ಶ್ರೀರಾಮ ನವಮಿ

ರಾಮನವಮಿಯ ನಿಮಿತ್ತ ಶ್ರೀ ರಾಮನಂತಹ ಗುಣಗಳನ್ನು ಆಳವಡಿಸಿಕೊಂಡು
ಆದರ್ಶ ಮತ್ತು ಆನಂದಮಯ ಜೀವನವನ್ನು ಬಾಳುವ ನಿಶ್ಚಯವನ್ನು ಮಾಡೋಣ

‘ವಿದ್ಯಾರ್ಥಿ ಮಿತ್ರರೇ, ನಿಮ್ಮ ಜೀವನ ಆದರ್ಶ ಮತ್ತು ಆನಂದಮಯವಾಗಬೇಕು ಎಂದು ನಿಮಗೆ ಅನಿಸುವುದಲ್ಲವೇ? ಹೀಗಾಗಲು ನಿಮ್ಮಲ್ಲಿರುವ ರಾವಣರೂಪಿ ದುರ್ಗುಣಗಳನ್ನು ನಾಶ ಮಾಡಿದಲ್ಲಿ ಮಾತ್ರ ನಿಮ್ಮ ಜೀವನ ಶ್ರೀ ರಾಮನಂತೆ ಆದರ್ಶ ಮತ್ತು ಆನಂದಮಯವಾಗುವುದು. ಎಲ್ಲಿಯವರೆಗೆ ನೀವು ನಿಮ್ಮಲ್ಲಿ ಸದ್ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುವುದಿಲ್ಲವೋ ಅಲ್ಲಿಯವರೆಗೆ ಇದು ಸಾಧ್ಯವಾಗುವುದಿಲ್ಲ. ಮಿತ್ರರೇ, ಇಂದು ನಮ್ಮಲ್ಲಿ ಒಂದು ತಪ್ಪು ಕಲ್ಪನೆಯಿದೆ, ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿದ ಕೂಡಲೇ ಮತ್ತು ಅಂಕಪಟ್ಟಿಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ನಮಗೆ ಹೆಸರು ಬಂದರಾಯಿತು. ಇದರಿಂದ ನಾವು ನಿಜವಾದ ಅರ್ಥದಲ್ಲಿ ಸಂತೋಷಗೊಳ್ಳುತ್ತೇವೆಯೇ? ಈ ವಿಷಯವು ವಿಚಾರ ಮಾಡುವಂತಹದ್ದಾಗಿದೆ. ಶ್ರೀ ರಾಮನಂತೆ ಆದರ್ಶ ಮತ್ತು ಆನಂದಮಯವಾದ ಜೀವನವನ್ನು ಬಾಳಲು ಸದ್ಗುಣಗಳ ವಿಕಾಸಕ್ಕಿಂತ ಬೇರೊಂದು ಮಾರ್ಗವಿಲ್ಲ.

