Menu Close

ಮುಂಬೈಯಲ್ಲಾಗುತ್ತಿರುವ ರಾಷ್ಟ್ರದ್ರೋಹಿ ಮತ್ತು ಹಿಂದೂ ದ್ವೇಷಿ ಎಂ.ಎಫ್. ಹುಸೇನ್ ಅವರ ಚಿತ್ರಗಳ ಹರಾಜಿಗೆ ನಿಷೇಧ ಹೇರಿ; ಇಲ್ಲದಿದ್ದರೆ ತೀವ್ರ ಹೋರಾಟ ಮಾಡುತ್ತೇವೆ ! – ಹಿಂದೂ ಜನಜಾಗೃತಿ ಸಮಿತಿ

ಭಾರತಮಾತೆಯನ್ನು ಹೀನಾಯವಾಗಿ ಅಪಮಾನಿಸಿದ ಎಂ.ಎಫ್. ಹುಸೇನ್ ಅವರ ವೈಭವೀಕರಣವನ್ನು ನಿಲ್ಲಿಸುವಂತೆ ಆಗ್ರಹ

ಎಡದಿಂದ: ಶ್ರೀ. ರವೀಂದ್ರ ದಾಸಾರಿ, ವಕೀಲರಾದ ಸುದರ್ಶನ ಗಜಮ್, ಅನೀಶ್ ಪರಳ್ಕರ್, ಶ್ರೀ ಬಲವಂತ್ ಪಾಠಕ್. ಮನವಿ ಸ್ವೀಕರಿಸುತ್ತಿರುವ ಮುಂಬೈನ ಹೆಚ್ಚುವರಿ ಜಿಲ್ಲಾ ಅಧಿಕಾರಿ ಶ್ರೀ. ರವಿ ರತನ ಕಟಕಧೊಂಡ್.

ಮುಂಬಯಿ – 140 ಕೋಟಿ ಭಾರತೀಯರ ಶ್ರದ್ಧಾ ಕೇಂದ್ರವಾಗಿರುವ ಭಾರತಮಾತೆಯನ್ನು ‘ರೇಪ್ ಆಫ್ ಇಂಡಿಯಾ’ ಹೆಸರಿನಲ್ಲಿ ಅತ್ಯಂತ ವಿಕೃತ, ಅಸಭ್ಯ, ನಗ್ನ ಮತ್ತು ಅಶ್ಲೀಲವಾಗಿ ಚಿತ್ರಿಸಿದ ವಿವಾದಾತ್ಮಕ ಚಿತ್ರಕಾರ ಎಂ.ಎಫ್. ಹುಸೇನ್ ನ ಇತರೆ 25 ಚಿತ್ರಗಳ ಹರಾಜು ಜೂನ್ 12, 2025 ರಂದು ಮುಂಬಯಿನ ಹ್ಯಾಮಿಲ್ಟನ್ ಹೌಸ್‌ನಲ್ಲಿರುವ ‘ಪಾಂಡೋಲ್ ಆರ್ಟ್ ಗ್ಯಾಲರಿ’ ಮೂಲಕ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಇಂದು ಮಹಾರಾಷ್ಟ್ರದ ಮುಖ್ಯಮಂತ್ರಿ, ಕೇಂದ್ರ ಗೃಹ ಸಚಿವ, ಮುಂಬಯಿ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಈ ಹರಾಜಿಗೆ ತಕ್ಷಣವೇ ನಿಷೇಧ ಹೇರಬೇಕು ಮತ್ತು ಹುಸೇನ್ ನ ಅಪರಾಧ ಕೃತ್ಯಗಳ ವೈಭವೀಕರಣವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ. ಇಲ್ಲವಾದರೆ, ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಈ ಮನವಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಮುಂದಿನಂತೆ ಹೇಳುತ್ತಾ ಎಂ.ಎಫ್. ಹುಸೇನ್ 26/11 ರ ಸಮಯದಲ್ಲಿ ‘ರೇಪ್ ಆಫ್ ಇಂಡಿಯಾ’ ಎಂಬ ಚಿತ್ರದಲ್ಲಿ ಭಾರತಮಾತೆಯನ್ನು ನಗ್ನವಾಗಿ ಮತ್ತು ಅವಮಾನಕರವಾಗಿ ಚಿತ್ರಿಸುವ ಮೂಲಕ ದೇಶದ್ರೋಹದ ಪರಮಾವಧಿಯನ್ನು ತಲುಪಿದ್ದಾರೆ. ಮತ್ತೊಂದು ಚಿತ್ರದಲ್ಲಿ ಭಾರತಮಾತೆಯನ್ನು ನಗ್ನವಾಗಿ ಚಿತ್ರಿಸಿ, ಅದರ ಮೇಲೆ ವಿವಿಧ ನಗರಗಳ ಹೆಸರುಗಳನ್ನು ಬರೆದು ತೋರಿಸಲಾಗಿದೆ. ಇತರೆ ಚಿತ್ರಗಳಲ್ಲಿ ನಗ್ನ ಹನುಮಂತನ ಬಾಲದ ಮೇಲೆ ಕುಳಿತಿರುವ ನಗ್ನ ಸೀತೆ; ಒಂದು ಚಿತ್ರದಲ್ಲಿ ನಗ್ನ ಹನುಮಂತ, ನಗ್ನ ರಾಮ ಮತ್ತು ನಗ್ನ ಸೀತೆಯನ್ನು ಒಟ್ಟಿಗೆ ತೋರಿಸಲಾಗಿದೆ; ಶ್ರೀ ಗಣೇಶನನ್ನು ನಗ್ನ ಸ್ತ್ರೀಯ ತೊಡೆಯ ಮೇಲೆ ಕುಳ್ಳಿರಿಸಲಾಗಿದೆ; ಇನ್ನೊಂದು ಚಿತ್ರದಲ್ಲಿ ಭಗವಾನ್ ಹನುಮಂತನನ್ನು ನಗ್ನ ಸ್ತ್ರೀಯನ್ನು ಕೈಯಲ್ಲಿ ಹಿಡಿದು ಹಾರುತ್ತಿರುವಂತೆ ತೋರಿಸಲಾಗಿದೆ. ಈ ರೀತಿಯಾಗಿ, ಸರಸ್ವತಿ ಮಾತೆ, ಪಾರ್ವತಿ ಮಾತೆ, ಗಂಗಾ ಮಾತೆ, ಯಮುನಾ ಮಾತೆ ಸೇರಿದಂತೆ ದೇವಿ-ದೇವತೆಗಳನ್ನು ಉದ್ದೇಶಪೂರ್ವಕವಾಗಿ ವಿಕೃತ, ನಗ್ನ ಮತ್ತು ಅಶ್ಲೀಲವಾಗಿ ಚಿತ್ರಿಸುವ ಮೂಲಕ ಕೋಟ್ಯಂತರ ಹಿಂದೂಗಳ ಶ್ರದ್ಧೆಗೆ ಘೋರ ಅಪಮಾನ ಮಾಡಿದ್ದಾರೆ. ಈ ಅವಮಾನಕರ ಚಿತ್ರಗಳ ವಿರುದ್ಧ ಹುಸೇನ್ ವಿರುದ್ಧ ದೇಶಾದ್ಯಂತ 1250 ಕ್ಕೂ ಹೆಚ್ಚು ಪೊಲೀಸ್ ದೂರುಗಳು ದಾಖಲಾಗಿವೆ. ಇದೇ ಕಾರಣಕ್ಕೆ ಅವರ ಪ್ರದರ್ಶನಗಳಿಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು ಮತ್ತು ಅಂತಿಮವಾಗಿ ಹುಸೇನ್ ಭಾರತದಿಂದ ಪಲಾಯನ ಮಾಡಿ ಕತಾರ್‌ನ ಪೌರತ್ವವನ್ನು ಸ್ವೀಕರಿಸಿದ್ದರು ಎಂದು ಹೇಳಿದೆ.

