ಲೋಕಮಾನ್ಯ ಬಾಲ ಗಂಗಾಧರ ತಿಲಕ(೨೩.೦೭.೧೮೫೬ – ೦೧.೦೮.೧೯೨೦)


ಭಾರತೀಯ ರಾಷ್ಟ್ರವಾದಿ, ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ತಿಲಕರು ಬಹುಶಃ ಭಾರತದ ಸ್ವಾತಂತ್ರ್ಯ ಹೋರಾಟ ಚಳುವಳಿಯ ಮೊದಲನೇ ಜನಪ್ರಿಯ ನಾಯಕ. ಭಾರತೀಯರ ಪ್ರಜ್ಞೆಯಲ್ಲಿ ಸಂಪೂರ್ಣ ಸ್ವರಾಜ್ಯದ ಕಿಚ್ಚು ಹಚ್ಚಿದ ತಿಲಕರು ಹಿಂದೂ ರಾಷ್ಟ್ರವಾದದ ಪಿತಾಮಹ ಎಂದೂ ಹೆಸರುವಾಸಿ. ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ’ ಎಂಬ ಘರ್ಜನೆ ಅಂದು ಜನಪ್ರಿಯವಾದದ್ದಷ್ಟೇ ಅಲ್ಲ, ಇಂದಿಗೂ ಜನ ಸಾಮಾನ್ಯರ ನೆನಪಿನಲ್ಲಿ ಹಸಿರಾಗಿದೆ. “ಲೋಕಮಾನ್ಯ” (ಜನಗಳ ಪ್ರೀತಿ ಪಾತ್ರರು / ಗೌರವಕ್ಕೆ ಪಾತ್ರರಾದವರು) ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ತಿಲಕರು ಭಾರತದ ಇತಿಹಾಸ, ಸಂಸ್ಕೃತ, ಹಿಂದೂ ಧರ್ಮ, ಗಣಿತ ಹಾಗೂ ಖಗೋಳ ಶಾಸ್ತ್ರಗಳ ಆಳವಾದ ಅಧ್ಯಯನ ಮಾಡಿದ್ದರು.

ಬಾಲ್ಯ

ತಿಲಕರು ಹುಟ್ಟಿದ್ದು ೧೮೫೬ರ ಜುಲೈ ೨೩ರಂದು ಮಹಾರಾಷ್ಟ್ರದ ರತ್ನಾಗಿರಿಯ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ. ಚತುರ ವಿದ್ಯಾರ್ಥಿಯಾಗಿದ್ದ ತಿಲಕನಿಗೆ ಗಣಿತದಲ್ಲಿ ವಿಶೇಷ ಪ್ರತಿಭೆಯಿತ್ತು. ಆಧುನಿಕ, ಕಾಲೇಜು ಶಿಕ್ಷಣ ಪಡೆದುಕೊಂಡ ಹೊಸ ಪೀಳಿಗೆಯ ಯುವಕರಲ್ಲಿ ತಿಲಕರೂ ಒಬ್ಬರಾಗಿದ್ದರು.

ಪದವಿ ಪಡೆದ ಬಳಿಕ ಪುಣೆಯ ಖಾಸಗಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕರಾಗಿ ಸೇರಿದ ತಿಲಕರು, ನಂತರ ಅದನ್ನು ಬಿಟ್ಟು ಪತ್ರಕರ್ತರಾದರು. ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿಯು ಭಾರತೀಯ ಪರಂಪರೆಯನ್ನು ಹಾಗೂ ಭಾರತದ ವಿದ್ಯಾರ್ಥಿಗಳನ್ನು ಹೀಗಳೆಯುತ್ತದ್ದೆ ಎಂಬ ನಿರ್ಧಾರಕ್ಕೆ ಬಂದ ಅವರು, ಈ ಪದ್ಧತಿಯ ತೀವ್ರ ಟೀಕಾಕಾರರಾದರು. ವಿದ್ಯಾರ್ಥಿಗಳಿಗೆ ಓಳ್ಳೆಯ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಪುಣೆಯಲ್ಲಿ ಡೆಕ್ಕನ್ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು.

