ಯುಗಾದಿ

ಯುಗಾದಿ ಎಂದರೆ ಬ್ರಹ್ಮದೇವರು ಸೃಷ್ಟಿಯನ್ನು ನಿರ್ಮಿಸಿದ ದಿನ

'ನಮ್ಮ ದಿನ ಹೇಗಿರುತ್ತದೆ ಎಂಬುವುದು ನಾವು ದಿನವನ್ನು ಹೇಗೆ ಪ್ರಾರಂಭಿಸಿದ್ದೇವೆ ಎಂಬುವುದರ ಮೇಲೆ ಅವಲಂಬಿಸಿರುತ್ತದೆ. ದಿನದ ಆರಂಭ ಆದರ್ಶವಾಗಿದ್ದರೆ, ದಿನದಲ್ಲಿ ನಡೆಯುವ ಪ್ರತಿಯೊಂದು ಕೃತಿಯೂ ಆದರ್ಶವಾಗಿರುವುದು. ಇದೇ ತತ್ತ್ವಕ್ಕನುಸಾರ ಆದರ್ಶ ಭಾರತೀಯ ಸಂಸ್ಕೃತಿ (ಹಿಂದೂ ಧರ್ಮದಲ್ಲಿ) ತಿಳಿಸಿರುವಂತೆ ಯುಗಾದಿಯಂದು ನೂತನ ವರ್ಷಾರಂಭವನ್ನು ಮಾಡಿದರೆ ನಮ್ಮ ಜೀವನೆ ಒಂದು ಆದರ್ಶವಾಗುವುದು. ಮಿತ್ರರೇ, ಈ ದಿನದ ಮಹತ್ವ ಏನೆಂದು ನಿಮಗೆ ತಿಳಿದಿದೆಯೇ? ಇದೇ ದಿನದಂದು ಬ್ರಹ್ಮದೇವರು ಸೃಷ್ಟಿಯನ್ನು ನಿರ್ಮಿಸಿದರು; ಶ್ರೀರಾಮನು ವಾಲಿಯನ್ನು ವಧಿಸಿದ ದಿನವೂ ಹೌದು. ನಾವು ಕೂಡ ಕೆಟ್ಟ ಗುಣಗಳನ್ನು ನಾಶ ಮಾಡಿ ಒಂದು ಆದರ್ಶ ಜೀವನದ ಆರಂಭವನ್ನು ಮಾಡೋಣ.

ಧರ್ಮ ಮತ್ತು ಸಂಸ್ಕೃತಿಯನ್ನು ಮರೆತಿರುವ ಸಮಾಜ ದುಃಖದಲ್ಲಿ ಮುಳುಗಿರುವುದು

ಮಿತ್ರರೇ, ಸಂಪೂರ್ಣ ವಿಶ್ವಕ್ಕೆ ಗುರುಸ್ಥಾನದಲ್ಲಿರುವ; ಮಾನವನಿಗೆ ಆದರ್ಶ ಮತ್ತು ಸರ್ವಗುಣಸಂಪನ್ನ ಮಾಡುವ; ಪ್ರತಿಯೊಂದು ವ್ಯಕ್ತಿ, ಕುಟುಂಬ ಮತ್ತು ಸಮಾಜಕ್ಕೆ ಆನಂದಮಯ ಜೀವನವನ್ನು ಜೀವಿಸುವ ಮಾರ್ಗದರ್ಶಿಯಾಗಿರುವ ಹಿಂದೂ ಸಂಸ್ಕೃತಿ, ಧರ್ಮವನ್ನು ನಾವು ಮರೆತಿದ್ದೇವೆ. ಆದುದರಿಂದಲೇ ಸಮಾಜ ಮತ್ತು ಸಂಪೂರ್ಣ ರಾಷ್ಟ್ರವೇ ಒತ್ತಡ ಮತ್ತು ದುಃಖದಲ್ಲಿ ಮುಳುಗಿದೆ.

