ಹುತಾತ್ಮಾ ಅನಂತ ಕಾನ್ಹೇರೆ!

ಹಿಂದೂಸ್ಥಾನದ ಸ್ವಾತಂತ್ರ್ಯದ ಹೋರಾಟದಲ್ಲಿ ಅನೇಕ ದೇಶ ಭಕ್ತರು ಪ್ರಾಣದ ಆಹುತಿ ಕೊಟ್ಟು ಸ್ವಾತಂತ್ರ್ಯದ ಯಜ್ಞಕುಂಡವನ್ನು ಪ್ರಜ್ವಲಿಸಿಟ್ಟರು. ೧೯ ಎಪ್ರಿಲ್ ೧೯೧೦ ರಂದು ಹುತಾತ್ಮ ಅನಂತ ಲಕ್ಷ್ಮಣ ಕಾನ್ಹೇರೆಯವರು ತಮ್ಮ ಪ್ರಾಣಾಹುತಿ ನೀಡಿದರು.

ಸೇಡು ತೀರಿಸುವ ಪೂರ್ವ ಸಿದ್ಧತೆ !

ಕೊಂಕಣದ ಓರ್ವ ತರುಣನು ಮಾಧ್ಯಮಿಕ ಶಿಕ್ಷಣಕ್ಕಾಗಿ ಔರಂಗಾಬಾದಿಗೆ ಹೋಗುವುದು, ಅಲ್ಲಿಯ ಕ್ರಾಂತಿಯ ಕಾರ್ಯಗಳಲ್ಲಿ ಭಾಗಿಯಾಗುವುದು, ಸ್ವಾ. ಸಾವರಕರರು ಲಂಡನ್‌ನಿಂದ ಕಳುಹಿಸಿದ ಪಿಸ್ತೂಲನ್ನು ಇಟ್ಟುಕೊಳ್ಳುವುದು ಮತ್ತು ಓರ್ವ ಕಪಟಿ ಮತ್ತು ಉಚ್ಚಪದವೀಧರ ಆಂಗ್ಲನನ್ನು ವಧಿಸುವುದು ಇವೆಲ್ಲವೂ ವಿಚಾರಶಕ್ತಿಗೆ ಮೀರಿದ ಹಾಗೂ ಅಸಾಧ್ಯವಾದ ಸಂಗತಿಗಳಾಗಿವೆ! ಆದರೆ ಈ ಅಸಾಧ್ಯವಾದ ಕೃತಿಗಳನ್ನು ಸಾಧ್ಯ ಮಾಡಿ ತೋರಿಸಿದ ತರುಣನ ಹೆಸರು ಅನಂತರಾವ ಲಕ್ಷ್ಮಣ ಕಾನ್ಹೇರೆ!

