ಶ್ರೇಷ್ಠ ಈಶ್ವರಭಕ್ತಿ !

ಮಿತ್ರರೇ, ತಮಗೆ ದೇವರ್ಷಿ ನಾರದರ ಬಗ್ಗೆ ತಿಳಿದಿದೆಯಲ್ಲವೇ ? ನಾರದಮುನಿಗಳು ಬ್ರಹ್ಮದೇವರ ಮಾನಸಪುತ್ರರಾಗಿದ್ದರು ಹಾಗೂ ಭಗವಾನ ವಿಷ್ಣುವಿನ ಶ್ರೇಷ್ಠ ಭಕ್ತರಾಗಿದ್ದರು. ಅವರು ಸದಾ ‘ನಾರಾಯಣ ನಾರಾಯಣ’ ಈ ನಾಮಜಪವನ್ನು ಮಾಡುತ್ತಿದ್ದರು. ಒಮ್ಮೆ ದೇವರ್ಷಿ ನಾರದರಿಗೆ ತಮ್ಮ ಭಕ್ತಿಯ ಮೇಲೆ ಬಹಳ ಗರ್ವ ಉಂಟಾಯಿತು. ಅವರು ತಮ್ಮ ಮನಸ್ಸಿನಲ್ಲಿ ಹರಿ ನಾಮವನ್ನು ಜಪಿಸುವುದರಿಂದ ನಾನು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರದಂತಹ ಷಡ್ರಿಪುಗಳ ಮೇಲೆ ವಿಜಯ ಸಾಧಿಸಿದ್ದೇನೆ. ನನಗೆ ಸರಿಸಮನಾದ ಭಗವಂತನ ನಿಜವಾದ ಹಾಗೂ ಪ್ರಿಯ ಭಕ್ತರು ತ್ರಿಲೋಕದಲ್ಲಿ ಯಾರೂ ಇಲ್ಲ ಎಂದು ಅನಿಸಿತು. ಭಗವಂತ ಶ್ರೀವಿಷ್ಣುವು ಅಂತರ್ಯಾಮಿ ಅಲ್ಲವೇ? ಅವರಿಂದ ಈ ವಿಷಯವು ಹೇಗೆ ಮುಚ್ಚಿರುತ್ತಿತ್ತು ? ಆದುದರಿಂದ ಇದರ ಬಗ್ಗೆ ತಿಳಿಯಿತು. ಅವರು ನಾರದಮುನಿಗಳ ಮನಸ್ಸಿನಲ್ಲಿರುವ ಭ್ರಮೆ ದೂರಗೊಳಿಸಲು ತೀರ್ಮಾನಿಸಿದರು. ಭಗವಂತನು ಯಾವಾಗಲೂ ತನ್ನ ಭಕ್ತರ ಒಳಿತನ್ನೇ ಇಚ್ಛಿಸುತ್ತಾನೆ. ತನ್ನ ಭಕ್ತನ ಅಹಂಕಾರ ಹೆಚ್ಚಾದರೆ ಅವನನ್ನು ರಕ್ಷಿಸಲು ಭಗವಂತನು ಏನು ಬೇಕಾದರೂ ಮಾಡಬಲ್ಲನು. ಭಗವಾನ ಶ್ರೀವಿಷ್ಣುವು ನಾರದ ಮುನಿಗಳ ಗರ್ವಹರಣ ಮಾಡಲು ನಿಶ್ಚಯಿಸಿದರು. ಇದೂ ಭಗವಂತನ ಲೀಲೆಯೇ ಆಗಿದೆ.

ನಾರದಮುನಿಗಳು ನಾರಾಯಣ-ನಾರಾಯಣ ಎಂದು ನಾಮಜಪ ಮಾಡುತ್ತ ವಿಷ್ಣುಲೋಕವನ್ನು ತಲುಪುವಷ್ಟರಲ್ಲಿ ಭಗವಾನ ಶ್ರೀವಿಷ್ಣುವು ಅವರಲ್ಲಿ ‘ದೇವರ್ಷಿ ನಾರದ, ತಾವು ತ್ರಿಲೋಕಗಳಲ್ಲಿ ಸಂಚರಿಸುತ್ತೀರಿ. ನೀವು ಪೃಥ್ವಿಯ ಮೇಲೆ ನನ್ನ ಭಕ್ತರನ್ನು ಭೇಟಿಯಾಗಿರುವಿರೇ ? ಅಲ್ಲಿ ನನ್ನ ಓರ್ವ ಪ್ರಿಯಭಕ್ತನಿದ್ದಾನೆ’ ಎಂದು ಹೇಳಿದರು. ಈ ಮಾತುಗಳನ್ನು ಕೇಳಿ ನಾರದ ಮುನಿಗಳು ವಿಚಾರಗಳಲ್ಲಿ ಸಿಲುಕಿದರು. ‘ನನ್ನಷ್ಟು ನಿಜವಾದ ಹಾಗೂ ಶ್ರೇಷ್ಠನಾದ ಇನ್ನೊಬ್ಬ ಭಕ್ತನು ಯಾರಿರಬಹುದು ?’ ಎಂದು ಅನಿಸಿತು.
ನಾರದಮುನಿಗಳು ಭಗವಾನ ವಿಷ್ಣುವಿನಲ್ಲಿ ಆ ಭಕ್ತನ ವಿಳಾಸವನ್ನು ಕೇಳಿ ಅವನನ್ನು ಭೇಟಿಯಾಗಲು ಹೊರಟರು.

