Menu Close

ಧರ್ಮದಾಯ ಅಧಿನಿಯಮ ಕಾಯಿದೆಯ ಕಲಂ 29 ಕ್ಕನುಸಾರ ದೇವಸ್ಥಾನಗಳ ಜಾತ್ರೆ, ಉತ್ಸವಗಳಲ್ಲಿ ಹಿಂದೂಯೇತರರಿಗೆ ಅಂಗಡಿ-ಮುಂಗಟ್ಟುಗಳಿಗೆ ಅನುಮತಿ ನೀಡಬೇಡಿ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ಮನವಿ

ಜಿಲ್ಲಾಧಿಕಾರಿಗಳಿಗೆ ಮನವಿ ನೀಡುತ್ತಿರುವ ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಶ್ರೀ. ಮೋಹನ್ ಗೌಡ, ನ್ಯಾಯವಾದಿ ಪ್ರಸನ್ನ ಡಿ.ಪಿ ಹಾಗೂ ಶ್ರೀ. ರಾಘವೇಂದ್ರಾಚಾರ್

ಬೆಂಗಳೂರು : ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡಲು ದೇವಸ್ಥಾನದ ಪರಿಸರದಲ್ಲಿ ಯಾವುದೇ ಕಾರಣಕ್ಕೂ ಹಿಂದೂಯೇತರರಿಗೆ, ನಾಸ್ತಿಕರಿಗೆ ಅಂಗಡಿ ಮುಂಗಟ್ಟು ಹಾಕಲು ಅವಕಾಶ ನಿರಾಕರಿಸಿ ಧರ್ಮದಾಯ ಅಧಿನಿಯಮ ಕಾಯಿದೆಯ ಕಲಂ ೨೯ ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು, ಈ ವೇಳೆ ಮಹಾಸಂಘದ ರಾಜ್ಯ ಸಂಯೋಜಕರಾದ ಶ್ರೀ. ಮೋಹನ್ ಗೌಡ, ನ್ಯಾಯವಾದಿ ಪ್ರಸನ್ನ ಡಿ.ಪಿ, ಶ್ರೀ. ರಾಘವೇಂದ್ರಾಚಾರ್, ಶ್ರೀ. ಶ್ಯಾಮಸುಂದರ್, ಆರ್ಚಕರದ ಶ್ರೀ. ಎಮ್ . ಭಾಗ್ವತ್, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ನೀಲೇಶ್ವರ ಬಿ.ಎಂ ಮತ್ತಿತರರು ಉಪಸ್ಥಿತರಿದ್ದರು.