ಮಿತ್ರರೇ, ಸದ್ಗುಣಗಳೇ ಜೀವನದ ಅಡಿಪಾಯವಾಗಿವೆ. ಭದ್ರ ಬುನಾದಿಯಿಲ್ಲದಿದ್ದರೆ ಒಂದು ಕಟ್ಟಡವು ಸ್ಥಿರವಾಗಿ ಎದ್ದು ನಿಲ್ಲುತ್ತದೆಯೇ? ನಮ್ಮ ಜೀವನದಲ್ಲಿ ಹಾಗೆಯೇ ಆಗಿದೆ. ಇಂದು ನಮ್ಮೆಲ್ಲರ ಜೀವನದಲ್ಲಿ ಒತ್ತಡ ಮತ್ತು ದು:ಖ ಎದ್ದು ಕಾಣುತ್ತಿದೆ. ಅಧ್ಯಯನವನ್ನು ಮಾಡುವಾಗಲೂ ಒಳ್ಳೆಯ ಅಂಕಗಳನ್ನು ಗಳಿಸುವ ಒತ್ತಡವಿರುವ ಕಾರಣ ಜ್ಞಾನಾರ್ಜನೆಯ ಸಂತೋಷದಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ಕೆಟ್ಟ ಚಟಗಳ ದಾಸರಾಗುತ್ತಿದ್ದರೆ, ಕೆಲವು ವಿದ್ಯಾರ್ಥಿಗಳು ಒಳ್ಳೆಯ ಅಂಕಗಳನ್ನು ಗಳಿಸದೇ ಇರುವ ಕಾರಣದಿಂದ ನಿರಾಶರಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮಿತ್ರರೇ, ನಮ್ಮ ಜೀವನದ ಧ್ಯೇಯ ಇಷ್ಟೇ ಏನು? ಒಳ್ಳೆಯ ಅಂಕಗಳನ್ನು ಗಳಿಸಿದರೆ, ನಮಗೆ ಉತ್ತಮ ಸಂಬಳದ ನೌಕರಿ ದೊರೆಯಬಹುದು. ಆದರೆ, ಆನಂದಮಯ ಜೀವನವನ್ನು ಬಾಳುತ್ತೇವೆ ಎನ್ನುವ ಖಾತರಿಯಿಲ್ಲ. ಇದಕ್ಕಾಗಿ ೧೪ ವರ್ಷಗಳ ಕಾಲ ವನವಾಸದಲ್ಲಿದ್ದಾಗಲೂ ಆನಂದಮಯ ಜೀವನವನ್ನು ಬಾಳಿದ ಶ್ರೀರಾಮನ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಲು ನಿಶ್ಚಯಿಸೋಣ.

ಜೀವನದ ಸೂತ್ರಗಳು,

ಸದ್ಗುಣ : ಆನಂದ ಮತ್ತು ಆದರ್ಶಮಯ ಜೀವನ
ದುರ್ಗುಣ : ದು:ಖ ಮತ್ತು ಒತ್ತಡದಿಂದ ಕೂಡಿದ ಜೀವನ.

ವ್ಯಕ್ತಿ ಮತ್ತು ಸಮಾಜ ಇವರ ಜೀವನದಲ್ಲಿ ದುರ್ಗುಣಗಳ ಪ್ರಾಬಲ್ಯವು ಹೆಚ್ಚಾದರೆ ವ್ಯಕ್ತಿ, ಸಮಾಜ ಮತ್ತು ರಾಷ್ಟ್ರ ದು:ಖಮಯ ಮತ್ತು ಒತ್ತಡಯುಕ್ತ ಜೀವನವನ್ನು ಬಾಳುತ್ತಾರೆ. ಇಂದು ನಮ್ಮೆಲ್ಲರ ಜೀವನದಲ್ಲಿ ಇದೇ ಆಗಿದೆ. ಇದಕ್ಕಾಗಿ ನಾವು ಶ್ರೀರಾಮನ ಆದರ್ಶ ಜೀವನ ಮತ್ತು ನಮ್ಮ ಜೀವನದಲ್ಲಿರುವ ವ್ಯತ್ಯಾಸವನ್ನು ತಿಳಿದುಕೊಳ್ಳೋಣ.

ಆದರ್ಶ ಪುತ್ರ

ಶ್ರೀರಾಮನು ತಂದೆ-ತಾಯಿಯ ಪ್ರತಿಯೊಂದು ಆಜ್ಞೆಯನ್ನು ಪಾಲಿಸುತ್ತಿದ್ದನು. ಅವರ ಆಜ್ಞೆಯನ್ನು ಕೂಡಲೇ ಕಾರ್ಯಗತಗೊಳಿಸುತ್ತಿದ್ದನು. ಆದ್ದರಿಂದಲೇ ನಾವು ಇಂದಿಗೂ ಶ್ರೀರಾಮನನ್ನು ‘ಆದರ್ಶಪುತ್ರ’ನೆಂದು ಕರೆಯುತ್ತೇವೆ.

ಆದರೆ ಇಂದು ನಾವೇನು ನೋಡುತ್ತಿದ್ದೇವೆ? ಮಕ್ಕಳು ತಂದೆ-ತಾಯಿಯರೊಂದಿಗೆ ಉದ್ಧಟತನದಿಂದ ಮಾತನಾಡುತ್ತಾರೆ. ಅವರಿಗೆ ಎದುರುತ್ತರ ನೀಡುತ್ತಾರಲ್ಲದೇ ತಮಗೆ ಎಲ್ಲವೂ ತಿಳಿದಿದೆ ಎನ್ನುವ ರೀತಿಯಲ್ಲಿ ಅಹಂಕಾರದಿಂದ ವರ್ತಿಸುತ್ತಾರೆ. ಇಂದು ತಂದೆ-ತಾಯಿಯವರಿಗೆ ನಮಸ್ಕಾರವನ್ನು ಕೂಡ ಮಾಡುವುದಿಲ್ಲ. ಮಿತ್ರರೇ, ಇದನ್ನು ನಾವು ಆದರ್ಶ ಜೀವನವೆಂದು ಕರೆಯೋಣವೆ? ಇದರಿಂದಾಗಿಯೇ ನಾವು ಇಂದು ದು:ಖಮಯ ಜೀವನ ಜೀವಿಸುತ್ತಿದ್ದೇವೆ. ಶ್ರೀ ರಾಮನ ಜನ್ಮದಿನದಂದು ನಾವು ಶ್ರೀ ರಾಮನಂತೆ ಆದರ್ಶ ಪುತ್ರರಾಗಲು ಪ್ರಯತ್ನಿಸೋಣ. ಮಿತ್ರರೇ, ಇಂತಹ ಪ್ರಯತ್ನವನ್ನು ನೀವೆಲ್ಲರೂ ಮಾಡುವಿರಲ್ಲವೇ?

ಸಂಸ್ಕೃತಿಯೆಂದರೆ ತಂದೆ ತಾಯಿಯವರನ್ನು ಮತ್ತು ಗುರುಹಿರಿಯರನ್ನು ಆದರಿಸುವುದು ಮತ್ತು ವಿಕೃತಿಯೆಂದರೆ ತಂದೆ-ತಾಯಿ ಮತ್ತು ಗುರುಹಿರಿಯರ ಅನಾದರವನ್ನು ಮಾಡುವುದು. ಇದನ್ನು ಗಮನದಲ್ಲಿಟ್ಟುಕೊಳ್ಳಿ.

ಆದರ್ಶ ಬಂಧು

ವಿದ್ಯಾರ್ಥಿ ಮಿತ್ರರೇ, ಆದರ್ಶ ಸಹೋದರರು ಹೇಗಿರಬೇಕು? ಇದರ ಉನ್ನತ ಉದಾಹರಣೆಯೆಂದರೆ ರಾಮ-ಲಕ್ಷ್ಮಣರು. ಶ್ರೀ ರಾಮನು ತನ್ನ ಸಹೋದರ ಲಕ್ಷ್ಮಣನೊಂದಿಗೆ ಪ್ರೇಮಭಾವದಿಂದ ನಡೆದುಕೊಳ್ಳುತ್ತಿದ್ದನು. ಪ್ರತಿಯೊಂದು ಪ್ರಸಂಗದಲ್ಲಿಯೂ ಅವನಿಗೆ ಸಹಾಯ ಹಾಗೂ ಯೋಗ್ಯವಾದ ಮಾರ್ಗದರ್ಶನವನ್ನು ಮಾಡುತ್ತಿದ್ದನು. ಅವರು ಒಬ್ಬರಿಗೊಬ್ಬರು ಬಿಟ್ಟು ಇರುತ್ತಿರಲಿಲ್ಲ.

