Menu Close

ಹಿಂದೂ ಜನಜಾಗೃತಿ ಸಮಿತಿ – ನಮ್ಮ ಬಗ್ಗೆ

ನಮ್ಮ ಉದ್ದೇಶ

ಹಿಂದೂ ಜನಜಾಗೃತಿ ಸಮಿತಿಯು ಧರ್ಮರಕ್ಷಣೆ, ಧರ್ಮಶಿಕ್ಷಣ, ಧರ್ಮಜಾಗೃತಿ, ರಾಷ್ಟ್ರರಕ್ಷಣೆ, ಮತ್ತು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸುವ ಉದ್ದೇಶದಿಂದ ಹಿಂದೂಗಳ ಸಂಘಟನೆಗೆ ನಿರಂತರವಾಗಿ ಶ್ರಮಿಸುವ ಒಂದು ಸರ್ಕಾರೇತರ ಸಂಸ್ಥೆ. ಸಮಿತಿಯು ಹಿಂದೂ ಧರ್ಮ ಮತ್ತು ಆಚರಣೆಗಳ ಬಗ್ಗೆ ಹಬ್ಬಿರುವ ತಪ್ಪು ತಿಳುವಳಿಕೆಗಳ ವಿರುದ್ಧ, ಹಿಂದೂ ದೇವಿ-ದೇವತೆಗಳ ಅವಹೇಳನೆಯ ಘಟನೆಗಳ ವಿರುದ್ಧ, ಹಿಂದೂದ್ವೇಷದ ವಿರುದ್ಧದ ಹೋರಾಟದಲ್ಲಿ ಮಾತ್ರವಲ್ಲ ರಾಷ್ಟ್ರೀಯ ಚಿಹ್ನೆಗಳ ರಕ್ಷಣೆಯಲ್ಲಿ ಮುಂಚೂಣಿಯಲ್ಲಿದೆ.

ನಮ್ಮ ಧ್ಯೇಯ

ಸಂಪೂರ್ಣ ವಿಶ್ವಕ್ಕೆ ಸುಖ, ಸಮೃದ್ಧಿ, ನೆಮ್ಮದಿ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನ ನೀಡುವ, ಸನಾತನ ಧರ್ಮದ (ಹಿಂದೂ ಧರ್ಮದ) ಚಿರಂತನ ತತ್ತ್ವಗಳನ್ನು ಉಳಿಸಿ, ಆಚರಿಸಿ, ಬೆಳೆಸಲು ಪೂರಕವಾಗಿರುವ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆ

ನಮ್ಮ ಮೌಲ್ಯಗಳು

ಪ್ರತಿಯೊಂದು ಕೃತಿಯನ್ನು ಆಧ್ಯಾತ್ಮಿಕ ಸಾಧನೆಯೆಂದು ಮಾಡುವುದು – ಯಾವ ಕಾರ್ಯಕ್ಕೆ ಈಶ್ವರನ ಅಧಿಷ್ಠಾನವಿದೆಯೋ ಅದು ಖಂಡಿತವಾಗಿಯೂ ಯಶಸ್ವಿಯಾಗುತ್ತದೆ. ಹಾಗಾಗಿ ಸಮಿತಿಯ ಪ್ರತಿಯೊಬ್ಬ ಕಾರ್ಯಕರ್ತನೂ ಧರ್ಮ ಸೇವೆಯನ್ನು ಆಧ್ಯಾತ್ಮಿಕ ಸಾಧನೆಯೆಂದು ಮಾಡುತ್ತಾನೆ.

