ಮಹಾಬಲಿ ಹನುಮಂತನಿಂದ ಭೀಮನ ಗರ್ವ-ಭಂಗ

ಮಿತ್ರರೇ, ಈ ಕಥೆ ಮಹಾಭಾರತ ಕಾಲದ್ದಾಗಿದೆ. ನಮಗೆಲ್ಲ ಗೊತ್ತಿರುವಂತೆ, ಮಹಾಭಾರತ ಕಾಲದಲ್ಲಿ ರಾಜಾ ಪಾಂಡುವಿಗೆ 5 ಜನ ಪುತ್ರರಿದ್ದರು. ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವ. ಈ ಐವರನ್ನು ಪಾಂಡವರು ಎನ್ನುತ್ತಾರೆ. ಪಾಂಡವರಲ್ಲಿ ಭೀಮನು ಎಲ್ಲರಿಗಿಂತ ಶಕ್ತಿಶಾಲಿಯಾಗಿದ್ದನು. ಅವನಿಗೆ ತನ್ನ ಶಕ್ತಿಯ ಮೇಲೆ ಬಹಳ ಗರ್ವವಿತ್ತು. ಅವನಿಗೆ ಈ ಸಂಪೂರ್ಣ ಜಗತ್ತಿನಲ್ಲಿ ತನ್ನಷ್ಟು ಶಕ್ತಿಶಾಲಿ ಯಾರೂ ಇಲ್ಲವೆಂದು ಅನಿಸುತ್ತಿತ್ತು. ಈ ಕಾರಣದಿಂದ ಅವನು ತನ್ನನ್ನು ಎಲ್ಲರಿಗಿಂತ ಶ್ರೇಷ್ಠನೆಂದು ತಿಳಿದುಕೊಂಡಿದ್ದನು.

ಈ ಗರ್ವದ ಕಾರಣದಿಂದ ಅವನಿಗೆ ಹಾನಿಯಾಗುತ್ತಿತ್ತು. ಈ ವಿಷಯ ಭಗವಾನ ಶ್ರೀಕೃಷ್ಣನಿಗೆ ತಿಳಿದಿತ್ತು. ಭೀಮನ ಗರ್ವವನ್ನು ಇಳಿಸಲು ಭಗವಂತನು ಒಂದು ಲೀಲೆಯನ್ನು ರಚಿಸಿದನು. ಒಂದು ದಿನ ಭೀಮನು ಅರಣ್ಯದಲ್ಲಿ ಹೋಗುತ್ತಿದ್ದನು. ಆಗ ಭೀಮನ ಕಾಲು ಯಾವುದೋ ವಸ್ತುವಿಗೆ ತಗುಲಿತು. ಭೀಮನು ಆ ವಸ್ತು ಯಾವುದೆಂದು ತಿಳಿಯಲು ಪ್ರಯತ್ನಿಸಿದಾಗ, ಅವನಿಗೆ ಅದು ಒಂದು ವಾನರನ ಬಾಲವೆಂದು ಕಂಡು ಬಂತು. ಅವನು ಆ ಬಾಲವನ್ನು ಹಿಡಿದು ಹಿಂದೆ ತಿರುಗಿ ನೋಡಿದಾಗ ಅವನಿಗೆ ಒಂದು ಮರದ ಕೆಳಗೆ ವೃದ್ಧ ವಾನರ ಕುಳಿತಿರುವುದು ಕಂಡು ಬಂತು. ಅದೇ ವಾನರನ ಬಾಲವು ಅವನು ಹಾದು ಹೋಗುವ ದಾರಿಯಲ್ಲಿ ಅಡ್ಡಲಾಗಿ ಬಿದ್ದಿತ್ತು. ಆ ವಾನರನನ್ನು ನೋಡಿ ಭೀಮನು ಗರ್ವದಿಂದ ‘ಏ ವಾನರ (ಕಪಿಯೇ), ನನಗೆ ಮುಂದೆ ಹೋಗಬೇಕಾಗಿದೆ, ನಿನ್ನ ಬಾಲವನ್ನು ನನ್ನ ಮಾರ್ಗದಿಂದ ಆಚೆ ಸರಿಸು’ ಎಂದು ಹೇಳಿದನು.

