರಿಸರವನ್ನು ರಜ-ತಮಯುಕ್ತಗೊಳಿಸುತ್ತದೆ. ಆಧ್ಯಾತ್ಮಿಕ ದೃಷ್ಟಿಯಿಂದ ಪ್ರತಿಯೊಂದು ದೇವತೆಯ ಒಂದು ವಿಶಿಷ್ಟ ತತ್ವವಿರುತ್ತದೆ. ಹಾಗಾಗಿ ಗಣೇಶ ಚತುರ್ಥಿಯಂದು ಪೃಥ್ವಿಯ ಮೇಲೆ ಹೆಚ್ಚು ಪ್ರಮಾಣದಲ್ಲಿ ಬರುವ ಗಣೇಶತತ್ವವನ್ನು ಆಕರ್ಷಿಸುವ ಸಾತ್ವಿಕ ವಸ್ತುಗಳನ್ನು ಬಳಸಬೇಕು. ಅದಕ್ಕೆ ಕೆಳಗಿನ ವಸ್ತುಗಳನ್ನು ಬಳಸಿರಿ.

ನೈಸರ್ಗಿಕ ಹೂವು-ಎಲೆಗಳಿಂದ ತಯಾರಿಸಿದ ತೋರಣಗಳು

ಕೆಂಪು ಬಣ್ಣದ ಹೂವು ಹಾಗೂ ದೂರ್ವೆ, ಶಮಿಯ ಎಲೆಗಳು

ಶ್ರೀಗಣೇಶನ ತತ್ವವನ್ನು ಆಕರ್ಷಿಸುವ ರಂಗೋಲಿ

ಶ್ರೀಗಣೇಶನ ಸಾತ್ವಿಕ ನಾಮಜಪದ ಪಟ್ಟಿಗಳು ಇತ್ಯಾದಿ.

ಧಾರ್ಮಿಕ ವಿಧಿಗಳು

ಅ.ಪೂಜೆಯನ್ನು ಮಾಡುವವರು ಪೂಜೆಯ ಸಂಪೂರ್ಣ ತಯಾರಿಯನ್ನು ಮಾಡಿಕೊಂಡು ಶುಚಿರ್ಭೂತರಾಗಿರಬೇಕು.
ಆ.ಧಾರ್ಮಿಕ ವಿಧಿಗಳಲ್ಲಿನ ಚೈತನ್ಯದ ಲಾಭವನ್ನು ಪುರೋಹಿತರ ಹಾಗೂ ಯಜಮಾನರ ಜೊತೆಗೆ ಎಲ್ಲರೂ ಆ ಜಾಗದಲ್ಲಿ ಉಪಸ್ಥಿತರಿದ್ದುಕೊಂಡು ಪಡೆದುಕೊಳ್ಳಬೇಕು.
ಇ.ಧಾರ್ಮಿಕ ವಿಧಿಗಳನ್ನು ಔಪಚಾರಿಕತೆ ಎಂದು ಮಾಡದೇ ಅದರ ಹಿಂದಿನ ಶಾಸ್ತ್ರವನ್ನು ಅರಿತುಕೊಳ್ಳಲು ಪ್ರಯತ್ನಿಸಬೇಕು ಮತ್ತು ಪೂಜಾಸ್ಥಳದಲ್ಲಿ ಶಿಸ್ತು ಮತ್ತು ಪಾವಿತ್ರ್ಯವನ್ನು ಕಾಪಾಡಬೇಕು.

ಗರಿಕೆ ಮತ್ತು ಕೆಂಪು ಹೂವುಗಳು!

ಗರಿಕೆ(ದೂರ್ವೆ)

ಗಣೇಶನ ಪೂಜೆಯಲ್ಲಿ ಗರಿಕೆಗೆ ವಿಶೇಷ ಮಹತ್ವವಿದೆ. ಇದನ್ನು ದೂರ್ವೆ ಎಂದೂ ಕರೆಯುತ್ತಾರೆ. ದೂರ್ವೆ ಈ ಶಬ್ದವು ದೂಃ ಅವಮ್ ಹೀಗೆ ಆಗಿದೆ. ‘ದೂಃ’ ಅಂದರೆ ದೂರದಲ್ಲಿ ಇದ್ದದ್ದು ಮತ್ತು ‘ಅವಮ್’ ಅಂದರೆ ಯಾವುದು ಹತ್ತಿರ ತರುತ್ತದೆಯೋ ಅದು. ದೂರದಲ್ಲಿರುವ ಗಣೇಶನ ಪವಿತ್ರಕಗಳನ್ನು ಯಾವುದು ಹತ್ತಿರ ತರುತ್ತದೆಯೋ, ಅದುವೇ ದೂರ್ವೆಯಾಗಿದೆ, ಅಂದರೆ ಗರಿಕೆಯಾಗಿದೆ. ಶ್ರೀಗಣಪತಿಗೆ ಅರ್ಪಿಸಬೇಕಾದ ಗರಿಕೆಯು ಎಳೆಯದಾಗಿರಬೇಕು. ಇದನ್ನೇ ‘ಬಾಲತೃಣಮ್’ ಎನ್ನುತ್ತಾರೆ. ಒಣಗಿದಾಗ ಅದನ್ನು ಒಂದು ವಿಧದ ಹಲ್ಲು ಎಂದು ಪರಿಗಣಿಸಬಹುದು. ಗರಿಕೆಗಳಿಗೆ ೩, ೫, ೭ಈ ರೀತಿಯಲ್ಲಿ ಬೆಸ ಸಂಖ್ಯೆಯ ಗರಿಗಳು ಇರಬೇಕು.