ರಾಜಕೀಯ ಜೀವನ

ತಿಲಕರು ಸ್ಥಾಪಿಸಿದ “ಕೇಸರಿ” ಮರಾಠಿ ಪತ್ರಿಕೆಯು ಬಹುಬೇಗ ಜನಸಾಮಾನ್ಯರ ಮನೆಮಾತಾಯಿತು. ಅಭಿಪ್ರಾಯ ಸ್ವಾತಂತ್ರವನ್ನು, ಅದರಲ್ಲೂ ಮುಖ್ಯವಾಗಿ, ೧೯೦೫ರ ಬಂಗಾಳದ ವಿಭಜನೆಯ ವಿರೋಧವನ್ನು, ಸ್ವಾತಂತ್ರ್ಯ ಕಳೆದಿದ್ದ ಭಾರತೀಯ ನಾಗರಿಕರನ್ನು, ಸಂಸ್ಕೃತಿಯನ್ನು, ಪರಂಪರೆಯನ್ನು ಹೀಯಾಳಿಸುವ ಬ್ರಿಟಿಷ್ ಸಾಮ್ರಾಜ್ಯವನ್ನು ಅವರು ಕೇಸರಿಯ ಮಾಧ್ಯಮದಿಂದ ತೀವ್ರವಾಗಿ ಟೀಕಿಸುತ್ತಿದ್ದರು. ಭಾರತೀಯರಿಗೆ ಸ್ವರಾಜ್ಯದ ಹಕ್ಕನ್ನು ನೀಡಬೇಕೆಂದು ಅವರು ಪ್ರತಿಪಾದಿಸಿದರು. ೧೮೯೦ರ ದಶಕದಲ್ಲಿ ತಿಲಕರು ಕಾಂಗ್ರೆಸ್ ಸೇರಿದರಾದರೂ, ಬಹುಬೇಗ ಸ್ವಾತಂತ್ರ ಹೋರಾಟದಲ್ಲಿ ಅದರ ಸೌಮ್ಯವಾದಿ ಧೋರಣೆಯ ವಿರೋಧಕರಾದರು. ಗೋಪಾಲ ಕೃಷ್ಣ ಗೋಖಲೆಯವರ ಸೌಮ್ಯವಾದಿ ನೀತಿಯ ಕಟು ಟೀಕಾಕಾರರಾದರು. ಇದರಲ್ಲಿ ತಿಲಕರಿಗೆ ಬಂಗಾಳದ ಬಿಪಿನ ಚಂದ್ರ ಪಾಲ್ ಹಾಗೂ ಪಂಜಾಬಿನ ಲಾಲಾ ಲಜಪತ ರಾಯ್ ರ ಬೆಂಬಲವಿತ್ತು. ೧೯೦೭ರಲ್ಲಿ ಸೂರತ್ ಅಧಿವೇಶನದಲ್ಲಿ ಕಾಂಗ್ರೆಸ್ ತಿಲಕ, ಪಾಲ್ ಹಾಗೂ ರಾಯ್ ನೇತ್ಳತ್ವದಲ್ಲಿ “ಗರಂ ದಳ” (“ಬಿಸಿ ಗುಂಪು”) ಹಾಗೂ ಗೋಖಲೆಯವರ ನೇತ್ಳತ್ವದಲ್ಲಿ “ನರಂ ದಳ” (“ಮೆದು ಗುಂಪು”) ಎಂದು ಇಬ್ಬಾಗವಾಯಿತು.

ರಾಷ್ಟ್ರದ್ರೋಹದ ಆರೋಪದ ಮೇಲೆ ೧೯೦೬ರಲ್ಲಿ ಬಂಧನಕ್ಕೋಳಗಾದ ತಿಲಕರು ತಮ್ಮ ಪರವಾಗಿ ವಕಾಲತ್ತು ವಹಿಸುವಂತೆ ಕೇಳಿಕೊಂಡಿದ್ದು ಯುವ ವಕೀಲ ಮಹಮದ್ ಆಲಿ ಜಿನ್ನಾರನ್ನು. ಆದರೂ, ಬ್ರಿಟಿಷ್ ನ್ಯಾಯಾಧೀಶರಿಂದ ಅಪರಾಧಿ ಎಂದು ಘೋಷಿಸಲ್ಪಟ್ಟು, ೧೯೦೮ ರಿಂದ ೧೯೧೪ರವರೆಗೆ ಬರ್ಮಾ ದೇಶದ ಮಂಡಾಲೆಯಲ್ಲಿ ಸೆರೆವಾಸ ಅನುಭವಿಸಿದರು.
ಬಿಡುಗಡೆಯಾದ ನಂತರ ತಮ್ಮ ಸಹ-ರಾಷ್ಟ್ರವಾದಿಗಳನ್ನು ಕೂಡಿಕೊಂಡ ತಿಲಕರು, ೧೯೧೬ರಲ್ಲಿ ಕಾಂಗ್ರೆಸ್ಸನ್ನು ಕೂಡಾ ಪುನಃ ಒಗ್ಗೂಡಿಸಿದರು. ಅಖಿಲ ಭಾರತ ಹೋಂ ರೂಲ್ ಲೀಗನ್ನು ಸ್ಥಾಪಿಸುವಲ್ಲಿ ಆನಿ ಬೆಸೆಂಟ್ ಮತ್ತು ಮಹಮದ್ ಆಲಿ ಜಿನ್ನಾರಿಗೆ ಸಹಕಾರ ನೀಡಿದರು.

