ಗಣಪತಿಗೆ ತುಳಸಿಯನ್ನು ಅರ್ಪಿಸದಿರಲು ಕಾರಣ

ಪೌರಾಣಿಕ ಕಾರಣ :

ಒಬ್ಬಳು ಅತಿಸುಂದರ ಅಪ್ಸರೆಯಿದ್ದಳು. ಅವಳು ಓರ್ವ ಉತ್ತಮ ಪುರುಷನನ್ನು ವಿವಾಹವಾಗಲು ಇಚ್ಚಿಸಿದಳು. ಈ ಇಚ್ಛೆಯನ್ನು ಈಡೇರಿಸಲು ಅವಳು ಉಪವಾಸ, ಜಪ, ವ್ರತಗಳು, ತೀರ್ಥಯಾತ್ರೆಗಳನ್ನು ಕೈಗೊಳ್ಳುತ್ತಿದ್ದಳು. ಒಮ್ಮೆ ಅವಳಿಗೆ ಧ್ಯಾನದಲ್ಲಿ ಮಗ್ನನಾದ ಗಣಪತಿಯು ಕಂಡುಬಂದನು. ಅವಳಿಗೆ ಗಣೇಶನು ಇಷ್ಟವಾಗಿ, ಅವನನ್ನು ಧ್ಯಾನದಿಂದ ಎಚ್ಚರಗೊಳಿಸಲು ಅವನನ್ನು 'ಹೇ ಏಕದಂತಾ, ಹೇ ಲಂಬೊದರಾ, ಹೇ ವಕ್ರತುಂಡಾ!' ಎಂದು ಕರೆದಳು. ಧ್ಯಾನ ಭಂಗವಾದ ಗಣಪತಿಯು ಕಣ್ಣು ತೆರೆದು ನೋಡಿದನು, ಅವನ ಕಣ್ಣಿಗೆ ಆ ಅಪ್ಸರೆಯು ಕಾಣಿಸಿದಳು. ಅವಳನ್ನು ಸಂಬೋಧಿಸುತ್ತ 'ಹೇ ಮಾತೆ, ನನ್ನ ಧ್ಯಾನವನ್ನು ಏಕೆ ಭಂಗ ಮಾಡಿದೆ' ಎಂದು ಕೇಳಿದನು. ಆ ಅಪ್ಸರೆಯು 'ನೀನು ನನಗೆ ತುಂಬಾ ಇಷ್ಟವಾಗಿರುವಿ, ನಾನು ನಿನ್ನನ್ನೇ ವಿವಾಹ ಮಾಡಿಕೊಳ್ಳುವೆ' ಎಂದು ಉತ್ತರಿಸಿದಳು. ಅದಕ್ಕೆ ಗಣಪತಿಯು 'ವಿವಾಹ ಮಾಡಿಕೊಂಡು ಮೋಹ ಬಂಧನದಲ್ಲಿ ಬಂಧಿತನಾಗಲು ನನಗೆ ಇಷ್ಟವಿಲ್ಲ' ಎಂದು ಹೇಳಿದನು. ಆ ಅಪ್ಸರೆಯು ಕುಪಿತಳಾಗಿ 'ನೀನು ವಿವಾಹ ಮಾಡಿಕೊಳ್ಳಲೇ ಬೇಕು ಎಂದು ನಿನ್ನನ್ನು ಶಪಿಸುತ್ತೇನೆ' ಎಂದಳು. ಗಣಪತಿಯು ಅವಳಿಗೆ ಪ್ರತಿ ಶಾಪವನ್ನು ನೀಡುತ್ತ 'ನೀನು ಪ್ರಥ್ವಿಯ ಮೇಲೆ ವೃಕ್ಷವಾಗಿ ಜನಿಸುವಿ' ಎಂದು ಹೇಳಿದನು. ತನ್ನ ತಪ್ಪಿನ ಅರಿವಾದ ಅಪ್ಸರೆಯು ಗಣಪತಿಯಲ್ಲಿ ಕ್ಷಮೆಯನ್ನು ಯಾಚಿಸಿದಳು. ಗಣಪತಿಯು 'ಹೇ ಮಾತೆ, ಶ್ರೀ ಕೃಷ್ಣನು ನಿನ್ನನ್ನು ವಿವಾಹ ಮಾಡುವನು ಮತ್ತು ನೀನು ಸುಖವಾಗಿರುವಿ' ಎಂದು ಆಶಿರ್ವದಿಸಿದನು.

ಆ ಅಪ್ಸರೆಯು ಮುಂದೆ ತುಳಸಿಯಾಗಿ ಭೂಮಿಯ ಮೇಲೆ ಬಂದಳು. ಗಣಪತಿಯು ತುಳಸಿಗೆ ಆಸರೆಯನ್ನು ನೀಡದ ಕಾರಣ ಅವನಿಗೆ ತುಳಸಿಯನ್ನು ಅರ್ಪಿಸುವುದಿಲ್ಲ.

Leave a Comment