
ಶ್ರೀ. ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕರು, ಯುವ ಬ್ರಿಗೇಡ್
ಚಕ್ರವರ್ತಿ ಸೂಲಿಬೆಲೆ ಅವರು ಭಾರತದ ಆಂತರಿಕ ಭದ್ರತೆಗೆ ಹೊಂಚು ಹಾಕುತ್ತಿರುವ ‘ದಿಮಾಗಿ’ (ಬೌದ್ಧಿಕ) ನಕ್ಸಲರ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದರು. ಒಂದು ಕಾಲದಲ್ಲಿ ಪಶುಪತಿನಾಥದಿಂದ ತಿರುಪತಿಯವರೆಗೆ ‘ರೆಡ್ ಕಾರಿಡಾರ್’ನಲ್ಲಿ ಹಬ್ಬಿದ್ದ ಬಂದೂಕುಧಾರಿ ನಕ್ಸಲರು ಈಗ ಬಹುತೇಕ ಅಂತ್ಯವಾಗಿದ್ದು, ಅವರ ಜಾಗದಲ್ಲಿ ನಗರಗಳ ಸುಶಿಕ್ಷಿತ ಅರ್ಬನ್ ನಕ್ಸಲರು’ ಹುಟ್ಟಿಕೊಂಡಿದ್ದಾರೆ ಎಂದು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ ದಿಮಾಗಿ ನಕ್ಸಲಿಸಂ ಎಂಬ ಚರ್ಚಾ ಕೂಟದಲ್ಲಿ ಅವರು ಹೀಗೆ ಪ್ರತಿಪಾದಿಸಿದರು . ಈ ಸಂಧರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ್ ಗೌಡ, ರಾಷ್ಟ್ರಧರ್ಮ ಸಂಘಟನೆಯ ಸಂಸ್ಥಾಪಕರಾದ ಶ್ರೀ. ಸಂತೋಷ ಕೆಂಚಾಂಬ ಸೇರಿದಂತೆ 150ಕ್ಕೂ ಅಧಿಕ ಧರ್ಮ ಪ್ರೇಮಿಗಳು ಉಪಸ್ಥಿತರಿದ್ದರು.
ಮುಂದೆ ಸೂಲಿಬೆಲೆ ಅವರು ಮಾತನಾಡುತ್ತ ಈ ದಿಮಾಗಿ ನಕ್ಸಲರು ಸ್ವಂತ ಬುದ್ಧಿಗಿಂತ ಹೆಚ್ಚಾಗಿ ಅಂತರಾಷ್ಟ್ರೀಯ ಪಿತೂರಿ ಮತ್ತು ವಿದೇಶಿ ನಿಧಿಯ ನೆರವಿನಿಂದ ಕೆಲಸ ಮಾಡುತ್ತಿದ್ದಾರೆ. ಇವರು ಸೋಷಿಯಲ್ ಮೀಡಿಯಾ ಅಲ್ಗಾರಿದಂಗಳನ್ನು ವ್ಯವಸ್ಥಿತವಾಗಿ ಬಳಸಿ ಹಿಂದೂ ಚಿಂತನೆಗಳನ್ನು ಹತ್ತಿಕ್ಕುವ ಮತ್ತು ದೇಶವಿರೋಧಿ ಲೇಖನಗಳನ್ನು ಪ್ರಚೋದಿಸುವ ತಂತ್ರ ಅನುಸರಿಸುತ್ತಿದ್ದಾರೆ. ಸಿಜೆಪಿ (CJP) ನಂತಹ ಸಂಸ್ಥೆಗಳ ಸೋಶಿಯಲ್ ಮೀಡಿಯಾ ಫಾಲೋವರ್‌ಗಳ ಪಟ್ಟಿಯನ್ನು ಗಮನಿಸುವುದರಿಂದ ಇಂತಹ ದಿಮಾಗಿ ನಕ್ಸಲರನ್ನು ಸುಲಭವಾಗಿ ಗುರುತಿಸಬಹುದು ಎಂದು ಅವರು ತಿಳಿಸಿದರು.