ಭಗವಂತನು ಹೇಳಿದ ಸ್ಥಳಕ್ಕೆ ನಾರದ ಋಷಿಗಳು ತಲುಪಿದರು. ಭಗವಂತನು ಹೇಳಿದ ಆ ಪ್ರಿಯಭಕ್ತನು ಸಾಮಾನ್ಯ ರೈತನಾಗಿದ್ದ! ಇದನ್ನು ನೋಡಿ ನಾರದರಿಗೆ ಬಹಳ ಆಶ್ಚರ್ಯವಾಯಿತು. ಇಷ್ಟು ಬಡ ರೈತನು ಹೇಗೆ ಭಗವಂತನಿಗೆ ಎಲ್ಲರಿಗಿಂತಲೂ ಪ್ರಿಯನಾಗಿದ್ದಾನೆ ? ಎಂಬ ವಿಚಾರ ಅವರಿಗೆ ಬಂದಿತು. ಆಗ ನಾರದರು ಅಡಗಿ ಕುಳಿತು ಆ ರೈತನ ದಿನಚರಿಯನ್ನು ವೀಕ್ಷಿಸಿದರು. ರೈತನು ಬೆಳಗ್ಗೆ ಬೇಗ ಏಳುತ್ತಿದ್ದನು, ಭಗವಂತನ ನಾಮಜಪ ಮಾಡುತ್ತಿದ್ದನು. ದಿನಪೂರ್ತಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದನು. ರಾತ್ರಿ ಮಲಗುವಾಗ ಅವನು ಭಗವಂತನಲ್ಲಿ ‘ನಿಮ್ಮ ಕೃಪೆಯಿಂದ ಇಂದಿನ ಎಲ್ಲ ಕೆಲಸಗಳನ್ನು ಮಾಡಲು ಸಾಧ್ಯವಾಯಿತು, ತಮ್ಮ ಕೃಪೆಯಿಂದ ಇಂದಿನ ದಿನವು ಸಫಲವಾಯಿತು. ನಿಮ್ಮ ಕೃಪೆಯು ನನ್ನ ಮೇಲೆ ಸದಾ ಇರಲಿ’ ಎಂದು ಹೇಳಿ ಮಲಗುತ್ತಿದ್ದನು.