25 ಚಿತ್ರಗಳ ಹರಾಜು ಎಂದರೆ ಅವರ ಹಿಂದಿನ ರಾಷ್ಟ್ರವಿರೋಧಿ ಮತ್ತು ಸಮಾಜ ವಿರೋಧಿ ಕೃತ್ಯಗಳಿಗೆ ಪರೋಕ್ಷವಾಗಿ ಬೆಂಬಲ ನೀಡುವುದಾಗಿದೆ. ‘ಕಲಾತ್ಮಕ ಸ್ವಾತಂತ್ರ್ಯ’ ಎಂಬ ಹೆಸರಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮತ್ತು ದೇಶ ವಿರೋಧಿ ವ್ಯಕ್ತಿಗಳನ್ನು ವೈಭವೀಕರಿಸುವುದು ಯಾವುದೇ ರೀತಿಯಲ್ಲಿ ಸಮರ್ಥನೀಯವಲ್ಲ. ಇತ್ತೀಚೆಗೆ ದೆಹಲಿಯ ಪಟಿಯಾಲಾ ಹೌಸ್ ನ್ಯಾಯಾಲಯವು ಹುಸೇನ್ ಅವರ ಪ್ರದರ್ಶನದ ಚಿತ್ರಗಳನ್ನು ವಶಪಡಿಸಿಕೊಳ್ಳುವಂತೆ ಆದೇಶಿಸಿದ್ದು, ಅದರ ತನಿಖೆ ನಡೆಯುತ್ತಿದೆ. ಇದಕ್ಕೂ ಮೊದಲು ದೇಶಾದ್ಯಂತ ಹುಸೇನ್ ಅವರ ಅನೇಕ ಚಿತ್ರಪ್ರದರ್ಶನಗಳಿಗೆ ವಿರೋಧ ವ್ಯಕ್ತವಾಗಿತ್ತು. ಆ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿತ್ತು. ಹುಸೇನ್ ಹೆಸರಿನಲ್ಲಿ ನೀಡಲಾಗುತ್ತಿದ್ದ ಪ್ರಶಸ್ತಿಗಳನ್ನೂ ರದ್ದುಗೊಳಿಸಲಾಗಿದೆ, ಎಂದು ಸಮಿತಿಯು ಹೇಳಿದೆ.

ಎಂ.ಎಫ್. ಹುಸೇನ್ ಅವರ ಚಿತ್ರಗಳ ಪ್ರಸ್ತಾವಿತ ಹರಾಜು ಮತ್ತು ಮಾರಾಟವನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಅದರ ಮೇಲೆ ಕಾನೂನುಬದ್ಧ ನಿಷೇಧ ಹೇರಬೇಕು ಎಂದು ಹೇಳಿದೆ. ಈ ಚಿತ್ರಗಳನ್ನು ಪ್ರದರ್ಶಿಸುವ ಅಥವಾ ಮಾರಾಟ ಮಾಡುವ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಕಲಾ ಗ್ಯಾಲರಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ರಾಷ್ಟ್ರೀಯ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕಲಾಕೃತಿಗಳ ಪ್ರಸಾರಕ್ಕೆ ನಿಷೇಧ ಹೇರಬೇಕು, ಹಾಗೆಯೇ ಹುಸೇನ್ ಅವರ ಭಾರತಮಾತೆಯ ಚಿತ್ರವನ್ನು ದೇಶವಿರೋಧಿ ಎಂದು ಘೋಷಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.

Related News