ಸಂಘಟಿತ ಹಿಂದೂಗಳು ನೀಡಿದ ದೂರಿನ ಪ್ರತಿಫಲ..

ಕಾಮಿಡಿ ಶೋ ರದ್ದುಪಡಿಸಿದಾಗಿ ತಿಳಿಸಿದ ನಾಸಿಫ್ ಅಕ್ತರ್
ಬೆಂಗಳೂರು : ಮಾರ್ಚ್ 8 ರಂದು ಬೆಂಗಳೂರಿನ ಕೋರಮಂಗಲದಲ್ಲಿರುವ Ministry of Comedy ನಲ್ಲಿ ಬೆಂಗಾಳಿ ಮೂಲದ ನಾಸಿಫ್ ಅಕ್ತರ್ ಎಂಬ ವ್ಯಕ್ತಿಯ ಕಾಮಿಡಿ ಶೋ ಆಯೋಜನೆ ಮಾಡಲಾಗಿತ್ತು. ಈತ ತನ್ನ ಹಿಂದಿನ ಕೆಲವು ಕಾಮಿಡಿ ಶೋಗಳಲ್ಲಿ ಭಾರತದ ಬಗ್ಗೆ, ಹಿಂದೂ ಧರ್ಮದ ಬಗ್ಗೆ, ಪ್ರಭು ಶ್ರೀರಾಮಚಂದ್ರರ ಬಗ್ಗೆ ಹಾಗೂ ಹಿಂದೂ ರಾಷ್ಟ್ರದ ಬಗ್ಗೆ ಅವಹೇಳನಕಾರಿ ಹಾಸ್ಯ ಮಾಡಿರುವುದರಿಂದ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ ಎಂಬ ಆಕ್ಷೇಪಣೆ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ್ ಗೌಡ ಅವರು ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ ಇ-ಮೇಲ್ ಮೂಲಕ ಮನವಿ ಸಲ್ಲಿಸಿ, ಈ ಕಾಮಿಡಿ ಶೋದಲ್ಲಿ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಅಂಶಗಳಿದ್ದು, ಇದರಿಂದ ಸಮುದಾಯಗಳ ನಡುವೆ ಅಶಾಂತಿ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಿ, ಭಾರತೀಯ ನ್ಯಾಯ ಸಂಹಿತೆಯ ವಿವಿಧ ವಿಧಿಗಳಡಿ ಈ ಶೋವನ್ನು ರದ್ದುಪಡಿಸುವಂತೆ ಆಗ್ರಹಿಸಿದ್ದರು.
ಕೋರಮಂಗಲದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ
ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಪ್ರತಿನಿಧಿಗಳು
ಅದೇ ರೀತಿಯಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಪ್ರತಿನಿಧಿಗಳು ಕೋರಮಂಗಲ ಪೊಲೀಸ್ ಠಾಣೆಗೆ ಭೇಟಿ ನೀಡಿ ಈ ವಿಷಯವಾಗಿ ದೂರು ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ವಿಷಯವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ನಂತರ ಇಂದು ನಾಸಿಫ್ ಅಕ್ತರ್ ತನ್ನ ಸಾಮಾಜಿಕ ಮಾಧ್ಯಮದ ಮೂಲಕ ಒಂದು ವಿಡಿಯೋ ಬಿಡುಗಡೆ ಮಾಡಿ, ಬೆಂಗಳೂರಿನ ಕಾಮಿಡಿ ಶೋವನ್ನು ರದ್ದುಪಡಿಸಿರುವುದಾಗಿ ಘೋಷಣೆ ಮಾಡಿದ್ದಾನೆ. ಈ ಕ್ರಮವನ್ನು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಗೌರವಿಸುವ ಕ್ರಮವಾಗಿ ಸ್ವಾಗತಿಸಲಾಗುತ್ತಿದೆ.