ದೇಶದ ಮೇಲಿನ ‘ದಿಮಾಗಿ ನಕ್ಸಲಿಸಂ’ ಮತ್ತು ವೈಚಾರಿಕ ಆಕ್ರಮಣದ ವಿರುದ್ಧ ಸಂಘಟಿತರಾಗಲು ಮೋಹನ್ ಗೌಡ ಕರೆ

ಶ್ರೀ. ಮೋಹನ್ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ, ಸಮಿತಿ
ಭಾರತದ ಮೇಲೆ ಇಂದು ಕೇವಲ ಭೌತಿಕ ಆಕ್ರಮಣಗಳಲ್ಲದೆ, ಅತ್ಯಂತ ಅಪಾಯಕಾರಿಯಾದ ‘ವೈಚಾರಿಕ ಆಕ್ರಮಣ’ ಮತ್ತು ‘ದಿಮಾಗಿ ನಕ್ಸಲಿಸಂ’ (Intellectual Naxalism) ನಡೆಯುತ್ತಿದೆ. ಇದರ ವಿರುದ್ಧ ಹಿಂದೂ ಸಮಾಜವು ಜಾಗೃತಗೊಂಡು ಸಂಘಟಿತವಾಗಬೇಕಾದ ತುರ್ತು ಅಗತ್ಯವಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ ಮೋಹನ್ ಗೌಡ ಅವರು ಪ್ರತಿಪಾದಿಸಿದ್ದಾರೆ.
ಮುಂದೆ ಮಾತನಾಡಿದ ಮೋಹನ್ ಗೌಡ ಅವರು ಸ್ವಾತಂತ್ರ್ಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉಲ್ಲೇಖಿಸಿದ ‘ದಿಮಾಗಿ ನಕ್ಸಲಿಸಂ’ ಶಬ್ದವು ಇಂದು ಸಮಾಜದಲ್ಲಿ ಅರ್ಬನ್ ನಕ್ಸಲಿಸಂ ರೂಪದಲ್ಲಿ ಅತ್ಯಂತ ಅಪಾಯಕಾರಿಯಾಗಿ ಬೆಳೆಯುತ್ತಿದೆ ಎಂದು ಎಚ್ಚರಿಸಿದರು. ಕಾಡಿನ ನಕ್ಸಲಿಸಂ ಅನ್ನು ಸರ್ಕಾರ ಬುಡಸಮೇತ ಕಿತ್ತೊಗೆದಿದೆ, ಆದರೆ ನಗರಗಳಲ್ಲಿ ‘ಇಂಟಲೆಕ್ಚುವಲ್ ಟೆರರಿಸಂ’ ಮೂಲಕ ಯುವಜನತೆಯನ್ನು ದಾರಿ ತಪ್ಪಿಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಸ್ವಾತಂತ್ರ್ಯದ ನಂತರದ ಪಠ್ಯಪುಸ್ತಕಗಳು ಮತ್ತು ಕೆಲವು ಅಂತರಾಷ್ಟ್ರೀಯ ಮಾಧ್ಯಮಗಳ ಮೂಲಕ ಹಿಂದೂ ವಿರೋಧಿ ಅಜೆಂಡಾವನ್ನು ಹರಡಲಾಗುತ್ತಿದೆ.
ಈ ಬೌದ್ಧಿಕ ನಕ್ಸಲಿಸಂ ಅನ್ನು ಎದುರಿಸಲು ಬಲಿಷ್ಠ ‘ಹಿಂದೂ ನರೇಟಿವ್’ ಮತ್ತು ‘ಹಿಂದೂ ಥಿಂಕ್ ಟ್ಯಾಂಕ್’ ಅತ್ಯಗತ್ಯ. ರಾಷ್ಟ್ರವಿರೋಧಿ ಶಕ್ತಿಗಳು ಒಂದಾಗುತ್ತಿರುವ ಈ ಕಾಲದಲ್ಲಿ, ರಾಷ್ಟ್ರಪ್ರೇಮಿಗಳೆಲ್ಲರೂ ಸಂಘಟಿತರಾಗಿ ಭಾರತವನ್ನು ಹಿಂದೂ ರಾಷ್ಟ್ರದತ್ತ ಕೊಂಡೊಯ್ಯಲು ಶ್ರಮಿಸಬೇಕು ಎಂದು ಮೋಹನ್ ಗೌಡ ಅವರು ಕರೆ ನೀಡಿದರು.
