ಗುರುಪೂರ್ಣಿಮೆ

ಆಷಾಢ ಪೂರ್ಣಿಮೆ ಅಂದರೆ ಗುರುಪೂರ್ಣಿಮೆ! ಸಾಧನೆ ಮಾಡುವವರ ಜೀವನದಲ್ಲಿ ಮಹತ್ವದ ಉತ್ಸವ. ಗುರುಗಳ ಪ್ರತಿ ಕ್ರತಜ್ಞತೆಯನ್ನು ವ್ಯಕ್ತಪಡಿಸುವ ದಿನವಿದು! ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆಯನ್ನು ಸಂರಕ್ಷಿಸಲಾಗಿದೆ. ಈ ಪರಂಪರೆಯು ಭಾರತೀಯ ಸಂಸ್ಕೃತಿಯ ಭೂಷಣವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. 'ಗುರುಗಳ ಬಗ್ಗೆ ತಿಳಿದುಕೊಳ್ಳುವುದೇ' ಗುರುಪೂರ್ಣಿಮೆ ಆಚರಿಸುವುದರ ಹಿಂದಿನ ಮರ್ಮವಾಗಿದೆ.

ಓರ್ವ ಶಿಷ್ಯನು ಯಾವ ರೀತಿಯ ಸಾಧನೆಯನ್ನು ಮಾಡಬೇಕು ಎಂಬುದು ಗುರುಗಳಿಗೆ ಗೊತ್ತಿರುತ್ತದೆ. ಅವನಿಗೆ ಸಾಧನೆಯ ಮಾರ್ಗವನ್ನು ತೋರಿಸುವುದಲ್ಲದೆ, ಅವನಿಂದ ಸಾಧನೆಯನ್ನು ಮಾಡಿಸಿಕೊಳ್ಳುತ್ತಾರೆ. ಇದುವೇ ನಮಗೆ ಗುರುಗಳಿಂದ ಸಿಗುವ ನಿಜವಾದ ಶಿಕ್ಷಣ. ಗುರುಗಳು ತಮ್ಮ ಶಿಷ್ಯನ ಐಹಿಕ ಸುಖವನ್ನು ನೋಡುವುದಿಲ್ಲ, ಏಕೆಂದರೆ ಅದು ಪ್ರಾರಬ್ಧಕ್ಕನುಸಾರವಾಗಿರುತ್ತದೆ. ಅವರ ಗಮನ ಕೇವಲ ಆ ಶಿಷ್ಯನ ಆಧ್ಯಾತ್ಮಿಕ ಉನ್ನತಿಯೆಡೆಗೆ ಕೇಂದ್ರೀಕೃತವಾಗಿರುತ್ತದೆ. ಶ್ರೀ ಶಂಕರಾಚಾರ್ಯರು ಗುರುಗಳ ಬಗ್ಗೆ 'ಜ್ಞಾನ ದಾನ ಮಾಡುವ ಸದ್ಗುರುಗಳ ಶೋಭೆಗೆ ಸರಿಸಮಾನ ಉಪಮೆ ಈ ತ್ರಿಭುವನದಲ್ಲಿ ಸಿಗಲಾರದು. ಅವರನ್ನು ಪಾರಸಮಣಿಗೆ ಹೋಲಿಸಿದರೂ ಸಾಲದು; ಏಕೆಂದರೆ ಪಾರಸಮಣಿಯು ಕಬ್ಬಿಣವನ್ನು ಚಿನ್ನವಾಗಿ ಪರಿವರ್ತಿಸಿದರೂ ಕೂಡ ಅದಕ್ಕೆ ಪಾರಸಮಣಿಯ ಸತ್ತ್ವವನ್ನು ಕೊಡುವುದಿಲ್ಲ' ಎಂದು ಹೇಳಿದ್ದಾರೆ. ಗುರುಗಳ ಮಹಾನತೆಯನ್ನು ವರ್ಣಿಸಲು ಶಿಷ್ಯನಿಗೆ ಶಬ್ದಗಳೂ ಸಾಕಾಗಲಾರದು. ಗುರುಗಳು ಹೊರಗೆ ಮಾತ್ರವಲ್ಲದೆ ಒಳಗಡೆಯೂ ಇದ್ದಾರೆ. ನೀವು ಅಂತರ್ಮುಖರಾಗುವಂತಹ ಪರಿಸ್ಥಿತಿಗಳನ್ನು ಗುರುಗಳು ನಿರ್ಮಾಣ ಮಾಡುತ್ತಾರೆ.

ನಿಮ್ಮನ್ನು ಆತ್ಮದೆಡೆಗೆ ಅಂದರೆ ಬ್ರಹ್ಮನೆಡೆಗೆ ಕೊಂಡೊಯ್ಯಲು ಗುರುಗಳು ಒಳಗಡೆ ಅಂದರೆ ಹೃದಯದಲ್ಲಿ ಸಿದ್ಧತೆಯನ್ನು ಮಾಡುತ್ತಾರೆ. ಹಿಂದೂ ಸಂಸ್ಕೃತಿಯಲ್ಲಿ ಗುರುಗಳು ಶಿಷ್ಯಂದಿರಿಂದ ಮಾಡಿಸಿಕೊಂಡ ಕಾರ್ಯಗಳ ಅನೇಕ ಉದಾಹರಣೆಗಳಿವೆ. ಆರ್ಯ ಚಾಣಕ್ಯ ಮತ್ತು ಚಂದ್ರಗುಪ್ತ ಮೌರ್ಯ, ರಾಮದಾಸ ಸ್ವಾಮೀ ಮತ್ತು ಛತ್ರಪತಿ ಶಿವಾಜಿ ಮಹಾರಾಜ, ರಾಮಕೃಷ್ಣ ಪರಮಹಂಸ ಮತ್ತು ಸ್ವಾಮೀ ವಿವೇಕಾನಂದ ಮುಂತಾದ ಗುರು ಶಿಷ್ಯರು, ಅವರು ಸಾಧಿಸಿದ ಅದ್ವಿತೀಯ ಕಾರ್ಯಗಳು ಇಡೀ ಜಗತ್ತಿಗೆ ಚಿರಪರಿಚಿತವಾಗಿವೆ. ಇಂತಹ ಹಲವಾರು ಉದಾಹರಣೆಗಳಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಮಾಡಿದ 'ಅಧರ್ಮದ ವಿರುದ್ಧ ಹೋರಾಡುವ' ಉಪದೇಶವು ಎಲ್ಲೆಡೆ ಪಸರಿಸಿದೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಅಧರ್ಮಿ ರಾಜಕೀಯ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು, ಗುರು ಶಿಷ್ಯ ಪರಂಪರೆಯ ಮುಖಾಂತರ ಧರ್ಮಾಚರಣಿ ರಾಜ್ಯ ಸ್ಥಾಪನೆಯ ಮುಂಜಾವನ್ನು ನಾವು ನೋಡುವಂತಾಗಲಿ ಎಂದು ಪ್ರಾರ್ಥಿಸೋಣ.

Leave a Comment