ತಾತ್ವಿಕ ಮತ್ತು ಸಾಮಾಜಿಕ ಕೊಡುಗೆಗಳು

ತಿಲಕರು ಮೂಲತಃ ಅದ್ವೈತ ವೇದಾಂತದ ಪ್ರತಿಪಾದಕರಾಗಿದ್ದರೂ, ಸಾಂಪ್ರದಾಯಿಕ ಅದ್ವೈತದ “ಜ್ಙಾನವೊಂದರಿಂದಲೇ ಮುಕ್ತಿ” ಎಂಬ ನಂಬುಗೆಯು ಅವರಿಗೆ ಒಪ್ಪಿಗೆಯಿರಲಿಲ್ಲ. ಅದಕ್ಕೆ ಸರಿಸಮನಾಗಿ ಹಾಗೂ ಪೂರಕವಾಗಿ ಅವರು ಕರ್ಮಯೋಗವನ್ನೂ ಸೇರಿಸಿದರು.

ವಿವಾಹಕ್ಕೆ ಕನಿಷ್ಠ ವಯೋಮಿತಿಯೇ ಮೊದಲಾಗಿ ತಿಲಕರು ಅನೇಕ ಸಾಮಾಜಿಕ ಸುಧಾರಣೆಗಳನ್ನು ಮುಂದಿಟ್ಟರು. ಮದ್ಯಪಾನ ನಿಷೇಧದ ಬಗ್ಗೆ ಅವರಿಗೆ ಅತ್ಯಂತ ಕಳಕಳಿಯಿತ್ತು. ಶಿಕ್ಷಣ ಹಾಗೂ ರಾಜಕೀಯ ಜೀವನದ ಬಗ್ಗೆ ಅವರ ವಿಚಾರಗಳು ಬಹಳ ಪ್ರಭಾವಶಾಲಿಯಾಗಿದ್ದವು – ದೇವನಾಗರಿ ಲಿಪಿಯಲ್ಲಿ ಬರೆಯಲಾಗುವ ಹಿಂದಿ ಭಾಷೆಯು ಭಾರತದ ರಾಷ್ತ್ರಭಾಷೆಯಾಗಬೇಕು ಎಂದು ಮೊದಲು ಸೂಚಿಸಿದವರು ತಿಲಕರು, ನಂತರ ಗಾಂಧೀಜಿ ಇದನ್ನು ಬಲವಾಗಿ ಅನುಮೋದಿಸಿದರು. ಆದರೆ, ತಿಲಕರು ಸಂಪೂರ್ಣವಾಗಿ ಭಾರತದಿಂದ ನಿರ್ಮೂಲನ ಮಾಡಬೇಕೆಂದು ಇಚ್ಛೆ ಪಟ್ಟಿದ್ದ ಆಂಗ್ಲ ಭಾಷೆ, ಇಂದಿಗೂ ಸಂವಹನದ ಒಂದು ಮುಖ್ಯ ಸಾಧನವಾಗಿ ಉಳಿದುಕೊಂಡು ಬಂದಿದೆ. ಆದರೂ ಹಿಂದಿ (ಮತ್ತು ಇತರ ಭಾರತೀಯ ಭಾಷೆಗಳ) ಜನಸಾಮಾನ್ಯರ ಮಟ್ಟದಲ್ಲಿ ಬಳಕೆ ಮತ್ತು ಬ್ರಿಟಿಷರ ಕಾಲದಿಂದ ಇಂದಿನವರೆಗೂ ನೀಡಲಾಗುತ್ತಿರುವ ಪ್ರೋತ್ಸಾಹಕ್ಕೆ ತಿಲಕರು ಅಂದು ಪ್ರಾರಂಭಿಸಿದ ಪುನರುಜ್ಜೀವನವೇ ಕಾರಣ ಎನ್ನಲಾಗುತ್ತದೆ. ತಿಲಕರ ಮತ್ತೊಂದು ದೊಡ್ಡ ಕಾಣಿಕೆಯೆಂದರೆ, ಸಾರ್ವಜನಿಕ ಗಣೇಶೋತ್ಸವ. ಭಾದ್ರಪದ ಶುಕ್ಲ ಚತುರ್ಥಿಯಿಂದ ಹಿಡಿದು ಅನಂತ ಚತುರ್ದಶಿಯವರೆಗಿನ ೧೧ ದಿನಗಳ ಈ ಉತ್ಸವ, ಖಾಸಗಿ ಧಾರ್ಮಿಕ ಆಚರಣೆಯನ್ನು ಜನಸಾಮಾನ್ಯರು ಒಟ್ಟುಗೂಡಿ ಆಚರಿಸುವ, ಜನನಾಯಕರಿಗೆ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವಾಗಿ ಬದಲಾಯಿಸಿತು. ತಿಲಕರು ಪ್ರಾರಂಭಿಸಿದ ಈ ಪರಂಪರೆ ದೇಶದ ಅನೇಕ ಕಡೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಇಂದಿಗೂ ಮುಂದುವರಿಯುತ್ತಿದೆ. ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವಂತೆ ಅವರು ನೀಡಿದ ಕರೆ ಬಹಳಷ್ಟು ಭಾರತೀಯರಲ್ಲಿ ದೇಶಭಕ್ತಿಯನ್ನು ತುಂಬಿ ಸ್ವದೇಶೀ ವಸ್ತುಗಳ ಬಳಕೆಯಲ್ಲಿ ವೃದ್ಧಿಗೆ ಕಾರಣವಾಯಿತು.