ಸಾಮಾಜಿಕ ಜಾಲತಾಣಗಳ ಮೂಲಕ ದೇಶವಿರೋಧಿ ‘ಇಕೋಸಿಸ್ಟಂ’ ಸೃಷ್ಟಿಸುವ ಷಡ್ಯಂತ್ರ: ಸಂತೋಷ್ ಕೆಂಚಂಬ

ಶ್ರೀ. ಸಂತೋಷ ಕೆಂಚಾಂಬ, ಸಂಸ್ಥಾಪಕರು, ರಾಷ್ಟ್ರ ಧರ್ಮ ಸಂಘಟನೆ
ರಾಷ್ಟ್ರ ಧರ್ಮ ಸಂಘಟನೆಯ ಸಂಸ್ಥಾಪಕರಾದ ಶ್ರೀ. ಸಂತೋಷ್ ಕೆಂಚಂಬ ಮಾತನಾಡುತ್ತಾ ಸಂಸತ್ತಿನ ಮಾನ್ಸೂನ್ ಅಧಿವೇಶನದಂತಹ ಪ್ರಮುಖ ಸಮಯಗಳಲ್ಲಿ ಜನರಲ್ಲಿ ಗೊಂದಲ ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ಕೃತಕ ಪ್ರಭಾವವನ್ನು ಸೃಷ್ಟಿಸಲಾಗುತ್ತಿದೆ. ಈ ಪಿತೂರಿಯ ಭಾಗವಾಗಿ ‘ಕಾಕ್ರೋಚ್’ (ಜಿರಳೆ) ನಂತಹ ಅಸಹ್ಯಕರ ಚಿತ್ರಗಳನ್ನು ಮತ್ತು ನೀಟ್ (NEET) ಪರೀಕ್ಷೆಯಂತಹ ವಿಚಾರಗಳನ್ನು ಕೇವಲ ನೆಪವಾಗಿ ಬಳಸಿಕೊಂಡು ದೇಶದ ವಿರುದ್ಧ ಅಸಮಾಧಾನ ಹರಡಲಾಗುತ್ತಿದೆ. ಈ ಇಡೀ ಷಡ್ಯಂತ್ರದ ಮುಖ್ಯ ಗುರಿ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಮಸೂದೆಯನ್ನು ವಿರೋಧಿಸುವುದಾಗಿದೆ. ಅಂತರಾಷ್ಟ್ರೀಯ ಶಕ್ತಿಗಳೊಂದಿಗೆ ಕೈಜೋಡಿಸಿರುವ ‘ಆಂದೋಲನ ಜೀವಿಗಳು’ ಮತ್ತು ‘ದಿಮಾಗಿ ನಕ್ಸಲ್’ಗಳು ಭಾರತದ ವರ್ಚಸ್ಸನ್ನು ಕುಗ್ಗಿಸಲು ಯತ್ನಿಸುತ್ತಿದ್ದಾರೆ. ಭಾರತವು ಇಂದು ಜಾಗತಿಕ ರಾಜತಾಂತ್ರಿಕತೆಯಲ್ಲಿ ಅಗ್ರ ಸ್ಥಾನದಲ್ಲಿದ್ದು, ಇಂತಹ ಸಮಯಲ್ಲಿ ದೇಶವಿರೋಧಿ ಪರಿಸರ ವ್ಯವಸ್ಥೆಯನ್ನು (Ecosystem) ಅರ್ಥಮಾಡಿಕೊಂಡು, ಸಂಘಟಿತರಾಗಿ ಇಂತಹ ಸಂಚುಗಳನ್ನು ಮೆಟ್ಟಿ ನಿಲ್ಲಬೇಕು ಎಂದು ಕಾರ್ಯಕ್ರಮದಲ್ಲಿ ಕರೆ ನೀಡಿದರು.