ನಾರದಮುನಿಗಳಿಗೆ ಅವನ ಈ ರೀತಿಯ ದಿನಚರಿಯು ಬಹಳ ಹಾಸ್ಯಾಸ್ಪದವೆನಿಸಿತು. ನಾರದಮುನಿಗಳಿಗೆ ಈ ರೈತನು ದಿನದಲ್ಲಿ ಕೇವಲ ಒಂದು ಬಾರಿಯೇ ಭಗವಂತನ ನಾಮಜಪ ಮಾಡುತ್ತಾನೆ ಹಾಗೂ ರಾತ್ರಿ ಪ್ರಾರ್ಥನೆ ಮಾಡುತ್ತಾನೆ. ನಾನು ದಿನಪೂರ್ತಿ ಅಖಂಡ ನಾಮಜಪ ಮಾಡುತ್ತ ಪರಮೇಶ್ವರನ ಚಿಂತನೆಯಲ್ಲಿರುತ್ತೇನೆ. ಆದರೂ ಇವನು ಭಗವಂತನಿಗೆ ಹೇಗೆ ಪ್ರಿಯಭಕ್ತನಾದನು ? ಎಂದು ಅನಿಸಿ ನಾರದ ಮುನಿಗಳು ಪುನಃ ಶ್ರೀವಿಷ್ಣುವಿನ ಬಳಿ ಹೋಗಿ ‘ಹೇ ಭಗವಂತ, ನೀವು ಯಾರನ್ನು ತಮ್ಮ ಪ್ರಿಯ ಭಕ್ತನೆಂದು ಹೇಳುತ್ತೀರೋ ಅವನಲ್ಲಿ ಆ ಯೋಗ್ಯತೆಯನ್ನು ದರ್ಶಿಸುವಂತಹ ಯಾವುದೇ ವಿಷಯವನ್ನು ಕಂಡುಬರಲಿಲ್ಲ. ದಿನದಲ್ಲಿ ಕೇವಲ ಒಂದು ಬಾರಿ ತಮ್ಮ ನಾಮಜಪ ಮಾಡುತ್ತಾ, ದಿನಪೂರ್ತಿ ತನ್ನ ಕೆಲಸವನ್ನು ಮಾಡಿ ರಾತ್ರಿ ಪ್ರಾರ್ಥನೆ ಮಾಡಿ ಮಲಗುತ್ತಾನೆ. ನನಗೆ ಅವನು ನಿಮಗೆ ಹೇಗೆ ಪ್ರಿಯನಾದನು ಎಂಬುದೇ ತಿಳಿಯುತ್ತಿಲ್ಲ’ ಎಂದರು. ಇದನ್ನು ಕೇಳಿ ಭಗವಾನ ಶ್ರೀವಿಷ್ಣುವು ನಕ್ಕರು. ಅವರು ನಾರದ ಮುನಿಗಳಿಗೆ ‘ದೇವರ್ಷಿ, ನೀವು ಒಂದು ಕೆಲಸ ಮಾಡಿ, ಎಣ್ಣೆಯಿಂದ ತುಂಬಿದ ಈ ತಂಬಿಗೆಯನ್ನು ಕೈಲಾಶಪರ್ವತದಲ್ಲಿರುವ ಭಗವಾನ ಶಿವನಿಗೆ ತಲುಪಿಸಿ ಬನ್ನಿ; ಆದರೆ ಒಂದು ಹನಿ ಎಣ್ಣೆಯೂ ಬೀಳದಂತೆ ಎಚ್ಚರ ವಹಿಸಿ. ಇಷ್ಟು ಮಾಡಿ ಬನ್ನಿ, ನಿಮ್ಮ ಪ್ರಶ್ನೆಗೆ ಉತ್ತರ ತಿಳಿಸುತ್ತೇನೆ’ ಎಂದು ಹೇಳಿದರು. ಆಗ ನಾರದರು ಇದರಲ್ಲಿ ಏನು ಮಹಾವಿಷಯ ಎಂದು ಹೇಳಿ ಎಣ್ಣೆಯಿಂದ ತುಂಬಿದ ತಂಬಿಗೆಯನ್ನು ಹಿಡಿದು ಶಿವನ ಬಳಿ ಹೋಗಲು ಹೊರಟರು. ತಂಬಿಗೆಯಲ್ಲಿ ಎಣ್ಣೆ ತುಂಬಿದ್ದರಿಂದ ಅವರ ಎಲ್ಲ ಗಮನವು ಎಣ್ಣೆಯ ಮೇಲೆಯೇ ಇತ್ತು. ಆದರೂ ಎಣ್ಣೆಯನ್ನು ಕೆಳಗೆ ಬೀಳಿಸದೇ ಭಗವಾನ ಶಿವನ ಬಳಿ ತಲುಪಿಸಿದರು.