ಇಂದಿನ ಸಹೋದರರು ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುವುದಿಲ್ಲ, ಯಾವಾಗಲೂ ಜಗಳವಾಡುತ್ತಿರುತ್ತಾರೆ. ಒಬ್ಬರಿಗೊಬ್ಬರು ಉದ್ಧಟತನದಿಂದ ವರ್ತಿಸುತ್ತಿರುತ್ತಾರೆ. ತನ್ನ ಸ್ವಂತ ವಸ್ತುವನ್ನು ಸಹೋದರನಿಗೆ ಕೊಡುವುದಿಲ್ಲ. ಮಿತ್ರರೇ, ಇವರನ್ನು ನಾವು ಆದರ್ಶ ಸಹೋದರರೆನ್ನಬಹುದೇ? ನಾವು ಅನೇಕ ಪದವಿಗಳನ್ನು ಪಡೆಯುತ್ತೇವೆ. ಆದರೆ ನಮ್ಮಲ್ಲಿ ಒಳ್ಳೆಯ ಬದಲಾವಣೆಯನ್ನು ಏಕೆ ಕಾಣಲು ಸಿಗುವುದಿಲ್ಲ? ಇದರ ಕಾರಣವೇನೆಂದರೆ, ಇಂದಿನ ಶಿಕ್ಷಣದಲ್ಲಿ ಮಕ್ಕಳ ವರ್ತನೆಯಲ್ಲಿ ಒಳ್ಳೆಯ ಸುಧಾರಣೆಯನ್ನು ತರುವಂತಹ ವ್ಯವಸ್ಥೆಯಿಲ್ಲ. ಮಿತ್ರರೇ, ಇಂದಿನಿಂದ ನಾವು ಭಕ್ತಿಯನ್ನು ಹೆಚ್ಚಿಸಿ, ದುರ್ಗುಣಗಳನ್ನು ದೂರಗೊಳಿಸಿ ನಮ್ಮಲ್ಲಿ ತಿಳುವಳಿಕೆಯನ್ನು ಹೆಚ್ಚಿಸುವ ನಿಶ್ಚಯವನ್ನು ಮಾಡೋಣ. ಇದೇ ನಿಜವಾದ ರಾಮನವಮಿಯಾಗುವುದು.

ಆದರ್ಶ ಮಿತ್ರ

ವಿದ್ಯಾರ್ಥಿ ಮಿತ್ರರೇ, ಶ್ರೀರಾಮ ಒಬ್ಬ ಆದರ್ಶ ಮಿತ್ರನಾಗಿದ್ದನು. ಅವನು ಸುಗ್ರೀವ ಮತ್ತು ವಿಭೀಷಣ ಇಬ್ಬರಿಗೂ ಅವರ ಸಂಕಟದ ಸಮಯದಲ್ಲಿ ಸಹಾಯ ಮಾಡಿದನು. ಸಹಾಯ ಮಾಡಿದ ಮೇಲೆ ಅವರಿಂದ ಯಾವುದೇ ರೀತಿಯ ಅಪೇಕ್ಷೆಯನ್ನು ಮಾಡಲಿಲ್ಲ.

ಇಂದಿನ ಮಿತ್ರರು ಈ ರೀತಿ ಇದ್ದಾರೆಯೇ? ನನಗೇನಾದರೂ ಕೊಟ್ಟರೆ ಮಾತ್ರ ನಾನು ಸಹಾಯ ಮಾಡುತ್ತೇನೆ ಎನ್ನುವಂತಹ ವರ್ತನೆ ಮಕ್ಕಳಲ್ಲಿ ಕಂಡು ಬರುತ್ತಿದೆ. ಅಂದರೆ ಸ್ನೇಹವೂ ಕೂಡ ಅಪೇಕ್ಷೆ ಹಾಗೂ ಸ್ವಾರ್ಥದಿಂದ ಕೂಡಿರುತ್ತದೆ. ಮಿತ್ರರೇ, ಎಲ್ಲಿ ಸ್ವಾರ್ಥ ಇರುವುದೋ ಅಲ್ಲಿ ನೈಜ ಸ್ನೇಹ ಸಾಧ್ಯವೇ ಇಲ್ಲ. ಇಂದು ನಮಗೆ ಸಮಾಜದಲ್ಲಿ ಎಲ್ಲೆಡೆ ಸ್ವಾರ್ಥವೇ ಕಂಡು ಬರುತ್ತದೆ. ಇದರಿಂದಲೇ ಪ್ರತಿಯೊಬ್ಬ ವ್ಯಕ್ತಿಯೂ ದು:ಖಿತನಾಗಿದ್ದಾನೆ. ಆದ್ದರಿಂದಲೇ ಶ್ರೀರಾಮನವಮಿಯ ಕಾರಣದಿಂದ ನಾವು ನಿರಪೇಕ್ಷ ಭಾವದಿಂದ ಸ್ನೇಹವನ್ನು ಮಾಡುವುದು ಮತ್ತು ಆನಂದಮಯವಾದ ಜೀವನವನ್ನು ಬಾಳುವ ನಿಶ್ಚಯವನ್ನು ಮಾಡೋಣ. ಮಿತ್ರರೇ, ಮಾಡುವಿರಲ್ಲವೇ?