ಹಿಂದಿನ ಕಾಲದ ಭಾರತದಲ್ಲಿ 'ಮಾನವನು ಆದರ್ಶ ಜೀವನವನ್ನು ಹೇಗೆ ಜೀವಿಸಬೇಕು?' ಎಂಬುವುದನ್ನು ಕಲಿಸಿಕೊಡುತ್ತಿದ್ದರು. ಬೆಳಗ್ಗೆ ಏಳುವ ಸಮಯ, ಆಹಾರ ನಿಯಮಗಳು, ಬಟ್ಟೆಯ ನಿಯಮಗಳು, ಸ್ತ್ರೀ-ಪುರುಷರ ಪ್ರಕೃತಿಗನುಗುಣವಾಗಿ ನಿಯಮಗಳು, ಪಾಲಿಸಬೇಕಾದ ವ್ರತಗಳು ಇತ್ಯಾದಿ ಶಾಸ್ತ್ರಗಳನ್ನು ತಿಳಿಸಿಕೊಡುತ್ತಿದ್ದರು. ಆದುದರಿಂದಲೇ ಹಿಂದಿನ ಕಾಲದ ಜನರು ಆನಂದಮಯ ಜೀವನವನ್ನು ಜೀವಿಸುತ್ತಿದ್ದರು.

ಆಂಗ್ಲರು ಹೇರಿದ ಒತ್ತಡಮಯ 'ಶಿಕ್ಷಣ ಪದ್ಧತಿ'

ಮಿತ್ರರೇ, ವಿಶ್ವದಾದ್ಯಂತ ಭಾರತೀಯ ಜೀವನಶೈಲಿಯನ್ನು ಅಧ್ಯಯನ ಮಾಡಲು ಜನರು ಕಾದು ಕುಳಿತಿರುತ್ತಾರೆ. ಹಿಂದೊಮ್ಮೆ ನಲಂದಾ, ತಕ್ಷಶಿಲೆಯಂತಹ ವಿಶ್ವವಿದ್ಯಾನಿಲಯಗಳಿದ್ದವು. ಇಲ್ಲಿ ಪ್ರತಿಯೊಂದು ಕಲೆ ಮತ್ತು ವಿದ್ಯೆಯ ಶಿಕ್ಷಣ ಲಭಿಸುತ್ತಿತ್ತು. ಆನದಮಯ ಜೀವನವನ್ನು ನಿರ್ವಹಿಸುವ ಇಂತಹ ಅಮೂಲ್ಯ ಶಿಕ್ಷಣವನ್ನು ನೀಡುವ ನಮ್ಮ ಜೀವನಶೈಲಿಯನ್ನು ಆಂಗ್ಲರು ಕಿತ್ತೊಗೆದು, ಪದವಿಗಳನ್ನು ನೀಡಿ ಭೋಗಿ ಮತ್ತು ದುಃಖಮಯ ಜೀವನ ಅನುಭವಿಸುವ ಶಿಕ್ಷಣ ಪದ್ಧತಿಯನ್ನು ನಮ್ಮ ಮೇಲೆ ಹೇರಿದರು. ಇಂದಿನ ಸ್ಥಿತಿ ಹೇಗಿದೆಯೆಂದರೆ ಚಿಕ್ಕ ಚಿಕ್ಕ ಮಕ್ಕಳು ಕೂಡ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ. ಇಂದಿನ ಶಿಕ್ಷಣ ಪದ್ಧತಿಯಿಂದ ಮಕ್ಕಳ ವ್ಯಕ್ತಿತ್ವದಲ್ಲಿ ಒಳ್ಳೆಯ ಬದಲಾವಣೆಗಳು ಆಗಿವೆ ಅಥವಾ ಅವರಲ್ಲಿ ಸುಸಂಸ್ಕಾರಗಳು ಬೆಳೆದಿವೆ ಎಂದು ತೋರಿಸುವ ಉದಾಹರಣೆಗಳು ಎಲ್ಲಿಯೂ ಕಾಣಿಸುವುದಿಲ್ಲ.

ಯುಗಾದಿಯಂದು ವರ್ಷಾರಂಭ ಮಾಡಿ, ಆನಂದಮಯ ಜೀವನವನ್ನು ಆಹ್ವಾನಿಸಿ

ಆನಂದಮಯ ಜೀವನದ ಕಲಿಕೆಯಿಂದ ದೂರವಿಟ್ಟು, ನಮ್ಮ ಸಂಸ್ಕೃತಿಯನ್ನೇ ಧ್ವಂಸ ಮಾಡಿದ ಆಂಗ್ಲರು ಜನವರಿ ೧ರಂದು ಆಚರಿಸುವ ಶಾಸ್ತ್ರಾಧಾರವಿಲ್ಲದ ಮತ್ತು ಅರ್ಥಹೀನ ಹೊಸ ವರ್ಷವನ್ನು ನಾವೇಕೆ ಆಚರಿಸಬೇಕು?

