ಮಾರ್ಕಂಡೇಯನ ಭಕ್ತಿ

ಒಂದು ಕಾಡಿನ ಕುಟೀರದಲ್ಲಿ ಮೃಕಂಡ ಮುನಿಯು ತನ್ನ ಪತ್ನಿಯಾದ ಮರುದಾವತಿಯೊಂದಿಗೆ ಸಾಧನೆಯ ಜೀವನವನ್ನು ನಡೆಸುತ್ತಿದ್ದನು. ಆ ದಂಪತಿಗಳಿಗೆ ಬಹುಕಾಲವಾದರೂ ಮಕ್ಕಳಾಗಿರಲಿಲ್ಲ. ಒಮ್ಮೆ ಮೃಕಂಡ ಮುನಿಯು ಕಾಶಿಯಾತ್ರೆಗೆ ಹೋಗಿ ಅಲ್ಲಿರುವ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ, ವಿಶ್ವನಾಥ, ವಿಶಾಲಾಕ್ಷಿಯನ್ನು ಭಕ್ತಿಯಿಂದ ಪೂಜಿಸಿದನು. ಕಾಶೀ ವಿಶ್ವನಾಥನ ದೇವಸ್ಥಾನದ ಬಳಿಯೇ ಇದ್ದುಕೊಂಡು ಉಗ್ರ ತಪಸ್ಸು ಮಾಡತೊಡಗಿದನು. ಅವನ ಭಕ್ತಿಗೆ ಮೆಚ್ಚಿದ ಶಿವಶಂಕರನು ಪ್ರತ್ಯಕ್ಷನಾಗಿ “ಮೃಕಂಡ, ನಿನಗೆ ಬೇಕಾದ ವರವನ್ನು ಕೇಳು ಅದನ್ನು ಅನುಗ್ರಹಿಸುವೆ” ಎಂದನು. ಮೃಕಂಡ ಮುನಿ ಧನ್ಯತಾಭಾವದಿಂದ “ಭಗವಂತ, ನನಗೊಬ್ಬ ಮಗನನ್ನು ಕರುಣಿಸು” ಎಂದನು. ಶಿವಶಂಕರನು ನಗುತ್ತ “ನಿನಗೆ ನೂರು ವರ್ಷ ಆಯುಷ್ಯವುಳ್ಳ, ಅಶಿಸ್ತಿನ, ದುರ್ನಡತೆಯ ಮಗ ಬೇಕೋ? ಹದಿನಾರು ವರ್ಷ ಮಾತ್ರ ಬದುಕುವ ಒಳ್ಳೆಯ ಸ್ವಭಾವದ, ಶಿಸ್ತಿನ, ನನ್ನಲ್ಲಿ ಭಕ್ತಿಯಿರುವ ಬಾಲಕ ಬೇಕೋ” ಎಂದನು. ಅದಕ್ಕೆ ಮೃಕಂಡ ಮುನಿಯು “ನನಗೆ ತಮ್ಮಲ್ಲಿ ಭಕ್ತಿಯಿಟ್ಟು ಸದಾ ಪೂಜಿಸುವ ಮಗುವೇ ಬೇಕು. ಅವನು ಅಲ್ಪಾಯುಷಿಯಾದರೂ ಚಿಂತೆಯಿಲ್ಲ” ಎಂದನು. ಶಿವನು ‘ಹಾಗೇ ಆಗಲಿ’ ಎಂದು ಹರಸಿ ಅದೃಶ್ಯನಾದನು.

ಸ್ವಲ್ಪ ಕಾಲದ ನಂತರ ಮರುದಾವತಿಯು ಒಂದು ಗಂಡು ಮಗುವಿಗೆ ಜನ್ಮವಿತ್ತಳು. ಮೃಕಂಡ ಋಷಿ ದಂಪತಿಗಳು ಸಂತೋಷಪಟ್ಟರು. ಬ್ರಹ್ಮದೇವನು ಪ್ರತ್ಯಕ್ಷವಾಗಿ ಮಗುವಿಗೆ ಮಾರ್ಕಂಡೇಯ ಎಂದು ಹೆಸರಿಡಿರಿ ಎಂದು ಹೇಳಿ ಮುನಿ ದಂಪತಿಗಳನ್ನು ಹರಸಿದನು. ಮಾರ್ಕಂಡೇಯನು ತಂಬಾ ಒಳ್ಳೆಯ ಹುಡುಗನೂ ಅತೀವ ಶಿವ ಭಕ್ತಿಯುಳ್ಳವನೂ ಆಗಿದ್ದನು. ಚಿಕ್ಕಂದಿನಿಂದಲೇ ಅವನಿಗೆ ವೇದಗಳು ಕಂಠಪಾಠವಾಗಿದ್ದವು.