ನಿರಾಪೇಕ್ಷೆಯಿರುವಲ್ಲಿ ಆನಂದವಿರುತ್ತದೆ ಮತ್ತು ಅಪೇಕ್ಷೆಯಿರುವಲ್ಲಿ ದು:ಖವಿರುತ್ತದೆ ಇದನ್ನು ಯಾವಾಗಲೂ ಗಮನದಲ್ಲಿಟ್ಟುಕೊಳ್ಳಿರಿ.

ಸತ್ಯ ಮಾತನಾಡುವ ಏಕವಚನಿ

ಶ್ರೀರಾಮನು ಸತ್ಯವಚನಿಯಾಗಿದ್ದನು. ಅವನು ಒಂದು ಸಲ ವಚನ (ಮಾತು)ನ್ನು ನೀಡಿದನೆಂದರೆ, ಅದನ್ನು ಪೂರ್ಣಗೊಳಿಸುತ್ತಿದ್ದನು. ಸತ್ಯವೆಂದರೆ ಈಶ್ವರ! ದೇವರು ಎಂದಿಗೂ ಸುಳ್ಳು ಮಾತನಾಡುವುದಿಲ್ಲ.

ಆದರೆ ಇಂದು ನಾವೇನು ನೋಡುತ್ತೇವೆ, ಇಂದಿನ ಮಕ್ಕಳು ಸಹಜತೆಯಿಂದ ಸುಳ್ಳು ಮಾತನಾಡುತ್ತಾರೆ. ನಾವು ಸುಳ್ಳು ಮಾತನಾಡಿ ಇತರರನ್ನು ಮೋಸ ಮಾಡಿದರೆ ಅವರಿಗೆ ಭೂಷಣವೆನಿಸುತ್ತದೆ. ಮಿತ್ರರೇ, ಹೀಗೆ ಸುಳ್ಳು ಮಾತನಾಡುವುದರಿಂದ ನಮಗೆ ಸಂತೋಷ ದೊರೆಯುವುದೇ? ಕೆಲವು ಮಕ್ಕಳು ತಾಯಿಯೊಂದಿಗೆ ಸುಳ್ಳು ಮಾತನಾಡುತ್ತಿದ್ದರೆ, ಇನ್ನು ಕೆಲವು ಮಕ್ಕಳು ಶಿಕ್ಷಕರೊಂದಿಗೆ ಸುಳ್ಳು ಮಾತನಾಡುತ್ತಾರೆ. ಮಿತ್ರರೇ, ದೇವರು ನಮ್ಮ ಹೃದಯದಲ್ಲಿಯೇ ವಾಸಿಸುತ್ತಾನೆ. ನಾವು ಎಷ್ಟು ಸುಳ್ಳು ಮಾತನಾಡುತ್ತೇವೆಯೋ ಅವನು ಅದರ ಲೆಕ್ಕವನ್ನು ಇಟ್ಟುಕೊಂಡಿರುತ್ತಾನೆ. ಮಕ್ಕಳೇ, ನಿಮಗೆ ನೀವು ದೇವರ ಪ್ರೀತಿಯವರಾಗಿ ಮತ್ತು ಆನಂದದಿಂದಿರಬೇಕೆಂದು ಅನಿಸುತ್ತದೆಯಲ್ಲವೇ? ಹಾಗಾದರೆ ನಾವು ಎಂದಿಗೂ ಸುಳ್ಳು ಮಾತನಾಡಬಾರದು.

