ಶೂರ ಪೃಥ್ವಿಸಿಂಗ

ಮಿತ್ರರೇ, ಶೌರ್ಯ, ನಿರ್ಭಯತೆ ಹಾಗೂ ಸಾಹಸ ಈ ಗುಣಗಳಿಂದ ದೇಶ ಹಾಗೂ ಸಂಸ್ಕೃತಿ ಇವುಗಳ ರಕ್ಷಣೆಯಾಗುತ್ತದೆ, ಹಾಗೆಯೆ ಅವುಗಳ ವೈಭವ ಬೆಳೆಯುತ್ತದೆ. ಈ ಗುಣಗಳು ನಮಗೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಉಪಯುಕ್ತವಾಗುತ್ತವೆ. ಇಂದು ನಾವು ಪೃಥ್ವಿಸಿಂಗನ ಶೌರ್ಯವನ್ನು ಸಾರುವ ಕಥೆಯೊಂದನ್ನು ನೋಡೋಣ.

ಒಮ್ಮೆ ಔರಂಗಜೇಬನು ಕಾಡಿನಲ್ಲಿ ಬೇಟೆಯಾಡಲು ಹೋಗಿದ್ದನು. ಅವನು ತನ್ನ ಸೇವಕರ ಸಹಾಯದಿಂದ ಒಂದು ದೊಡ್ಡ ಹುಲಿಯನ್ನು ಹಿಡಿದನು. ಆ ಹುಲಿಯನ್ನು ಅರಮನೆಗೆ ತಂದು ತೋಟದಲ್ಲಿ ಒಂದು ದೊಡ್ಡ ಪಂಜರದಲ್ಲಿ ಕಟ್ಟಿ ಹಾಕಿದನು. ಮಾರನೆಯ ದಿನ ತನ್ನ ಆಸ್ಥಾನದಲ್ಲಿ ಜನರ ಎದುರು ತನ್ನ ಸಾಹಸದ ಬಗ್ಗೆ ಹೇಳುತ್ತಾ, ದೊಡ್ಡಹುಲಿಯನ್ನು ಹಿಡಿದಿರುವುದರ ಬಗ್ಗೆ ಹೆಮ್ಮೆ ಪಟ್ಟನು. ಮಾತ್ರವಲ್ಲ ‘ಇಂತಹ ಹುಲಿಯನ್ನು ನಿಮ್ಮಲ್ಲಿ ಯಾರಾದರೂ ಇದುವರೆಗೆ ನೋಡಿದ್ದೀರಾ? ಎಂದು ಕೇಳಿದನು.

'ಸ್ವಾಮಿ ಹಿಡಿದಿರುವ ಹುಲಿಗೆ ಸರಿಸಮಾನವಾದ ಹುಲಿ ಎಲ್ಲಿಯೂ ಇರಲು ಸಾಧ್ಯವೇ ಇಲ್ಲ!', ಎಂಬ ಉದ್ಗಾರವನ್ನು ಆಸ್ಥಾನದಲ್ಲಿದ್ದ ಪ್ರತಿಯೊಬ್ಬನ ಅಭಿಪ್ರಾಯವಾಗಿತ್ತು. ಮೊಘಲರ ಮೈತ್ರಿಯನ್ನು ಅನಿವಾರ್ಯವಾಗಿ ಸ್ವೀಕರಿಸಿದ್ದ ಜೋಧಪುರದ ರಾಣಾ ಯಶವಂತ ಸಿಂಹ, 'ಸ್ವಾಮಿ, ನನ್ನ ಹತ್ತಿರ ಇರುವ ಹುಲಿ ಮರಿಯ ಎದುರು ನೀವು ಹಿಡಿದು ತಂದಿರುವ ಹುಲಿ ಬೆಕ್ಕಿಗೆ ಸಮಾನ!' ಎಂದು ಹೇಳಿ ಇಡೀ ಸಭೆಯನ್ನು ಆಶ್ಚರ್ಯಚಕಿತಗೊಳಿಸಿದನು.

ಅಹಂಕಾರದಿಂದ ತುಂಬಿ ಹೋಗಿದ್ದ ಔರಂಗಜೇಬನು, ‘ಹಾಗಾದರೆ ರಾಣಾಜಿ, ತೆಗುದುಕೊಂಡೆ ಬನ್ನಿ, ನಾಳೆ ನಿಮ್ಮ ಹುಲಿ ಮರಿಯನ್ನು. ನಿಮ್ಮ ಆ ಚಿಕ್ಕ ಹುಲಿಯನ್ನು ನಾವು ನನ್ನ ಹುಲಿಯ ಪಂಜರದಲ್ಲಿ ಹಾಕೋಣ. ನೋಡೋಣ, ಅವರಿಬ್ಬರಲ್ಲಿ ಯಾರು ಜೀವಂತವಾಗಿ ಉಳಿಯುವರೆಂದು !’

ಮಾರನೆಯ ದಿನ ರಾಣಾ ಯಶವಂತ ಸಿಂಹನು ತನ್ನ ಹದಿನಾಲ್ಕು ವರ್ಷದ ಸಾಹಸಿ ಪುತ್ರ ಪೃಥ್ವಿಸಿಂಗನನ್ನು ಜೊತೆಯಲ್ಲಿ ಕರೆದುಕೊಂಡು ಆಸ್ಥಾನವನ್ನು ಪ್ರವೇಶಿಸಿದನು. ಹುಲಿ ಮರಿಯ ದಾರಿಯನ್ನು ಕಾಯುತ್ತಿದ್ದ ಔರಂಗಜೇಬ ಹಾಗೂ ಆಸ್ಥಾನದ ಜನರು ದೊಡ್ಡ ಹುಲಿಯ ಪಂಜರದ ಸಮೀಪ ಹೋದರು. ಯಶವಂತ ಸಿಂಹನು ತನ್ನ ಮಗನ ಕಡೆ ಬೆರಳು ತೋರಿಸಿ ‘ಇವನೇ ನನ್ನ ಹುಲಿ ಮರಿ’, ಎಂದು ಔರಂಗಜೇಬನಿಗೆ ಹೇಳಿದನು. ಔರಂಗಜೇಬನು ಪೃಥ್ವಿಸಿಂಗನಿಗೆ ಹುಲಿಯ ಪಂಜರದಲ್ಲಿ ಪ್ರವೇಶ ಮಾಡಲು ಹೇಳಿದನು.