ದಿನಗಳು ಕಳೆಯುತ್ತಾ ಅವನ ಹದಿನಾರನೆಯ ವಯಸ್ಸು ಸಮೀಪಿಸಿತು. ಅವನ ಹೆತ್ತವರು ಅವನ ಮೃತ್ಯುವು ಸಮೀಪಿಸುತ್ತಿರುವುದರ ನೆನಪಿನಿಂದ ತುಂಬಾ ಚಿಂತಿತರಾದರು. ಅವರ ಚಿಂತೆಯನ್ನು ಕಂಡು ಬಾಲಕನಾದ ಮಾರ್ಕಂಡೇಯನು ನಿಮ್ಮ ಚಿಂತೆಗೇನು ಕಾರಣ ನನಗೂ ತಿಳಿಸಿರಿ, ಎನ್ನಲು ಅವರು ತಮ್ಮ ದುಃಖದ ಕಾರಣವನ್ನು ವಿವರಿಸಿದರು. ಮಾರ್ಕಂಡೇಯನು ಅವರನ್ನು ಸಮಾಧಾನಪಡಿಸುತ್ತ “ನೀವು ಚಿಂತಿಸಬೇಡಿ. ನಾನು ಶಿವನನ್ನು ಮೆಚ್ಚಿಸಿ ಅವನ ಅನುಗ್ರಹದಿಂದ ಯಮನನ್ನು ಜಯಿಸಿ ಹಿಂದಿರುಗುತ್ತೇನೆ, ನಿಮ್ಮ ಆಶೀರ್ವಾದ ನನ್ನ ಮೇಲಿರಲಿ” ಎಂದು ತಂದೆ-ತಾಯಿಯ ಆಶೀರ್ವಾದವನ್ನು ಪಡೆದು ಕಾಶಿಗೆ ಹೋಗಿ ಭಕ್ತಿಯಿಂದ ಶಿವನನ್ನು ಪೂಜಿಸಿದನು. ಅವನ ಭಕ್ತಿಗೆ ಶಿವನು ಪ್ರತ್ಯಕ್ಷನಾಗಿ “ಮಗು, ನೀನು ಯಮನಿಗೆ ಭಯಪಡದಿರು, ನಿನ್ನ ಪೂಜೆಯನ್ನು ಮುಂದುವರಿಸು” ಎಂದು ಅದೃಶ್ಯನಾದನು.

ಶಿವಪೂಜೆಯಲ್ಲಿ ನಿರತನಾದ ಮಾರ್ಕಂಡೇಯನ ಮೃತ್ಯುವು ಸಮೀಪಿಸಿತು. ಆಗ ಅವನ ಬಳಿ ಬಂದ ಯಮದೂತರು ಹೆದರಿ ಹಿಂದಿರುಗಿ ಯಮಧರ್ಮರಾಯನ ಬಳಿ ‘ಸ್ವಾಮಿ ಮಾರ್ಕಂಡೇಯನ ಬಳಿ ಹೋಗಲು ನಮಗೆ ತುಂಬಾ ಹೆದರಿಕೆಯಾಗುತ್ತಿದೆ” ಎಂದರು. ಆಗ ಯಮನು ತನ್ನ ಮಂತ್ರಿಯಾದ ಕಾಲನನ್ನು ಕರೆದು ಮಾರ್ಕಂಡೇಯನ ಪ್ರಾಣವನ್ನು ತೆಗೆದುಕೊಂಡು ಬರಲು ತಿಳಿಸಿದನು. ಆದರೆ ಆತನಿಂದಲೂ ಶಿವಪೂಜಾನಿರತ ಮಾರ್ಕಂಡೇಯನ ಪ್ರಾಣಹರಣ ಮಾಡಲು ಆಗಲಿಲ್ಲ. ಆಗ ಯಮನೇ ಬಂದು ಕೋಪದಿಂದ, ‘ಮಾರ್ಕಂಡೇಯಾ, ನನ್ನೊಂದಿಗೆ ಬಾ’ ಎನ್ನಲು ಮಾರ್ಕಂಡೇಯನು “ನಾನು ಬರುವುದಿಲ್ಲ” ಎಂದು ತನ್ನ ಪೂಜೆಯನ್ನು ಮುಂದುವರಿಸಿದಾಗ ಯಮನು ಮೃತ್ಯುಪಾಶವನ್ನು ಎಸೆದನು. ಆ ಪಾಶವು ಮಾರ್ಕಂಡೇಯ ಪೂಜಿಸುತ್ತಿದ್ದ ಶಿವಲಿಂಗದ ಮೇಲೆ ಬಿತ್ತು. ಶಿವಲಿಂಗದಿಂದ ಶಿವನು ಪ್ರತ್ಯಕ್ಷನಾಗಿ ಯಮನನ್ನು ತಡೆದನು. ಮಾರ್ಕಂಡೇಯನು ಶಿವನನ್ನು ಸ್ತುತಿಸತೊಡಗಿದನು. ಅವನ ಭಕ್ತಿಗೆ ಮೆಚ್ಚಿ ಶಿವನು ‘ನೀನು ಎಂದೆಂದೂ ೧೬ ವರ್ಷದ ಚಿರಂಜೀವಿಯಾಗಿ ಬಾಳು’ ಎಂದು ಆಶೀರ್ವದಿಸಿದನು.

ಮಕ್ಕಳೇ, ಇದರಿಂದ ಏನು ಕಲಿಯಬಹುದು? ಪರಮಾತ್ಮನಲ್ಲಿ ಅನನ್ಯ ಭಕ್ತಿಯಿಂದ ಪ್ರೀತಿಯಿಟ್ಟು ಪೂಜಿಸಿದರೆ ಮೃತ್ಯುವಿಗೂ ಹೆದರಬೇಕೆಂದಿಲ್ಲ, ಅಲ್ಲವೇ! ಮಕ್ಕಳೇ, ನಾವೂ ಮಾರ್ಕಂಡೇಯನಂತೆ ಭಕ್ತಿಯಿಂದ ಗುರುಗಳನ್ನು ಒಲಿಸಿಕೊಳ್ಳೋಣ.
– ಸೌ. ತಾರಾ, ಮೂಲ್ಕಿ