ಈ ವೇಳೆ ಶ್ರೀ. ಮೋಹನ್ ಗೌಡ ಮಾತನಾಡಿ, ಹಿಂದೂ ದೇವಸ್ಥಾನಗಳು ಹಿಂದೂ ಧರ್ಮದ ಅತ್ಯಂತ ಪವಿತ್ರವಾದ ಶ್ರದ್ಧಾಕೇಂದ್ರವಾಗಿದೆ ಮತ್ತು ದೇವಸ್ಥಾನಗಳಿಗೆ ಅದರದ್ದೇ ಆದಂತಹ ವಿಶೇಷವಾದ ಆಧ್ಯಾತ್ಮಿಕ, ಧಾರ್ಮಿಕ ಮತ್ತು ಐತಿಹಾಸಿಕ ಹಿನ್ನೆಲೆ ಮತ್ತು ಮಹತ್ವವಿದೆ. ದೇವಸ್ಥಾನಗಳಲ್ಲಿ ಪ್ರತಿನಿತ್ಯ ನಡೆಯುವ ಪೂಜೆ, ಅರ್ಚನೆ, ಹೋಮ-ಹವನ ಮುಂತಾದ ಧಾರ್ಮಿಕ ವಿಧಿಗಳಿಂದ ದೇವಸ್ಥಾನದಲ್ಲಿ, ದೇವತೆಗಳ ಸ್ಥಾನದಲ್ಲಿ ಸತ್ತ್ವಿಕತೆಯು ನಿರ್ಮಾಣವಾಗಿರುತ್ತದೆ. ಅದರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಭಕ್ತ, ವಿಶ್ವಸ್ಥರ ಕರ್ತವ್ಯವಾಗಿದೆ. ಇದರ ಸಂರಕ್ಷಣೆ ಮಾಡಲು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ಅಧಿನಿಯಮ ೧೯೯೭ ರ ಕಾಯಿದೆಗೆ ೨೦೦೨ ರಲ್ಲಿ ತಿದ್ದುಪಡಿ ಮಾಡಲಾಗಿದೆ. ಈಗ ಮಾರ್ಚ್, ಎಪ್ರಿಲ್ ತಿಂಗಳಿನಲ್ಲಿ ಎಲ್ಲಾ ದೇವಸ್ಥಾನಗಳ ವಾರ್ಷಿಕ ಜಾತ್ರೆಯು ಪ್ರಾರಂಭವಾಗುತ್ತಿದೆ. ಉದಾ : ಬೆಂಗಳೂರು ಕರಗ, ಬನ್ನೇರುಘಟ್ಟ ರಸ್ತೆಯಲ್ಲಿ ಚಂಪಕ ರಾಮ ದೇವಸ್ಥಾನ ಜಾತ್ರೆಯು ಪ್ರಾರಂಭವಾಗುತ್ತದೆ. ಈ ವಾರ್ಷಿಕ ಜಾತ್ರೆಗೆ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ. ಇಂತಹ ಸಂದರ್ಭದಲ್ಲಿ ಕೊಟ್ಯಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುತ್ತದೆ. ಇದರ ದುರುಪಯೋಗವನ್ನು ಪಡೆಯಲು ಅನ್ಯಸಮುದಾಯದವರು, ದೇವರ ಮೇಲೆ ನಂಬಿಕೆ ಇಲ್ಲದ ನಾಸ್ತಿಕರು ದೇವಸ್ಥಾನದ ಪ್ರಾಂಗಣ, ಪರಿಸರದಲ್ಲಿ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ವ್ಯಾಪಾರ ಮಾಡುವುದು ಗಮನಕ್ಕೆ ಬರುತ್ತದೆ. ಇದರಿಂದ ದೇವಸ್ಥಾನದ ಸಾತ್ತ್ವಿಕ ವಾತಾವರಣವು ಹಾಳಾಗುತ್ತದೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ಅಧಿನಿಯಮ ೧೯೯೭ ರ ಕಾಯಿದೆಯ ಕಲಂ ೨೯(೮)(೧೨) ರ ಪ್ರಕಾರ “ಹಿಂದೂ ದೇವಸ್ಥಾನದ ಸಮೀಪದ ಜಮೀನು, ಕಟ್ಟಡ, ನಿವೇಶನಗಳು ಸೇರಿ ಯಾವುದೇ ಸ್ವತ್ತನ್ನು ಹಿಂದೂಯೇತರರಿಗೆ ನೀಡಬಾರದು” ಎಂದು ಸ್ಪಷ್ಟವಾಗಿ ಉಲ್ಲೇಖವಿದೆ. ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಹಿಂದೂ ದೇವಸ್ಥಾನಗಳ ಜಾಗವನ್ನು ಅಕ್ರಮವಾಗಿ ಕಬಳಿಸಿ, ಅಲ್ಲಿ ಹಿಂದೂಯೇತರರು ಪಾವಿತ್ರ್ಯತೆಗೆ ಧಕ್ಕೆ ತರುವ ಅಂಗಡಿಯನ್ನು ಹಾಕಿರುವುದು ಅನೇಕ ಕಡೆಗಳಲ್ಲಿ ಗಮನಕ್ಕೆ ಬಂದಿದೆ, ಇಲಾಖೆಯ ಅಧಿಕಾರಿಗಳು ದೇವಸ್ಥಾನಗಳ ಜಾಗದ ಸಂರಕ್ಷಣೆ ಬಗ್ಗೆ ಯಾವುದೇ ಕ್ರಮ ಜರುಗಿಸದಿರುವುದು ಅಧಿಕಾರಿಗಳ ಬೇಜವ್ದಾರಿಯನ್ನು ಎತ್ತಿ ತೋರಿಸುತ್ತದೆ. ಈಗಲಾದರೂ ಇಲಾಖೆಯು ಎಚ್ಚೆತ್ತುಕೊಂಡು ಹಿಂದೂ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಬರುವ ದೇವಸ್ಥಾನಗಳ ಜಾಗದಲ್ಲಿ ಧಾರ್ಮಿಕ ದತ್ತಿ ಕಾಯಿದೆಗೆ ವಿರುದ್ಧವಾಗಿ ಹಿಂದೂಯೇತರರು ಅಂಗಡಿಯನ್ನು ಹಾಕಿದ್ದರೆ, ಕೂಡಲೇ ತೆರವುಗೊಳಿಸಬೇಕು, ತುಂಡು ಗುತ್ತಿಗೆಯನ್ನು ಹಿಂದೂಯೇತರರಿಗೆ ನೀಡಬಾರದು, ಅಷ್ಟೇಅಲ್ಲದೇ ಹಿಂದೂ ದೇವಸ್ಥಾನಗಳ ವಾರ್ಷಿಕ ಜಾತ್ರೆಯಲ್ಲಿ ಹಿಂದೂಯೇತರರು, ಹಿಂದೂ ಧಾರ್ಮಿಕ ನಂಬಿಕೆಯನ್ನು ಗೌರವಿಸದವರಿಗೆ ಅಂಗಡಿಯನ್ನು ಹಾಕಲು ಅವಕಾಶ ನೀಡದಂತೆ ವಿಶೇಷ ಆದೇಶ ಹೊರಡಿಸಬೇಕು’ ಎಂದು ಆಗ್ರಹಿಸಿದರು.

Related News