ಹೋಳಿ ಹಿಂದಿನ ಪುರಾಣದ ಕಥೆ

ಅ. ಹಿಂದಿನ ಕಾಲದಲ್ಲಿ ಢುಂಢಾ ಅಥವಾ ಢೌಂಢಾ ಹೆಸರಿನ ಒಬ್ಬ ರಾಕ್ಷಸಿಯು ಊರೊಳಗೆ ನುಗ್ಗಿ ಸಣ್ಣ ಮಕ್ಕಳನ್ನು ಪೀಡಿಸುತ್ತಿದ್ದಳು. ಅವಳು ರೋಗಗಳನ್ನು ನಿರ್ಮಿಸುತ್ತಿದ್ದಳು. ಅವಳನ್ನು ಊರಿನಿಂದ ಹೊರಹಾಕಲು ಜನರು ಬಹಳ ಪ್ರಯತ್ನಿಸಿದರು, ಆದರೆ ಅವಳು ಹೋಗಲಿಲ್ಲ. ಕೊನೆಗೆ ಜನರು ಅವಾಚ್ಯ ಮಾತುಗಳಿಂದ ಬೈಯುತ್ತಾ ಶಾಪ ಕೊಟ್ಟದ್ದಲ್ಲದೇ ಎಲ್ಲೆಡೆಯೂ ಬೆಂಕಿಯನ್ನು ಹಚ್ಚಿ ಅವಳನ್ನು ಹೆದರಿಸಿದರು. ಅದರಿಂದಾಗಿ ಅವಳು ಊರಿನ ಹೊರಗೆ ಓಡಿಹೋದಳು. (ಭವಿಷ್ಯಪುರಾಣ)

ಆ.ಉತ್ತರದಲ್ಲಿ ಹೋಳಿಯ ಮೊದಲ ಮೂರು ದಿನ ಬಾಲಕೃಷ್ಣನನ್ನು ತೊಟ್ಟಿಲಿನಲ್ಲಿ ಮಲಗಿಸುತ್ತಾರೆ ಮತ್ತು ಅವನ ಉತ್ಸವವನ್ನು ಆಚರಿಸುತ್ತಾರೆ. ಫಾಲ್ಗುಣ ಹುಣ್ಣಿಮೆಗೆ ಪೂತನಾ ರಾಕ್ಷಸಿಯ ಪ್ರತಿಕೃತಿಯನ್ನು ಮಾಡಿ ಅದನ್ನು ರಾತ್ರಿ ಸುಡುತ್ತಾರೆ.

ಇ.ಒಮ್ಮೆ ಭಗವಾನ ಶಂಕರ ತಪಾಚರಣೆಯಲ್ಲಿ ಮಗ್ನರಾಗಿದ್ದರು. ಅವರು ಸಮಾಧಿಯಲ್ಲಿದ್ದರು. ಆಗ ಮನ್ಮಥನು ಅವರ ಅಂತಃಕರಣದಲ್ಲಿ ಪ್ರವೇಶಿಸಿದನು. 'ನನ್ನನ್ನು ಯಾರು ಚಂಚಲಗೊಳಿಸುತ್ತಿದ್ದಾರೆ’, ಎಂದು ಶಂಕರರು ಕಣ್ಣುಗಳನ್ನು ತೆರೆದರು. ಭಗವಾನ್ ಶಂಕರನ ತಪಸ್ಸಿನ ತೀಕ್ಷ್ಣ ತೀಜಕ್ಕೆ ಮನ್ಮಥನು ಸುಟ್ಟು ಭಸ್ಮವಾದನು!ದಕ್ಷಿಣದಲ್ಲಿನ ಜನರು ಕಾಮದೇವನ ದಹನದ ಈ ಉತ್ಸವವನ್ನು ಆಚರಿಸುತ್ತಾರೆ. ಈ ದಿನದಂದು ಮನ್ಮಥನ ಪ್ರತಿಮೆಯನ್ನು ಮಾಡಿ ಅವನ ದಹನ ಮಾಡುತ್ತಾರೆ. ಈ ಮನ್ಮಥನನ್ನು ಗೆಲ್ಲುವ ಕ್ಷಮತೆಯು ಹೋಳಿಯಲ್ಲಿದೆ, ಅದಕ್ಕಾಗಿಯೇ ಹೋಳಿ ಉತ್ಸವವಿದೆ.

