ಖುದಿರಾಮ್ ಬೋಸ


ಖುದಿರಾಮ್ ಬೋಸ ಭಾರತದ ಅತ್ಯಂತ ಕಿರಿಯ ವಯಸ್ಸಿನ ಕ್ರಾಂತಿಕಾರರೆಂದು ಚಿರಪರಿಚಿತ; ವಯಸ್ಸಿನ ಕೇವಲ ೧೯ನೆಯ ವರ್ಷದಲ್ಲಿ ಹುತಾತ್ಮನಾದವನು. ಅವನು ಬಂಗಾಲದ ಮೇದಿನಿಪುರ ಜಿಲ್ಲೆಯ ಬಹುವೇನಿ ಎಂಬ ಊರಲ್ಲಿ ೩ ಡಿಸೆಂಬರ ೧೮೮೯ರಲ್ಲಿ ಜನಿಸಿದನು. ಚಿಕ್ಕಂದಿನಲ್ಲಿಯೆ ತಾಯಿ (ಲಕ್ಷ್ಮಿಪ್ರಿಯಾದೇವಿ) ಹಾಗೂ ತಂದೆ (ತ್ರೈಲೋಕ್ಯನಾಥ)ಯ ಮೃತ್ಯುವಾದುದರಿಂದ ಅವನ ಅಕ್ಕ ಅನುರೂಪಾದೇವಿ ಹಾಗೂ ಅವಳ ಪತಿ ಅಮೃತಲಾಲ ಇವರು ಖುದಿರಾಮ್.ನನ್ನು ಬೆಳೆಸಿದರು.

ಬಂಗಾಲ ಪ್ರಾಂತವನ್ನು ವಿಭಜಿಸಲು ಬ್ರಿಟಿಷ ಸರಕಾರವು ೧೯೦೩ರಲ್ಲಿ ನಿಶ್ಚಯಿಸಿತ್ತು, ಜನರಲ್ಲಿ ತೀವ್ರವಾದ ನಿರಾಸೆ ಹಮ್ಮಿಕೊಂಡಿತ್ತು. ಖುದಿರಾಮನಿಗೂ ಬಂಗಾಲದ ವಿಭಜನೆಯ ನಿರ್ಣಯವು ಅನ್ಯಾಯವೆನಿಸಿತು. ದೇಶಕ್ಕಾಗಿ ಏನಾದರೂ ಮಾಡಬೇಕೆಂದು ಸತತವಾಗಿ ಅನಿಸುತ್ತಿದ್ದುದರಿಂದ ಮಿದನಾಪುರದಲ್ಲಿ ಸ್ವಲ್ಪ ಮಟ್ಟಿಗೆ ಶಿಕ್ಷಣವಾದ ನಂತರ ಅವನು ಸಶಸ್ತ್ರ ಕ್ರಾಂತಿಯ ಮಾರ್ಗ ಅವಲಂಬಿಸಿದನು.ಆ ಸಮಯದಲ್ಲಿ ಸರಕಾರದ ವಿರುದ್ಧ ಹೋರಾಡುವವರನ್ನು ಬಂಧಿಸಿ ಕಠೋರ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು. ಕ್ರಾಂತಿಕಾರಿಗಳನ್ನು ಸೇರಿದ ಕೆಲವೇ ದಿವಸಗಳಲ್ಲಿ, ಕ್ರಾಂತಿಕಾರಿಗಳಿಗೆ ಅಮಾನುಷ ಶಿಕ್ಷೆ ಕೊಡುತ್ತಿದ್ದಮುಝಫ್ಫರಪುರದ ಮ್ಯಾಜಿಸ್ಟ್ರೇಟರನ್ನು ಸಾಯಿಸುವ ಜವಾಬ್ದಾರಿಯನ್ನು ಖುದಿರಾಮನಿಗೆ ಕ್ರಾಂತಿಕಾರರ ಮುಖಂಡರಾದ ಬರಿಂದ್ರಕುಮಾರ್ ಹಾಗೂ ಉಪೇಂದ್ರನಾಥರು ಒಪ್ಪಿಸಿದರು. ಹಾಗೂ ಸಹಾಯಕನೆಂದು ಪ್ರಫುಲ್ಲಚಂದ್ರ ಚಾಕಿಯನ್ನು ನಿಯೋಜಿಸಿದರು. ಅವರಿಬ್ಬರೂ ಮುಝಫ್ಫರಪುರಕ್ಕೆ ಬಂದರು ಹಾಗೂ ಮ್ಯಾಜಿಸ್ಟ್ರೇಟ ಕಿಂಗ್ಸಫರ್ಡ್ ಮೇಲೆ ಗಮನವಿಟ್ಟು ಅವಕಾಶಕ್ಕಾಗಿ ಕಾಯುತ್ತಿದ್ದರು.