ಪೃಥ್ವಿಸಿಂಗ ಹುಲಿಯ ಪಂಜರದಲ್ಲಿ ಕಾಲಿಟ್ಟ ತಕ್ಷಣ ಅದನ್ನೇ ದುರುಗುಟ್ಟಿ ನೋಡತೊಡಗಿದನು. ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಆ ಹುಲಿಯು ಇದ್ದ ಜಾಗದಲ್ಲಿ ತಟ್ಟನೆ ಎದ್ದು ನಿಂತಿತು. ಔರಂಗಜೇಬನ ಅಪ್ಪಣೆಯಂತೆ ಅವನ ಸೇವಕನು ಆ ಹುಲಿಯನ್ನು ಬರ್ಚಿಯಿಂದ ಚುಚ್ಚಿ ಕೆರಳಿಸಿದನು. ಆದ್ದರಿಂದ ಅದು ಗರ್ಜಿಸುತ್ತ ಪೃಥ್ವಿಸಿಂಗನ ಮೈಮೇಲೆ ಎರಗಿತು. ಪೃಥ್ವಿಸಿಂಗ ತಕ್ಷಣ ಪಕ್ಕಕ್ಕೆ ಸರಿದು ತನ್ನ ಸೊಂಟದಲ್ಲಿದ್ದ ಕತ್ತಿಯನ್ನು ಕೈಯಲ್ಲಿ ತೆಗೆದುಕೊಂಡನು. ಇನ್ನೇನು ಆ ಕತ್ತಿಯಿಂದ ಹುಲಿಯ ಅಂತ್ಯ ಮಾಡಬೇಕು ಎನ್ನುವಷ್ಟರಲ್ಲಿ ರಾಣಾ ಯಶವಂತ ಸಿಂಹನು ಅವನನ್ನು ತಡೆದು, 'ಪುತ್ರ! ಪ್ರತಿಸ್ಪರ್ಧಿ ಹುಲಿಯ ಹತ್ತಿರ ಕತ್ತಿ ಇಲ್ಲದಿರುವಾಗ ನೀನು ಅದರ ಮೇಲೆ ಕತ್ತಿಯ ಪ್ರಹಾರ ಮಾಡುವುದು ಧರ್ಮಯುದ್ಧದ ನಿಯಮಗಳಿಗೆ ವಿರುದ್ಧ’ ಎಂದು ಎಚ್ಚರಿಕೆ ನೀಡಿದನು.

ತಂದೆಯ ಈ ಮಾತು ಕೇಳುತ್ತಿದ್ದಂತೆಯೆ ಪೃಥ್ವಿಸಿಂಗ ಕೈಯಲ್ಲಿದ್ದ ಕತ್ತಿಯನ್ನು ಎಸೆದು ಆ ಕ್ರುದ್ಧ ಹುಲಿಯ ಮೇಲೆ ಹಾರಿದನು. ತನ್ನ ಎರಡೂ ಕೈಗಳಿಂದ ಅದರ ಬಾಯಿಯನ್ನು ಸೀಳಿದನು! ಜನರು ನೋಡುತ್ತಿದ್ದಂತೆಯೆ ಹುಲಿಯ ಪ್ರಾಣ ಹಾರಿ ಹೋಯಿತು. ಇಷ್ಟು ಚಿಕ್ಕ ಪೃಥ್ವಿಸಿಂಗ ಪ್ರದರ್ಶಿಸಿದ ಆ ಅಪೂರ್ವ ಪರಾಕ್ರಮದಿಂದ ಔರಂಗಜೇಬನ ಜೊತೆಗೆ ಇತರ ಜನರು ಕೂಡ ಮೂಕವಿಸ್ಮಿತರಾದರು.

ಮಿತ್ರರೇ, ಅಹಿಂಸೆಯ ಪಾಲನೆ ಮಾಡುವುದು ಒಳ್ಳೆಯದಾಗಿದ್ದರೂ, ಕುರುಡ ಅಹಿಂಸೆಯ ವೃತ್ತಿಯಿಂದ ಸ್ವಂತ, ಸಮಾಜ ಹಾಗೂ ದೇಶದ ಅಪಾರ ಹಾನಿಯಾಗುತ್ತದೆ! ಆದ್ದರಿಂದ ಸಾಮರ್ಥ್ಯಕ್ಕೆ ಹಾಗೂ ಶೌರ್ಯಕ್ಕೆ ಮನುಷ್ಯ ಜೀವನದಲ್ಲಿ ಬಹಳ ದೊಡ್ಡ ಸ್ಥಾನವಿದೆ. ನಿರ್ಭಯತೆ ಹಾಗೂ ಸಾಹಸ ಈ ಗುಣಗಳಿಂದ ದೇಶ ಹಾಗೂ ಸಂಸ್ಕೃತಿ ಇವುಗಳ ರಕ್ಷಣೆ ಆಗುತ್ತದೆ, ಹಾಗೆಯೇ ಅವುಗಳ ವೈಭವ ಬೆಳೆಯುತ್ತದೆ.