Menu Close

ಭಾರತದ ಶ್ರೇಷ್ಠ ಗಣಿತಜ್ಞ ‘ಆರ್ಯಭಟ’ರ ವಿಡಂಬನೆ ಪ್ರಕರಣ: ಅಮೆಜಾನ್ ಇಂಡಿಯಾಗೆ ಕಾನೂನು ನೋಟಿಸ್ !

ವ್ಯಾಪಾರಕ್ಕಾಗಿ ರಾಷ್ಟ್ರೀಯ ಪರಂಪರೆಯ ಅವಮಾನವನ್ನು ಸಹಿಸುವುದಿಲ್ಲ – ಹಿಂದೂ ಜನಜಾಗೃತಿ ಸಮಿತಿ

ಅಮೆಜಾನ್‌ನ ವಿವಾದಾತ್ಮಕ ಮತ್ತು ವ್ಯಂಗ್ಯಭರಿತ ಜಾಹೀರಾತು “ಆರ್ಯಭಟ ಈಸ್ ಬ್ಯಾಕ್” (ಆರ್ಯಭಟ ಮರಳಿದ್ದಾರೆ) ನ ಒಂದು ದೃಶ್ಯ.

ಮುಂಬೈ/ನವದೆಹಲಿ : ಪ್ರಾಚೀನ ಭಾರತದ ಶ್ರೇಷ್ಠ ಗಣಿತಜ್ಞ ಮತ್ತು ಖಗೋಳಶಾಸ್ತ್ರಜ್ಞ ‘ಆರ್ಯಭಟ’ರನ್ನು ವಾಣಿಜ್ಯ ಜಾಹೀರಾತಿನಲ್ಲಿ ಅತ್ಯಂತ ಕೀಳು ಮಟ್ಟದಲ್ಲಿ ವಿಡಂಬನೆ ಮಾಡಿದ್ದಕ್ಕಾಗಿ ಪ್ರಮುಖ ಇ-ಕಾಮರ್ಸ್ ಸಂಸ್ಥೆ ‘ಅಮೆಜಾನ್ ಇಂಡಿಯಾ’ಗೆ ಕಾನೂನು ನೋಟಿಸ್ ಕಳುಹಿಸಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿರುವ, ಹಿಂದೂ ಜನಜಾಗೃತಿ ಸಮಿತಿಯ ಅಡ್ವೊಕೇಟ್ ಅಮಿತಾ ಸಚದೇವ ಅವರು ಈ ನೋಟಿಸ್ ಜಾರಿಗೊಳಿಸಿದ್ದು, ಅಮೆಜಾನ್ 48 ಗಂಟೆಗಳ ಒಳಗಾಗಿ ಭಾರತೀಯ ಜನತೆಯ ಬಹಿರಂಗ ಕ್ಷಮೆಯಾಚಿಸಬೇಕು ಮತ್ತು ವಿವಾದಿತ ಜಾಹೀರಾತನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಈ ಬೇಡಿಕೆಯನ್ನು ಈಡೇರಿಸದಿದ್ದರೆ ಅಮೆಜಾನ್ ವಿರುದ್ಧ ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆ ಹೂಡಲಾಗುವುದು ಎಂದು ನೋಟಿಸ್ ಮೂಲಕ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ. ಈ ಮಧ್ಯೆ, ಈ ಜಾಹೀರಾತಿನಿಂದಾಗಿ ದೇಶಾದ್ಯಂತ ರಾಷ್ಟ್ರಪ್ರೇಮಿ ನಾಗರಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಮೆಜಾನ್ ಬಹಿಷ್ಕಾರದ (#Boycott_Amazon) ಆನ್‌ಲೈನ್ ಅಭಿಯಾನವು ಅತ್ಯಂತ ವೇಗವಾಗಿ ಹರಡುತ್ತಿದೆ.

ಈ ಜಾಹೀರಾತಿನಲ್ಲಿ ಆರ್ಯಭಟರ ವೇಷಧಾರಿ ವ್ಯಕ್ತಿಯೊಬ್ಬನನ್ನು ನಿಲ್ಲಿಸಿ, ಅವರನ್ನು ‘ಶೂನ್ಯ ಡೆಲಿವರಿ ಚಾರ್ಜಸ್ ಕಂಡುಹಿಡಿದ ವಿಜ್ಞಾನಿ’ ಎಂದು ವ್ಯಂಗ್ಯ ಮತ್ತು ಹಾಸ್ಯದ ರೂಪದಲ್ಲಿ ಪ್ರಸ್ತುತಪಡಿಸಲಾಗಿದೆ. ಜಗತ್ತಿಗೆ ‘ಶೂನ್ಯ’ದ ಅಮೂಲ್ಯ ಪರಿಕಲ್ಪನೆಯನ್ನು ನೀಡಿ, ಭಾರತದ ವೈಜ್ಞಾನಿಕ ಧ್ವಜವನ್ನು ಜಗತ್ತಿನಾದ್ಯಂತ ಹಾರಿಸಿದ ಶ್ರೇಷ್ಠ ಋಷಿತುಲ್ಯ ವಿಜ್ಞಾನಿಯನ್ನು ಕೇವಲ ವಾಣಿಜ್ಯ ಲಾಭಕ್ಕಾಗಿ ‘ಕಾರ್ಪೊರೇಟ್ ಮ್ಯಾಸ್ಕಾಟ್’ (ಹಾಸ್ಯಭರಿತ ವಾಣಿಜ್ಯ ಪಾತ್ರ) ಆಗಿ ಪರಿವರ್ತಿಸಿ, ಅವರ ಕ್ರೂರ ಅಪಹಾಸ್ಯ ಮಾಡಿರುವುದು ಭಾರತದ ಶ್ರೇಷ್ಠ ಜ್ಞಾನ-ಪರಂಪರೆ ಮತ್ತು ರಾಷ್ಟ್ರೀಯ ಅಸ್ಮಿತೆಗೆ ಮಾಡಿರುವ ಉದ್ದೇಶಪೂರ್ವಕ ಅವಮಾನವಾಗಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ಮಹಾನ್ ಗಣಿತಜ್ಞ ಆರ್ಯಭಟ್ಟರ ಅವಮಾನ ಮಾಡುತ್ತಿರುವ ದೃಶ್ಯ

