ಬಾಂಗ್ಲಾ ಮೇಲೆ ಆರ್ಥಿಕ ನಿರ್ಬಂಧ ಹಾಗೂ ಮತೀಯ ಗುಂಪುಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ!

ಪ್ರತಿಭಟನೆಯಲ್ಲಿ ಉಪಸ್ಥಿತ ರಾಷ್ಟ್ರಪ್ರೇಮಿಗಳು
ಬೆಂಗಳೂರು : ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ಸರಣಿ ಹಿಂಸಾಚಾರ ಮತ್ತು ಅಮಾನವೀಯ ಹತ್ಯೆಗಳನ್ನು ಖಂಡಿಸಿ, ‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ ವತಿಯಿಂದ ಇಂದು ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಬಾಂಗ್ಲಾದೇಶದ ಮೈಮನ್‌ಸಿಂಗ್ ಪ್ರದೇಶದಲ್ಲಿ ಹಿಂದೂ ಸಮುದಾಯದ ದೀಪು ಚಂದ್ರ ದಾಸ್ ಎಂಬುವವರನ್ನು ಮತೀಯ ಗುಂಪೊಂದು ಮರಕ್ಕೆ ಕಟ್ಟಿಹಾಕಿ, ಜೀವಂತವಾಗಿ ಬೆಂಕಿಗಿಟ್ಟು ದಹಿಸಿರುವ ಘಟನೆಯು ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಢಾಕಾದಲ್ಲಿ ಯುವ ನಾಯಕ ಶರೀಫ್ ಉಸ್ಮಾನ್ ಹಾದಿ ಅವರ ಹತ್ಯೆಯ ನಂತರ, ಅದನ್ನು ನೆಪವಾಗಿಸಿಕೊಂಡು ಸಂಯೋಜಿತ ರೀತಿಯಲ್ಲಿ ಹಿಂದೂಗಳ ಮನೆ, ಅಂಗಡಿ ಹಾಗೂ ದೇವಸ್ಥಾನಗಳನ್ನು ಗುರಿಯಾಗಿಸಿ ಬೆಂಕಿ ಹಚ್ಚಲಾಗುತ್ತಿದೆ. ಈ ಭೀಕರತೆಗೆ ಸಾಕ್ಷ್ಯವಾಗಿ ಹಲವಾರು ವೀಡಿಯೋಗಳು ಹಾಗೂ ಅಂತರರಾಷ್ಟ್ರೀಯ ಮಾಧ್ಯಮಗಳ ವರದಿಗಳು ಲಭ್ಯವಿದ್ದರೂ, ಬಾಂಗ್ಲಾ ಸರ್ಕಾರ ಕಿವುಡಾಗಿ ಕುಳಿತಿರುವುದು ಖಂಡನೀಯ. ಈ ಘೋರ ಕೃತ್ಯವು ಬಾಂಗ್ಲಾದಲ್ಲಿ ಹಿಂದೂಗಳ ಸ್ಥಿತಿ ಎಷ್ಟು ಭಯಂಕರವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇದು ಕೇವಲ ಹಿಂಸಾಚಾರವಲ್ಲ, ಬದಲಿಗೆ ಒಂದು ನಿರ್ದಿಷ್ಟ ಸಮುದಾಯವನ್ನು ನಾಶಮಾಡುವ ಉದ್ದೇಶಪೂರ್ವಕ ಸಂಚು ಎಂದು ಸಮಿತಿ ದೂರಿದೆ.
ಜನಗಣನೆಯ ಪ್ರಕಾರ 1941 ರಲ್ಲಿ 28% ಇದ್ದ ಹಿಂದೂ ಜನಸಂಖ್ಯೆ ಈಗ ಕೇವಲ 7.8% ಮಾತ್ರ ಉಳಿದಿದೆ. ಭಾರತ-ಬಾಂಗ್ಲಾದೇಶ ಒಪ್ಪಂದದ ಮೂಲಕ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ ರಕ್ಷಣೆ, ಸಂಯುಕ್ತ ರಾಷ್ಟ್ರಗಳು ಹಾಗೂ ಮಾನವ ಹಕ್ಕುಗಳ ಆಯೋಗದಲ್ಲಿ ವಿಷಯವನ್ನು ಎತ್ತಿ ಹಿಡಿದು ಫ್ಯಾಕ್ಟ್-ಫೈಂಡಿಂಗ್ ಮಿಷನ್ ನಡೆಸುವುದು, ಹಿಂಸೆಗೆ ಒಳಗಾದ ಹಿಂದೂಗಳಿಗೆ ನಾಗರಿಕತೆ ಹಾಗೂ ಪುನರ್ವಸತಿ ನೀತಿ, ದೇವಸ್ಥಾನಗಳು ಮತ್ತು ಧಾರ್ಮಿಕ ಆಸ್ತಿಗಳ ಸಂಯುಕ್ತ ಸಮೀಕ್ಷೆ, ಬಾಂಗ್ಲಾದೇಶದ ಹಿಂದೂ ಸಮಾಜದೊಂದಿಗೆ ನೇರ ಸಂವಹನ ವ್ಯವಸ್ಥೆ . ವಿಶ್ವದ ಅತಿದೊಡ್ಡ ಹಿಂದೂ ಬಹುಸಂಖ್ಯಾತ ದೇಶವಾಗಿರುವ ಭಾರತವು, ಬಾಂಗ್ಲಾದೇಶದ ಹಿಂದೂಗಳ ಸುರಕ್ಷತೆಗಾಗಿ ರಾಜಕೀಯ, ಕಾನೂನು ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನಿಸಬೇಕು. ಬಾಂಗ್ಲಾದೇಶದಲ್ಲಿ ನಿರಂತರ ನಡೆಯುತ್ತಿರುವ ಹಿಂದೂ ವಿರೋಧಿ ಹಿಂಸಾಚಾರವನ್ನು ತಡೆಯಲು ಭಾರತ ಸರ್ಕಾರವು ಬಾಂಗ್ಲಾದೇಶದ ಮೇಲೆ ಆರ್ಥಿಕ, ವ್ಯಾಪಾರಿಕ ಹಾಗೂ ರಾಜಕೀಯ ನಿರ್ಬಂಧಗಳನ್ನು ವಿಧಿಸಬೇಕೆಂದು ಜೊತೆಗೆ ಬಾಂಗ್ಲಾದೇಶದ ಉಗ್ರ ಹಾಗೂ ಮತೀಯ ಗುಂಪುಗಳ ವಿರುದ್ಧ ಕಠಿಣ ಮಿಲಿಟರಿ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಯನ್ನು ವ್ಯಕ್ತ ಮಾಡಿದರು.
ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಮರಳಿ ಕಳುಹಿಸಬೇಕು ! – ಶ್ರೀ. ಪುನೀತ್ ಕೆರೆಹಳ್ಳಿ, ಸಂಸ್ಥಾಪಕರು, ರಾಷ್ಟ್ರ ರಕ್ಷಣಾ ಪಡೆ
ಭಾರತ ಹಾಗೂ ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ಗುರುತಿಸಿ ಕಾನೂನುಬದ್ಧವಾಗಿ ವಾಪಸ್ ಕಳುಹಿಸಬೇಕು. ಜಗತ್ತಿನ ಎಲ್ಲೆಡೆ ಹಿಂದುಗಳ ಮೇಲೆ ದೌರ್ಜನ್ಯವಾದಾಗ ಸಂಘಟಿತ ಪ್ರತಿಕ್ರಿಯೆ ಅಗತ್ಯ. ಇಲ್ಲದಿದ್ದರೆ ಅದರ ಪರಿಣಾಮಗಳು ನಮಗೂ ತಟ್ಟಬಹುದು. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಕಠಿಣ ಹಾಗೂ ಸ್ಪಷ್ಟ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
” ಸೈನಿಕರ ಬಲಿದಾನಕ್ಕೆ ಬೆಲೆ ಇಲ್ಲವೇ ? ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯ ತಡೆಯಲು ಕೃತಿಶೀಲ ಕ್ರಮಕ್ಕೆ ಆಗ್ರಹ.” – ಶ್ರೀ. ಸುಂದರೇಶ್ ನರಗಲ್, ರಾಜ್ಯದ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷರು, ಶ್ರೀರಾಮ ಸೇನಾ
ಭಾರತದ ಸೈನಿಕರ ಬಲಿದಾನದಿಂದ ಬಾಂಗ್ಲಾದೇಶ ಸ್ವತಂತ್ರವಾಯಿತು; ಆದರೆ ಇಂದು ಕೃತಜ್ಞತೆಯ ಕೊರತೆ ಕಾಣುತ್ತಿದೆ. ಅಲ್ಲಿನ ಹಿಂದೂಗಳಿಗೆ ಧಾರ್ಮಿಕ ಸ್ವಾತಂತ್ರ್ಯವೂ ನಿರ್ಬಂಧಿತವಾಗಿದೆ. ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆಗೆ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.
ಈ ಸಂದರ್ಭದಲ್ಲಿ ರಾಷ್ಟ್ರ ರಕ್ಷಣಾ ಪಡೆ, ಹಿಂದೂ ಜಾಗರಣ ವೇದಿಕೆ, ಶ್ರೀ ರಾಮ ಸೇನೆ, ಸೇವಾ ಕನ್ನಡಿಗ ಟ್ರಸ್ಟ್, ಶಿವಾಜಿ ಸೇನೆ, ಆಜಾದ್ ಸೇನೆ, ಹಿಂದೂ ಜನಜಾಗೃತಿ ಸಮಿತಿ ಇತರ ಸಂಘಟನೆಗಳ ವಕೀಲರು, ಉದ್ಯಮಿಗಳು ಸೇರಿದಂತೆ ನೂರಕ್ಕು ಹೆಚ್ಚು ರಾಷ್ಟ್ರಪ್ರೇಮಿಗಳು ಪ್ರತಿಭಟನೆಯಲ್ಲಿ ಸಹಭಾಗವಾಗಿದ್ದರು.