ಕಿಂಗ್ಸಫರ್ಡನನ್ನು ವಧಿಸಿ ಸರಕಾರವನ್ನು ವಿರೋಧಿಸುವುದಾಗಿ ಅವರು ನಿಶ್ಚಯಿಸಿದರು. ಬಂಕಿಮಚಂದ್ರ ಚಟ್ಟೊಪಾಧ್ಯಾಯರ ಆನಂದ ಮಠ ಈ ಕಾದಂಬರಿಯ “ವಂದೇ ಮಾತರಂ” ಗೀತೆಯನ್ನು ಹೇಳಿ ಜನರಲ್ಲಿ ರಾಷ್ಟ್ರಾಭಿಮಾನದ ಕಿಡಿಯನ್ನು ಹಚ್ಚಿದರು..

ಖುದಿರಾಮನು ಕಿಂಗ್ಸಫರ್ಡನನ್ನು ಸಾಯಿಸುವ ಜವಾಬದಾರಿಯನ್ನು ಸ್ವೀಕರಿಸಿದನು. ಅವನ ಸಹಕಾರಿ ಪ್ರಫುಲ್ಲ ಚಾಕಿಯ ಸಹಾಯದಿಂದ ದಿನಾಂಕ ೩೦ ಎಪ್ರಿಲ ೧೯೦೫ರಂದು ಕಿಂಗ್ಸಫರ್ಡನ ವಾಹನದ ಮೇಲೆಸ್ಫೋಟಕ ಎಸೆದು ಅವನನ್ನು ಕ್ರೌರ್ಯವನ್ನು ಅಂತ್ಯಗೊಳಿಸುವ ನಿರ್ಧಾರವನ್ನು ಮಾಡಿದರು. ಆ ರಾತ್ರಿ ಕಿಂಗ್ಸಫರ್ಡ್ ವಾಹನ ಬರುತ್ತಿದ್ದಂತೆ ಅಡ್ಡಗಟ್ಟಿ ನಿಂತ ಖುದಿರಾಮನು ಅದರತ್ತ ಒಂದು ಸ್ಫೋಟಕವನ್ನು ಎಸೆದನು. ವಾಹನ ಸ್ಫೋಟಗೊಳ್ಳುತ್ತಿದ್ದಂತೆ ಖುದಿರಾಮ್ ಮತ್ತು ಪ್ರಫುಲ್ಲಚಂದ್ರ ಅಲ್ಲಿಂದ ಓಡಿ ಹೋದರು. ಮುಂದೆ ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಳ್ಳಬಾರದು ಎಂದು ಬೇರೆ ಬೇರೆ ದಾರಿ ಹಿಡಿದರು. ಆದುದರಿಂದ ಅವರ ಕೃತ್ಯದ ಫಲಿತಾಂಶ ಅವರಿಗೆ ತಿಳಿಯಲೇ ಇಲ್ಲ. ಖುದಿರಾಮ್ ಎಸೆದ ಬಾಂಬ್ ಗೆ ಸತ್ತದ್ದು ಕಿಂಗ್ಸಫರ್ಡ್ ಅಲ್ಲ, ಇಬ್ಬರು ಮಹಿಳೆಯರು! ರಾತ್ರಿ ಬೆಳಗಾಗುವುದರಲ್ಲಿ ಕಿಂಗ್ಸಫರ್ಡ್ ಮೇಲಾದ ದಾಳಿಯ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿಕೊಂಡಿತು. ಇದರ ಪರಿವಿಲ್ಲದ ಖುದಿರಾಮ್ ರಾತ್ರಿ ಇಡೀ ಸುಮಾರು ೪೦ ಕಿಲೋಮೀಟರು