ನಮ್ಮ ಪ್ರತಿಯೊಂದು ಅಚಾರ, ವಿಚಾರ ಮತ್ತು ಕೃತಿಯ ಮೇಲೆ ಆಂಗ್ಲರ ಪ್ರಭಾವ ಎದ್ದು ಕಾಣುತ್ತದೆ. ೩೧ ಡಿಸೆಂಬರ್ ರಾತ್ರಿ ಜನರು ಮದ್ಯ ಕುಡಿದು ಅಯೋಗ್ಯವಾಗಿ ವರ್ತಿಸುವುದನ್ನು ನಾವು ಕಂಡಿದ್ದೇವೆ. ಇಂತಹ ವರ್ತನೆಯಿಂದ ಜನರಿಗೆ ತೊಂದರೆ ಕೂಡ ಆಗುತ್ತದೆ. ಈ ರೀತಿ ವರ್ತನೆಯಿಂದ 'ಹೊಸ ವರ್ಷವನ್ನು ಆಹ್ವಾನಿಸಿದಂತೆ' ಆಗುವುದೇ? ಇದರಿಂದಲೇ ತಿಳಿಯುತ್ತದೆ, ಜನವರಿ ೧ ನಮ್ಮ ಹೊಸವರ್ಷವೇ ಅಲ್ಲವೆಂದು. ಇಂತಹ ಪಾಶ್ಚಾತ್ಯ ವಿಕೃತಿಯನ್ನು ಗಡಿಪಾರು ಮಾಡುವ ಸಮಯವಾಗಿದೆ.

ನಮ್ಮ ಹೊಸವರ್ಷ ಶುಭಕರವಾಗಿರಬೇಕು ಎಂದು ನಿಮಗೆ ಅನಿಸುತ್ತಿದ್ದಲ್ಲಿ, ಹಿಂದೂ ಸಂಸ್ಕೃತಿಯಲ್ಲಿ ಆಚರಿಸುವಂತೆ ವರ್ಷಾರಂಭವನ್ನು ಯುಗಾದಿಯಂದು ಮಾಡಿ! ಯುಗಾದಿ ಅಂದರೆ ಚೈತ್ರ ಶುಕ್ಲ ಪಕ್ಷ ಪ್ರತಿಪದೆಗೆ ಶಾಸ್ತ್ರಗಳ ಮತ್ತು ಇತಿಹಾಸದ ಆಧಾರವಿದೆ. ಈ ದಿನದಂದು ಆದರ್ಶ ಮತ್ತು ಆನಂದಮಯ ಜೀವನದ ಪತಾಕೆಯನ್ನು ಹಾರಿಸಿ ಎಲ್ಲರಿಗೂ ಹೀಗೆ ಮಾಡಲು ಸ್ಪೂರ್ತಿಯನ್ನು ನೀಡೋಣ.

