ಮಕ್ಕಳಲ್ಲಿ ಉತ್ತಮ ರೂಢಿಗಳನ್ನು ಬೆಳೆಸಲು ಮನೆಯಲ್ಲಿ ಮಾಡಬಹುದಾದ ಮಾನಸೋಪಚಾರ

’ಜಗತ್ತು ಒಂದು ರಂಗಭೂಮಿ’ – ಶೇಕ್ಸಸ್ಪೀಯರನ ಪ್ರಸಿದ್ಧ ವಾಕ್ಯದ ಸಂದರ್ಭದಲ್ಲಿ ಓರ್ವ ಮಾನಸಶಾಸ್ತ್ರಜ್ಞರು ’ಮನೆಯೂ ಒಂದು ರಂಗಭೂಮಿಯಾಗಿದೆ’ ಎಂದು ಹೇಳುತ್ತಾರೆ. ಇಲ್ಲಿ ಮಕ್ಕಳು ಯಾವ ಭೂಮಿಕೆಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಕಲಿಯುತ್ತಾರೆ. ಅವರ ಮಾನಸಿಕ ಆರೋಗ್ಯವನ್ನು ರೂಪಿಸುವಲ್ಲಿ, ಮನೆಯ ವಾತಾವರಣ ಹಾಗೂ ಮನೆಯಲ್ಲಿರುವವರು, ವಿಶೇಷವಾಗಿ ಮಕ್ಕಳ ತಂದೆ ತಾಯಿಯರು, ಕಾರಣರಾಗಿರುತ್ತಾರೆ. ಓರ್ವ ಮಾನಸೋಪಚಾರ ತಜ್ಞರು, ’ಮಕ್ಕಳ ಸಮಸ್ಯೆಯೆಂದರೆ, ಸಮಸ್ಯೆಯಿಂದ ಕೂಡಿದ ತಂದೆ ತಾಯಿಯಂದಿರು!’ ಎಂದು ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಮಕ್ಕಳ ಪಾಲಕರಿಗೇ ಮಾನಸೋಪಚಾರದ ಹೆಚ್ಚಿನ ಅವಶ್ಯಕತೆಯಿರುತ್ತದೆ. ತಂದೆ ತಾಯಿ ಹಾಗೂ ಮನೆಯಲ್ಲಿರುವ ಇತರರ ತಪ್ಪು ವಿಚಾರಸರಣಿ ಹಾಗೂ ವರ್ತನೆ, ಅಂತೆಯೇ ತಪ್ಪು ಭಾವನೆಯ ಪರಿಣಾಮವು ತಿಳಿದೋ ತಿಳಿಯದೆಯೋ ಮಕ್ಕಳ ಮನಸ್ಸಿನ ಮೇಲೆ ಆಗುತ್ತಿರುತ್ತದೆ. ಮಕ್ಕಳ ಮೇಲೆ ಮಾನಸೋಪಚಾರವನ್ನು ಮಾಡುವ ಪ್ರಮೇಯ ಬಾರದಿರಲು ಪ್ರತಿಬಂಧಕವೆಂಬಂತೆ ತಂದೆ ತಾಯಿಯರ ವ್ಯಕ್ತಿತ್ವವು ಉತ್ತಮವಾಗಿರುವುದು ಅವಶ್ಯಕವಾಗಿರುತ್ತದೆ. ಎಂದಿನಂತೆ ಮಕ್ಕಳೊಂದಿಗೆ ವರ್ತಿಸುವಾಗ, 'ಮನೆಯಲ್ಲಿ ಮಾನಸೋಪಚಾರದ' ದೃಷ್ಟಿಯಿಂದ ಕೆಲವು ನಿಯಮಗಳನ್ನು ಪಾಲಿಸುವುದು ಅವಶ್ಯಕವಾಗಿರುತ್ತದೆ.