ತಿಲಕರ ನಂತರದ ವರ್ಷಗಳು ಹಾಗೂ ಅವರ ಕೊಡುಗೆ

ತಿಲಕರು ಗಾಂಧಿಯವರ ಅಹಿಂಸಾ, ಅಸಹಕಾರ ಚಳುವಳಿಯ ಟೀಕಾಕಾರರಾಗಿದ್ದರು. ಒಂದು ಕಾಲದಲ್ಲಿ ತೀವ್ರವಾದಿ ಕ್ರಾಂತಿಕಾರಿಯೆಂದು ಪರಿಗಣಿಸಲ್ಪಟ್ಟಿದ್ದರೂ, ನಂತರದ ವರ್ಷಗಳಲ್ಲಿ ಅವರು ಗಮನಾರ್ಹವಾಗಿ ಬದಲಾಗಿದ್ದರು. ಭಾರತವನ್ನು ಸ್ವತಂತ್ರಗೊಳಿಸಲು ಮಾತುಕತೆಗಳೇ ಹೆಚ್ಚು ಪರಿಣಾಮಕಾರಿ ಎಂಬುವುದರ ಬಗ್ಗೆ ಅವರಿಗೆ ಒಲವಿತ್ತು.

ಆದರೂ, ಸ್ವರಾಜ್ಯ ಮತ್ತು ರಾಜಕೀಯ ಸ್ವಾತಂತ್ರಕ್ಕಾಗಿ ಹೋರಾಟವನ್ನು ಜನಸಾಮಾನ್ಯರವರೆಗೆ ಕೊಂಡೊಯ್ದ ತಿಲಕರನ್ನು ಸ್ವಾತಂತ್ರ ಚಳುವಳಿಯ ಜನಕ ಎಂದು ಪರಿಗಣಿಸಲಾಗಿದೆ. ಭಾರತೀಯ ಸಂಸ್ಕೃತಿ, ಇತಿಹಾಸ ಹಾಗೂ ಧರ್ಮದ ಬಗ್ಗೆ ಲೇಖನಗಳಿಂದ ಲಕ್ಷಾಂತರ ಭಾರತೀಯರಿಗೆ ತಮ್ಮ ಭವ್ಯ ಪರಂಪರೆಯ ಅರಿವು ಮಾಡಿಕೊಟ್ಟು, ಅವರ ಸ್ಮೃತಿಯಲ್ಲಿ ತಮ್ಮ ನಾಡಿನ ಬಗ್ಗೆ ಅಭಿಮಾನವನ್ನು ಮೂಡಿಸಿದರು .