ನಾವು ನಡೆದು ಬಂದ ದಾರಿ

10 ಧರ್ಮಪ್ರೇಮಿಗಳಿಂದ ಪ್ರಾರಂಭಿಸಿ 1000 ಹಿಂದೂ ಸಂಘಟನೆಗಳ ಸಂಘಟನೆಯ ವರೆಗೆ…

ಪ್ರಾರಂಭ – ವಿವಿಧ ಮಾಧ್ಯಮಗಳಿಂದ ಹೆಚ್ಚುತ್ತಿದ್ದ ಹಿಂದೂ ದೇವಿ ದೇವತೆಗಳ ಅವಹೇಳನೆಯ ಪ್ರಸಂಗಗಳನ್ನು ಗಮನಿಸಿದ ಬೆರಳೆಣಿಕೆಯಷ್ಟು ಹಿಂದೂ ಧರ್ಮಪ್ರೇಮಿಗಳು 2002 ರಲ್ಲಿ ಒಟ್ಟುಗೂಡಿ ಇದರ ಬಗ್ಗೆ ಚರ್ಚೆ ನಡೆಸಿದರು. ಆಗ ಸಾಮಾನ್ಯ ಹಿಂದೂಗಳು ಆಸ್ತಿಕರಾಗಿದ್ದರೂ ಧರ್ಮದ ಮೇಲಾಗುತ್ತಿರುವ ಆಘಾತಗಳಿಂದ ಅನಭಿಜ್ಞರಾಗಿದ್ದಾರೆ ಎಂದು ಕಂಡುಬಂತು. ಹಾಗಾಗಿ ಪ್ರತಿಯೊಬ್ಬ ಹಿಂದೂವಿನಲ್ಲಿ ಧರ್ಮಪಾಲನೆಯೊಂದಿಗೆ ಧರ್ಮರಕ್ಷಣೆಯ ಹೊಣೆಯನ್ನು ಜಾಗೃತಗೊಳಿಸುವ ಒಂದು ಸಮಿತಿಯ ಆವಶ್ಯಕತೆ ಇದೆ ಎಂದು ತಿಳಿಯಿತು. ಆದುದರಿಂದಲೇ 2002 ರ ನವರಾತ್ರಿಯ ಮೊದಲನೇ ದಿನವಾದ ಘಟಸ್ಥಾಪನೆಯಂದು ‘ಹಿಂದೂ ಜನಜಾಗೃತಿ ಸಮಿತಿ’ಯ ಉದಯವಾಯಿತು.

ನಮ್ಮ ಪ್ರೇರಣೆ –  ಹಿಂದೂ ಜನಜಾಗೃತಿ ಸಮಿತಿಯು ದಾರ್ಶನಿಕ ರಾಷ್ಟ್ರಸಂತ, ಹಿಂದೂ ರಾಷ್ಟ್ರದ ಪ್ರತಿಪಾದಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ವಿಚಾರಗಳಿಂದ ಪ್ರೇರಣೆಯನ್ನು ಪಡೆದು ಕಾರ್ಯನಿರ್ವಹಿಸುತ್ತಿದೆ.

ಆದಿವಿಘ್ನಗಳು – ಹಿಂದೂ ಬಾಹುಳ್ಯವಿರುವ, ಚಿಕ್ಕ-ದೊಡ್ಡ ಅಸಂಖ್ಯ ಹಿಂದೂ ಸಂಘಟನೆಗಳಿದ್ದ ಭಾರತದಲ್ಲಿ ಹುಟ್ಟಿದ ಮತ್ತೊಂದು ಹಿಂದೂ ಸಂಘಟನೆ ‘ಹಿಂದೂ ಜನಜಾಗೃತಿ ಸಮಿತಿ’. ಹಾಗಾಗಿ ನಮ್ಮ ವಿಚಾರಗಳನ್ನು ಸಮಾಜಕ್ಕೆ ತಲುಪಿಸಲು ಶ್ರಮವಹಿಸಬೇಕಾಯಿತು. ಆದರೆ ಮನೆಮನೆಯನ್ನು ತಲಪುವ ಹಂಬಲ, ನಮ್ಮ ಕಾರ್ಯಕರ್ತರ ನಿಸ್ವಾರ್ಥ ಭಾವ, ಮತ್ತು ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಗುರಿಯತ್ತ ಇರುವ ನಿಷ್ಠೆ, ಇವುಗಳಿಂದಾಗಿ ಇಂದು ಸಮಿತಿಯು ಜನಮಾನಸದಲ್ಲಿ ಮನೆ ಮಾಡಿದೆ. ರಾಷ್ಟ್ರರಕ್ಷಣೆಯ ವಿಷಯವಾಗಲಿ, ಧರ್ಮರಕ್ಷಣೆಯ ವಿಷಯವಾಗಲಿ, ಸಮಾಜವು ಸಮಿತಿಯನ್ನು ಒಂದು ಆಧಾರಸ್ತಂಭವಾಗಿ ಪರಿಗಣಿಸುತ್ತದೆ.