ಈ.ಹಿಂದೆ ಹಿರಣ್ಯಕಶಿಪು (ಹಿರಣ್ಯಕಶಪು) ಎಂಬ ರಾಕ್ಷಸ ರಾಜನಿದ್ದನು. ತಾನು ಪಡೆದ ವರಗಳ ಆಧಾರದ ಮೇಲೆ ದುರಹಂಕಾರಿ ಹಿರಣ್ಯಕಶಿಪು 'ತಾನೆ ದೇವರೆಂದು' ಮೆರೆಯುತ್ತಿದ್ದನು. ತನ್ನನ್ನೇ ಪೂಜಿಸಬೇಕು ಎಂದು ತ್ರಿಲೋಕದಲ್ಲಿ ಆಜ್ಞೆಯನ್ನು ಹೊರಡಿಸಿದನು. ಆದರೆ ಅವನ ಮಗನಾದ ಪ್ರಹ್ಲಾದನು ಮಹಾನ್ ವಿಷ್ಣು ಭಕ್ತನಾಗಿದ್ದನು! ಇದನ್ನು ಸಹಿಸದ ಹಿರಣ್ಯಕಶಿಪು ಪ್ರಹ್ಲಾದನ ಭಕ್ತಿಯನ್ನು ಮುರಿಯಲು ಅನೇಕ ಪ್ರಯಾಸಗಳನ್ನು ಮಾಡಿ ಕೊನೆಗೆ ಅವನನ್ನು ಮೃತ್ಯುದಂಡವನ್ನು ವಿಧಿಸಿದನು. ಹಿರಣ್ಯಕಶಿಪುವಿನ ಸಹೋದರಿ 'ಹೋಲಿಕಾ' ಎಂಬವಳಿಗೆ ಒಂದು ವಿಶೇಷ ವರವಿತ್ತು, ಅದೇನೆಂದರೆ ಅವಳಿಗೆ ಅಗ್ನಿಸ್ಪರ್ಶವಾಗುತ್ತಿರಲಿಲ್ಲ. ಆದುದರಿಂದ ಒಂದು ದಿನ ಹಿರಣ್ಯಕಶಿಪು, ಅವಳನ್ನು ಒಂದು ಚಿತೆಯ ಮೇಲೆ ಏರಿಸಿ, ಬಾಲಕ ಪ್ರಹ್ಲಾದನನ್ನು ಅವಳ ತೊಡೆಯ ಮೇಲೆ ಕುಳ್ಳಿರಿಸಿ ಆ ಚಿತೆಗೆ ಬೆಂಕಿಯನ್ನು ಹಚ್ಚಿಸಿದನು! ಆದರೆ ಭಗವಾನ್ ವಿಷ್ಣುವಿನ ಧ್ಯಾನದಲ್ಲಿ ಮಗ್ನನಾಗಿದ್ದ ಪ್ರಹ್ಲಾದನ ರಕ್ಷಣೆಗೆ ಧಾವಿಸಿಬಂದ ಭಗವಂತನು, ಹೋಲಿಕಾ ಭಾಸ್ಮವಾಗುವ ಹಾಗೆ ಮಾಡಿ ಪ್ರಹ್ಲಾದನನ್ನು ರಕ್ಷಿಸಿದನು! (ಹೋಲಿಕಾ ದಹನದ ಕಾರಣ ಈ ಹಬ್ಬಕ್ಕೆ ಹೋಳಿ ಎಂಬ ಹೆಸರು ಬಂತು ಎಂದು ಹೇಳುತ್ತಾರೆ)

ಮಕ್ಕಳೇ, ಹೋಳಿ ಹಬ್ಬದ ಬಗ್ಗೆ ನೀವು ಅನೇಕ ಕಥೆಗಳನ್ನು ನೋಡಿದ್ದೀರಿ. ಇವೆಲ್ಲವೂ ಒಂದೇ ತತ್ವವನ್ನು ಹೇಳುತ್ತವೆ, 'ನಾವು ಒಳ್ಳೆಯವರಾಗಿದ್ದರೆ, ಸತ್ಯವಂತರಾಗಿದ್ದರೆ, ದೇವರು ನಮ್ಮ ವಿಜಯವನ್ನು ನಿಶ್ಚಯಿಸುತ್ತಾರೆ' ಎಂದು.

Leave a Comment