ವಾನರ (ಆ ವೃದ್ಧ ಕಪಿಯು) ನಿಧಾನವಾಗಿ ಕತ್ತನ್ನು ತಿರುಗಿಸಿ ಭೀಮನನ್ನು ನೋಡಿ,’ನಾನು ಬಹಳ ಮುದುಕನಾಗಿದ್ದೇನೆ ಮತ್ತು ನನ್ನ ಆರೋಗ್ಯವೂ ಸರಿಯಿಲ್ಲ. ನನ್ನಲ್ಲಿ ನನ್ನ ಬಾಲವನ್ನು ಎತ್ತಿಕೊಳ್ಳುವಷ್ಟು ಕೂಡ ಶಕ್ತಿಯಿಲ್ಲ. ನೀವಂತೂ ಬಹಳ ಶಕ್ತಿಶಾಲಿಯಾಗಿ ಕಾಣಿಸುತ್ತಿದ್ದೀರಿ. ನಾನು ನಿಮ್ಮಲ್ಲಿ ವಿನಂತಿಸುತ್ತೇನೆ. ದಯವಿಟ್ಟು ನೀವೇ ನನ್ನ ಈ ಬಾಲವನ್ನು ದಾರಿಯಿಂದ ತೆಗೆಯಿರಿ ಮತ್ತು ಮುಂದುವರಿಸಲು ದಾರಿ ಮಾಡಿಕೊಳ್ಳಿರಿ.’ ಎಂದು ಹೇಳಿತು. ಈ ಮಾತನ್ನು ಕೇಳಿ ಭೀಮನಿಗೆ ಬಹಳ ಸಿಟ್ಟು ಬಂದಿತು. ಅವನು ‘ಎಲೈ ವಾನರನೇ, ನಾನು ನಿನ್ನ ಗಲೀಜಾದ ಬಾಲವನ್ನು ನನ್ನ ಕೈಯಿಂದ ಮುಟ್ಟುವುದಿಲ್ಲ. ಬೇಗನೆ ನಿನ್ನ ಬಾಲವನ್ನು ನನ್ನ ದಾರಿಯಿಂದ ಸರಿಸು’ ಎಂದು ಹೇಳಿದನು.