ಇಂದು – ಹಿಂದೂ ದೇವಿ-ದೇವತೆಗಳ ವಿಡಂಬನೆಯನ್ನು ತಡೆಯುವ ಉದ್ದೇಶದಿಂದ ಪ್ರಾರಂಭವಾದ ಹಿಂದೂ ಜನಜಾಗೃತಿ ಸಮಿತಿಯು ಇಂದು ಧರ್ಮರಕ್ಷಣೆಯ ಹೆಮ್ಮರವಾಗಿ ಬೆಳೆದು ನಿಂತಿದೆ.

ಧರ್ಮರಕ್ಷಣೆಯ ಕಾರ್ಯದಲ್ಲಿ ಸಮಿತಿ ಸಲ್ಲಿಸುತ್ತಿರುವ ಸೇವೆ

  1. ಹಿಂದೂ ದೇವಿ ದೇವತೆಗಳ ಅಶ್ಲೀಲ ಚಿತ್ರಗಳನ್ನು ಬಿಡಿಸಿದ ಚಿತ್ರಕಾರ ಎಂ.ಎಫ್. ಹುಸೇನ್ ವಿರುದ್ಧ ಸಮಿತಿಯು ಪ್ರಾರಂಭಿಸಿದ ಚಳವಳಿಯಿಂದ ಹುಸೈನ್ ಭಾರತ ಬಿಟ್ಟು ಓಡಿ ಹೋಗಬೇಕಾಯಿತು. ಇಂದಿಗೂ ಹುಸೇನ್ ಚಿತ್ರಗಳು ಮಾರಾಟಕ್ಕೆ ಬಂದರೆ ಸಮಿತಿಯು ಜಾಗೃತಿ ಮೂಡಿಸುತ್ತದೆ.
  2. ಮಹಾರಾಷ್ಟ್ರದ 4.5 ಲಕ್ಷ ದೇವಸ್ಥಾನಗಳ ಸರಕಾರೀಕರಣವನ್ನು ತಡೆಯುವಲ್ಲಿ ಸಮಿತಿಯು ಮಹತ್ವದ ಪಾತ್ರ ವಹಿಸಿತು.
  3. ಸಮಿತಿಯು ಅನೇಕ ರಾಜ್ಯಗಳಲ್ಲಿ ದೇವಸ್ಥಾನ ವಿಶ್ವಸ್ತರು, ಪುರೋಹಿತರು ಮತ್ತು ಭಕ್ತರನ್ನು ಒಗ್ಗೂಡಿಸಿ ಹಿಂದೂ ದೇವಸ್ಥಾನಗಳ ಸರಕಾರೀಕರಣದ ವಿರುದ್ಧ, ಹಿಂದೂ ದೇವಸ್ಥಾನಗಳ ಭೂ ಕಬಳಿಕೆಯ ವಿರುದ್ಧ ಮತ್ತು ದೇವಸ್ಥಾನಗಳ ಪರಂಪರೆಗಳನ್ನು ಕಾಪಾಡುವ ಚಳವಳಿಯನ್ನು ಹಮ್ಮಿಕೊಂಡಿದೆ.
  4. ಮಹಾರಾಷ್ಟ್ರ ಅಂಧಶ್ರದ್ಧೆ (ವಿರೋಧಿ) ಕಾಯ್ದೆಯಿಂದ 15 ಹಿಂದೂ ವಿರೋಧಿ ಪರಿಚ್ಛೇದಗಳನ್ನು ತೆಗೆದುಹಾಕುವಲ್ಲಿ ಸಮಿತಿಯು ಯಶಸ್ವಿಯಾಗಿತ್ತು.
  5. ಪ್ಲಾಸ್ಟಿಕಿನ ರಾಷ್ಟ್ರಧ್ವಜಗಳ ಉತ್ಪಾದನೆ, ಪ್ರದರ್ಶನ, ಮತ್ತು ಮಾರಾಟವನ್ನು ತಡೆಯುವಲ್ಲಿ ಸಮಿತಿಯು ನಡೆಸಿದೆ ಅನೇಕ ವರ್ಷಗಳ ಹೋರಾಟದ ಫಲವಾಗಿ ಇಂದು ದೇಶದಾದ್ಯಂತ ಪ್ಲಾಸ್ಟಿಕ್ ಧ್ವಜಗಳ ಮೇಲೆ ನಿರ್ಬಂಧ ಬಂದಿದೆ.
  6. ಸಮಿತಿಯು ಕಳೆದ ಅನೇಕ ವರ್ಷಗಳಿಂದ ಹೋಳಿ ಹಬ್ಬದ ಸಮಯದಲ್ಲಿ ಪುಣೆಯ ಖಡಕ್ವಾಸ್ಲಾ ಜಲಾಶಯದ ಸುತ್ತ ಮಾನವ ಸರಪಳಿಯನ್ನು ನಿರ್ಮಿಸಿ, ಜನರನ್ನು ಜಲಾಶಯದ ನೀರಿನಲ್ಲಿ ಬಣ್ಣಗಳನ್ನು ತೊಳೆಯದಂತೆ ಪ್ರಬೋಧನೆ ಮಾಡುತ್ತಿದೆ.
  7. ಸಮಿತಿಯು ‘ರಾಷ್ಟ್ರೀಯ ಹಿಂದೂ ಆಂದೋಲನ’ಗಳ ಮಾಧ್ಯಮದಿಂದ ರಾಷ್ಟ್ರ ಮತ್ತು ಧರ್ಮಕ್ಕೆ ಸಂಬಂಧಪಟ್ಟ ಅನೇಕ ವಿಷಯಗಳ ಬಗ್ಗೆ ಏಕಕಾಲದಲ್ಲಿ ದೇಶದಾದ್ಯಂತ ಅಭಿಯಾನ ನಡೆಸುತ್ತಿದೆ.
