Menu Close

ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಮನವಿ ಬಳಿಕ ಕುನಾಲ್ ಕಾಮ್ರಾ ಕಾಮಿಡಿ ಶೋ ರದ್ದು

“ಇದು ಸಂಘಟಿತ ಹಿಂದೂ ಶಕ್ತಿಗೆ ಸಿಕ್ಕ ವಿಜಯವಾಗಿದೆ.” – ಶ್ರೀ. ಮೋಹನ ಗೌಡ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿ

ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಮನವಿ ನೀಡುತ್ತಿರುವ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ, ಶ್ರೀರಾಮ ಸೇನೆ, ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಹಿಂದೂ ಸಂಘಟನೆಗಳ ಕಾರ್ಯಕರ್ತರು

ಬೆಂಗಳೂರು, ಆಗಸ್ಟ್ 2: ಆಗಸ್ಟ್ 3, 2026 ರಂದು ಬೆಂಗಳೂರಿನ ವೈಟ್‌ಫೀಲ್ಡ್‌ನ URU Whitefield, ಪಟ್ಟಂದೂರು ಅಗ್ರಹಾರದಲ್ಲಿ ಆಯೋಜಿಸಲಾಗಿದ್ದ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರ ಕಾಮಿಡಿ ಕಾರ್ಯಕ್ರಮ ರದ್ದಾಗಿದೆ.

ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ, ಕಾನೂನು ಮತ್ತು ಸುವ್ಯವಸ್ಥೆ, ಸಾರ್ವಜನಿಕ ಶಾಂತಿ ಹಾಗೂ ಧಾರ್ಮಿಕ ಸಾಮರಸ್ಯದ ಹಿತದೃಷ್ಟಿಯಿಂದ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ (HRSS) ಅಡಿಯಲ್ಲಿ ವಿವಿಧ ಹಿಂದೂ ಸಂಘಟನೆಗಳು ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ಆಗಸ್ಟ್ 1 ರಂದು ಮನವಿ ಸಲ್ಲಿಸಿದ್ದವು.

ಮನವಿಯಲ್ಲಿ, ಕುನಾಲ್ ಕಾಮ್ರಾ ಅವರು ಈ ಹಿಂದೆ ತಮ್ಮ ಕೆಲವು ಕಾಮಿಡಿ ಕಾರ್ಯಕ್ರಮಗಳಲ್ಲಿ ಹಾಗೂ ಸಾರ್ವಜನಿಕ ಹೇಳಿಕೆಗಳಲ್ಲಿ ಶ್ರೀರಾಮ, ಹಿಂದೂ ಧರ್ಮ ಮತ್ತು ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಅವಮಾನಿಸಿ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಈ ಸಂಬಂಧ ದೇಶದ ವಿವಿಧ ಭಾಗಗಳ ಪೊಲೀಸ್ ಠಾಣೆಗಳಲ್ಲಿ ಅವರ ವಿರುದ್ಧ ಹಲವು ದೂರುಗಳು ದಾಖಲಾಗಿರುವುದನ್ನೂ ಮನವಿಯಲ್ಲಿ ಗಮನಕ್ಕೆ ತರಲಾಗಿತ್ತು. ಇಂತಹ ಹಿನ್ನೆಲೆಯನ್ನು ಪರಿಗಣಿಸಿ, ವೈಟ್‌ಫೀಲ್ಡ್‌ನಲ್ಲಿ ನಡೆಯಲಿದ್ದ ಕಾರ್ಯಕ್ರಮದಿಂದ ಸಾರ್ವಜನಿಕ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟಾಗುವ ಸಾಧ್ಯತೆಯನ್ನು ಮನಗಂಡು, ಕಾರ್ಯಕ್ರಮದ ಅನುಮತಿಯನ್ನು ಮರುಪರಿಶೀಲಿಸಿ ರದ್ದುಗೊಳಿಸುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಲಾಗಿತ್ತು. ಪೊಲೀಸರು ಸಹ ಇದರ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

ತದನಂತರ ಸ್ಥಳದ ಮಾಲೀಕರಿಂದ ಕಾರ್ಯಕ್ರಮ ರದ್ದಾಗಿರುವ ವಿಷಯ ಗಮನಕ್ಕೆ ಬಂದಿದ್ದು, ಇದನ್ನು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಸ್ವಾಗತಿಸಿದ್ದು, ಇದು ಹಿಂದೂ ಸಮಾಜದ ಜಾಗೃತಿ, ಸಂಘಟಿತ ಶಕ್ತಿ ಹಾಗೂ ಕಾನೂನುಬದ್ಧ ಮತ್ತು ಶಾಂತಿಯುತ ಹೋರಾಟದ ಫಲವಾಗಿದೆ ಎಂದು ತಿಳಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರ ಹಾಗೂ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಸಂಘಟಕರಾದ ಶ್ರೀ. ಮೋಹನ ಗೌಡ ಅವರು, “ಹಿಂದೂ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಯಾವುದೇ ಪ್ರಯತ್ನವನ್ನು ಸಮಾಜ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ಈ ಬೆಳವಣಿಗೆಯಿಂದ ಮತ್ತೊಮ್ಮೆ ವ್ಯಕ್ತವಾಗಿದೆ. ಕಾನೂನುಬದ್ಧವಾಗಿ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಪೊಲೀಸ್ ಇಲಾಖೆಗೆ ಹಾಗೂ ಈ ಹೋರಾಟದಲ್ಲಿ ಕೈಜೋಡಿಸಿದ ಎಲ್ಲಾ ಹಿಂದೂ ಸಂಘಟನೆಗಳು, ಕಾರ್ಯಕರ್ತರು ಮತ್ತು ಹಿಂದೂ ಸಮಾಜಕ್ಕೆ ಹೃತ್ಪೂರ್ವಕ ಧನ್ಯವಾದಗಳು” ಎಂದು ಹೇಳಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ, ಶ್ರೀರಾಮ ಸೇನೆಯ ಮುಖಂಡ ಶ್ರೀ. ಸುಂದರೇಶ್ ನರ್ಗಲ್, ಶ್ರೀ. ಸುಬ್ರಹ್ಮಣ್ಯ, ಶ್ರೀ. ನಾರಾಯಣ ಗೌಡ, ಶ್ರೀ. ಭರತ್ ಕುಮಾರ್, ಶ್ರೀ. ತಾಯಪ್ಪ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು

Related News