ವಾನರನು ‘ಅಣ್ಣಾ, ನಾನಂತೂ ಬಹಳ ನಿಶ್ಯಕ್ತನಾಗಿದ್ದೇನೆ. ನನ್ನ ಬಾಲವನ್ನು ಸರಿಸಲು ನನಗೆ ಸಾಧ್ಯವಿಲ್ಲ. ದಯವಿಟ್ಟು ನೀವು ನಿಮ್ಮ ಗದೆಯಿಂದಲೇ ನನ್ನ ಬಾಲವನ್ನು ಸರಿಸಿ’ ಎಂದು ಹೇಳಿತು. ಇದನ್ನು ಕೇಳಿ ಭೀಮನು ‘ಒಂದು ವೇಳೆ ನನ್ನ ಗದೆಯಿಂದ ನಿನ್ನ ಬಾಲ ತುಂಡಾದರೆ?’ ಎಂದು ಕೇಳಿದನು. ಅದಕ್ಕೆ ವಾನರನು ನಕ್ಕು ‘ಒಂದು ವೇಳೆ ನನ್ನ ಬಾಲವನ್ನು ಸರಿಸುವಾಗ ನಿನ್ನ ಗದೆ ತುಂಡಾದರೆ?’ ಎಂದು ಕೇಳಿತು. ವಾನರನ ಈ ಮಾತನ್ನು ಕೇಳಿ ಭೀಮನಿಗೆ ಇನ್ನಷ್ಟು ಸಿಟ್ಟು ಬಂತು ಮತ್ತು ಕೆಂಡಮಂಡಲವಾದನು. ಅವನಿಗೆ ಈ ವಾನರ ಅವನನ್ನು ತಮಾಷೆ ಮಾಡುತ್ತಿರುವಂತೆ ಅನಿಸಿತು. ಗರ್ವದ ಕಾರಣ ಭೀಮನಿಗೆ ಅವನ ಸಿಟ್ಟನ್ನು ವಶದಲ್ಲಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಮತ್ತು ಸಿಟ್ಟಿನಲ್ಲಿ ಗದೆಯಿಂದಲೇ ಬಾಲವನ್ನು ಸರಿಸಲು ಪ್ರಯತ್ನಿಸತೊಡಗಿದನು. ಆದರೆ ಬಾಲವು ಸ್ವಲ್ಪವೂ ಅಲುಗಾಡಲಿಲ್ಲ. ಭೀಮನು ತನ್ನ ಪೂರ್ಣ ಶಕ್ತಿಯನ್ನು ಉಪಯೋಗಿಸಿ ಬಾಲವನ್ನು ಸರಿಸಲು ಪ್ರಯತ್ನಿಸಿದನು. ಪ್ರಯತ್ನಿಸುತ್ತ, ಪ್ರಯತ್ನಿಸುತ್ತ ಭೀಮನು ಸೋತು ಹೋದನು. ಆದರೆ ಬಾಲವು ಸ್ವಲ್ಪವೂ ಅಲುಗಾಡಲಿಲ್ಲ. ಬಾಲ ಸರಿಸುವಾಗ ಭೀಮನ ಗದೆಯೂ ಈಗ ಆ ವಾನರನ ಬಾಲದ ಕೆಳಗೆ ಸಿಕ್ಕಿ ಬಿದ್ದಿತು. ಬಾಲವನ್ನು ಸರಿಸುವುದು ಹೋಗಲಿ ಈಗ ಅವನಿಗೆ ತನ್ನ ಗದೆಯನ್ನು ಬಿಡಿಸಿಕೊಳ್ಳುವುದೂ ಕಠಿಣವಾಯಿತು.

ಭೀಮನಿಗೆ ತನ್ನ ತಪ್ಪಿನ ಅರಿವಾಯಿತು. ಈ ವಾನರ ಸಾಧಾರಣ ವಾನರವಲ್ಲ ಎಂದು ಅವನಿಗೆ ತಿಳಿಯಿತು. ಏಕೆಂದರೆ ತನ್ನ ಪೂರ್ಣ ಶಕ್ತಿಯನ್ನು ಉಪಯೋಗಿಸಿದರೂ ಅವನಿಗೆ ಬಾಲವನ್ನು ಸರಿಸಲು ಸಾಧ್ಯವಾಗಲಿಲ್ಲ, ಭೀಮನು ತಕ್ಷಣ ಆ ವಾನರನ ಎದುರಿಗೆ ಕೈಜೋಡಿಸಿ ಅವನ ಚರಣಗಳಿಗೆ ಎರಗಿದನು ಮತ್ತು ವಾನರನನ್ನು ‘ಮಹಾಶಯ, ನೀವು ಸಾಧಾರಣ ವಾನರವಲ್ಲ. ನೀವು ಯಾರು? ದಯವಿಟ್ಟು ನೀವು ನಿಮ್ಮ ಪರಿಚಯವನ್ನು ಹೇಳಿ’ ಎಂದು ಕೇಳಿದನು.