ಅನಂತರಾವ್ ಇವರು ೧೮೯೧ ರಂದು ರತ್ನಾಗಿರಿ ಜಿಲ್ಲೆಯ ಆಯನಿ ಮೇಟೆಯಲ್ಲಿ ಜನಿಸಿದರು. ಆಂಗ್ಲ ಶಿಕ್ಷಣ ಪಡೆಯಲು ಔರಂಗಾಬಾದಿನಲ್ಲಿದ್ದ ಸೋದರಮಾವನಲ್ಲಿ ಹೋದರು. ಕೆಲವು ವರ್ಷಗಳ ನಂತರ ಅವರು ಅಲ್ಲಿನ ಗಂಗಾರಾಮ ಮಾರವಾಡಿಯವರಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಪಡೆದು ವಾಸಿಸತೊಡಗಿದರು. ನಾಶಿಕದ ಸ್ವಾತಂತ್ರ್ಯವಾದಿ ಗುಪ್ತ ಸಂಸ್ಥೆಯ ಕಾಶಿನಾಥ ಟೋಣಪೆಯವರು ಗಂಗಾರಾವ ಮತ್ತು ಅನಂತರಾವ ಇವರಿಂದ ಗುಪ್ತ ಸಂಸ್ಥೆಯ ಪ್ರತಿಜ್ಞೆಯನ್ನು ಮಾಡಿಸಿಕೊಂಡರು. ಮದನಲಾಲ ಧಿಂಗ್ರಾ ಇವರು ಕರ್ಝನ ವಾಯಲಿಯ ಮೇಲೆ ಸೇಡು ತೀರಿಸಿಕೊಂಡ ಅನಂತರಾವರಿಗೂ ತಾಳ್ಮೆ ತಪ್ಪತೊಡಗಿತು. ನಂತರ ಒಮ್ಮೆ ಗಂಗಾರಾಮರವರು ಅನಂತರಾವರವರ ಕೈಗೆ ಬಿಸಿ ಕಬ್ಬಿಣದ ಇಕ್ಕಳ ಇಟ್ಟು ಮತ್ತೊಮ್ಮೆ ಉರಿಸಿದ ಚಿಮಣಿಯ ಬಿಸಿಯಾದ ಗಾಜನ್ನು ಎರಡೂ ಕೈಯಲ್ಲಿ ಹಿಡಿಯಲು ಹೇಳಿ ಅವರನ್ನು ಪರೀಕ್ಷಿಸಿದರು. ಎರಡೂ ದೀಪಗಳ ಪರೀಕ್ಷೆಯ ಸಮಯದಲ್ಲಿ ಅನಂತರಾವ್ ಇವರ ಸ್ಥಿತಿಯು ನಿರ್ವಿಕಾರವಾಗಿತ್ತು. ಇದೇ ಸಮಯದಲ್ಲಿ ಜಾಕ್ಸನ್ ಎಂಬ ಕ್ರೂರ ಮತ್ತು ಕಪಟಿ ಆಂಗ್ಲನು ನಾಶಿಕದ ಜಿಲ್ಲಾಧಿಕಾರಿಯಾಗಿದ್ದನು. ಅವರು ನಿರಪರಾಧಿಗಳಾಗಿದ್ದ ಶ್ರೇಷ್ಠ ನ್ಯಾಯವಾದಿ, ಕೀರ್ತನಕಾರರಾದ ತಾಂಬೇಶಾಸ್ತ್ರಿ, ಬಾಬುರಾವ ಸಾವರಕರ ಮುಂತಾದ ದೇಶಭಕ್ತರನ್ನು ಸೆರೆಮನೆಗೆ ತಳ್ಳಿದ್ದನು. ಇಂತಹ ಅನೇಕ ಕುಕೃತ್ಯಗಳಿಂದ ಜಾಕ್ಸನ್‌ನು ತನ್ನ ಮೃತ್ಯುವನ್ನು ತಾನೇ ಬರೆದಿಟ್ಟನು. ಪ್ರಕೃತಿಯೇ ಈ ಕಾರ್ಯಕ್ಕಾಗಿ ಅನಂತರಾವರನ್ನು ನೇಮಿಸಿದಳು. ಜಾಕ್ಸನನನ್ನು ಕೊಲ್ಲಲು ಅನಂತರಾವರವರು ಪ್ರತಿದಿನ ಬಂದೂಕಿನಿಂದ ಗುರಿ ಸಾಧಿಸುವ ಅಭ್ಯಾಸ ಮಾಡಿದರು. ಜಿಲ್ಲಾಧಿಕಾರಿಯ ಕಾರ್ಯಾಲಯದಲ್ಲಿ ಹೋಗಿ ಜಾಕ್ಸನ್‌ನ್ನು ಸರಿಯಾಗಿ ನೋಡಿ ಬಂದರು. ಜಾಕ್ಸನ್‌ನನ್ನು ಕೊಂದ ನಂತರ ಗಲ್ಲು ಶಿಕ್ಷೆ ಸಿಗುವುದೆಂದು ತಂದೆ-ತಾಯಿಯವರಿಗೆ ತನ್ನ ನೆನಪಿಗಾಗಿ ಒಂದು ಛಾಯಾಚಿತ್ರವಿರಲಿ ಎಂದು ಅವರು ತನ್ನ ಒಂದು ಛಾಯಾಚಿತ್ರವನ್ನು ತೆಗೆಸಿಟ್ಟರು.