ಸ್ವಸಂಸ್ಕೃತಿ ಮತ್ತು ವಿದೇಶಿ ಸಂಸ್ಕೃತಿಯನ್ನು ಅನುಸರಿಸುವವರಲ್ಲಿ ಇರುವ ವ್ಯತ್ಯಾಸ

ವರ್ಷಾರಂಭ ಯುಗಾದಿ ಡಿಸೆಂಬರ್ ೩೧ರ ಮಧ್ಯರಾತ್ರಿ
೧. ಏಳುವ ಸಮಯ ಸೂರ್ಯೋದಯದೊಂದಿಗೆ ವಿಳಂಬವಾಗಿ
೨. ಚಹಾ ತಿಂಡಿ ಸ್ನಾನ ಮಾಡಿದ ನಂತರ 'ಬೆಡ್ ಟೀ'
೩. ಸ್ವಾಗತಿಸುವ ರೀತಿ 'ನಮಸ್ಕಾರ' ಎಂದು ಹೇಳಿ 'ಹಲೋ' ಎಂದು
೪. ಶುಭಾಶಯಗಳು ಮಾತೃಭಾಷೆಯಲ್ಲಿ ಆಂಗ್ಲದಲ್ಲಿ
೫. ಆಹಾರ ಅನ್ನ-ಸಾರು, ರೊಟ್ಟಿ ಪಲ್ಯ ಇತ್ಯಾದಿ ಸಾತ್ವಿಕ ಆಹಾರ ಪಿಜ್ಜಾ, ತಂಪು ಪಾನೀಯಗಳ ತಾಮಸಿಕ ಆಹಾರ
೬. ಉಡುಗೆ-ತೊಡುಗೆ ಕುರ್ತಾ, ಧೋತಿ ಮುಂತಾದ ಸಾತ್ವಿಕ ಬಟ್ಟೆ ಟೀ-ಶರ್ಟ್, ಜೀನ್ಸ್ ಮುಂತಾದ ಅಸಾತ್ವಿಕ ಬಟ್ಟೆಗಳು
೭. ಹುಟ್ಟುಹಬ್ಬವನ್ನು ಆಚರಿಸುವ ರೀತಿ ದೀಪ ಹಚ್ಚಿ, ದೇವರಿಗೆ ಪ್ರಾರ್ಥನೆ ಮಾಡಿ ಮೇಣದ ಬತ್ತಿ ಆರಿಸಿ, ಕೇಕ್ ಕತ್ತರಿಸಿ
೮. ತಂದೆ -ತಾಯಿಯೊಂದಿಗೆ ವರ್ತನೆ 'ಅಪ್ಪ ಅಮ್ಮ' ಎಂದು ಸಂಬೋಧಿಸುವುದು, ಅವರನ್ನು ನಮಸ್ಕರಿಸುವುದು 'ಮಮ್ಮಿ ಪಾಪಾ' ಎಂದು ಕರೆಯುವುದು, ಹಲೋ ಹಾಯ್ ಮಾಡುವುದು
೯. ಶಿಕ್ಷಕರೊಂದಿಗೆ ವ್ಯವಹಾರ 'ಗುರುಜಿ' ಎಂದು ಸಂಬೋಧಿಸುವುದು, ಆದರಿಸುವುದು 'ಸರ್' 'ಮೇಡಂ' ಹೇಳುವುದು ಆದರೆ ಆದರವಿಲ್ಲದಿರುವುದು
೧೦. ಆದರ್ಶ ಯಾರು? ಶಿವಾಜಿ ಮಹಾರಾಜ್, ನೇತಾಜಿ ಬೋಸ್, ಕಿತ್ತೂರು ಚೆನ್ನಮ್ಮ ಇತ್ಯಾದಿ ಕ್ರಿಕೆಟ್ ಪಟುಗಳು, ಚಲನಚಿತ್ರ ತಾರೆಗಳು ಇತ್ಯಾದಿ
೧೧. ಸಂಜೆ ಏನು ಮಾಡುತ್ತಾರೆ? ಭಜನೆ, ನಾಮಸ್ಮರಣೆ ದೂರದರ್ಶನ ನೋಡುತ್ತಾರೆ
೧೨. ಆಟಗಳು ಕಬಡ್ಡಿ, ಖೊ-ಖೊ ಇತ್ಯಾದಿ ಭಾರತೀಯ ಆಟಗಳು ಗಣಕ ಯಂತ್ರದ ವಿಕೃತ ಆಟಗಳು
೧೩. ಕಲೆಯಲ್ಲಿ ಆಸಕ್ತಿ ಭಕ್ತಿ ಗೀತೆಗಳು, ರಾಷ್ಟ್ರಭಕ್ತಿಯ ಗೀತೆಗಳು, ಗಮಕ ಪಾಪ್, ರಾಕ್ ಮುಂತಾದ ಹಾಡುಗಳನ್ನು ಹಾದಿ ಕುಣಿಯುವುದು

ಮಿತ್ರರೇ, ಯುಗಾದಿಯ ನಿಮಿತ್ತ ಇವನ್ನು ಅವಶ್ಯ ಮಾಡಿ!

