Menu Close

ದಕ್ಷಿಣ ಕನ್ನಡದಲ್ಲಿ ಹಿಂದೂ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿರುವ ಪೊಲೀಸರ ಮೇಲೆ ಸೂಕ್ತ ಕ್ರಮ ಜರುಗಿಸಿ ! – ಹಿಂದೂ ರಾಷ್ಟ್ರ ಸಮನ್ವಯ ಸಮಿತಿ

ಪೊಲೀಸ್ ದೂರು ಪ್ರಾಧಿಕಾರ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ಹಿಂದೂ ಸಂಘಟನೆಗಳ ದೂರು

ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೆ ಮನವಿ ನೀಡುತ್ತಿರುವ ಅಮೃತೇಶ್ ಎನ,ಪಿ, ವಕೀಲರು, ಮೋಹನ ಗೌಡ, ರಾಜ್ಯ ವಕ್ತಾರ, ಹಿಂದೂ ಜನಜಾಗೃತಿ ಸಮಿತಿ, ಪುನಿತ್ ಕರೆಹೆಳ್ಳಿ, ರಾಷ್ಟ್ರ ರಕ್ಷಣೆ ಪಡೆ, ಎಮ್. ಎಲ್. ಶಿವ ಕುಮಾರ್, ಮಲ್ಲಿಕಾರ್ಜುನ ರಾಜು, ಯುತ್ ಪಾರ್ ಹ್ಯುಮನ್ ರೈಟ್ಸ್, ಡಿ.ಪಿ ಪ್ರಸನ್ನ, ವಕೀಲರು, ಕೆ. ಕೃಷ್ಣಸ್ವಾಮಿ, ವಕೀಲರು, ಗಿರೀಶ್ ಎಂ.ಬಿ, ಶ್ರೀರಾಮ ಸೇನೆ,ಚಿದಾನಂದ ಮಠದ್, ವಕೀಲರು, ಸುರೇಶ್ ಗೌಡ, ರಾಷ್ಟ್ರೀಯ ಹಿಂದೂ ಪರಿಷದ್ ಮುಂತಾದವರು ಉಪಸ್ಥಿತರಿದ್ದರು.

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು ಕಳೆದ ಒಂದು ವಾರದಿಂದ ಕೋಮು ಸೌಹಾರ್ದವನ್ನು ಕಾಪಾಡುವ ನೆಪದಲ್ಲಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ಅವರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯ ಮೇರೆಗೆ ಹಿಂದೂ ಕಾರ್ಯಕರ್ತರಿಗೆ ವಿಚಾರಣೆಯ ನೆಪದಲ್ಲಿ ಪೋಲಿಸ್ ಠಾಣೆಯಿಂದ ಮದ್ಯ ರಾತ್ರಿ ಕರೆ ಮಾಡಿ, ನೋಟಿಸು ನೀಡದೆ ವಿಚಾರಣೆಗೆ ಕರೆಯುವುದು, ಮಧ್ಯರಾತ್ರಿ ಹಿಂದೂ ಕಾರ್ಯಕರ್ತರ ಮನೆಗೆ ಬಲವಂತವಾಗಿ ಹೋಗಿ ವಿಚಾರಣೆ ಮಾಡುವುದು, ಬಲವಂತವಾಗಿ ರಾತ್ರಿ ಅವರ ಪೋಟೊ ತೆಗೆಯುವುದು, ಅವರ ಮನೆಯ ಜಿಪಿಎಸ್ ಲೊಕೇಶನ್ ಸಂಗ್ರಹಿಸುವುದು. ಯಾವುದೇ ರೀತಿಯಲ್ಲಿ ಹಿಂದೂ ಸಂಘಟನೆಯ ಚಟುವಟಿಕೆಯಲ್ಲಿ ಭಾಗಿಯಾಗದ ಹಿಂದೂಗಳನ್ನು, ವಯಸ್ಕರನ್ನು ಬಿಡದೇ ಮದ್ಯರಾತ್ರಿ ಪೋನ್ ಮಾಡಿ, ಮನೆಗೆ ಹೋಗಿ ಕಿರುಕುಳ ನೀಡಲಾಗಿದೆ. ಇದರ ವಿರುದ್ಧ ಜೂನ್ 4, 2025 ಬುಧವಾರದಂದು ಬೆಂಗಳೂರಿನ ವಿಶ್ವೇಶ್ವರಯ್ಯ ಟವರ್ ನಲ್ಲಿನ ಪೊಲೀಸ್ ದೂರು ಪ್ರಾಧಿಕಾರದಲ್ಲಿ ಅಲ್ಲಿನ ಅಧ್ಯಕ್ಷರಾದ ಸನ್ಮಾನ್ಯ ನ್ಯಾಯಮೂರ್ತಿ ಎನ್. ಕೆ. ಸುಧೀಂದ್ರ ರಾವ್ ಇವರಿಗೆ ದೂರು ನೀಡಲಾಯಿತು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ, ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ವಕೀಲರಾದ ನ್ಯಾಯವಾದಿ ಅಮೃತೇಶ್ ಎನ್ ಪಿ, ರಾಷ್ಟ್ರ ರಕ್ಷಣಾ ಪಡೆಯ ಶ್ರೀ. ಪುನೀತ್ ಕೆರೆಹಳ್ಳಿ ಸೇರಿದಂತೆ ಅನೇಕ ವಕೀಲರು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.