ನಡೆದು ಬೆನಿ ರೈಲು ನಿಲ್ದಾಣವನ್ನು ತಲುಪಿದನು. ಹೊಟ್ಟೆ ಹಸಿದಿರುವುದರಿಂದ ಅವನು ಒಂದು ಅಂಗಡಿಯಲ್ಲಿ ನೆಲಗಡಲೆ ತೆಗೆದುಕೊಳ್ಳುತ್ತಿರುವಾಗ ಸ್ಟೇಶನ ಮಾಸ್ತರನು ಕೂಲಿಗೆ – ‘ಇದು ನೋಡು, ಈ ಸುದ್ಧಿಯನ್ನು ಓದಿದೆಯಾ? ನಿನ್ನೆ ಮುಝಫ್ಫರಪುರನಲ್ಲಿ ಇಬ್ಬರು ಮಹಿಳೆಯರ ಕೊಲೆ ಮಾಡಿ ಇಬ್ಬರು ಪರಾರಿಯಾಗಿದ್ದಾರೆ. ಅವರನ್ನು ಬಂಧಿಸಲು ವಾರಂಟ ಜಾರಿ ಮಾಡಿದ್ದಾರೆ. ಈಗ ಗಾಡಿ ಬರುತ್ತಿದೆ ಅದರಲ್ಲಿ ಯಾರಾದರೂ ಸಿಗುತ್ತಾರೆನೊ ನೋಡು'ಎಂದು ಹೇಳುತ್ತಿರುವುದನ್ನು ಕೇಳಿಸಿಕೊಂಡನು. ಖುದಿರಾಮನು ಈ ಸಂಭಾಷಣೆಯನ್ನು ಕೇಳಿ, ತಕ್ಷಣ 'ಏನು, ಕಿಂಗ್ಸಫರ್ಡ್ ಸಾಯಲಿಲ್ಲವೆ' ಎಂದು ಕೂಗಿದನು. ಸಮೀಪದಲ್ಲಿದ್ದ ಜನರಿಗೆ ಈ ಮಾತು ಕೇಳಿ ಆಶ್ಚರ್ಯವಾಯಿತು ಹಾಗೂ ಅನುಮಾನ ಬಂತು. ತಕ್ಷಣ ಖುದಿರಾಮನು ಅಲ್ಲಿಂದ ಓಡಿದನು. ಘಟನೆಯ ಮಾರನೆ ದಿನ ಖುದಿರಾಮನು ಬಂಧಿಸಲ್ಪಟ್ಟನು. ಮಾತ್ರ ಪ್ರಫುಲ್ಲನು ಬಂಧನವನ್ನು ತಡೆಯಲು ಆತ್ಮಾರ್ಪಣೆ ಮಾಡಿದ್ದನು! ಖುದಿರಾಮನ ಹತ್ತಿರ ಎರಡು ಪಿಸ್ತುಲು ಹಾಗೂ ೩೦ ಗುಂಡುಗಳು ಸಿಕ್ಕವು. ಅವನ ಮೇಲೆ ಹತ್ಯೆಯ ಆರೋಪವನ್ನು ಹಾಕಿ ಅವನಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ೧೧ ಆಗಷ್ಟ ೧೯೦೮ ರಂದು ಈ ತರುಣ ವೀರನು ಕೈಯಲ್ಲಿ ಭಗವದ್ಗೀತೆಯನ್ನು ಹಿಡಿದು, ಭಾರತಮಾತೆಯ ಜಯವಾಗಲಿ ಎಂದು ಹೇಳುತ್ತ ನಗುನಗುತ್ತ ಆನಂದದಿಂದ ಗಲ್ಲಿಗೇರಿದನು. ಸಶಸ್ತ್ರ ಕ್ರಾಂತಿಯಲ್ಲಿ ಸ್ಫೋಟಕದ ಉಪಯೋಗ ಮಾಡಿದವರಲ್ಲಿ ಖುದಿರಾಮನು ಮೊದಲ ಕ್ರಾಂತಿಕಾರನೆನೆಸಿದನು.

ಭಾರತೀಯ ಅಂಚೆ ಚೀಟಿಯ ಮೇಲಿನ ಖುದಿರಾಮ ಬೋಸರಭಾವಚಿತ್ರ