ದೀಪಾವಳಿ

ಶ್ರೀ ರಾಮನ ತಂದೆ ದಶರಥ ಮಹಾರಾಜನು ತನ್ನ ಮೂರನೇ ಹಂಡತಿ ಕೈಕೇಯಿಗೆ ಏನು ಬೇಕಾದರೂ ಕೇಳಿಕೋ ಎಂದು ವರ ನೀಡಿರುತ್ತಾನೆ. ಈ ವರದ ಫಲವಾಗಿ ಕೈಕೇಯಿಯು ರಾಮನು ಹದಿನಾಲ್ಕು ವರ್ಷ ಕಾಡಿಗೆ ಹೋಗಬೇಕು ಮತ್ತು ತನ್ನ ಮಗ ಭರತನು ರಾಜನಾಗಬೇಕು ಎಂದು ಕೇಳಿಕೊಳ್ಳುತ್ತಾಳೆ.

ಶ್ರೀರಾಮನು ತನ್ನ ತಂದೆಯ ಮಾತನ್ನು ಉಳಿಸಬೇಕೆಂದು ಹದಿನಾಲ್ಕು ವರ್ಷ ಕಾಡಿಗೆ ಹೋಗುತ್ತಾನೆ. ರಾಮನು ವನವಾಸದಲ್ಲಿದ್ದಾಗ ರಾಮನ ತಮ್ಮ ಭರತನು ತನ್ನ ಅಣ್ಣನ ಪ್ರತಿನಿಧಿಯಂತೆ ರಾಜ್ಯವನ್ನು ಆಳುತ್ತಿರುತ್ತಾನೆ. ಹದಿನಾಲ್ಕು ವರ್ಷ ವನವಾಸ ಮುಗಿಸಿ ರಾಮನು ಅಯೋಧ್ಯೆಗೆ ಬರುತ್ತಾನೆ. ರಾಮನು ಕಾಡಿನಲ್ಲಿದ್ದಾಗ ರಾಜ್ಯದವರೆಲ್ಲರೂ ರಾಮನ ನೆನಪಿನಲ್ಲಿ ದುಃಖಿಸುತ್ತಿರುತ್ತಾರೆ. ರಾಮನಿಲ್ಲದೆ ಜನರಲ್ಲಿ ಉತ್ಸಾಹ, ಆನಂದವೇ ಇರಲಿಲ್ಲ. ರಾಮನು ರಾಕ್ಷಸ ರಾವಣನನ್ನು ವಧಿಸಿ ಅಯೋಧ್ಯೆಗೆ ಹಿಂತುರಿಗಿದ ದಿನ ಎಲ್ಲಾ ಜನರು ಆನಂದದಿಂದ ಮೈಮರೆತರು. ಜನರು ತಮ್ಮ ಮನೆಗಳನ್ನು ಸಡಗರದಿಂದ ಹೂಮಾಲೆ, ತಳಿರು ತೋರಣಗಳಿಂದ ಅಲಂಕರಿಸಿದರು. ಜನರೆಲ್ಲರೂ ಆನಂದದಲ್ಲಿ ಮನೆಯ ಒಳಗೆ ಹೊರಗೆ ದೀಪಗಳನ್ನು ಇಟ್ಟು ರಾಮನನ್ನು ಸ್ವಾಗತಿಸಿದರು. ಈ ದಿನವನ್ನೇ ದೀಪಾವಳಿ ಎಂದು ಭಾರತದಾದ್ಯಂತ ಆಚರಿಸುತ್ತಾರೆ.