ವಾನರನು ‘ನಾನು ಶ್ರೀರಾಮನ ಭಕ್ತ ಹನುಮಂತ’ ಎಂದು ತನ್ನ ಪರಿಚಯವನ್ನು ಹೇಳಿದನು. ಆಗ ಭೀಮನ ಎದುರಿಗೆ ಹನುಮಂತನ ವಿಶಾಲ ರೂಪ ಪ್ರಕಟವಾಯಿತು. ಭೀಮನು ಹನುಮಂತನಿಗೆ ನಮಸ್ಕರಿಸಿದನು ಮತ್ತು ‘ಕ್ಷಮಿಸಿ ಮಹಾಬಲಿ, ನಾನು ನಿಮ್ಮನ್ನು ಗುರುತಿಸಲಿಲ್ಲ, ನನಗೆ ನನ್ನ ಶಕ್ತಿಯ ಬಗ್ಗೆ ಗರ್ವವಿತ್ತು. ನೀವು ನನ್ನ ಗರ್ವವನ್ನು ನಷ್ಟಗೊಳಿಸಿದಿರಿ’, ಎಂದು ಹೇಳಿದನು. ಆಗ ಹನುಮಂತನು ಭೀಮನನ್ನು ಕ್ಷಮಿಸಿ ಅವನನ್ನು ಆಶೀರ್ವದಿಸಿದನು.

ಮಿತ್ರರೇ, ಈ ಕಥೆಯಿಂದ ನಾವು ಏನು ಕಲಿತೆವು? ನಾವು ಎಂದಿಗೂ ನಮ್ಮಲ್ಲಿರುವ ಯಾವುದೇ ವಿಷಯದ ಕುರಿತು ಎಂದಿಗೂ ಗರ್ವ ಇಟ್ಟುಕೊಳ್ಳಬಾರದು. ಗರ್ವ ಪಡುವವರು ಭಗವಂತನಿಗೆ ಇಷ್ಟವಾಗುವುದಿಲ್ಲ. ಭೀಮನಿಗೂ ಗರ್ವವಾಗಿತ್ತು. ಭಗವಂತನು ಹನುಮಂತನ ಮಾಧ್ಯಮದಿಂದ ಅವನ ಗರ್ವವನ್ನು ಇಳಿಸಬೇಕಾಯಿತು. ಮಿತ್ರರೇ ನೀವೂ ಈಗ ತಿಳಿದುಕೊಂಡಿದ್ದೀರಲ್ಲವೇ, ಭಗವಂತನ ಶಕ್ತಿಯ ಎದುರಿಗೆ ನಮ್ಮ ಶಕ್ತಿ ಏನೂ ಇಲ್ಲ. ‘ನಮ್ಮಲ್ಲಿರುವ ಗುಣಗಳು, ಭಗವಂತನ ಕೃಪೆಯಿಂದಲೇ ಇವೆ’ ಎಂದು ಮರೆಯಬೇಡಿ ಮತ್ತು ಭಗವಂತನ ಚರಣಗಳಲ್ಲಿ ಸದೈವ ಕೃತಜ್ಞರಾಗಿರಿ. ನಾವು ಎಂದಿಗೂ ಯಾರೊಂದಿಗೂ ಉದ್ಧಟತನದಿಂದ ಮಾತನಾಡಬಾರದು. ಯಾವಾಗಲೂ ನಮ್ರತೆಯಿಂದ ಮಾತನಾಡಬೇಕು.

ಹಾಗಿದ್ದರೆ ಇಂದಿನಿಂದ ನಾವು ನಮ್ಮಲ್ಲಿ ಯಾವುದೇ ಗುಣಗಳಿದ್ದರೂ, ಅದು ಭಗವಂತನ ಕೃಪೆಯಿಂದಲೇ ಇದೆ, ಭಗವಂತನೇ ನನ್ನಲ್ಲಿ ಆ ಗುಣವನ್ನು ನಿರ್ಮಿಸಿದ್ದಾನೆ ಎಂದು ವಿಚಾರ ಮಾಡೋಣ. ಒಂದು ವೇಳೆ ನಾವು ನಮ್ಮ ಕೆಟ್ಟ ಗುಣಗಳನ್ನು, ದೋಷಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿದರೆ, ಭಗವಂತನು ನಮ್ಮಲ್ಲಿ ಇನ್ನು ಬಹಳಷ್ಟು ಗುಣಗಳ ನಿರ್ಮಾಣ ನಿರ್ಮಿಸುತ್ತಾನೆ.

Leave a Comment