  8. ಭಾರತೀಯ ಮಾಹಿತಿ ಹಕ್ಕು ಕಾಯ್ದೆಯನ್ನು ಉಪಯೋಗಿಸಿ ಸಮಿತಿಯು ಭ್ರಷ್ಟಾಚಾರ, ಆಡಳಿತಾತ್ಮಕ ಉದಾಸೀನತೆ, ಮತ್ತು ಆಡಳಿತದ ವಿವಿಧ ಸ್ತರಗಳಲ್ಲಿ ಕಾಣಿಸುವ ವೈಫಲ್ಯವನ್ನು ಬೆಳಕಿಗೆ ತರುವಲ್ಲಿ ಯಶಸ್ಸು ಕಂಡಿದೆ.
  9. ಲವ್ ಜಿಹಾದ್ ಎಂಬ ಸಾಮಾಜಿಕ ಪಿಡುಗನ್ನು ಬಯಲಿಗೆಳೆಯುವಲ್ಲಿ ಸಮಿತಿಯು ಮಹತ್ವದ ಪಾತ್ರ ವಹಿಸಿದೆ. ಅದೇ ರೀತಿ ಹಲಾಲ್ ಪ್ರಮಾಣಪತ್ರಗಳ ಸತ್ಯವನ್ನು ಜನರ ಮುಂದೆ ತಂದ ಮೊದಲನೇ ಸಂಘಟನೆ ಹಿಂದೂ ಜನಜಾಗೃತಿ ಸಮಿತಿ.
  10. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ನರಕಯಾತನೆ ಅನುಭವಿಸುತ್ತಿರುವ ಹಿಂದುಗಳಿಗೆ ಭಾರತದ ಪೌರತ್ವ ನೀಡುವಂತೆ ಸಮಿತಿಯು ಕೇಂದ್ರ ಸರಕಾರಕ್ಕೆ ಅನೇಕ ಮನವಿಗಳನ್ನು ಕಳುಹಿಸಿದೆ.
  11. ಪ್ರತಿಯೊಬ್ಬ ಭಾರತೀಯನಲ್ಲಿ ಕಾಶ್ಮೀರಿ ಹಿಂದೂ ಬಾಂಧವರೊಂದಿಗೆ ಏಕಾತ್ಮತೆ ನಿರ್ಮಾಣವಾಗಬೇಕೆಂದು ಸಮಿತಿಯು ‘ಏಕ್ ಭಾರತ ಅಭಿಯಾನ’ವನ್ನು ಹಮ್ಮಿಕೊಂಡಿತು.
  12. ಕುಂಭ ಮೇಳದಲ್ಲಿ ಸೇರುವ ಲಕ್ಷಗಟ್ಟಲೆ ಭಾವಿಕರಿಗೆ ಸೌಲಭ್ಯಗಳ ಮತ್ತು ಕುಂಭದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಾಹಿತಿಯು ಸುಲಭವಾಗಿ ದೊರೆಯುವಂತಾಗಲು ಸಮಿತಿಯು ಉಚಿತ ಆಂಡ್ರಾಯ್ಡ್ ಆಪ್ ಹೊರತಂದಿತ್ತು.
  13. ‘ಸಂಘೇ ಶಕ್ತಿ: ಕಲೌಯುಗೇ’ ಎಂಬುವುದು ಒಂದು ಚಿರಂತನ ಸತ್ಯ. ಆದುದರಿಂದ ಭಾರತದ ಅನೇಕ ಹಿಂದೂಪರ ಮತ್ತು ರಾಷ್ಟ್ರೀಯತಾವಾದಿ ಸಂಘಟನೆಗಳನ್ನು ಒಗ್ಗೂಡಿಸಲು ಸಮಿತಿಯು 2012 ರಲ್ಲಿ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವಗಳನ್ನು (ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ) ಪ್ರಾರಂಭಿಸಿತು. ಇಂದು ಅಧಿವೇಶನಗಳ ಮಾಧ್ಯಮದಿಂದ 1000 ಕ್ಕೂ ಹೆಚ್ಚು ಸಂಘಟನೆಗಳು ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಸಮಾನ ಗುರಿಯತ್ತ ಒಟ್ಟಿಗೆ ಸಾಗುತ್ತಿವೆ.
  14. ಇಂದು ಮನೆ-ಮನಗಳಲ್ಲಿ ಹಿಂದೂ ರಾಷ್ಟ್ರದ ವಿಚಾರ ನೆಲೆಯೂರಿರುವುದಕ್ಕೆ ಹಿಂದೂ ಜನಜಾಗೃತಿ ಸಮಿತಿಯು ದೇಶದಾದ್ಯಂತ ನಡೆಸುತ್ತ ಬಂದಿರುವ ಹಿಂದೂ ರಾಷ್ಟ್ರ ಜಾಗೃತಿ ಸಭೆಗಳು ಮುಖ್ಯ ಕಾರಣ ಎಂದರೆ ಅತಿಶಯೋಕ್ತಿಯಲ್ಲ.