ಕೆಂಪು ಹೂವುಗಳು

ಶ್ರೀಗಣಪತಿಯ ಬಣ್ಣವು ಕೆಂಪಾಗಿರುತ್ತದೆ. ಅವನ ಪೂಜೆಯಲ್ಲಿ ಕೆಂಪು ವಸ್ತ್ರ, ಕೆಂಪು ಹೂವು ಮತ್ತು ರಕ್ತಚಂದನವನ್ನು ಬಳಸುತ್ತಾರೆ. ಅವುಗಳ ಕೆಂಪು ಬಣ್ಣದಿಂದ ವಾತಾವರಣದಲ್ಲಿರುವ ಶ್ರೀಗಣಪತಿಯ ಪವಿತ್ರಕಗಳು ಮೂರ್ತಿಯ ಕಡೆಗೆ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗಿ ಮೂರ್ತಿಯನ್ನು ಜಾಗೃತಗೊಳಿಸಲು ಸಹಾಯವಾಗುತ್ತದೆ.

ಮೋದಕ

‘ಮೋದ’ ಎಂದರೆ ಆನಂದ ಮತ್ತು ‘ಕ’ ಎಂದರೆ ಚಿಕ್ಕ ಭಾಗ. ಮೋದಕವೆಂದರೆ ಆನಂದದ ಚಿಕ್ಕ ಭಾಗ. ಮೋದಕದ ಆಕಾರವು ತೆಂಗಿನಕಾಯಿಯಂತೆ, ಎಂದರೆ ‘ಖ’ ಈ ಬ್ರಹ್ಮರಂಧ್ರದಲ್ಲಿನ ಟೊಳ್ಳಿನಂತಿರುತ್ತದೆ. ಕುಂಡಲಿನಿಯು ‘ಖ’ದವರೆಗೆ ತಲುಪಿದಾಗ ಆನಂದದ ಅನುಭೂತಿಯು ಬರುತ್ತದೆ. ಕೈಯಲ್ಲಿ ಹಿಡಿದ ಮೋದಕವೆಂದರೆ, ಆನಂದವನ್ನು ಪ್ರದಾನಿಸುವ ಶಕ್ತಿ.

ಮೋದಕವು ಜ್ಞಾನದ ಪ್ರತೀಕವಾಗಿದೆ; ಆದುದರಿಂದ ಅದನ್ನು ಜ್ಞಾನಮೋದಕವೆಂದೂ ಕರೆಯುತ್ತಾರೆ. ಮೊದಲು, ಜ್ಞಾನವು ಸ್ವಲ್ಪವೇ ಇದೆ ಎಂದೆನಿಸುತ್ತದೆ (ಮೋದಕದ ತುದಿಯು ಇದರ ಪ್ರತೀಕ ವಾಗಿದೆ); ಆದರೆ ಅಧ್ಯಯನ ಮಾಡತೊಡಗಿದಾಗ ಜ್ಞಾನವು ಬಹಳ ವಿಶಾಲವಾಗಿದೆ ಎಂಬುದು ತಿಳಿಯುತ್ತದೆ. (ಮೋದಕದ ಕೆಳಭಾಗವು ಇದರ ಪ್ರತೀಕವಾಗಿದೆ) ಮೋದಕವು ಸಿಹಿಯಾಗಿರುತ್ತದೆ ಅದೇ ರೀತಿ ಜ್ಞಾನದ ಆನಂದವೂ ಸಿಹಿಯಾಗಿರುತ್ತದೆ.

ಆರತಿ

ಅ.೪ರಿಂದ ೫ಆರತಿಗಳನ್ನು ಹಾಡಬೇಕು. ಆರತಿಯ ಶಬ್ದಗಳತ್ತ ಗಮನ ಕೊಟ್ಟು ಶ್ರೀ ಗಣೇಶನನ್ನು ಭಕ್ತಿಭಾವದಿಂದ ಸ್ಮರಿಸುತ್ತಾ ಭಾವದಿಂದ ಆರತಿಯನ್ನು ಹಾಡಬೇಕು.
ಆ.ತಾಳವನ್ನು ಯೋಗ್ಯ, ಲಯಬದ್ಧ ಧ್ವನಿಯಲ್ಲಿ ಬಾರಿಸಬೇಕು.
ಇ.‘ಶ್ರೀಗಣೇಶನೇ, ದಿನವಿಡೀ ಮಾಡಿದ ಪ್ರತಿಯೊಂದು ಕೃತಿಯು ನಿನ್ನ ಕೃಪಾಶೀರ್ವಾದದಿಂದಲೇ ನಡೆಯುತ್ತಿದೆ ಎನ್ನುವ ಅರಿವಿರಲಿ ಮತ್ತು ನಮ್ಮ ಭಕ್ತಿಭಾವವು ಹೆಚ್ಚಾಗಲಿ’ ಎಂದು ಪ್ರಾರ್ಥಿಸಬೇಕು.

ಆಧಾರ : ಸನಾತನ ನಿರ್ಮಿತ ಗ್ರಂಥ ‘ಶ್ರೀ ಗಣಪತಿ’


1378622713_Ganesh arati_kannada


ಶ್ರೀ ಗಣಪತಿ ಅಥರ್ವಶೀರ್ಷವನ್ನು ಪಠಿಸಿ