ವಾಣಿಜ್ಯ ಲಾಭಕ್ಕಾಗಿ ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಸಂಕೇತಗಳನ್ನು ಅವಮಾನಿಸುತ್ತಿರುವುದು ಅಮೆಜಾನ್‌ಗೆ ಇದೇ ಮೊದಲಲ್ಲ. ಈ ಹಿಂದೆ ಕೂಡ ಕಂಪನಿಯ ಪ್ಲಾಟ್‌ಫಾರ್ಮ್‌ನಲ್ಲಿ ಶ್ರೀ ಗಣೇಶ ಮತ್ತು ಮಾತಾ ಲಕ್ಷ್ಮಿಯ ಚಿತ್ರಗಳಿರುವ ಕಾಲೊರೆಸುವ ಚಾಪೆ (ಡೋರ್ ಮ್ಯಾಟ್), ಟಾಯ್ಲೆಟ್ ಸೀಟ್ ಕವರ್‌ಗಳನ್ನು ಮಾರಾಟ ಮಾಡಲಾಗಿತ್ತು, ಹಾಗೆಯೇ ‘ತಾಂಡವ್’ ವೆಬ್ ಸರಣಿಯ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ತೀವ್ರ ಪ್ರತಿರೋಧದ ನಂತರ ಕಂಪನಿಯು ಕ್ಷಮೆಯಾಚಿಸಬೇಕಾಗಿ ಬಂದಿತ್ತು. ಕೇವಲ ವ್ಯಾಪಾರ ಲಾಭಕ್ಕಾಗಿ ಭಾರತೀಯ ರಾಷ್ಟ್ರಪುರುಷರನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವ ಈ ಕೃತ್ಯವು ಪರಿಷ್ಕೃತ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 299 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು), ಸೆಕ್ಷನ್ 196 ಮತ್ತು 197 (ಸಮಾಜದಲ್ಲಿ ದ್ವೇಷ ಮೂಡಿಸಿ ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತರುವುದು) ಹಾಗೂ ಸೆಕ್ಷನ್ 302 (ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶ) ಅಡಿಯಲ್ಲಿ ನೇರ ಕ್ರಿಮಿನಲ್ ಮತ್ತು ಸಿವಿಲ್ ಕ್ರಮಕ್ಕೆ ಅರ್ಹವಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಅಮೆಜಾನ್‌ಗೆ ಷರತ್ತುಗಳನ್ನು ಪೂರೈಸಲು 48 ಗಂಟೆಗಳ ಕಾಲಾವಕಾಶ ನೀಡಿದೆ. ಅದರಂತೆ, ಈ ವಿವಾದಾತ್ಮಕ ಜಾಹೀರಾತನ್ನು ಯೂಟ್ಯೂಬ್, ಇನ್‌ಸ್ಟಾಗ್ರಾಮ್, ಎಕ್ಸ್ (ಟ್ವಿಟರ್) ಮತ್ತು ಟೆಲಿವಿಷನ್ ಸೇರಿದಂತೆ ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ಶಾಶ್ವತವಾಗಿ ತೆಗೆದುಹಾಕಬೇಕು; ಕಂಪನಿಯು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳಲ್ಲಿ, ವೆಬ್‌ಸೈಟ್‌ನ ಮುಖಪುಟದಲ್ಲಿ ಮತ್ತು ದೇಶದ ಪ್ರಮುಖ ದಿನಪತ್ರಿಕೆಗಳಲ್ಲಿ ಬಹಿರಂಗ ಹಾಗೂ ಬೇಷರತ್ ಕ್ಷಮೆಯಾಚಿಸಬೇಕು; ಹಾಗೆಯೇ ಭವಿಷ್ಯದಲ್ಲಿ ರಾಷ್ಟ್ರೀಯ ಸಂಕೇತಗಳನ್ನು ಅಥವಾ ರಾಷ್ಟ್ರಪುರುಷರನ್ನು ಅವಮಾನಿಸುವುದಿಲ್ಲ ಎಂದು ಲಿಖಿತ ಭರವಸೆ ನೀಡಬೇಕು ಎಂದು ದೃಢವಾಗಿ ಒತ್ತಾಯಿಸಲಾಗಿದೆ. ನೀಡಿದ ಗಡುವಿನೊಳಗೆ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ, ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಸಮಿತಿಯ ಅಡ್ವೊಕೇಟ್ ಅಮಿತಾ ಸಚದೇವ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

Related News