ಪುನಃ ನಾರದ ಮುನಿಗಳು ಶ್ರೀವಿಷ್ಣುವಿನ ಬಳಿ ಬಂದರು. ಭಗವಾನ ಶ್ರೀ ವಿಷ್ಣುವು ನಾರದರಲ್ಲಿ ‘ನಾರದರೇ, ತಾವು ತಂಬಿಗೆಯನ್ನು ಕೊಟ್ಟು ಬಂದಿರೆ? ಒಂದೂ ಹನಿ ಎಣ್ಣೆ ಬೀಳಲಿಲ್ಲವಲ್ಲ ?’ ಎಂದು ಕೇಳಿದಾಗ ನಾರದರು ‘ಇಲ್ಲ ಪ್ರಭು, ಎಣ್ಣೆಯ ಒಂದು ಹನಿಯನ್ನೂ ಬೀಳಿಸದೇ ನಾನು ತಂಬಿಗೆಯನ್ನು ಕೊಟ್ಟು ಬಂದಿದ್ದೇನೆ’ ಎಂದು ಹೇಳಿದರು. ಆಗ ಶ್ರೀವಿಷ್ಣುವು ‘ತಂಬಿಗೆಯನ್ನು ಒಯ್ಯುವಾಗ ನೀವು ಎಷ್ಟು ಬಾರಿ ನಾರಾಯಣ ನಾರಾಯಣ ಎಂದು ನಾಮಜಪ ಮಾಡಿದ್ದೀರಿ ?’ ಎಂದು ಹೇಳಿದಾಗ ನಾರದರು ನಾಚಿಕೆಯಿಂದ ವಿಚಾರದಲ್ಲಿ ಮಗ್ನರಾದರು. ಸ್ವಲ್ಪ ಸಮಯದ ನಂತರ ‘ಪ್ರಭು ನನ್ನೆಲ್ಲ ಗಮನವು ಪಾತ್ರೆಯ ಮೇಲೆಯೇ ಇತ್ತು, ಆದುದರಿಂದ ನಾನು ತಮ್ಮ ನಾಮಜಪ ಮಾಡುವುದನ್ನು ಮರೆತೆ’ ಎಂದು ಹೇಳಿದರು. ಆಗ ಶ್ರೀವಿಷ್ಣುವು ‘ತಾವು ಪ್ರತಿಕ್ಷಣವೂ ನಾರಾಯಣ ನಾರಾಯಣ ಎಂದು ನಾಮಜಪ ಮಾಡುತ್ತಿರುತ್ತೀರಿ, ಹಾಗಾದರೂ ಭಗವಾನ ಶಿವನ ಬಳಿ ಹೋಗುವಾಗ ತಮ್ಮಿಂದ ಒಂದು ಬಾರಿಯೂ ನಾಮಜಪವಾಗಲಿಲ್ಲವೇ ? ತಮಗೆ ಕೇವಲ ಒಂದೇಒಂದು ಪಾತ್ರೆಯನ್ನೇ ತೆಗೆದುಕೊಂಡು ಹೋಗಲಿಕ್ಕಿತ್ತು, ಇಷ್ಟರಲ್ಲಿಯೇ ನೀವು ನಾಮಜಪವನ್ನು ಮಾಡಲು ಮರೆತಿರುವಿರಿ. ಆದರೆ ಆ ರೈತನು ಬಹಳಷ್ಟು ಕೌಟುಂಬಿಕ ಸಮಸ್ಯೆಗಳಲ್ಲಿ ಸಿಲುಕಿರುತ್ತಾನೆ, ಆದರೂ ನನ್ನನ್ನು ಸ್ಮರಿಸಲು ಮರೆಯುವುದಿಲ್ಲ ! ಹಾಗಿದ್ದರೆ ನೀವೇ ಹೇಳಿ ಯಾರು ಶ್ರೇಷ್ಠರು ಎಂದು!’ ಇದನ್ನು ಕೇಳಿ ದೇವರ್ಷಿ ನಾರದರಿಗೆ ತಮ್ಮ ತಪ್ಪಿನ ಅರಿವಾಯಿತು ಹಾಗೂ ಅವರು ರೈತನೇ ಈಶ್ವರನ ಶ್ರೇಷ್ಠಭಕ್ತನಾಗಿದ್ದಾನೆ ಎಂಬುದನ್ನು ಒಪ್ಪಿದರು.

ಮಿತ್ರರೇ, ಈ ಪ್ರಸಂಗದಿಂದ ನಮಗೇನು ಕಲಿಯಲು ಸಿಕ್ಕಿತು ? ಸಂಸಾರದಲ್ಲಿದ್ದರೂ ನಮ್ಮ ಕೆಲಸಗಳನ್ನು ಮಾಡುತ್ತ ಭಗವಂತನ ನಾಮಸ್ಮರಣೆಯನ್ನು ಮಾಡುತ್ತಿರಬೇಕು. ಇದೇ ಈಶ್ವರನ ಸರ್ವಶ್ರೇಷ್ಠ ಭಕ್ತಿಯಾಗಿದೆ. ಅಂದರೆ ಎಲ್ಲ ರೀತಿಯ ಕೆಲಸಗಳನ್ನು ಮಾಡುತ್ತಿರುವಾಗ ಈಶ್ವರನ ನಾಮಜಪವನ್ನು ಮಾಡುತ್ತಿರಬೇಕು ! ಹಾಗಿದ್ದರೆ ಇಂದಿನಿಂದ ನಮ್ಮ ಎಲ್ಲ ಕೆಲಸಗಳನ್ನು ಮಾಡುವಾಗ ನಾಮಜಪ ಮಾಡೋಣವಲ್ಲವೇ ?

Leave a Comment