ಸುಳ್ಳು ಮಾತನಾಡುವವನು ಯಾವಾಗಲೂ ಒತ್ತಡದಲ್ಲಿ ಮತ್ತು ದು:ಖಿತನಾಗಿರುತ್ತಿದ್ದರೆ, ಸತ್ಯ ಮಾತನಾಡುವವನು ಸತತವಾಗಿ ಆನಂದದಿಂದ ಮತ್ತು ಇತರರ ಪ್ರೀತಿಯವನಾಗಿರುತ್ತಾನೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿರಿ.
ರಾಮನವಮಿಯ ದಿನದಂದು ನಾವು ಶ್ರೀರಾಮನ ಹತ್ತಿರ “ಹೇ ಶ್ರೀ ರಾಮಾ, ನಮಗೂ ನಿನ್ನಂತೆ ಸತ್ಯ ಮಾತನಾಡುವ ಶಕ್ತಿಯನ್ನು ಕೊಡು” ಎಂದು ಪ್ರಾರ್ಥಿಸೋಣ.

ಆದರ್ಶ ರಾಜಾ

ಶ್ರೀ ರಾಮನು ಒಬ್ಬ ಆದರ್ಶ ರಾಜನಾಗಿದ್ದನು. ಅವನು ಪ್ರಜೆಗಳ ಕಾಳಜಿಯನ್ನು ತಾಯಿಯಂತೆ ತೆಗೆದುಕೊಳ್ಳುತ್ತಿದ್ದನು. ತಾಯಿ ಹೇಗೆ ಸತತವಾಗಿ ಮಕ್ಕಳ ಅಭ್ಯುದಯ ಮತ್ತು ಅವರ ಜೀವನ ಆನಂದಮಯವಾಗಿರಬೇಕೆಂದು ಪ್ರಯತ್ನಿಸುತ್ತಿರುತ್ತಾಳೆಯೋ ಹಾಗೆಯೇ ಶ್ರೀರಾಮನು ಸತತವಾಗಿ ಪ್ರಜೆಗಳ ವಿಚಾರವನ್ನು ಮಾಡುತ್ತಿದ್ದನು. ಆದ್ದರಿಂದಲೇ ರಾಮರಾಜ್ಯದಲ್ಲಿ ಜನರು ಆನಂದದಿಂದ ಇದ್ದರು. ಮಿತ್ರರೇ, ನಮಗೆ ಇಂತಹ ರಾಜನು ಬೇಕಲ್ಲವೇ? ಹಾಗಿದ್ದರೆ, ಅದಕ್ಕಾಗಿ ನಾವು ಕೂಡ ಆದರ್ಶವಾಗಿರಬೇಕು. ಇಂದಿಗೂ ಜನರಿಗೆ ರಾಮರಾಜ್ಯ ಬೇಕೆನಿಸುತ್ತದೆ. ಮಿತ್ರರೇ, ರಾಮರಾಜ್ಯದ ಜನತೆಯು ಸಹ ಆದರ್ಶವಾಗಿದ್ದರು. ನಾವು ಭಾವೀ ಆದರ್ಶ ರಾಜ್ಯದ ನಾಗರಿಕರೆಂದು ರಾಮನವಮಿಯ ನಿಮಿತ್ತದಿಂದ ರಾಮನ ಎಲ್ಲ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸೋಣ ಮತ್ತು ಆದಷ್ಟು ಬೇಗ ರಾಮರಾಜ್ಯ ಬರಲಿ ಎಂದು ಶ್ರೀ ರಾಮನ ಚರಣಗಳಲ್ಲಿ ಪ್ರಾರ್ಥಿಸೋಣ.