೧. ಯುಗಾದಿಯಂದು ವರ್ಷಾರಂಭ ಮಾಡಲು ಎಲ್ಲರನ್ನು ಪ್ರವೃತ್ತಗೊಳಿಸಿ

೨. ಶಾಲೆಗಳಲ್ಲಿ ಶಿಕ್ಷಕರಿಗೆ ಮತ್ತು ಮುಖ್ಯೋಪಾಧ್ಯಾಯರಿಗೆ ಯುಗಾದಿಯ ಮಹತ್ವದ ಬಗ್ಗೆ ವ್ಯಾಖ್ಯಾನಗಳನ್ನು ಆಯೋಜಿಸಲು ಪ್ರೇರೇಪಿಸಿ. ಈ ದಿನವನ್ನು 'ಸಂಸ್ಕೃತಿ ದಿನ' (ಕಲ್ಚರಲ್ ಡೇ) ಎಂದು ಆಯೋಜಿಸುವಂತೆ ಕೇಳಿ. ನೋಟೀಸ್ ಬೋರ್ಡ್ ಮೇಲೆ ಯುಗಾದಿಯ ಶುಭಾಶಯಗಳನ್ನು ತಿಳಿಸಲು ಮತ್ತು ಯುಗಾದಿಯ ಮಹತ್ವವನ್ನು ತಿಳಿಸುವಂತಹ ಲೇಖನಗಳನ್ನು ಅಂಟಿಸಲು ಪ್ರವೃತ್ತಗೊಳಿಸಿ.

೩. ಯುಗಾದಿಯಂದು ಶೋಭಾಯಾತ್ರೆಗಳನ್ನು ಆಯೋಜಿಸಿದಲ್ಲಿ ಭಾಗವಹಿಸಿ.

೪. ನಿಮ್ಮ ಮನೆಯ ಮುಂದೆ ಸಾತ್ವಿಕ ರಂಗೋಲಿಗಳನ್ನು ಬಿಡಿಸಿ

೫. ನೀಲಿ, ಗುಲಾಬಿ ಮುಂತಾದ ಸಾತ್ವಿಕ ಬಣ್ಣಗಳ ಪಾಯಜಾಮಾ, ಧೋತಿ, ಲಂಗ – ಧಾವಣಿ ಮುಂತಾದ ಸಾತ್ವಿಕ ಬಟ್ಟೆಗಳನ್ನು ಧರಿಸಿ.

೬. ಮನೆಯ ಮುಂದೆ ನಿಲ್ಲಿಸಿದ ಧರ್ಮಧ್ವಜ, ತಂದೆ ತಾಯಿ ಮತ್ತು ಮನೆಯ ಹಿರಿಯರೆಲ್ಲರಿಗೂ ನಮಸ್ಕಾರ ಮಾಡಿ.

೭. ನಿಮ್ಮ ಬಂಧು ಮಿತ್ರರೆಲ್ಲರಿಗೂ ಮಾತೃ ಭಾಷೆಯಲ್ಲಿಯೇ ಹೊಸವರ್ಷದ ಶುಭಾಶಯಗಳನ್ನು ತಿಳಿಸಿ.

ಮಿತ್ರರೇ, ಈ ಶುಭದಿನದಂದು ಮುಂದಿನ ಧ್ಯೇಯ ಸಾಧಿಸಲು ನಿಶ್ಚಯಿಸಿ !

೧. ಜೀವನದಲ್ಲಿ ದುಃಖ ಮತ್ತು ಒತ್ತಡ ನಿರ್ಮಿಸುವ ಆಲಸ್ಯ, ನಿಯೋಜನೆಯ ಆಭಾವ, ಇತರರ ಬಗ್ಗೆ ವಿಚಾರವಿಲ್ಲದಿರುವುದು ಇತ್ಯಾದಿ ದೋಷಗಳ ನಿರ್ಮೂಲನೆ ಮಾಡಲು ಸತತವಾಗಿ ಪ್ರಯತ್ನ ಮಾಡುವೆನು!

೨. ಶ್ರೀರಾಮನಲ್ಲಿರುವ ಆಜ್ಞಾಪಾಲನೆ, ತ್ಯಾಗ, ಕ್ಷಾತ್ರವೃತ್ತಿ ಇತ್ಯಾದಿ ಗುಣಗಳನ್ನು ನನ್ನಲ್ಲಿ ಮತ್ತು ಇತರರಲ್ಲಿ ನಿರ್ಮಾಣವಾಗುವಂತೆ ಪ್ರಯತ್ನ ಮಾಡುವೆನು!