ಮಕ್ಕಳಿಗೆ ಪ್ರೀತಿ ಹಾಗೂ ಆಧಾರದ ಅವಶ್ಯಕತೆಯಿರುವುದು

ತಂದೆ ತಾಯಿಯರು ಮಕ್ಕಳ ಮನಸ್ಸಿನಲ್ಲಿ ’ಅಪ್ಪ ಅಮ್ಮ ನನ್ನನ್ನು ಬಹಳ ಪ್ರೀತಿಸುತ್ತಾರೆ, ಅವರಿಗೆ ನಾನು ಬೇಕು ಹಾಗೂ ನನಗೆ ಅವರ ಆಧಾರವಿದೆ' ಎಂಬ ಭಾವನೆಗಳು ನಿರ್ಮಾಣವಾಗುವಂತೆ ವರ್ತಿಸಬೇಕು, ಉದಾ : ಆಗಾಗ ಅವರನ್ನು ಹತ್ತಿರ ಕರೆದುಕೊಳ್ಳುವುದು, ಅವರನ್ನು ಒಬ್ಬರೇ ಬಿಟ್ಟು ಹೆಚ್ಚಿನ ಸಮಯ ಮನೆಯ ಹೊರಗೆ ಇರದಿರುವಂತಹ ಕೃತಿಗಳನ್ನು ಮಾಡಬೇಕು. ಒಂದಕ್ಕಿಂತಲೂ ಹೆಚ್ಚಿನ ಮಕ್ಕಳಿದ್ದರೆ ಎಡ ಬಲ ಎಂಬಂತೆ ಮಾಡಬಾರದು. ಎರಡು ಮಕ್ಕಳ ನಡುವೆ ೩ ವರ್ಷಕ್ಕಿಂತಲೂ ಹೆಚ್ಚಿನ ಅಂತರವಿದ್ದರೆ ಹಿರಿಯ ಮಗುವಿನ ಕಡೆಗೆ ಹೆಚ್ಚಿನ ಗಮನ ಕೊಡಬೇಕು.

ತಂದೆ ತಾಯಿಯರು ಮಕ್ಕಳ ಎದುರು
ಜಗಳಮಾಡಿದರೆ ಅವರಿಗೆ ನಿರಾಧಾರವೆನಿಸುವುದು

ತಂದೆ ತಾಯಿಯರು ಮಕ್ಕಳ ಎದುರು ಜಗಳ ಮಾಡಬಾರದು. ಚಿಕ್ಕ ಮಕ್ಕಳಿಗೆ ’ಮನೆಯ ವಾತಾವರಣವು ಕೆಟ್ಟಿದೆ ಎಂಬುದರ ಅರಿವು ಬೇಗ ಆಗುತ್ತದೆ ಹಾಗೂ ಅವರ ಮನಸ್ಸಿನಲ್ಲಿ ನಮಗೆ ತಂದೆ ತಾಯಿಯರ ಆಧಾರ ದೊರೆಯುವುದೇ ಎಂಬ ಶಂಕೆಯು ನಿರ್ಮಾಣವಾಗುತ್ತದೆ.

ಪಾಲಕರೇ, ಮಕ್ಕಳಿಗೆ ಶಿಸ್ತನ್ನು ಕಲಿಸಲು ಆಗಾಗ ಶಿಕ್ಷಿಸುವುದೂ ಅವಶ್ಯಕ !

ಮಕ್ಕಳಿಗೆ ಪ್ರೀತಿಯಿಂದ ಶಿಸ್ತು ಕಲಿಸಬೇಕು; ಆದರೆ ಶಿಸ್ತಿನ ವಿಪರ್ಯಾಸವಾಗಲು ಬಿಡಬಾರದು. ವಿಪರ್ಯಾಸ ನಿರ್ಮಾಣವಾದರೆ ಸಮಸ್ಯೆಯು ನಿರ್ಮಾಣವಾಯಿತೆಂದೇ ತಿಳಿಯಬೇಕು.