ಈಗಿನ ಕಾಲದ ಬಹುತಾಂಶ ರಾಜಕಾರಣಿಗಳು ನೀತಿಭ್ರಷ್ಟರು, ಸುಳ್ಳು ಮಾತನಾಡುವವರು, ಗೂಂಡಾಗಿರಿ ಮಾಡುವವರು ಮತ್ತು ಹೊಲಸು ವರ್ತನೆಯನ್ನು ಹೊಂದಿರುವವರಾಗಿದ್ದಾರೆ. ಇಂತಹ ರಾಜಕಾರಣಿಗಳು ಇದ್ದರೆ, ಸಾಮಾನ್ಯ ಜನರು ಸಂತೋಷದಿಂದ ಇರಬಲ್ಲರೇ? ಸಾಮಾನ್ಯ ಜನರನ್ನು ತಾಯಿಯಂತೆ ಕಾಳಜಿ ವಹಿಸುವುದಕ್ಕಿಂತ ಜನರ ಸಂಪತ್ತನ್ನು ಲೂಟಿ ಮಾಡುವ ಲೂಟಿಕಾರರಾಗಿದ್ದಾರೆ. ಇಂತಹ ಲೂಟಿಕಾರರನ್ನು ಪದಚ್ಯುತಗೊಳಿಸುವುದೇ ಶ್ರೀರಾಮನಿಗೆ ಇಷ್ಟವಾಗುವುದು. ಮಿತ್ರರೇ, ನನಗೆ ಹೇಳಿ, ಯಾವ ಅನ್ನವನ್ನು ಜನರಿಗೆ ಉಣಿಸುತ್ತೇವೆಯೋ, ಆ ಅನ್ನದಿಂದ ಸಾರಾಯಿಯನ್ನು ತಯಾರಿಸುವ ರಾಜಕಾರಣಿಗಳಿಗೆ ಎಂದಾದರೂ ಜನರ ಕಾಳಜಿ ಇರಲು ಸಾಧ್ಯವೇ? ಮಿತ್ರರೇ, ಇವರು ಎಂದಿಗೂ ಬದಲಾಗುವುದಿಲ್ಲ. ರಾಮನು ರಾವಣನನ್ನು ವಶಿಸಿದನು ಮತ್ತು ನಂತರ ರಾಮರಾಜ್ಯ ಬಂದಿತು. ಮಿತ್ರರೇ, ನಾವು ರಾಮ ರಾಜ್ಯ ಬರುವಂತಾಗಲಿ ಎಂದು ಶ್ರೀರಾಮನ ಚರಣಗಳಲ್ಲಿ ಪ್ರಾರ್ಥಿಸೋಣ.

ಆದರ್ಶ ರಾಜರು : ಇವರು ಪ್ರಜೆಗಳ ಮಕ್ಕಳಂತೆ ಕಾಳಜಿಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಅವರನ್ನು ಸಂತೋಷವಾಗಿ ಇಟ್ಟಿರುತ್ತಾರೆ.

ಇಂದಿನ ರಾಜರು (ರಾಜಕಾರಣಿಗಳು) : ಇವರು ಜನತೆಯನ್ನು ಲೂಟಿ ಮಾಡುವವರು ಮತ್ತು ಅವರಿಗೆ ದು:ಖವನ್ನು ನೀಡುವವರಾಗಿದ್ದಾರೆ.

ಧರ್ಮ ಪಾಲನೆಯನ್ನು ಮಾಡುವವರು

ಶ್ರೀರಾಮನು ಸ್ವತ: ಧರ್ಮಪಾಲನೆಯನ್ನು ಮಾಡುತ್ತಿದ್ದನು. ಅವನು ಸ್ವತ: ಪ್ರತಿಯೊಂದು ಕೃತಿಯನ್ನು ಧರ್ಮರೀತ್ಯಾ ನಡೆಸುತ್ತಿದ್ದನು ಮತ್ತು ಪ್ರಜೆಗಳಿಗೆ ಆಚರಿಸಲು ಹೇಳುತ್ತಿದ್ದನು. ಧರ್ಮವೆಂದರೆ ಈಶ್ವರ! ಪ್ರತಿಯೊಂದು ಕೃತಿಯು ಈಶ್ವರನಿಗೆ ಪ್ರಿಯವಾಗುವ ರೀತಿಯಲ್ಲಿ ಮಾಡುತ್ತಿದ್ದನು. ಧರ್ಮಪಾಲನೆಯನ್ನು ಮಾಡುವಾಗ ‘ದೇವರೇ ಎಲ್ಲವನ್ನು ನನ್ನಿಂದ ಮಾಡಿಸಿಕೊಳ್ಳುತ್ತಿದ್ದಾನೆ’ ಎನ್ನುವ ಅರಿವು ಸತತ ಇರುತ್ತದೆ.