೩. ರಾವಣರೂಪಿ ಅಹಂಕಾರದ ನಾಶ ಮಾಡಿ ಶ್ರೀರಾಮನ ಆದರ್ಶ ಜೀವನವನ್ನು ಜೀವಿಸಲು ಪ್ರಯತ್ನ ಮಾಡುವೆನು!

ಯುಗಾದಿಯಂದು ಇವನ್ನು ಮಾಡಬೇಡಿ!

೧. ದೇವತೆಗಳ ಚಿತ್ರವಿರುವ ರಂಗೋಲಿಯನ್ನು ಬಿಡಿಸಬೇಡಿ

೨. ಟೀ-ಶರ್ಟ್, ಜೀನ್ಸ್ ಮುಂತಾದ ವಿದೇಶಿ ಬಟ್ಟೆಗಳನ್ನು, ಕಪ್ಪು ಬಣ್ಣದ ಅಸಾತ್ವಿಕ ಬಟ್ಟೆಗಳನ್ನು ಧರಿಸಬೇಡಿ

೩. ಆಂಗ್ಲಭಾಷೆಯಲ್ಲಿ ಶುಭಾಶಯಗಳನ್ನು ನೀಡಬೇಡಿ!

೪. ವಾಯು ಮತ್ತು ಶಬ್ದ ಮಾಲಿನ್ಯ ಮಾಡುವ ಪಟಾಕಿಗಳನ್ನು ಸುಬೇಡಿ!

೫. ಮನೋರಂಜನೆಗೆಂದು ಕರ್ಕಶ ಡಿ.ಜೆ. ಗಳನ್ನು ಆಹ್ವಾನಿಸಬೇಡಿ.

೬. ಮನಸ್ಸಿನಲ್ಲಿ ವಿಕೃತಿಯನ್ನು ನಿರ್ಮಿಸುವ ಚಲನಚಿತ್ರಗಳನ್ನು ನೋಡಬೇಡಿ!

ವರ್ಷಾರಂಭ ಮಾಡುವಾಗ ಶ್ರೀರಾಮನಲ್ಲಿ ಪ್ರಾರ್ಥನೆ ಮಾಡಿ!

ಮಿತ್ರರೇ, ಆದರ್ಶವಾಗಿ, ಭಾರತೀಯ ಸಂಸ್ಕೃತಿಗನುಸಾರ ನಾವು ಯುಗಾದಿಯನ್ನು ಆಚರಿಸಿ, ಇತರರಿಗೂ ಹೀಗೆ ಮಾಡುವಂತೆ ಪ್ರೇರೇಪಿಸೋಣ. ಇದರಿಂದ ನಮ್ಮೆಲ್ಲರ ಮೇಲೆ ನಿಜವಾಗಿಯೂ ದೇವರ ಕೃಪೆಯಾಗುವುದು. ಯುಗಾದಿಯಂದು ವರ್ಷಾರಂಭ ಮಾಡುವಾಗ ಶ್ರೀರಾಮನಲ್ಲಿ ಮುಂದಿನಂತೆ ಪ್ರಾರ್ಥನೆಯನ್ನು ಮಾಡೋಣ 'ಹೇ ಶ್ರೀರಾಮಾ, ಆದಷ್ಟು ಬೇಗ ನಿನ್ನಂತಹ ಆದರ್ಶ ರಾಜಕಾರಣಿಗಳು ಲಭಿಸಿ, ಆದರ್ಶ ರಾಷ್ಟ್ರದ ಸ್ಥಾಪನೆಯಾಗಲಿ. ನಮ್ಮೆಲ್ಲರನ್ನೂ ಇಂತಹ ಆದರ್ಶ ರಾಷ್ಟ್ರದ ಯೋಗ್ಯ ನಾಗರಿಕರನ್ನಾಗಿ ಮಾಡು. ನಮ್ಮಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಹಾಗೂ ಗುಣಸಂವರ್ಧನೆ ಇವುಗಳ ಪ್ರಾಮಾಣಿಕ ಮತ್ತು ಸತತ ಪ್ರಯತ್ನಗಳಾಗಲಿ, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ'.

– ಶ್ರೀ. ರಾಜೇಂದ್ರ ಪಾವಸಕರ್ (ಗುರುಜಿ), ಪನವೇಲ