ತಿಲಕರನ್ನು ಭಾರತದ ರಾಜಕೀಯ ಹಾಗೂ ಆಧ್ಯಾತ್ಮಿಕ ನಾಯಕರನ್ನಾಗಿಯೂ, ಮಹಾತ್ಮಾ ಗಾಂಧಿಯವರನ್ನು ಇವರ ಉತ್ತರಾಧಿಕಾರಿಯಾಗಿಯೂ ಅನೇಕರು ಪರಿಗಣಿಸುತ್ತಾರೆ. ೧೯೨೦ರಲ್ಲಿ ತಿಲಕರು ತೀರಿಕೊಂಡಾಗ, ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ೨೦೦,೦೦೦ ಜನರಲ್ಲಿ ಒಬ್ಬರಾದ ಮಹಾತ್ಮಾ ಗಾಂಧಿಯವರು ತಿಲಕರನ್ನು “ಆಧುನಿಕ ಭಾರತದ ಜನಕ” ಎಂದು ಬಣ್ಣಿಸಿದರು.

ಇಂದು ತಿಲಕರನ್ನು ಹಿಂದೂ ರಾಷ್ಟ್ರವಾದವನ್ನು ಹುಟ್ಟುಹಾಕಿದವರೆಂದು ನಂಬಲಾಗುತ್ತದೆ. ಹಿಂದುತ್ವದ ರಾಜಕೀಯ ಪ್ರಣಾಲಿಯನ್ನು ರಚಿಸಿದ ವಿನಾಯಕ ದಾಮೋದರ ಸಾವರಕರರಿಗೆ ತಿಲಕರು ಆರಾಧ್ಯ ದೈವವಾಗಿದ್ದರು.

ಗ್ರಂಥಗಳು

೧೯೦೩ರಲ್ಲಿ ತಿಲಕರು ಗ್ರಂಥವನ್ನು ಬರೆದು, ಅದರಲ್ಲಿ, ಖಗೋಳಶಾಸ್ತ್ರದ ಆಧಾರದ ಮೇಲೆ, ವೇದಗಳನ್ನು ಧ್ರುವ ಪ್ರದೇಶಗಳಲ್ಲಿ ಮಾತ್ರವೇ ಸೃಷ್ಟಿಸಿರಲು ಸಾಧ್ಯ ಎಂದು ವಾದಿಸುತ್ತಾರೆ. ಕೊನೆಯ ಮಂಜಿನ ಯುಗ ಶುರುವಾದ ಮೇಲೆ ಅಲ್ಲಿಂದ ದಕ್ಷಿಣದ ಕಡೆ ಸಾಗಿದ ಆರ್ಯರ ಮೂಲಕ ಅದು ದಕ್ಷಿಣ ದೇಶಗಳನ್ನು ಮುಟ್ಟಿತು ಎಂದೂ ಅವರು ಪ್ರತಿಪಾದಿಸುತ್ತಾರೆ.

ವೇದಗಳ ಪ್ರಾಚೀನತೆಯ ಸಂಶೋಧನೆಗಳು ಎಂಬ ಪುಸ್ತಕದಲ್ಲಿ ವೇದ ಕಾಲದ ಜನರು ಕ್ರಿ.ಪೂ. ೪ನೆಯ ಸಹಸ್ರಮಾನದಷ್ಟು ಹಿಂದೆಯೇ ಭಾರತದಲ್ಲಿ ನೆಲೆಸಿದ್ದರು ಎಂದು ಖಗೋಳಶಾಸ್ತ್ರದ ಆಧಾರದ ಮೇಲೆ ಪ್ರತಿಪಾದಿಸುತ್ತಾರೆ.

ತಿಲಕರ “ಗೀತಾರಹಸ್ಯ ಅಥವಾ ಜೀವನಧರ್ಮ ಯೋಗ” ಎಂಬ ಭಗವದ್ಗೀತೆಯ ತಾತ್ಪರ್ಯವು ಬಹಳ ಪ್ರಸಿಧ್ಧವಾದ ಕೃತಿ.

Leave a Comment