ತಪ್ಪಿನ ಅರಿವಾಗಲು ತಕ್ಷಣ ಶಿಕ್ಷಿಸುವುದರ ಅವಶ್ಯಕತೆ : ಮಕ್ಕಳಿಂದ ತಪ್ಪುಗಳು ನಡೆಯುತ್ತಿದ್ದರೆ ಅವರಿಗೆ ತಕ್ಷಣ ಅದರ ಅರಿವು ಮಾಡಿಕೊಟ್ಟು ಶಿಕ್ಷೆ ನೀಡಬೇಕು. ಆ ಸಮಯದಲ್ಲಿ ತಾಯಿಯು ’ಇರು, ಸಂಜೆ ನಿನ್ನ ಅಪ್ಪ ಬಂದಾಗ ಅವರಿಗೆ ನಿನ್ನ ಬಗ್ಗೆ ಹೇಳುತ್ತೇನೆ’ ಎಂದರೆ ಉಪಯೋಗವಿಲ್ಲ. ತಂದೆಯವರು ಮನೆಗೆ ಬಂದಾಗ ತಡಮಾಡಿ ಕೊಟ್ಟ ಶಿಕ್ಷೆಯಿಂದ ಅವರ ಮನಸ್ಸಿನಲ್ಲಿ ’ತಪ್ಪು ಎಂದರೆ ಶಿಕ್ಷೆ’ ಎಂಬ ಸಮೀಕರಣವು ನಿರ್ಮಾಣವಾಗುವುದಿಲ್ಲ ಹಾಗೂ ಮಕ್ಕಳು ಅದೇ ತಪ್ಪನ್ನು ಪುನಃ ಪುನಃ ಮಾಡುತ್ತಿರುತ್ತಾರೆ.

ಶಿಕ್ಷೆಯಲ್ಲಿ ಸಾತತ್ಯತೆಯಿರಬೇಕು : ಒಮ್ಮೆ ತಪ್ಪಿಗೆ ಶಿಕ್ಷೆ ನೀಡುವುದು ಹಾಗೂ ಇನ್ನೊಮ್ಮೆ ಶಿಕ್ಷೆ ನೀಡದಿರುವುದು ಹೀಗೆ ಮಾಡಬಾರದು.

ಶಿಕ್ಷೆಯಲ್ಲಿ ತಾರತಮ್ಯ ಬೇಡ : ಶಿಕ್ಷೆಯ ಸ್ವರೂಪ ಹಾಗೂ ಅದನ್ನು ಕೊಡಬೇಕೇ ಎಂಬುದರ ಬಗ್ಗೆ ತಂದೆ ತಾಯಿ ಹಾಗೂ ಮನೆಯಲ್ಲಿರುವ ಇತರರ ನಡುವೆ ಮತಭೇದವಿದ್ದರೆ, ಒಬ್ಬರು ಶಿಕ್ಷೆ ನೀಡುವಾಗ ಇನ್ನೊಬ್ಬರು ಮಧ್ಯದಲ್ಲಿ ಬರಬಾರದು. ಯಾವುದೇ ಮತಭೇದವಿದ್ದರೆ ಅದನ್ನು ಮಕ್ಕಳು ಇರದಿರುವಾಗ ಚರ್ಚಿಸಬೇಕು, ಇಲ್ಲದಿದ್ದರೆ ಈ ಮತಭೇದವನ್ನು ಕೇಳಿ ಮಕ್ಕಳಲ್ಲಿ ಯಾವುದು ಯೋಗ್ಯ ಹಾಗೂ ಯಾವುದು ಅಯೋಗ್ಯ ಎಂಬುದರ ಗೊಂದಲ ನಿರ್ಮಾಣವಾಗುತ್ತದೆ.

– ಆಧುನಿಕ ವೈದ್ಯೆ (ಡಾ.) ಸೌ. ಕುಂದಾ ಆಠವಲೆ
ಅಧಾರ : ಆಕಾಶವಾಣಿಯ ಕಾರ್ಯಕ್ರಮ, ಕ್ರಿಶ. ೧೯೮೮.

Leave a Comment