ಬಾಲಕ ಧ್ರುವ

ರಾಜಾ ಉತ್ತಾನಪಾದನಿಗೆ ಸುನೀತಿ ಮತ್ತು ಸುರುಚಿ ಎಂಬ ಇಬ್ಬರು ಪತ್ನಿಯರಿದ್ದರು. ರಾಜನಿಗೆ ಸುನೀತಿಯಿಂದ ಧ್ರುವ ಮತ್ತು ಸುರುಚಿಯಿಂದ ಉತ್ತಮನೆಂಬ ಪುತ್ರರು ಜನಿಸಿದರು. ಸುನೀತಿ ಹಿರಿಯ ರಾಣಿಯಾಗಿದ್ದರೂ ರಾಜಾ ಉತ್ತಾನಪಾದನ ಪ್ರೇಮ ಸುರುಚಿಯ ಪ್ರತಿ ಅಧಿಕವಿತ್ತು. ಒಂದು ಸಲ ರಾಜಾ ಉತ್ತಾನಪಾದರು ಪುತ್ರನಾದ ಧ್ರುವನನ್ನು ಎತ್ತಿಕೊಂಡು ಕುಳಿತಾಗ ಕಿರಿಯ ರಾಣಿ ಸುರುಚಿ ಅಲ್ಲಿ ಬಂದಳು. ತನ್ನ ಸವತಿಯ ಪುತ್ರನನ್ನು ರಾಜನ ಮಡಿಲಿನಲ್ಲಿ ಕಂಡು ಅವಳಿಗೆ ಅಸೂಯೆಯಾಯಿತು. ಸಿಟ್ಟಿನಿಂದ ಅವಳು ಧ್ರುವನನ್ನು ರಾಜನ ಮಡಿಲಿನಿಂದ ಕೆಳಗಿಳಿಸಿ ತನ್ನ ಮಗನಾದ ಉತ್ತಮನನ್ನು ಕೂಡಿಸಿ “ಅರೇ ಮೂರ್ಖ! ಯಾರು ನನ್ನ ಗರ್ಭದಿಂದ ಹುಟ್ಟಿದ್ದಾರೋ ಅವರೇ ರಾಜನ ಮಡಿಲಿನಲ್ಲಿ ಕುಳಿತುಕೊಳ್ಳಬಹುದು, ನೀನು ನನ್ನ ಗರ್ಭದಿಂದ ಹುಟ್ಟಿಲ್ಲ ಅದಕ್ಕಾಗಿ ರಾಜನ ಮಡಿಲಿನಲ್ಲಿ ಮತ್ತು ರಾಜಸಿಂಹಾಸನದಲ್ಲಿ ಕುಳಿತುಕೊಳ್ಳಲು ನಿನಗೆ ಅಧಿಕಾರವಿಲ್ಲ. ಆದರೂ ನಿನಗೆ ರಾಜಸಿಂಹಾಸನದ ಇಚ್ಛೆ ಇದ್ದರೆ ನಾರಯಣನ ಭಜನೆ ಮಾಡು, ಆಗ ನೀನು ಅವನ ಕೃಪೆಯಿಂದ ನನ್ನ ಗರ್ಭದಲ್ಲಿ ಜನಿಸಿದರೆ ರಾಜಪದವಿ ನಿನಗೆ ಪ್ರಾಪ್ತವಾಗಬಹುದು”, ಎಂದಳು.

ಐದು ವರ್ಷದ ಬಾಲಕನಾದ ಧ್ರುವನು ಅವನ ಮಲತಾಯಿಯ ವ್ಯವಹಾರ ಕಂಡು ಕ್ರೋಧಿತನಾದನು ಆದರೆ ಅವನಾದರೂ ಏನು ಮಾಡಲು ಸಾಧ್ಯ? ಅದಕ್ಕಾಗಿ ಅವನು ತನ್ನ ತಾಯಿ ಸುನೀತಿ ಬಳಿ ಹೋಗಿ ಅಳಲಾರಂಭಿಸಿದನು. ನಡೆದದ್ದೆಲ್ಲವನ್ನು ತಿಳಿದ ಸುನೀತಿ ತನ್ನ ಮಗನಿಗೆ “ಸಂಪೂರ್ಣ ಲೌಕಿಕ ಮತ್ತು ಅಲೌಕಿಕ ಸುಖ ಕೊಡುವ ಭಗವಾನ ನಾರಾಯಣನನ್ನು ಬಿಟ್ಟರೆ ಯಾರೂ ನಿನ್ನ ದುಃಖ ದೂರ ಮಾಡಲಾರರು. ಅದಕ್ಕಾಗಿ ನೀನು ಅವನ ಭಕ್ತಿ ಮಾಡು”, ಎಂದಳು.