ಜಾಕ್ಸನ್ ವಧೆ! ಡಿಸೆಂಬರ ೨೧, ೧೯೦೯ ರಂದು ಜಾಕ್ಸನ್‌ನನ್ನು ಸನ್ಮಾನಿಸಲು ನಾಶಿಕದ ವಿಜಯಾನಂದ ನಾಟಕಗೃಹದಲ್ಲಿ ಕಿರ್ಲೋಸ್ಕರ ನಾಟಕ ಮಂಡಳಿಯು ‘ಶಾರದಾ’ ನಾಟಕವನ್ನು ಅಯೋಜಿಸಿತ್ತು. ಜಾಕ್ಸನ್‌ನು ಬಾಗಿಲಿನಿಂದ ನಾಟಕಗೃಹವನ್ನು ಪ್ರವೇಶಿಸುತ್ತಿದ್ದಂತೆ ಮೊದಲೇ ಬಂದು ಕುಳಿತಿದ್ದ ಅನಂತರಾವ ಇವರು ಜಾಕ್ಸನ್ ರ ಮೇಲೆ ಗುಂಡು ಹಾರಿಸಿದರು. ಅದು ಅವರ ಕಂಕುಳಿನಿಂದ ಪಾರಾಯಿತು. ಚಾತುರ್ಯದಿಂದ ಅನಂತರಾವರು ಜಾಕ್ಸನ್ ಮೇಲೆ ಎದುರಿನಿಂದ ನಾಲ್ಕು ಗುಂಡು ಹಾರಿಸಿದರು. ಜಾಕ್ಸನ್‌ನು ಅಲ್ಲಿಯೇ ಕುಸಿದನು.

ಶಾಂತವಾಗಿ ಪೊಲೀಸರಿಗೆ ಶರಣಾದ ಅನಂತರಾವ್

ಜಾಕ್ಸನ್ ವಧೆಯ ಆರೋಪದಲ್ಲಿ ಅನಂತರಾವ ಅವರ ಸಹಚರರಾದ ಅಣ್ಣಾ ಕರ್ವೆ ಮತ್ತು ವಿನಾಯಕ ದೇಶಪಾಂಡೆಯವರಿಗೆ ಗಲ್ಲುಶಿಕ್ಷೆಯನ್ನು ವಿಧಿಸಲಾಯಿತು. ೧೯೧೦ ಏಪ್ರಿಲ್ ೧೯ ರಂದು ಠಾಣೆಯ ಸೆರೆಮನೆಯಲ್ಲಿ ಬೆಳಗ್ಗೆ ೭ ಗಂಟೆಗೆ ಈ ಮೂವ್ವರು ಕ್ರಾಂತಿಕಾರರು ಧೈರ್ಯದಿಂದ ಗಲ್ಲಿಗೇರಿದರು. ಅವರ ಆಪ್ತೇಷ್ಟರ ವಿನಂತಿಗೆ ಬೆಲೆ ಕೊಡದೇ ಬ್ರಿಟಿಷ ಸರಕಾರವು ಠಾಣೆಯ ಖಾಡಿಕಿನಾರಿ ಎಂಬಲ್ಲಿ ಈ ಮೂರು ಮೃತ ದೇಹಗಳನ್ನು ದಹಿಸಿದರು. ಮತ್ತು ಅವರ ಚಿತಾಭಸ್ಮವನ್ನು ಯಾರಿಗೂ ಸಿಗದಂತೆ ಸಮುದ್ರದ ಜಲಸಂಧಿಯೊಳಗೆ ಎಸೆದರು. ೧೮ ನೇ ವಯಸ್ಸಿನಲ್ಲಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ಮಾಡುವ ಹುತಾತ್ಮಾ ಅನಂತ ಕಾನ್ಹೇರೆಯವರಂತಹ ಅನೇಕರ ಬಲಿದಾನದಿಂದಲೇ ಇಂದು ನಾವು ಸ್ವತಂತ್ರರಾಗಿದ್ದೇವೆ.