ಮಾರ್ಗದರ್ಶನ

ಸದ್ಗುರು (ಡಾ.) ಚಾರುದತ್ತ ಪಿಂಗಳೆ

ಹಿಂದೂ ಧರ್ಮ ಮತ್ತು ಅಧ್ಯಾತ್ಮದಲ್ಲಿ ಆಸಕ್ತಿ ಹೊಂದಿದ ಇ.ಎನ್.ಟಿ. ತಜ್ಞರೂ, ಜ್ಞಾನದ ಗಣಿಯೂ ಆಗಿರುವ ಸದ್ಗುರು ಡಾ. ಪಿಂಗಳೆ ಇವರು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರು. ಇವರು ಹಿಂದೂ ಧರ್ಮ ಮತ್ತು ಅಧ್ಯಾತ್ಮದ ಬಗ್ಗೆ ಅನೇಕ ಪುಸ್ತಕಗಳ ಸಂಕಲನ ಮಾಡಿದ್ದಾರೆ. ಇವರು ಮತ್ತು ಸದ್ಗುರು ನೀಲೇಶ ಸಿಂಗಬಾಳ ಸಮಿತಿಯ ಆಧ್ಯಾತ್ಮಿಕ ಬೆನ್ನೆಲುಬಾಗಿದ್ದರೆ.

ಸದ್ಗುರು ನೀಲೇಶ ಸಿಂಗಬಾಳ

ಸದ್ಗುರು ನೀಲೇಶ ರವರು ಸಮಿತಿಯ ಧರ್ಮಪ್ರಚಾರಕರು. ವಿನಯಶೀಲರೂ, ಮೃದು ಸ್ವಭಾವದವರೂ, ಮಿತಭಾಷಿಗಳೂ ಆಗಿರುವ ಸದ್ಗುರು ಸಿಂಗಬಾಳ, ಸಮಿತಿಯ ಕಾರ್ಯಕರ್ತರಿಗಷ್ಟೇ ಅಲ್ಲ, ಸಮಾಜದ ಜನರಿಗೂ ಒಂದು ಆಧ್ಯಾತ್ಮಿಕ ಆಧಾರಸ್ತಂಭವಾಗಿದ್ದರೆ.