ತಾಯಿಯ ಮಾತನ್ನು ಕೇಳಿ ಧ್ರುವನು ಭಗವಂತನ ಭಕ್ತಿ ಮಾಡಲು ಹೊರಟನು. ಕಾಡಿನಲ್ಲಿ ಒಬ್ಬನೇ ಹೋಗುತ್ತಿರುವಾಗ ಮಾರ್ಗದಲ್ಲಿ ಅವನಿಗೆ ನಾರದರ ಭೇಟಿಯಾಯಿತು. ನಾರದಮುನಿಗಳು ಅವನಿಗೆ ಮನೆಗೆ ಹೋಗಲು ಹೇಳಿದರು. ಆದರೆ ಧ್ರುವನು ಒಪ್ಪಿಕೊಳ್ಳಲಿಲ್ಲ. ಆಗ ನಾರದಮುನಿಗಳು ಅವನಲ್ಲಿರುವ ದೃಢ ಸಂಕಲ್ಪವನ್ನು ಕಂಡು ಅವನಿಗೆ ‘ಓ೦ ನಮೋ ಭಗವತೇ ವಾಸುದೇವಾಯ’ ಮಂತ್ರದ ದೀಕ್ಷೆ ಕೊಟ್ಟು ಅದನ್ನು ಸಿದ್ಧಿಮಾಡುವ ವಿಧಿಯನ್ನು ಹೇಳಿಕೊಟ್ಟರು. ಬಾಲಕ ಧ್ರುವನು ಯಮುನಾನದಿಯ ತೀರದಲ್ಲಿ ಇರುವ ಮಧುವನದಲ್ಲಿ ಹೋಗಿ ಜಪಮಾಡುತ್ತಾ ಭಗವಾನ ನಾರಾಯಣನ ಕಠೋರ ತಪಸ್ಸನ್ನು ಮಾಡಿದನು. ಅಲ್ಪ ಕಾಲವಧಿಯಲ್ಲಿಯೇ ಅವನ ತಪಸ್ಸಿಗೆ ನಾರಾಯಣ ಪ್ರಸನ್ನನಾಗಿ ದರ್ಶನ ನೀಡಿ, ‘ಹೇ ರಾಜಕುಮಾರ! ನನಗೆ ನಿನ್ನ ಅಂತಃಕರಣದಲ್ಲಿರುವುದು ತಿಳಿದಿದೆ, ನಿನ್ನ ಇಚ್ಛೆಗಳು ಪೂರ್ಣವಾಗಲಿ, ಸಮಸ್ತ ಪ್ರಕಾರದ ಸರ್ವೋತ್ತಮ ಐಶ್ವರ್ಯದ ಭೋಗ ಮತ್ತು ಕೊನೆಯ ಸಮಯದಲ್ಲಿ ನಿನಗೆ ನನ್ನ ಲೋಕ ಪ್ರಾಪ್ತಿಯಾಗುವುದು’ ಎಂದು ಆಶೀರ್ವದಿಸಿದರು.

ಈ ಕಥೆಯಿಂದ ನಾವೇನು ಕಲಿಯಬಹುದೆಂದರೆ ದೃಢ ಸಂಕಲ್ಪ, ಭಕ್ತಿ ಮತ್ತು ಅಖಂಡ ನಾಮಜಪದಿಂದ ಈಶ್ವರನು ಶೀಘ್ರ ಪ್ರಸನ್ನನಾಗಿ ನಮ್ಮ ಕಲ್ಯಾಣವನ್ನು ಮಾಡುತ್ತಾನೆ.

Leave a Comment