ಶ್ರೀ. ಮೋಹನ ಗೌಡ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಕಡಬ ಸೇರಿದಂತೆ ಅನೇಕ ಕಡೆಗಳಿಂದ ವೃದ್ಧರು ಸೇರಿದಂತೆ ಅನೇಕ ಜನರಿಗೆ ತಡ ರಾತ್ರಿ ಕರೆ ಮಾಡಿ ಪೊಲೀಸರು ಅವರ ಮಾಹಿತಿ, ವಿಳಾಸ ಕೇಳಿದ್ದಾರೆ. ಸುಮಾರು 21 ಹಿಂದೂ ನಾಯಕರು, ರೈತರು, ಸಾಮಾಜಿಕ ಕಾರ್ಯಕರ್ತರಿಗೆ ಗಡಿಪಾರು ಆದೇಶವನ್ನು ಮಾಡಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಭಯದ ವಾತವರಣವು ನಿರ್ಮಾಣವಾಗಿದೆ. ಪೊಲೀಸರು ರಾತ್ರೊರಾತ್ರಿ ಹಿಂದೂಗಳ ಮನೆಗೆ ಬರುವುದರಿಂದ ಜನರಲ್ಲಿ ಭಯದ ವಾತವರಣದಲ್ಲಿ ಬದುಕುವ ಸ್ಥಿತಿಯು ನಿರ್ಮಾಣವಾಗಿದೆ ಎಂದರು.

ನ್ಯಾಯವಾದಿ ಅಮೃತೇಶ ಮಾತನಾಡಿ ಹಿಂದೂಗಳು ಸಾಮಾಜಿಕ ಜಾಲತಾಣದಲ್ಲಿ ಏನೇ ಬರೆದರೂ ಅವರ ಮೇಲೆ ಪ್ರಕರಣ ದಾಖಲಿಸಿ ಅವರನ್ನು ಬಂಧಿಸುವುದು, ಅವರಿಗೆ ಕಿರುಕುಳ ನೀಡಿ ಅವರ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗುತ್ತಿದೆ. ಈ ರೀತಿ ಪೊಲೀಸರು ಕಾನೂನಿನ ಎಲ್ಲ ನಿಯಮಗಳನ್ನು ಮೀರಿ ಹಿಂದೂ ಕಾರ್ಯಕರ್ತರಿಗೆ, ಸಾಮಾಜಿಕ ಕಾರ್ಯಕರ್ತರಿಗೆ ಕಿರುಕುಳ ನೀಡುವುದು ಭಾರತ ಸಂವಿಧಾನದ ಕಲಂ 14, 17, 19 ಮತ್ತು 21 ರ ಉಲ್ಲಂಘನೆಯಾಗಿದೆ. ಅದಲ್ಲದೇ ಭಾರತೀಯ ನ್ಯಾಯ ಸಂಹಿತೆ ಕಲಂ 105, 107, 182, 352, 128 ಪ್ರಕಾರ ಇದು ಗಂಭೀರ ಅಪರಾಧವಾಗಿದೆ. ಇದು ಭಾರತದ ಸಂವಿದಾನವು ನೀಡಿದ ನಾಗರಿಕರ ಖಾಸಗಿ ಹಕ್ಕು ಮತ್ತು ಜೀವನದ ಹಕ್ಕನ್ನು ಕಸಿದು, ನಮ್ಮಲ್ಲಿ ಅಸುರಕ್ಷಿತ ಭಾವನೆ ನಿರ್ಮಾಣ ಮಾಡುವ ಪ್ರಯತ್ನವಾಗಿದೆ ಎಂದರು.

ಈ ದೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಪೋಲಿಸ್ ಅಧಿಕಾರಿಗಳು ಮಾನವ ಹಕ್ಕಗಳ ಉಲ್ಲಂಘನೆ ಮಾಡಿದ ಬಗ್ಗ್ಲೆ ಉನ್ನತ ಮಟ್ಟದ ತನಿಖೆ ನಡೆಸಬೇಕು, ಕಿರುಕುಳಕ್ಕೆ ಒಳಗಾದ ಹಿರಿಯ ನಾಗರಿಕರಿಗೆ ಪರಿಹಾರ ನೀಡಬೇಕು ಮತ್ತು ಸಂಬಂಧಿಸಿದವರಿಂದ ಲಿಖಿತ ಕ್ಷಮಾಪಣೆ ಮಾಡಲು ಆದೇಶಿಸಿ ಪೀಡಿತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ. ಇದೇ ದೂರಿನ ಪ್ರತಿಯನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ನೀಡಲಾಗಿದೆ.

Related News