ಇಂದಿನ ರಾಜಕಾರಣಿಗಳು ಧರ್ಮವನ್ನು ನಂಬುವುದಿಲ್ಲ. ಅವರು ‘ನಾವೇ ಸರ್ವಸ್ವವಾಗಿದ್ದೇವೆ. ದೇವರು ಧರ್ಮ ಎಂದೇನು ಇಲ್ಲ. ನಾವೇ ಮಾಡುವವರು-ಮಾಡಿಸುವವರಾಗಿದ್ದೇವೆ’ ಎನ್ನುತ್ತಾರೆ. ದೇವರನ್ನು ನಂಬದ ರಾಜರ (ರಾಜಕಾರಣಿಗಳ) ರಾಜ್ಯದಲ್ಲಿ ಜನರು ಆನಂದದಿಂದ (ಸಂತೋಷದಿಂದ) ಇರಲು ಸಾಧ್ಯವೇ ಇಲ್ಲ. ಆದ್ದರಿಂದಲೇ ಇಂದು ನಮಗೆ ಎಲ್ಲ ಕಡೆಯಿಂದಲೂ ದು:ಖ ಮತ್ತು ಒತ್ತಡಯುಕ್ತ ಜೀವನವನ್ನು ಜೀವಿಸುವ ಜನರು ಕಾಣಿಸುತ್ತಿದ್ದಾರೆ. ಮಿತ್ರರೇ, ನಾವು ರಾಮನವಮಿಯ ನಿಮಿತ್ತ ಶ್ರೀ ರಾಮನಲ್ಲಿ ‘ಹೇ ಶ್ರೀರಾಮಾ, ನಿನ್ನಂತೆ ಧರ್ಮಪಾಲನೆಯನ್ನು ಮಾಡುವ ರಾಜಕಾರಣಿಗಳು ನಮಗೆ ದೊರೆಯಲಿ ಮತ್ತು ಆದಷ್ಟು ಬೇಗನೆ ರಾಮರಾಜ್ಯವು ಸ್ಥಾಪಿತವಾಗಲಿ. ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆಯಾಗಿದೆ’ ಎಂದು ಪ್ರಾರ್ಥನೆಯನ್ನು ಮಾಡೋಣ.

‘ಹೇ ಶ್ರೀರಾಮಾ ನಮಗೆ ಆದರ್ಶ ರಾಜ್ಯದಲ್ಲಿ ಆದರ್ಶ ನಾಗರೀಕರಾಗುವ ಶಕ್ತಿ ಮತ್ತು ಬುದ್ಧಿಯನ್ನು ನೀಡು. ನಮಗೆ ನಿನ್ನಂತೆ ಧರ್ಮಪಾಲನೆಯನ್ನು ಮಾಡುವ ಮತ್ತು ಜನತೆಯನ್ನು ತಾಯಿಯಂತೆ ಕಾಳಜಿಯನ್ನು ತೆಗೆದುಕೊಳ್ಳುವ ರಾಜಕಾರಣಿಗಳು ಆದಷ್ಟು ಬೇಗನೆ ದೊರೆಯಲಿ. ಆದಷ್ಟು ವೇಗವಾಗಿ ರಾಮರಾಜ್ಯವು ಸ್ಥಾಪಿತಗೊಳ್ಳಲಿ ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ.’

– ಶ್ರೀ ರಾಜೇಂದ್ರ ಪಾವಸಕರ (ಗುರೂಜಿ) ಪನವೇಲ.


ಶ್ರೀ ರಾಮರಕ್ಷಾ ಸ್ತೋತ್ರ ಕೇಳಿ, ಪಠಿಸಿ !

Leave a Comment