ರಮೇಶ ಶಿಂದೆ  

ಹಿಂದೂ ಧರ್ಮದ ಸೇವೆಗೆಂದು ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ವೃತ್ತಿಯಿಂದ ಎಂಜಿನಿಯರ್. ಇವರು ರಾಷ್ಟ್ರೀಯ ಸುರಕ್ಷೆ ಮತ್ತು ಧರ್ಮಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ಮೇಲೆ ಅಗಾಧ ಜ್ಞಾನ ಮತ್ತು ಪ್ರಭುತ್ವ ಹೊಂದಿದ್ದಾರೆ. ಲವ್ ಜಿಹಾದ್ ಮತ್ತು ಹಲಾಲ್ ಪ್ರಮಾಣಪತ್ರಗಳ ಬಗ್ಗೆ ಅವರು ಬರೆದಿರುವ ಎರಡು ಪುಸ್ತಕಗಳ ಅನೇಕ ಪ್ರತಿಗಳು ಇಂದು ಮನೆ ಮನೆ ಮಾತಾಗಿವೆ.

ಹಣಕಾಸಿನ ವಿನಿಯೋಗ

ಹಿಂದೂ ಜನಜಾಗೃತಿ ಸಮಿತಿಯು ಒಂದು ಸರ್ಕಾರೇತರ ಸಂಘಟನೆಯಾಗಿದ್ದು ನಮ್ಮ ಕಾರ್ಯವು ದಾನಿಗಳ ಔದಾರ್ಯದಿಂದ ನೆರವೇರುತ್ತದೆ. ಸಮಿತಿಗೆ ಬರುವ ಪ್ರತಿಯೊಂದು ರೂಪಾಯಿಯನ್ನು ರಾಷ್ಟ್ರ-ಧರ್ಮದ ಕಾರ್ಯದಲ್ಲಿ ವಿನಿಯೋಗಿಸಲಾಗುತ್ತದೆ.

ಕಾರ್ಯಕ್ರಮಗಳು – ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ, ಹಿಂದೂ ರಾಷ್ಟ್ರ ಜಾಗೃತಿ ಸಭೆಯಂತಹ ಕಾರ್ಯಕ್ರಮಗಳನ್ನು ಆಯೋಜಿಸಲು

ಪ್ರಯಾಣ – ನಮ್ಮ ಕಾರ್ಯಕರ್ತರು ಪ್ರತಿಯೊಂದು ರಾಜ್ಯದ ಪ್ರತಿಯೊಂದು ಮನೆಗೂ ತಲಪುವಂತೆ

ಧರ್ಮಪ್ರಸಾರ – ಫಲಕ, ಕರಪತ್ರ, ಪುಸ್ತಕ, ವೀಡಿಯೋ ಮುಖಾಂತರ ಹಿಂದೂಗಳನ್ನು ಧರ್ಮಾಚರಣೆಗೆ  ಪ್ರೇರೇಪಿಸುವುದು

ಸಾಮಾಜಿಕ ಕಾರ್ಯ – ಮಾನವ ನಿರ್ಮಿತ ಅಥವಾ ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಸಮಾಜ ಸಹಾಯ

ತಂತ್ರಜ್ಞಾನ – ಈ ಜಾಲತಾಣದ ಹಾಗೆಯೇ ಸಂಬಂಧಪಟ್ಟ ವಿವಿಧ ಆಪ್ ಗಳ ಅಭಿವೃದ್ಧಿಗಾಗಿ

ರಾಷ್ಟ್ರ ಮತ್ತು ಧರ್ಮ ಸೇವೆಯ ಅವಕಾಶ

ಪ್ರತಿಯೊಂದು ದಿನವೂ ಕಡಿಮೆಪಕ್ಷ ಒಂದು ತಾಸು ರಾಷ್ಟ್ರ ಮತ್ತು ಧರ್ಮದ ಸೇವೆಗೆಂದು ಮುಡಿಪಾಗಿಡಿ. ಇಲ್ಲಿ ಕೊಟ್ಟಿರುವ ಫಾರ್ಮ್ ತುಂಬಿಸಿ, ನಮ್ಮ ಕಾರ್ಯಕರ್ತರು ನಿಮ್ಮ ಶೀಘ್ರವೇ ಸಂಪರ್ಕಿಸುವರು.

ಸೋಶಿಯಲ್ ಮೀಡಿಯಾದಲ್ಲಿ ಸಮಿತಿ